ʻಹುಲಿಯನ್ನು ನೋಡಬೇಕು, ಅದೂ, ಕೂಡಾ ಕಾಡಿನಲ್ಲಿ!ʼ ಹೀಗೊಂದು ಆಸೆ ಪ್ರಕೃತಿ ಹಾಗೂ ಪ್ರವಾಸ ಪ್ರಿಯರಲ್ಲಿ ಬಹುತೇಕರಿಗೆ ಇದ್ದೇ ಇರುತ್ತದೆ. ಕಾಡೊಳಗೆ ಹೋದಾಗ, ಹಠಾತ್ತನೆ ಎದುರಾಗುವ ಹುಲಿಯನ್ನು ನೋಡಿ ಒಮ್ಮೆ ಭಯ- ಆಶ್ಚರ್ಯಗಳೊಂದಿಗೆ ರೋಮಾಂಚಿತರಾಗುವ ಅವಕಾಶವನ್ನು ಅದೃಷ್ಠವೆಂದೇ ವನ್ಯಜೀವಿ ಪ್ರಿಯರು ನಂಬುತ್ತಾರೆ. ಕಾಡೊಳಗೆ ಸಫಾರಿಯ ಹೆಸರಿನಲ್ಲಿ ಒಂದಿಡೀ ದಿನ ತಿರುಗಾಡಿದರೂ ಎಷ್ಟೋ ಮಂದಿಗೆ ಹುಲಿಯನ್ನು ಮುಖತಃ ನೋಡಲಾಗಿರುವುದಿಲ್ಲ. ಯಾಕೆಂದರೆ ಹುಲಿ ಅಷ್ಟು ಸುಲಭವಾಗಿ ಯಾರಿಗೂ ದರ್ಶನ ಕೊಡುವುದಿಲ್ಲ. ಅದು ದೇವರ ಹಾಗೆ! ಅದಕ್ಕೆ ಹುಲಿ ಸಿಕ್ಕಿತು ಎಂದರೆ, ಯಾರೇ ವನ್ಯಜೀವಿ ಪ್ರಿಯರಿಗೇ ಆಗಲಿ, ಅದೊಂದು ಜೀವಮಾನದ ಸುಂದರ ಕ್ಷಣ. ಮರೆಯಲಾಗದ ಅನುಭವ.
ಭಾರತದಲ್ಲಿ ವಿಶ್ವದಲ್ಲಿರುವ ಒಟ್ಟು ಹುಲಿಗಳ ಪೈಕಿ ಶೇ.೮೦ರಷ್ಟು ಹುಲಿಗಳು ಭಾರತದಲ್ಲೇ ಇವೆ. ಭಾರತದಲ್ಲಿರುವ ೫೩ ಹುಲಿಧಾಮಗಳ ಪೈಕಿ ೨೦೧೮ರಲ್ಲಿ ನಡೆದ ಹುಲಿ ಗಣತಿಯ ಪ್ರಕಾರ ೨೯೬೭ ಹುಲಿಗಳಿವೆಯಂತೆ. ಇಷ್ಟು ಹುಲಿಗಳ ಪೈಕಿ ಒಂದನ್ನಾದರೂ ಜೀವಮಾನದಲ್ಲಿ ಒಮ್ಮೆ ಕಣ್ತುಂಬಿಕೊಳ್ಳುವ ಆಸೆಯಿದ್ದರೆ ಒಂದಷ್ಟು ಯೋಜನೆ ರೂಪಿಸಬೇಕು. ಯಾವ ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ಮಾಡಿದರೆ ಹುಲಿ ಸಿಗುವ ಸಾಧ್ಯತೆಗಳು ಹೆಚ್ಚು ಎಂಬುದನ್ನು ಇಲ್ಲಿ ನೋಡೋಣ.
೧. ಬಂದಾವ್‌ಗಡ್ ರಾಷ್ಟ್ರೀಯ ಉದ್ಯಾನ: ಮಧ್ಯಪ್ರದೇಶದ ಬಂದಾವ್‌ಗಡ್ ರಾಷ್ಟರೀಯ ಉದ್ಯಾನದಲ್ಲಿ ಹುಲಿಯನ್ನು ಎದುರುಗೊಳ್ಳುವ ಸಾಧ್ಯತೆ ಅತೀ ಹೆಚ್ಚಿದೆಯಂತೆ. ಯಾಕೆಂದರೆ ಭಾರತದಲ್ಲಿರುವ ಹುಲಿಗಳ ಪೈಕಿ ಹೆಚ್ಚು ಹುಲಿಗಳು ಈ ಪ್ರದೇಶದಲ್ಲಿವೆ. ಸುಮಾರು ನೂರು ಚದರ ಕಿಲೋಮೀಟರ್ ವ್ಯಾಪ್ತಿಯ ಈ ಪ್ರದೇಶದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಹುಲಿಗಳಿವೆಯಂತೆ. ಇದು ಬಿಳಿ ಹುಲಿಗಳ ಪ್ರದೇಶ ಎಂಬ ಹೆಸರೂ ಇದಕ್ಕಿದೆ. ಇಲ್ಲಿ ಪ್ರಸ್ತುತ ಯಾವುದೇ ಬಿಳಿ ಹುಲಿಗಳಿಲ್ಲ. ಇಲ್ಲಿನ ಕೊನೆಯ ಬಿಳಿಹುಲಿಯನ್ನು ರೇವಾದ ಮಹಾರಾಜ ಮಾರ್ತಾಂಡ ಸಿಂಗ್ ೧೯೫೧ರಲ್ಲಿ ಹಿಡಿದಿದ್ದರು. ಹುಲಿಯನ್ನು ಹೊರತುಪಡಿಸಿದರೆ ಇಲ್ಲಿ ಜಿಂಕೆ, ಬೊಗಳುವ ಜಿಂಕೆ, ಕಾಡುಹಂದಿ, ನೀಲ್‌ಗಾಯ್, ಕಾಡೆಮ್ಮೆ, ಕರಡಿ, ಚಿರತೆ, ನರಿ, ತೋಳಗಳಂತ ಇತರ ಪ್ರಾಣಿಗಳೂ ಇಲ್ಲಿವೆ. ಅದೃಷ್ಟವಿದ್ದರೆ, ಈ ಕೆಲವು ಪ್ರಾಣಿಗಳ ಜೊತೆಗೆ ಹುಲಿಯನ್ನೂ ನೋಡಬಹುದು.
೨. ರಣಥಂಬೋರ್ ರಾಷ್ಟ್ರೀಯ ಉದ್ಯಾನ: ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನ ಕೂಡಾ ಹುಲಿಯನ್ನು ನೋಡಬಹುದಾದ ಹೆಚ್ಚು ಸಾಧ್ಯತೆಯನ್ನು ಹೊಂದಿರುವ ಹುಲಿಧಾಮ. ೧೩೩೪ ಚದರ ಕಿಮೀ ವ್ಯಾಪ್ತಿಯಲ್ಲಿ ಹಬ್ಬಿದ ಈ ರಾಷ್ಟ್ರೀಯ ಉದ್ಯಾನ ವನ್ಯಜೀವಿ ಛಾಯಾಗ್ರಾಹಕರ ಮೆಚ್ಚಿನ ತಾಣ. ಜೈಪುರದ ಮಹಾರಾಜರ ಖಾಯಂ ಬೇಟೆಯ ಸ್ಥಳವಾಗಿದ್ದ ಇದು ೧೯೬೦ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್ ೨ ಭೇಟಿಯ ನಂತರ ಹೆಚ್ಚು ಖ್ಯಾತಿಯನ್ನು ಪಡೆಯಿತು. ಪ್ರಿನ್ಸ್ ಫಿಲಿಪ್ ಅಂದು ಇಲ್ಲೊಂದು ಹುಲಿಯನ್ನು ಬೇಟೆಯೂ ಆಡಿದ್ದರು. ೧೯೭೩ರ ನಂತರ ಹುಲಿಯ ಸಂರಕ್ಷಣೆ ಕುರಿತ ಕಾನೂನುಗಳು ಬಂದು ಇಂದಿಗೆ ಇದು ಭಾರತದ ಅತ್ಯಂತ ಬೆಸ್ಟ್ ಹುಲಿಧಾಮವಾಗಿ ಹೊರಹೊಮ್ಮಿದೆ. ಹುಲಿಯ ಹೊರತಾಗಿ ಚಿರತೆ, ಹೈನಾ, ಕರಡಿ, ಮೊಸಳೆಗಳನ್ನೂ ನೋಡಬಹುದು.
೩. ಕನ್ಹಾ ರಾಷ್ಟ್ರೀಯ ಉದ್ಯಾನ: ರುಡ್ಯಾರ್ಡ್ ಕಿಪ್ಲಿಂಗ್ ಅವರ ಖ್ಯಾತ ಕೃತಿ ʻದಿ ಜಂಗಲ್ ಬುಕ್ʼನ ಕತೆ ಅಖಾಡ ಇದೇ ಕನ್ಹಾ ರಾಷ್ಟ್ರೀಯ ಉದ್ಯಾನವಂತೆ. ಹಾಗಾಗಿ ಕನ್ಹಾದಲ್ಲಿ ತಿರುಗಾಡುವಾಗ ಮೌಗ್ಲಿಯನ್ನೂ ಶೇರ್ ಖಾನ್‌ನನ್ನು ನೆನಪಾದರೆ ಆಶ್ಚರ್ಯವಿಲ್ಲ. ಇದರ ಹೊರತಾಗಿಯೂ ಇದು ಇಂದಿಗೂ ಹುಲಿಗಳನ್ನು ಕಾಣುವ ಸಾಧ್ಯತೆ ಹೆಚ್ಚಿರುವ ಉದ್ಯಾನ. ವನ್ಯಜೀವಿ ಛಾಯಾಗ್ರಾಹಕರ ಪಾಲಿಗೆ ಪ್ರಿಯವಾದ ಜಾಗ. ಇಲ್ಲಿಯೂ ಹುಲಿಯ ಹೊರತಾಗಿ ನಾನಾ ಕಾಡುಮೃಗಗಳನ್ನು ಕಾಣುವ ಸಾಧ್ಯತೆ ಇದೆ.
೪. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ: ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನ ಈ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವಾಗಿದೆ. ೧೯೩೬ರಲ್ಲಿ ಹೈಲಿ ರಾಷ್ಟ್ರೀಯ ಉದ್ಯಾನ ಎಂಬ ಹೆಸರಿನಲ್ಲಿ ಹುಟ್ಟಿಕೊಂಡ ಈ ರಾಷ್ಟ್ರೀಯ ಉದ್ಯಾನವನನು ೧೯೫೦ರಲ್ಲಿ ದಂತಕತೆಯಾದ ಬೇಟೆಗಾರನೊಬ್ಬ ಸಂರಕ್ಷಕನಾಗಿ ಬದಲಾದ ಜಿಮ್ ಕಾರ್ಬೆಟ್ ಹೆಸರಿಗೆ ಬದಲಾಯಿಸಲಾಯಿತು. ಹಿಮಾಲಯದ ತಪ್ಪಲಲ್ಲಿರುವ, ಉತ್ತರಾಖಂಡದಲ್ಲಿರುವ ಈ ರಾಷ್ಟ್ರೀಯ ಉದ್ಯಾನ ೫೦೦ ಚದರ ಕಿಲೋಮೀಟರ್ ವ್ಯಾಪ್ತಿಯುಳ್ಳದ್ದು. ವನ್ಯಜೀವಿ ಛಾಯಾಗ್ರಾಹಕರ ಮತ್ತೊಂದು ಫೇವರಿಟ್!
ಇದನ್ನೂ ಓದಿ: Hot water spring: ಚಳಿಗಾಲದಲ್ಲಿ ಈ ಹಿಮದೂರುಗಳ ಬಿಸಿನೀರಿನ ಚಿಲುಮೆಗಳಲ್ಲಿ ಮುಳುಗೆದ್ದು ಬನ್ನಿ!
೫. ಸುಂದರ್‌ಬನ್ ರಾಷ್ಟ್ರೀಯ ಉದ್ಯಾನ: ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಭಾರತದ ಪಶ್ಚಿಮ ಬಂಗಾಳದಲ್ಲಿರುವ ಸುಂದರ್‌ಬನ್ ರಾಷ್ಟ್ರೀಯ ಉದ್ಯಾನಕ್ಕೆ ಅದರದ್ದೇ ಆದ ವಿಶೇಷತೆಯಿದೆ. ಅತ್ಯಂತ ದೊಡ್ಡ ಮ್ಯಾಂಗ್ರೋವ್ ಕಾಡುಗಳ ಪ್ರದೇಶವಿದು. ನದೀ ಮುಖಜಭೂಮಿಯ ದಟ್ಟ ಕಾಡುಗಳಲ್ಲಿ ರಾಯಲ್ ಬೆಂಗಾಲ್ ಟೈಗರ್‌ನನ್ನು ಕಾಣುವ ಯೋಗವಿದ್ದರೆ ಅದು ನಿಜವಾಗಿಯೂ ಅದೃಷ್ಟವೇ ಸರಿ. ನದಿಯಲ್ಲಿ ದೋಣಿಯಲ್ಲಿ ಕುಳಿತು ಸುತ್ತಲ ಕಾಡುಗಳಲ್ಲಿ ಹುಲಿ ವೀಕ್ಷಣೆಗೆ ಹೋಗುವ ಅಪರೂಪದ ಅನುಭವ ಇಲ್ಲಿ ಸಿಗುತ್ತದೆ. ಇಲ್ಲಿ ಸುಮಾರು ೯೬ ಹುಲಿಗಳಿವೆಯಂತೆ. ಅಷ್ಟೇ ಅಲ್ಲದೆ, ಇದು ಸಾಕಷ್ಟು ಇತರ ಪ್ರಾಣಿಗಳಿಗೂ, ವಿವಿಧ ಪಕ್ಷಿಸಂಕುಲಕ್ಕ ಆವಾಸಸ್ಥಾನವಾಗಿದೆ.
ಇದನ್ನೂ ಓದಿ: Tata Motors : ದುಬಾರಿಯಾಗಲಿವೆ ಸಫಾರಿ, ಹ್ಯಾರಿಯರ್, ನೆಕ್ಸಾನ್; ಯಾವಾಗ ಬೆಲೆ ಏರಿಕೆ?