Site icon Vistara News

Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು!

Spring Tourism

ವಸಂತ ಕಾಲಕ್ಕೆ ಅತ್ಯಂತ ಸುಂದರ ಕಾಲಗಳಲ್ಲಿ ಪ್ರಮುಖ ಸ್ಥಾನ. ಚಳಿಗಾಲದಲ್ಲಿ ಬೋಳಾಗಿದ್ದ ಮರಗಿಡಗಳೆಲ್ಲ ಚಿರುಗಿ ಮೊಗ್ಗರಳಿ ಹೂವಾಗಿ ಜಗತ್ತೆಲ್ಲ ಖುಷಿಯಿಂದ ನಳನಳಿಸುವಂತೆ ಕಾಣುವ ಕಾಲ. ಈ ಕಾಲದಲ್ಲಿ ಪ್ರವಾಸ ಅತ್ಯಂತ ಮಧುರ. ಹಕ್ಕಿಗಳೆಲ್ಲ ಸಂತಸದಿಂದ ಹಾಡಿ ಹಾರಾಡಿ ಕುಣಿವ ಕಾಲವಿದು. ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಕೆಲವು ಸ್ಥಳಗಳನ್ನು ಅಕ್ಷರಶಃ ವಸಂತ ಕಾಲದಲ್ಲೇ ನೋಡಬೇಕು. ಯಾಕೆಂದರೆ, ಎಲ್ಲ ಕಾಲದಲ್ಲೂ ಸುಂದರವಾಗಿ ಕಾಣುವ ಸ್ಥಳ ವಸಂತಕಾಲದಲ್ಲಿ ಹೇಗಿದ್ದೀತು ಎಂಬ ಕಲ್ಪನೆಯನ್ನು ಯಾವುದೇ ಪ್ರಕೃತಿ ಪ್ರಿಯನೂ ಮಾಡಬಲ್ಲ. ಹಾಗಾದರೆ ಬನ್ನಿ, ವಸಂತಕಾಲದಲ್ಲಿ ಹೋಗಲೇಬೇಕಾದ (Spring Tourism) ಭಾರತದ ಪ್ರವಾಸೀ ಸ್ಥಳಗಳ್ಯಾವುವು ಎಂಬುದನ್ನು ನೋಡೋಣ.

ಶ್ರೀನಗರ, ಕಾಶ್ಮೀರ

ಭೂಲೋಕದ ಸ್ವರ್ಗ ಎಂದೇ ಹೆಸರು ಪಡೆದ ಕಾಶ್ಮೀರವನ್ನು ಚಳಿಗಾಲದಲ್ಲಿ ಹಿಮದಲ್ಲಿ ನೋಡಿ ಖುಷಿ ಪಡುವುದು ಬೇರೆಯೇ ಆದರೂ ವಸಂತ ಕಾಲದಲ್ಲಿ ನೋಡುವುದು ಇನ್ನೂ ಸೊಗಸು. ಕಾಶ್ಮೀರದ ಶ್ರೀನಗರದ ಟ್ಯುಲಿಪ್‌ ಉದ್ಯಾನದಲ್ಲಿ ಬಣ್ಣಬಣ್ಣದಲ್ಲಿ ಟ್ಯುಲಿಪ್‌ ಹೂವರಳಿ ನಗುವುದನ್ನು ನೋಡಲು ಎರಡು ಕಣ್ಣು ಸಾಲದು. ವಿದೇಶಗಳಲ್ಲಿ ಕಾಣುವ ಈ ಹೂವು ಭಾರತದಲ್ಲಿ ಕಾಣಸಿಗುವ ಕೆಲವೇ ನಗರಗಳ ಪೈಕಿ ಶ್ರೀನಗರಕ್ಕೆ ಪ್ರಮುಖ ಸ್ಥಾನ. ಕಾಶ್ಮೀರದ ಗುಲ್ಮಾರ್ಗ್‌, ಸೋನ್‌ಮಾರ್ಗ್‌ ಸೇರಿದಂತೆ ಎಲ್ಲ ಪ್ರೇಕ್ಷಣೀಯ ಸ್ಥಳಗಳೂ ಈ ಕಾಲದಲ್ಲಿ ಮನಮೋಹಕ.

ಮುನ್ನಾರ್‌, ಕೇರಳ

ಕೇರಳದ ಮುನ್ನಾರ್‌ ಕೂಡಾ ಅತ್ಯಂತ ಸುಂದರ ಊರುಗಳಲ್ಲಿ ಒಂದು ಈ ಬೆಟ್ಟದೂರು ಹಸಿರ ಸ್ವರ್ಗ. ಹಲವಾರು ಜಲಪಾತಗಳು, ಟೂರಿಸ್ಟ್‌ ಪಾಯಿಂಟ್‌ಗಳು ಇಲ್ಲಿದ್ದು, ವಸಂತ ಕಾಲದ ಚಿಗುರು ಹಸಿರಿನಲ್ಲಿ ಚಂದವಾಗಿ ಕಾಣುತ್ತದೆ. ಹೆಚ್ಚು ಸೆಖೆಯೂ ಇಲ್ಲದ ಈ ಕಾಲದಲ್ಲಿ ಮುನ್ನಾರ್‌ ನೋಡುವುದು ಬಲು ಸೊಗಸು.

