ಬೇಸಿಗೆ ಬಂದಾಕ್ಷಣ (Summer Travel Tips) ಪ್ರವಾಸಗಳ ಸುಗ್ಗಿ. ಬೇಸಿಗೆಯಲ್ಲಿ ಬಿಸಿಲ ಝಳವನ್ನು ತಪ್ಪಿಸಿ, ನಿತ್ಯದ ಅದೇ ಜಂಜಾಟವನ್ನು ಮರೆತು ಒಂದಿಷ್ಟು ದಿನ ಎಲ್ಲಾದರೂ ಹೋಗಿ ಬರೋಣ ಎಂದು ಎಲ್ಲರಿಗೂ ಅನಿಸುವುದುಂಟು. ಮಕ್ಕಳು ಮರಿಗಳಿರುವ ಹೆತ್ತವರಿಗೆ ಬೇಸಿಗೆ ರಜೆಯಲ್ಲಿ ಎಲ್ಲಾದರೂ ಹೋಗಿ ಬರುವ ತವಕ. ಹೀಗೆ ಬಹುತೇಕ ಎಲ್ಲರೂ ಪ್ರವಾಸ ಬಯಸುವ ಕಾಲ ಎಂದರೆ ಅದು ಬೇಸಿಗೆ ಕಾಲ. ಇಂಥ ಬೇಸಿಗೆಯಲ್ಲಿ ವಿದೇಶೀ ಪ್ರವಾಸವೂ ಕೂಡ ಸಾಕಷ್ಟು ಮಂದಿಯ ಕನಸು. ಶಾಂತವಾದ, ತಂಪಾದ ವಿದೇಶೀ ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್ ಐದು ಜಾಗಗಳು ಇಲ್ಲಿವೆ. ಇವೆಲ್ಲವೂ ಬೇಸಿಗೆಯಲ್ಲಿ ಹೋಗಿ ಬರಬಹುದಾದ ಪರ್ಫೆಕ್ಟ್ ತಾಣಗಳು.
ಝರ್ಮಾಟ್, ಸ್ವಿಜರ್‌ಲ್ಯಾಂಡ್
ಝರ್ಮಾಟ್ ಎಂಬ ಪುಟ್ಟ ಪಟ್ಟಣ ಸ್ವಿಜರ್‌ಲ್ಯಾಂಡಿನ ಆಲ್ಫ್ಸ್ ಪರ್ವತ ಶ್ರೇಣಿಗಳ ಮಧ್ಯದಲ್ಲಿದೆ. ಹಾಗಾಗಿಯೇ ಈ ಪಟ್ಟಣ ಸ್ಕೀಯಿಂಗ್, ಚಾರಣ, ಕೇಬಲ್ ಕಾರ್ ಪಯಣ ಸೇರಿದಂತೆ ಹಲವು ಸಾಹಸಮಯ ಚಟುವಟಿಕೆಗಳಿಗೆ ಪ್ರಸಿದ್ಧ ತಾಣ. ಮನಮೋಹಕ ಹುಲ್ಲುಗಾವಲು, ಹಿಮಪರ್ವತ ಸಾಲು, ಪಟ್ಟಣದ ಜೀವನಕ್ರಮ, ಸುಮ್ಮನೆ ನಡೆಯಲು ಬೇಕಾದಷ್ಟು ಜಾಗ ಎಲ್ಲವೂ ಈ ಪಟ್ಟಣವನ್ನು ಪ್ರವಾಸಿಗರ ಕನಸಿನ ತಾಣವನ್ನಾಗಿಸಿದೆ. ಜೂನ್ ತಿಂಗಳಿಂದ ಸೆಪ್ಟೆಂಬರ್ ಇಲ್ಲಿಗೆ ಭೇಟಿ ಕೊಡಲು ಪ್ರಶಸ್ತ ಸಮಯ. ಝೂರಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಜಿನೀವಾ ವಿಮಾನ ನಿಲ್ದಾಣದಿಂದ ಇಲ್ಲಿಗೆ ರೈಲಿನಲ್ಲಿ ಹೋಗಬಹುದು. ವೆಚ್ಚ (ಉಳಿದುಕೊಳ್ಳಲು ಹಾಗೂ ಊಟೋಪಚಾರ): ಸುಮಾರು 1.8 ಲಕ್ಷ ರೂಪಾಯಿಗಳು (ಒಂದು ವಾರದ ಪ್ರವಾಸಕ್ಕೆ)
ಬಾಲಿ, ಇಂಡೋನೇಷ್ಯಾ
ಹನಿಮೂನಿಗರ ಸ್ವರ್ಗ ಎಂದೇ ಪ್ರಸಿದ್ಧವಾಗಿರುವ ಬಾಲಿ ಬೇಸಿಗೆಯಲ್ಲಿ ಪಯಣಿಸಬಹುದಾದ ಅತ್ಯಂತ ಸುಂದರ ತಾಣ. ಇಂಡೋನೇಷ್ಯಾದ ಪ್ರಕೃತಿ ಸೌಂದರ್ಯ, ದೇವಾಲಯಗಳು, ಸಾಂಸ್ಕೃತಿ ಉತ್ಸವಗಳು ಎಲ್ಲವೂ ಪ್ರವಾಸಿಗರ ಕಣ್ಣಿಗೆ ಹಬ್ಬ. ಸಾವಿರಾರು ಮಂದಿ ಇಲ್ಲಿನ ಸ್ಪಾ ಟ್ರೀಟ್‌ಮೆಂಟ್‌ಗಳಿಗಾಗಿಯೂ ಬರುತ್ತಾರೆ. ಬಾಲಿ ಸಫಾರಿ, ಮರೈನ್ ಪಾರ್ಕ್ ಭೇಟಿ, ಬಗೆಬಗೆಯ ಜಲಕ್ರೀಡೆಗಳು ಇಲ್ಲಿನ ಪ್ರವಾಸದ ಪ್ರಮುಖ ಆಕರ್ಷಣೆಗಳು. ಮೇ ತಿಂಗಳಿಂದ ಜುಲೈವರೆಗೆ ಇಲ್ಲಿಗೆ ಭೇಟಿ ಕೊಡಲು ಸಕಾಲ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಟ 35,000 ರೂಪಾಯಿಗಳು ಖರ್ಚಾಗಬಹುದು.
