ಪ್ರವಾಸಗಳನ್ನು ಇಷ್ಟಪಡುವ ಮಂದಿಯಲ್ಲಿ ಎರಡು ಬಗೆಯ ಮಂದಿಯಿರುತ್ತಾರೆ. ಒಂದು ಬಗೆಯವರಿಗೆ ಪ್ರವಾಸವನ್ನು ಎಂಜಾಯ್ ಮಾಡಿ, ತಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷವಾಗಿ ಕಾಲ ಕಳೆದು, ಐಷಾರಾಮಿ ಹೊಟೇಲುಗಳಲ್ಲಿ ಇದ್ದು, ರಿಲ್ಯಾಕ್ಸ್ ಆಗಿ ಸಮಯ ಕಳೆದುಕೊಂಡು ಮಜಾ ಮಾಡಿಕೊಂಡು ಬರುವವರಾದರೆ, ಇನ್ನೊಂದು ವರ್ಗ, ಜನಜಂಗುಳಿಯಿಂದ ದೂರವಿದ್ದು, ಶಾಂತವಾದ ನದೀತೀರದಲ್ಲೋ, ಬೆಟ್ಟದ ತಪ್ಪಲಲ್ಲೋ, ಪರ್ವತದ ಮೇಲಿನ ಒಂದು ಹಳ್ಳಿಯಲ್ಲೋ, ಒಂದಿಷ್ಟು ಸಮಾನ ಮನಸ್ಕರೊಂದಿಗೆ ಚಾರಣ ಮಾಡಿಯೋ ಸಮಯ ಕಳೆಯಲು ಇಷ್ಟ ಪಡುವ ಮಂದಿ. ಈ ಎರಡನೇ ವರ್ಗದ ಪ್ರವಾಸ ಪ್ರಿಯರಿಗೆ ಶಾಂತವಾಗಿ ಸಮಯ ಕಳೆಯಲು ಭಾರತದಲ್ಲಿ ಬೇಕಾದಷ್ಟು ಸ್ಥಳಗಳಿವೆ. ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ.
ಝುಲುಕ್, ಸಿಕ್ಕಿಂ
ಪೂರ್ವ ಸಿಕ್ಕಿಂನ ಝುಲುಕ್ ಎಂಬ ಹಳ್ಳಿ ಭಾರತದ ಅತ್ಯಂತ ಪುರಾತನವಾದ ಸಿಲ್ಕ್ ರೂಟ್ ಹಾದಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದು. ಮೇ ತಿಂಗಳಲ್ಲಿ ಆಗಸವೂ ತಿಳಿಯಾಗಿದ್ದು, ಹಿತವಾದ ಚಳಿಯೂ ಆವರಿಸಿರುವ, ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸಮಯ. ಸಾಲು ಸಾಲು ಹಿಮಬೆಟ್ಟಗಳಿಂದ ಆವೃತವಾದ ಹಿಮಾಲಯದ ಮನಮೋಹಕ ದೃಶ್ಯಗಳನ್ನು ಈ ಹಳ್ಳಿಯಲ್ಲಿದ್ದುಕೊಂಡು ಆಸ್ವಾದಿಸುತ್ತಾ ಸಮಯ ಕಳೆಯಬಹುದು.
ಚಿತ್ಕೂಲ್, ಹಿಮಾಚಲ ಪ್ರದೇಶ
ಭಾರತ ಚೀನಾ ಗಡಿಯಲ್ಲಿರುವ ಜನರ ವಸತಿಯಿರುವ ಕೊನೆಯ ಹಳ್ಳಿ ಚಿತ್ಕೂಲ್. ಕಿನೌರ್ ಜಿಲ್ಲೆಯ ಅತ್ಯಂತ ಸುಂದರವಾದ ಹಿಮಾಲಯದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗವಿದು. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು, ಅಲ್ಲಿನ ಜನಜೀವನ, ಆಹಾರ ಇತ್ಯಾದಿಗಳೆಲ್ಲವುಗಳ ಪರಿಚಯ ಮಾಡಿಕೊಂಡು, ಅದ್ಭುತ ದೃಶ್ಯಗಳನ್ನೂ ಕಂಡು ಆನಂದಿಸಬಹುದು.
