Site icon Vistara News

Submarine Tourism In Dwarka: ಇನ್ನು ಶ್ರೀಕೃಷ್ಣನ ದ್ವಾರಕೆಯ ಗತವೈಭವವನ್ನು ಸಮುದ್ರದಾಳದಲ್ಲಿ ಸಬ್‌ಮರೀನ್‌ ಮೂಲಕ ನೋಡಿ!

submarine tourism in dwarka

ಮುಳುಗಿದ ಟೈಟಾನಿಕ್‌ ಹಡಗಿನ ದರ್ಶನಕ್ಕೆ ಸಬ್‌ಮರೀನ್‌ ಮೂಲಕ (submarine tourism in dwarka) ಹೋಗುವ ಪ್ರವಾಸೋದ್ಯಮ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದು ಬಹುತೇಕರಿಗೆ ತಿಳಿದೇ ಇದೆ. ಅಂತೆಯೇ, ಭಾರತದಲ್ಲಿ ಸಬ್‌ಮರೀನ್‌ ಮೂಲಕ ನೀರಿನಡಿಯ ಲೋಕವನ್ನು ನೋಡಬಹುದಾದರೆ, ಇತಿಹಾಸವನ್ನು ಕಣ್ತುಂಬಬಹುದಾದರೆ, ಅದಕ್ಕೆ ಶ್ರೀಕೃಷ್ಣನೂರು ದ್ವಾರಕೆಗಿಂತ ಅದ್ಭುತ ಜಾಗ ಇನ್ನೊಂದು ಸಿಗಲಿಕ್ಕಿಲ್ಲ.ಸಾಗರದ ಗರ್ಭದೊಳಕ್ಕೆ ಹೊಕ್ಕು, ಗತಕಾಲದದಲ್ಲಿ ಹುದುಗಿ ಹೋದ, ಕೇಳಿ ತಿಳಿದ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ಕೇಳಿದ ಲೋಕವನ್ನೊಮ್ಮೆ ನೋಡಿ ಬರಬೇಕೆಂದು ಅನಿಸಿದರೆ, ಅದಕ್ಕೆ ನೀವು ಗುಜರಾತಿನ ದ್ವಾರಕೆಗೆ ಪಯಣ ಬೆಳೆಸಬೇಕು. ಶೀಘ್ರದಲ್ಲೇ, ಗುಜರಾತ್‌ ಪ್ರವಾಸೋದ್ಯಮ ಇಲಾಖೆ ಮಾಜ್‌ಗಾಂ ಡಾಕ್‌ಯಾರ್ಡ್‌ ಲಿಮಿಟೆಡ್‌ (ಎಂಡಿಎಲ್‌) ಸಂಸ್ಥೆಯೊಂದಿಗೆ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಆ ಮೂಲಕ ಸಮುದ್ರದಾಳದಲ್ಲಿರುವ ಶ್ರೀಕೃಷ್ಣನ ದ್ವಾರಕೆಯ ಗತಕಾಲದ ವೈಭವವನ್ನು ಜನರ ಕಣ್ಣ ಮುಂದಿರಿಸಲು ಯೋಜನೆಗಳನ್ನು ರೂಪಿಸಿದೆ.

ಈಗಾಗಲೇ ಗುಜರಾತ್‌ ರಾಜ್ಯ ಸರ್ಕಾರ ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಮೂಲಕ ಈವರೆಗೆ ಜನಸಾಮಾನ್ಯರು ಕಾಣದ ಸಮುದ್ರದಾಳದ ಜಗತ್ತನ್ನು ಲೋಕದ ಮುಂದಿಡಲು ಸರ್ಕಾರ ನಿರ್ಧರಿಸಿದೆ. ಬೆಟ್‌ ದ್ವಾರಕಾ ಎಂಬ ಸಣ್ಣ ದ್ವೀಪದ ಸುತ್ತಮುತ್ತಲ ಅರಬ್ಬೀ ಸಮುದ್ರದಾಳದ ಜಗತ್ತು ಹಿಂದಿನ ದ್ವಾರಕೆ ಎಂಬ ನಗರವಾಗಿದ್ದು, ಈ ಪ್ರದೇಶದಲ್ಲಿ ಸಬ್‌ಮರೀನ್‌ ಮೂಲಕ ಆರಂಭವಾಗಲಿರುವ ಪ್ರವಾಸೋದ್ಯಮ ಇದಾಗಿದೆ.

ಹಿಂದೂಗಳ ಪವಿತ್ರ ಕ್ಷೇತ್ರವಾದ ದ್ವಾರಕೆಯನ್ನು ಶ್ರೀಕೃಷ್ಣನೇ ನಿರ್ಮಿಸಿದ ಎಂಬ ನಂಬಿಕೆ ಹಿಂದೂಗಳದ್ದು. ಮಹಾಭಾರತದ ಪ್ರಕಾರ ಶ್ರೀಕೃಷ್ಣ ಸುಮಾರು ೮೪ ಕಿಮೀಗಳಷ್ಟು ದೊಡ್ಡ ದ್ವಾರಕೆ ಎಂಬ ನಗರವನ್ನು ಗೋಮತಿ ಅರಬ್ಬೀ ಸಮುದ್ರವನ್ನು ಸೇರುವ ಪ್ರದೇಶದಲ್ಲಿ ನಿರ್ಮಿಸಿದ ಎಂಬ ವಿವರಣೆ ದಕ್ಕುತ್ತದೆ. ಆದರೆ, ಈ ನಗರ ಶ್ರೀಕೃಷ್ಣನ ಕಾಲಾನಂತರ ಸಮುದ್ರದಲ್ಲಿ ಮುಳುಗಿ ಹೋಯಿತು ಎಂಬ ಮಾಹಿತಿಗಳೂ ದಕ್ಕುತ್ತವೆ. ಈ ಪುರಾಣದ ಉಲ್ಲೇಖಗಳಿಗೆ ಪೂರಕವಾಗಿ ಭಾರತೀಯ ಪುರಾತತ್ವ ಇಲಾಖೆಗೆ ಸಾಕಷ್ಟು ಆಧಾರಗಳೂ ದೊರಕಿವೆ. ಉತ್ಖನನಗಳೂ ನಡೆದಿವೆ. ಆ ಕಾಲದ್ದೆಂದು ಹೇಳಲಾದ ಮಡಿಕೆ ಕುಡಿಕೆಗಳಿಂದ ಹಿಡಿದು ಕಲ್ಲಿನ ಕೆತ್ತನೆಗಳವರೆಗೆ ಸಾಕಷ್ಟು ಪಳೆಯುಳಿಕೆಗಳೂ ಸಮುದ್ರದಾಳದಲ್ಲಿ ಲಭಿಸಿದ್ದು, ಈ ಬಗ್ಗೆ ಸಂಶೋಧನೆಗಳೂ ನಡೆದಿವೆ. ಆ ಮೂಲಕ, ಶ್ರೀಕೃಷ್ಣನ ದ್ವಾಪರಯುಗ ಕೇವಲ ಪುರಾಣದ ಕಟ್ಟು ಕಥೆಯಲ್ಲ, ನಿಜವಾದ ಕಥೆ ಎಂಬುದಕ್ಕೆ ಸಾಕಷ್ಟು ಆಧಾರಗಳೂ ದೊರೆತಿವೆ ಎಂದು ಹೇಳಲಾಗುತ್ತದೆ. ಈಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು ಜನಸಾಮಾನ್ಯರ ಮುಂದಿಡುವ ಈ ಸಬ್‌ಮರೀನ್‌ ಪ್ರವಾಸೋದ್ಯಮದ ಯೋಜನೆಯನ್ನೂ ರೂಪಿಸಿರುವುದು ವಿಶೇಷವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಯೋಜನೆಯ ಪ್ರಕಾರ ದೀಪಾವಳಿಯ ಸಮಯಕ್ಕೆ ನಾವು ಸಬ್‌ಮರೀನ್‌ ಮೂಲಕ ಸಮುದ್ರದಾಳಕ್ಕೆ ಪಯಣಿಸಿ ದ್ವಾರಕೆಯನ್ನು ಕಣ್ತುಂಬಿಕೊಳ್ಳಬಹುದು. ಇದೇ ಜನವರಿ ೧೦ರಂದು ಗುಜರಾತ್‌ನ ಗಾಂಧೀನಗರದಲ್ಲಿ ನಡೆಯುವ ಜಾಗತಿಕ ಸಮಾವೇಶದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

ಈ ಯೋಜನೆಯ ಪ್ರಕಾರ, ೩೫ ಟನ್‌ ತೂಕದ ಸಬ್‌ಮರೀನ್‌ನಲ್ಲಿ ಸುಮಾರು ೩೦ ಮಂದಿ ಇರಬಹುದಾದ ಸಾಮರ್ಥ್ಯ ಹೊಂದಿದೆ. ಇದರಲ್ಲಿ ೨೪ ಮಂದಿ ಆರಾಮವಾಗಿ ಎರಡು ಸಾಲುಗಳಲ್ಲಿ ಕೂರಬಹುದಾಗಿದೆ. ೩೦೦ಅಡಿ ಸಮುದ್ರದಾಳದವರೆಗೆ ಈ ಸಬ್‌ಮರೀನ್‌ ಪಯಣಿಸಲಿದ್ದು, ಅಲ್ಲಿನ ಪುರಾತನ ದ್ವಾರಕೆಯ ಸೊಬಗನ್ನು ನೋಡಿ ಮರಳಬಹುದು. ಶುಲ್ಕವೂ ಸೇರಿದಂತೆ, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಹೊರಬರಲಿದೆ.

ಇದನ್ನೂ ಓದಿ: Adventure Tourism: ನೀವು ಸಾಹಸ ಪ್ರಿಯರೇ? ಈ ಚಳಿಗಾಲದಲ್ಲಿ ನೀವು ಇಷ್ಟಾದರೂ ಸಾಹಸ ಮಾಡದಿದ್ದರೆ ಹೇಗೆ?!

Exit mobile version