ಶಿಲ್ಲಾಂಗ್‌, ಮೇಘಾಲಯ

ಮೇಘಾಲಯವನ್ನು ನೋಡಲು ಸಕಾಲ ಎಂದರೆ ಅದು ವಸಂತ ಕಾಲ. ಹಸಿರಿನಿಂದ ನಳನಳಿಸುವ ಈ ಕಾಲದಲ್ಲಿ ಮಳೆಯೂ ಅಷ್ಟಾಗಿ ಸುರಿಯದ ಕಾರಣ ಶಿಲ್ಲಾಂಗ್‌ ಸುತ್ತಿ ನೋಡಲು ಮಳೆ ಅಡ್ಡ ಬರದು. ಅದ್ಭುತ ಸೌಂದರ್ಯದ ದಟ್ಟ ಹಸಿರಿನ ಮೇಘಾಲಯದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಅತ್ಯುತ್ತಮ ಕಾಲ.

ಡಾರ್ಜಿಲಿಂಗ್‌, ಪಶ್ಚಿಮ ಬಂಗಾಳ

ತನ್ನ ಚಹಾ ತೋಟಗಳ ಹಾಗೂ ಹಿಮಾಲಯ ಅದ್ಭುತ ಸೌಂದರ್ಯವನ್ನು ಜೊತೆಯಾಗಿ ಕಟ್ಟಿಕೊಡಬಲ್ಲ ತಾಣಗಳಲ್ಲಿ ಡಾರ್ಜಿಲಿಂಗ್‌ಗೆ ಮಹತ್ವದ ಸ್ಥಾನವಿದೆ. ಹಾಗಾಗಿ ಇದು ಪ್ರೇಮಿಗಳಿಗೆ ಸ್ವರ್ಗ. ಚಳಿಗಾಲದ ಚಳಿಯಿಂದ ಕೊಂಚ ಹೊರಬಂದು ಹಿತವಾದ ಬಿಸಿಲು, ಹೊದ್ದು ಮಲಗುವ ಚಳಿ ಎರಡನ್ನೂ ನೀಡಬಲ್ಲ ಸಮಯವೆಂದರೆ ಅದು ವಸಂತ ಕಾಲ. ಡಾರ್ಜಿಲಿಂಗನ್ನು ಈ ಕಾಲದಲ್ಲಿ ನೋಡಬೇಕು.

ಗ್ಯಾಂಗ್ಟಕ್‌, ಸಿಕ್ಕಿಂ

ಸಿಕ್ಕಿಂ ಎಂಬ ಭಾರದ ರಾಜ್ಯದ ಸೌಂದರ್ಯವನ್ನು ಬಣ್ಣಿಸಲು ಪದಗಳ ಶ್ರೀಮಂತಿಕೆ ಬೇಕು. ಸದಾ ಸುಂದರವಾಗಿ ಕಾಣುವ, ಹಿಮಾಲಯದ ಸೌಂದರ್ಯವನ್ನು ತೋರಿಸುವ ರಾಜ್ಯ. ಇಲ್ಲಿನ ಹಿಮದೂರುಗಳನ್ನೂ ನೋಡಿಕೊಂಡು, ವಸಂತದಲ್ಲಿ ನಿಧಾನವಾಗಿ ಚಿಗುರೊಡೆವ ಮರಗಿಡಗಳನ್ನೂ ಕಣ್ತುಂಬಿಕೊಂಡು, ಹೂಗಳ ರಾಶಿಯನ್ನು ನೋಡಲು ಜೀವನದಲ್ಲೊಮ್ಮೆಯಾದರೂ ಹೋಗಲೇ ಬೇಕಲ್ಲವೇ?

ಊಟಿ, ತಮಿಳುನಾಡು

ನಮ್ಮ ನೆರೆಯ ರಾಜ್ಯದ ಈ ಊರಿಗೆ ನಾವು ಮನಸು ಮಾಡಿದಾಗಲೆಲ್ಲ ಹೋಗಬಹುದು. ಮೊದಲೇ ಊಟಿ ಪ್ರೇಮಿಗಳಿಗೆ ಸ್ವರ್ಗ. ಇನ್ನು, ವಸಂತ ಕಾಲದಲ್ಲಿ ಉದ್ಯಾನಗಳಲ್ಲೆಲ್ಲ ನಳನಳಿಸುವ ಹೂಗಳರಳಿದ್ದರೆ ಕೇಳಬೇಕೇ? ಪ್ರೇಮಿಗಳಿಗೆ, ನವದಂಪತಿಗಳಿಗೆ ರಮ್ಯಗಳಿಗೆಯನ್ನು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ದೂರ ಪ್ರವಾಸ ಹೋಗಲಾಗದೆ ಇರುವವರು ಬೇಸರ ಪಡಬೇಕಾಗಿಲ್ಲ. ಹತ್ತಿರದ ಊಟಿಗೇ ಹೋಗಿ ಬಣ್ಣಬಣ್ಣದ ಹೂಗಳನ್ನು ಕಣ್ತುಂಬಿಕೊಂಡು ಬರಬಹುದು.

Exit mobile version