ನಗ್ಗರ್, ಹಿಮಾಚಲ ಪ್ರದೇಶ
ಹಳೆಯ ದೇವಸ್ಥಾನಗಳು, ಅರಮನೆಗಳು, ಕಟ್ಟಡಗಳು ಇತ್ಯಾದಿಗಳಿರುವ ನಗ್ಗರ್ ಎಂಬ ಹಳ್ಳಿ ಮನಾಲಿಯಂತಹ ಕಿಕ್ಕಿರಿದು ತುಂಬಿರುವ ಪ್ರವಾಸಿಗಳಿಂದ ಮುಕ್ತವಾಗಿದೆ. ಜೊತೆಗೆ ಇಲ್ಲಿಂದ ಕಾಣುವ ಹಿಮಾಲಯದ ಪರ್ವತಶ್ರೇಣಿಗಳ ಸುಂದರ ದೃಶ್ಯ ನೆಮ್ಮದಿಯನ್ನು ಅರಸಿ ಬರುವ ಮಂದಿಗೆ ಹೇಳಿ ಮಾಡಿಸಿದ್ದು.
ಪೆಲ್ಲಿಂಗ್, ಸಿಕ್ಕಿಂ
ಕಾಂಚನಜುಂಗಾದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೆಲ್ಲಿಂಗ್ ಎಂಬ ಸಿಕ್ಕಿಂನ ಪುಟ್ಟ ಊರು ಒಳ್ಳೆಯ ತಾಣ. ಶಾಂತಿಯುತವಾದ ಜಾಗವನ್ನರಸಿ ಬರುವ ಮಂದಿಗೆ ಪೆಲ್ಲಿಂಗ್ ಬಹಳ ಇಷ್ಟವಾಗಬಹುದು.
ಮಲಾನಾ, ಹಿಮಾಚಲ ಪ್ರದೇಶ
ಮಲಾನಾ ಎಂಬ ಪುಟ್ಟ ಹಳ್ಳಿ ಹಿಮಾಚಲ ಪ್ರದೇಶದ ಕಸೋಲ್ ಸಮೀಪದಲ್ಲಿರುವ ಹಳ್ಳಿ. ಇದು ತನ್ನ ವಿಶಿಷ್ಟ ಸಂಸೃತಿ ಹಾಗೂ ಆಚರಣೆಯ ವಿಶೇಷತೆಗಳನ್ನು ಹೊಂದಿರುವ ಸುಂದರ ತಾಣ. ಪಾರ್ವತಿ ಕಣಿವೆಯ ಮನಮೋಹಕ ಹಿಮಾಲಯದ ಸೌಂದರ್ಯವನ್ನು ಇದು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.
ಝೀರೋ, ಅರುಣಾಚಲ ಪ್ರದೇಶ
ಅತ್ಯದ್ಭುತ ಪ್ರಕೃತಿ ಸೌಂದರ್ಯ, ಭತ್ತದ ಗದ್ದೆಗಳು, ಹಳೆಯ ಮರದ ಮನೆಗಳು ಇತ್ಯಾದಿಗಳಿಂದ ಮನಮೋಹಕವಾಗಿ ಕಾಣುವ ಝೀರೋ ಎಂಬ ಅರುಣಾಚಲ ಪ್ರದೇಶದ ಹಳ್ಳಿ ಪರಿಸರ ಪ್ರಿಯರು ಖಂಡಿತ ಇಷ್ಟಪಡಬಹುದಾದ ಹಾಗಿದೆ.
ಮಾವ್ಲಿನಾಂಗ್, ಮೇಘಾಲಯ
ಪೂರ್ವ ಖಾಸಿ ಬೆಟ್ಟ ಪ್ರದೇಶಗಳಲ್ಲಿರುವ ಮೇಘಾಲಯದ ಈ ಪುಟ್ಟ ಹಳ್ಳಿಯ ಅಪರೂಪದ ಸಂಸ್ಕೃತಿ, ಶಿಸ್ತುಬದ್ಧ ಜೀವನ, ಸ್ವಚ್ಛತೆ ಎಲ್ಲವನ್ನೂ ನೋಡಲೇಬೇಕು. ನಗರದ ಮಂದಿ ಖಂಡಿತವಾಗಿಯೂ ಈ ಹಳ್ಳಿಯ ಜನರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಬೇರಿನಿಂದ ಮಾಡಲ್ಪಟ್ಟ ಸೇತುವೆಗಳು ಇಲ್ಲಿನ ವಿಶೇಷತೆ.
ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು