Site icon Vistara News

ಭಾರತದಲ್ಲೇ ಹನಿಮೂನ್‌: ಟಾಪ್‌ 12 ಅಸಾಮಾನ್ಯ ಸ್ಥಳಗಳು!

honeymoon

ಹೊಸದಾಗಿ ಮದುವೆಯಾದ ಜೋಡಿಗಳಿಗೆ ಹನಿಮೂನ್‌ ಎಂಬುದು ಜೀವನಪೂರ್ತಿ ನೆನಪಿರುವ ಸುಂದರ ನೆನಪಿನ ಬುತ್ತಿ. ಅದೇ ಊಟಿ, ಅದೇ ಗೋವಾ, ಅದೇ ಕೇರಳದ ಅಲೆಪ್ಪಿ, ಅದೇ ಕುಲು ಮನಾಲಿಗಳನ್ನು ಬಿಟ್ಟರೆ ಯಾರೂ ಅಷ್ಟಾಗಿ ಹೋಗದ ಹನಿಮೂನ್‌ ಜಾಗಗಳು ಭಾರತದಲ್ಲಿ ಸಿಗೋದೇ ಇಲ್ವಾ? ನೋಡೋಣ ಬನ್ನಿ.

ದಾಂಡೇಲಿ
ವಾಲ್ಪಾರೈ

೧. ದಾಂಡೇಲಿ: ನಮ್ಮ ಕರ್ನಾಟಕದ ದಾಂಡೇಲಿಯೂ ಹನಿಮೂನಿಗೆ ಪ್ರಶಸ್ತ. ದಟ್ಟ ಕಾಡಿನ ನಡುವೆ ಯಾರ ಕಾಟವೂ ಇಲ್ಲದೆ ಕಳೆದುಹೋಗಬಹುದಾದ, ಕಾಳೀ ನದಿಯಲ್ಲಿ ಮೈ ಜುಂ ಎನಿಸುವ ರ್ಯಾಫ್ಟಿಂಗ್‌ ಮಾಡಬಹುದಾದ, ದೂದ್‌ ಸಾಗರ್‌ ಜಲಪಾತಕ್ಕೆ ಚಾರಣ ಮಾಡುತ್ತಾ ನಮ್ಮದೇ ಲೋಕದಲ್ಲಿ ವಿಹರಿಸಲು ಇದು ಪರ್ಫೆಕ್ಟ್‌ ಡೆಸ್ಟಿನೇಶನ್!

೨. ವಾಲ್ಪರೈ: ತಮಿಳುನಾಡಿನಲ್ಲಿರುವ ವಾಲ್ಪರೈ, ಟಾಪ್‌ಸ್ಲಿಪ್‌, ಪರಂಬಿಕುಳಂ ಹನಿಮೂನ್‌ಗೆ ಬೆಸ್ಟ್‌ ಪ್ಲೇಸ್!‌ ತಣ್ಣಗೆ ಬೀಸುವ ಗಾಳಿ, ಎತ್ತರೆತ್ತರ ಬೆಟ್ಟಗಳ ಸಾಲು, ಸದಾ ಮುತ್ತಿಕ್ಕುವ ಮಂಜು ಮರೆಯಲಾಗದ ಕಚಕುಳಿಯನ್ನು ಸದಾ ಕೊಡಬಲ್ಲದು!

ಖಜುರಾಹೋ
ಯಮತಂಗ್‌ ವ್ಯಾಲಿ

೩. ಖಜುರಾಹೋ: ಐತಿಹಾಸಿಕ ಸ್ಥಳವೊಂದಕ್ಕೆ ಹನಿಮೂನ್‌ ಹೋಗಬಹುದು ಎಂದೆನಿಸಿದರೆ ಖಜುರಾಹೋಗಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಮಧ್ಯಪ್ರದೇಶದಲ್ಲಿರುವ ಈ ದೇವಾಲಯಗಳ ಶಿಲ್ಪಕಲೆ ನಿಮ್ಮ ಹನಿಮೂನ್‌ಗೆ ಹೇಳಿ ಮಾಡಿಸಿದ್ದು. ನೋಡಿ, ತುಂಟತನ ತೋರಿಸಿ, ಪ್ರಭಾವಿತರಾಗಿ!

೪. ಯಮತಂಗ್‌ ವ್ಯಾಲಿ: ಕುಲು ಮನಾಲಿಯನ್ನು ಬಿಟ್ಟು ಅಂಥದ್ದೇ ಜಾಗ ಬೇಕೆನಿಸಿದರೆ ಅದಕ್ಕೆ ಸಿಕ್ಕಿಂನ ಯಮತಂಗ್‌ ವ್ಯಾಲಿ ಸೂಕ್ತ. ಎತ್ತರೆತ್ತರ ಹಿಮಬೆಟ್ಟಗಳ ಸಾಲು, ಕೈಯಿಟ್ಟಲ್ಲಿ, ಕಾಲಿಟ್ಟಲ್ಲಿ ಹಿಮ, ಯಾಕ್‌ ಸವಾರಿ, ಹನಿಮೂನ್‌ಗೆ ಬೇಕೇ ಬೇಕಾದ ಚಳಿ ಎಲ್ಲವೂ ಇಲ್ಲಿ ಫುಲ್‌ ಮೀಲ್ಸ್!‌

ಸುಂದರಬನ
ಜೈಸಲ್ಮೇರ್

೫. ಸುಂದರ್‌ಬನ್ಸ್:‌ ಪಶ್ಚಿಮ ಬಂಗಾಳದ ಸುಂದರ್‌ ಬನ್ಸ್‌ ಕೂಡ ಹನಿಮೂನ್‌ಗೆ ಪ್ರಶಸ್ತ. ಹೋದಷ್ಟೂ ಮುಗಿಯದ ನದಿ, ನೋಡಿದಷ್ಟೂ ಮುಗಿಯ ಕಾಡು, ಅದೃಷ್ಟವಿದ್ದರೆ ಸಿಗಬಹುದಾದ ಹುಲಿ ನಿಮ್ಮ ಹನಿಮೂನ್‌ನನ್ನು ಅಷ್ಟೇ ವೈಲ್ಡ್‌ ಆಗಿಸಬಹುದು!

೬. ಜೈಸಲ್ಮೇರ್:‌ ರಾಜಸ್ಥಾನದಂತಹ ಮರುಳುಗಾಡಿನಲ್ಲೂ ರೊಮ್ಯಾನ್ಸ್‌ ಮಾಡಬಹುದು! ಜೈಸಲ್ಮೇರಿನ ಮರಳುಗಾಡಿನಲ್ಲಿ ಒಂಟೆ ಮೇಲೆ ಸಾಮಿಪ್ಯ ಅನುಭವಿಸುತ್ತಾ ಹೋದಷ್ಟೂ ಮುಗಿಯದ ಮರಳುಗಾಡಿನಲ್ಲಿ ಸುತ್ತಾಡುವುದು ಎಷ್ಟು ಸುಖ!

ಲಡಾಕ್
ಶಿಲ್ಲಾಂಗ್

೭. ಲಡಾಕ್:‌ ಅಡ್ವೆಂಚರ್‌ ಕಪಲ್‌ಗಳಿಗೆ ಹೇಳಿ ಮಾಡಿಸಿದಂಥ ಹನಿಮೂನ್‌ ಜಾಗ. ಪಾಂಗಾಂಗ್‌ ಸರೋವರ, ಝಂಸ್ಕಾರ್‌ ಕಣಿವೆಗಳಲ್ಲಿ ಸುತ್ತಾಡುತ್ತಾ, ಥರಗುಟ್ಟುವ ಚಳಿಯಲ್ಲಿ ಹಿತವಾಗಿ ಅರಳುತ್ತಾ ಹನಿಮೂನನ್ನು ಜೀವನಪೂರ್ತಿ ಮೆಲುಕು ಹಾಕಬಹುದು.

೮. ಶಿಲ್ಲಾಂಗ್:‌ ಮೇಘಾಲಯದ ಬಿಡದೇ ಸುರಿವ ಮಳೆಯಲ್ಲಿ ಒದ್ದೆಯಾಗಿ “ಪ್ಯಾರ್‌ ಹುವಾ…” ಎಂದು ರೈನ್‌ ಡ್ಯಾನ್ಸ್‌ ಮಾಡಬೇಕೆಂಬ ಮನಸ್ಸಿದ್ದರೆ ಶಿಲ್ಲಾಂಗ್‌ ಬೆಸ್ಟ್‌ ಜಾಗ.‌

ಔಲಿ
ಕಛ್

೯. ಔಲಿ: ಕಣ್ಣಮುಂದೆ ಆಗಸದೆತ್ತರಕ್ಕೆ ಮೈಎತ್ತಿ ನಿಂತಿರುವ ನಂದಾದೇವಿಯೆಂಬ ಹಿಮಪರ್ವತವನ್ನು ರೂಮಿನಲ್ಲಿ ಕುಳಿತೇ ನೋಡುತ್ತಾ, ಹಿಮದಲ್ಲಿ ಜಾರುತ್ತಾ, ಕೇಬಲ್‌ ಕಾರೊಳಗೆ ಕೂತು ಆಗಸದಿಂದ ಎತ್ತರೆತ್ತರ ಹಿಮಾಲಯ ಬೆಟ್ಟಗಳ ಸಾಲನ್ನು ನೋಡುತ್ತಾ ಹನಿಮೂನ್‌ ಕಳೆಯಬೇಕೆಂದಿದ್ದರೆ ಉತ್ತರಾಖಂಡದ ಔಲಿ ರೊಮ್ಯಾಂಟಿಕ್‌ ಜಾಗ.

೧೦. ಕಚ್:‌ ಎತ್ತ ನೋಡಿದರೂ ಬೆಳ್ಳನೆಯ ಉಪ್ಪಿನ ಹಾಸು, ಇದರ ಮೇಲೆ ನಡೆಯುತ್ತಾ ದೂರದಲ್ಲಿ ರೋಮಾಂಚಕಾರಿ ಬಣ್ಣದಲ್ಲಿ ಮೂಡುವ ಸೂರ್ಯ, ಇವೆಲ್ಲವಕ್ಕೂ ಪುಷ್ಟಿ ನೀಡುವಂತೆ ಗುಜರಾತಿ ಅಮೋಘ ಕರಕುಶಲ ಕಲೆ, ಕಲಾಸಕ್ತ ದಂಪತಿಗಳು ಕಳೆದುಹೋಗುವುದು ಖಚಿತ.

ಲಕ್ಷದ್ವೀಪ
ಪಾಂಡಿಚೆರಿ

೧೧. ಲಕ್ಷದ್ವೀಪ: ದ್ವೀಪವೊಂದರ ಹನಿಮೂನ್‌ನಷ್ಟು ರೊಮ್ಯಾಂಟಿಕ್‌ ಇನ್ಯಾವುದಿದ್ದೀತು! ಮೈಜಾಚಿ ಬಿದ್ದುಕೊಳ್ಳಬಹುದಾದ ಸಮುದ್ರ ತೀರಗಳು, ಸಾಗರದಾಳದ ಬಣ್ಣಬಣ್ಣದ ಲೋಕ ಹೊಸ ಬದುಕಿಗೆ ಹೊಸ ಬಣ್ಣ ಬಳಿದಾವು!

೧೨. ಪಾಂಡಿಚೇರಿ: ಭಾರತದೊಳಗಿದ್ದೂ ವಿದೇಶವನ್ನು ಪರಿಚಯಿಸಬಹುದಾದ ಲಿಟಲ್‌ ಪ್ಯಾರಿಸ್‌ ಇದು. ಮುದ್ದಾದ ಬೀಚ್‌ಗಳು, ಬಣ್ಣಬಣ್ಣದ ಫ್ರೆಂಚ್‌ ಶೈಲಿಯ ಕಟ್ಟಡಗಳು, ಸ್ವಚ್ಛವಾದ ಬೀದಿಗಳು ದಿಢೀರ್‌ ಹನಿಮೂನಿಗೆ, ವೀಕೆಂಡ್‌ ಹನಿಮೂನಿಗೆ ಉತ್ತಮ.

ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!

Exit mobile version