ಪೊಖಾರಾ, ನೇಪಾಳ
ನೇಪಾಳದ ಅದ್ಭುತ ಸೌಂದರ್ಯದ ಊರುಗಳಲ್ಲಿ ಪೊಖಾರಾ ಕೂಡಾ ಒಂದು. ಇಲ್ಲಿಂದ ಕಾಣುವ ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಬೌದ್ಧಸ್ತೂಪಗಳು, ದೇವಾಲಯಗಳು ಹೀಗೆ ನೇಪಾಳದ ಸಂಸ್ಕೃತಿಯನ್ನು ಕಾಣಲು ಪೊಖಾರಾ ಉತ್ತಮ ಜಾಗ. ಇಲ್ಲಿನ ಪ್ಯೂ ಸರೋವರದಲ್ಲಿ ಬೋಟಿಂಗ್, ಮಚುಪುಚರೇ ಶಿಖರ ದರ್ಶನ, ಝಿಪ್ ಲೈನಿಂಗ್, ಹಿಮಾಲಯದಲ್ಲಿ ಚಾರಣ, ಬಂಜೀ ಜಂಪಿಂಗ್ ಇತ್ಯಾದಿಗಳನ್ನೂ ಸಮಯವಿದ್ದರೆ ಮಾಡಬಹುದು. ಏಪ್ರಿಲ್‌ನಿಂದ ಜೂನ್ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡಬಹುದು. ಒಬ್ಬರಿಗೆ ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಸುಮಾರು ಕನಿಷ್ಠ 10,000 ರೂಪಾಯಿಗಳು ಖರ್ಚಾಗಬಹುದು.
ಹ್ಯಾಂಬರ್ಗ್, ಜರ್ಮನಿ
ಜರ್ಮನಿಯ ಹ್ಯಾಂಬರ್ಗ್ ನಗರ ಪ್ರಸಿದ್ಧ ಬೇಸಿಗೆಯ ಪ್ರವಾಸೀ ತಾಣಗಳ ಪೈಕಿ ಒಂದಾಗಿದೆ. 19ನೇ ಶತಮಾನದಲ್ಲಿ ನಿರ್ಮಾಣವಾದ ಈ ನಗರದ ವಾಸ್ತುಶಿಲ್ಪ, ಬೀದಿಗಳು, ಸಂಸ್ಕೃತಿ ಎಲ್ಲವೂ ಕೂಡಾ ಹೊಸ ಪರಿಚಯವನ್ನೇ ಮಾಡಿಸುತ್ತದೆ. ಮುಖ್ಯವಾಗಿ ಇಲ್ಲಿನ ಬೀಯರ್‌ಗಳು, ಅವುಗಳನ್ನು ತಯಾರು ಮಾಡುವ ಮನೆಗಳು, ಉದ್ಯಮ ಎಲ್ಲವೂ ನೋಡಬೇಕಾದಂಥದ್ದೇ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 52,000 ರೂಪಾಯಿಗಳು ಖರ್ಚಾಗಬಹುದು.
ವಿಸ್ಲರ್, ಕೆನಡಾ
ಸಮುದ್ರ ತೀರದ ಈ ಪಟ್ಟಣ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ ಪಟ್ಟಣ. ಬೆಟ್ಟಗುಡ್ಡಗಳಲ್ಲಿ ಚಾರಣ, ವನ್ಯಧಾಮಗಳಲ್ಲಿ ಸಫಾರಿ, ಕಲೆ ಸಂಸ್ಕೃತಿಗಳ ಪರಿಚಯ ಇತ್ಯಾದಿಗಳನ್ನು ನೋಡಿ ಅನುಭವಿಸಲು ಇಷ್ಟವಿರುವ ಮಂದಿ ಈ ಊರನ್ನು ತುಂಬಾ ಇಷ್ಟಪಡಬಹುದು. ಜೂನ್‌ನಿಂದ ಆಗಸ್ಟ್ ತಿಂಗಳ ಸಮಯ ಇಲ್ಲಿಗೆ ಭೇಟಿ ಕೊಡಲು ಅತ್ಯಂತ ಪ್ರಶಸ್ತ. ಒಂದು ಶಿಖರದಿಂದ ಇನ್ನೊಂದಕ್ಕೆ ಇರುವ ಗೊಂಡೋಲಾ ರೈಡ್, ಆರ್ಟ್ ಮ್ಯೂಸಿಯಂಗಳು, ಪುರಾತನ ಕಟ್ಟ್ಡಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಇಲ್ಲಿ ಸಮಯ ಕಳೆಯಬಹುದು. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 60,000 ರೂಪಾಯಿಗಳು ಖರ್ಚಾಗಬಹುದು.