Site icon Vistara News

ಡೆಸ್ಟಿನೇಶನ್‌ ವೆಡ್ಡಿಂಗ್‌ | ಟಾಪ್‌ 5 ಐಷಾರಾಮಿ ಮದುವೆಗಳ ತಾಣಗಳು!

destination

ವಿದೇಶಗಳಲ್ಲಿ ಈಗಾಗಲೇ ಭಾರೀ ಜನಪ್ರಿಯವಾಗಿರುವ, ಉಳ್ಳವರ ಸಂಸ್ಕೃತಿಯಾದ ʻಡೆಸ್ಟಿನೇಷನ್‌ ವೆಡ್ಡಿಂಗ್‌ʼ ಭಾರತೀಯರಿಗೆ, ಭಾರತದಂತಹ ದೇಶಕ್ಕೆ ಸ್ವಲ್ಪ ಹೊಸತು. ಆದರೂ, ಸಿರಿವಂತ ಕುಟುಂಬಗಳು, ಈಗಿನ ಮಂದಿ ಇಂತಹ ಹೊಸ ಕಾನ್ಸೆಪ್ಟ್‌ಗೆ ಫಿದಾ ಆಗಿದ್ದಾರೆ. ಕುಟುಂಬದ ಕೆಲವೇ ಕೆಲವು ಆಪ್ತರು, ಆತ್ಮೀಯ ಗೆಳೆಯರಷ್ಟೇ ಆಹ್ವಾನಿತರಾಗಿರುವ ಖಾಸಗಿ ಕಾರ್ಯಕ್ರಮ ಎಂಬ ಹೆಸರಿನಲ್ಲಿ ನಡೆಯುವ ಗ್ರ್ಯಾಂಡ್‌ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳು ಯಾವ ಐಶಾರಾಮಿ ರಾಯಲ್‌ ಮದುವೆಗೂ ಕಡಿಮೆಯಿರುವುದಿಲ್ಲ. ಜನ ಕಡಿಮೆಯಿದ್ದರೂ, ನಮ್ಮೊಳಗಿನವರಿಗೆ ಮಾತ್ರ ಎಂಬ ಟ್ಯಾಗ್‌ಲೈನ್‌ ಜೊತೆಗಿದ್ದರೂ ಇಲ್ಲಿ ಮೋಜು ಮಸ್ತಿ ಹೆಚ್ಚು. ಮದುವೆಯೆಂಬ ಜೀವಮಾನದ ಅತ್ಯಮೂಲ್ಯ ಗಳಿಗೆಯನ್ನು ಪ್ರತಿಕ್ಷಣವೂ ಅನುಭವಿಸುವ, ಎಲ್ಲವನ್ನೂ ತೂಕದಲ್ಲೇ ಮಾಡುವ ಅತ್ಯದ್ಭುತ ಸೆಟ್‌ನಲ್ಲಿ ಅತ್ಯಾಕರ್ಷಕ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾ ಆಕಾಶವೇ ಚಪ್ಪರ ಹಾಕಿದೆ ಎಂಬಂತೆ ನೀಲಾಕಾಶದಡಿಯಲ್ಲಿ ಚಂದದ ಜಾಗದಲ್ಲಿ ಅತ್ಯದ್ಭುತ ಅಲಂಕಾರದಲ್ಲಿ ಎಲ್ಲರ ಮುಂದೆ ಸಪ್ತಪದಿ ತುಳಿಯುವ ಕನಸು ಯಾರಿಗಿಲ್ಲ ಹೇಳಿ! ಅಂತೆಯೇ ಸದ್ಯ ಚಿಗಿತುಕೊಳ್ಳುತ್ತಿರುವ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳಿಗೆ ಹೆಸರಾದ ಬಹುಬೇಡಿಕೆಯ ಜಾಗಗಳ್ಯಾವುವು ನೋಡೋಣ.

೧. ಉದಯ್‌ಪುರ, ರಾಜಸ್ಥಾನ: ಅರಮನೆಗಳ ನಗರಿ ಎಂದೇ ಹೆಸರುವಾಸಿಯಾದ ರಾಜಸ್ಥಾನದ ಅತ್ಯಂತ ಸುಂದರ ಜಾಗವಿದು. ಸರೋವರಗಳು, ಐಷಾರಾಮಿ ಅರಮನೆಗಳು, ಎಲ್ಲೆಲ್ಲೂ ಕೋಟೆ ಕೊತ್ತಲಗಳಿರುವ ಈ ನಗರಿಯಲ್ಲಿ ಯಾವುದಾದರೊಂದು ಅರಮನೆಯಲ್ಲಿ ಮದುವೆಯಾದರೆ, ಸ್ವರ್ಗಕ್ಕೆ ಮೂರೇ ಗೇಣಂತೆ. ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರನ್ನೂ ಆಕರ್ಷಿಸುವ ಈ ಸ್ಥಳ ಭಾರತದ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳ ಲಿಸ್ಟಿನಲ್ಲಿ ಸದಾ ಒಂದನೇ ಸ್ಥಾನ ಗಿಟ್ಟಿಸುವ ಜಾಗ.

೨. ಜೈಪುರ್‌, ರಾಜಸ್ಥಾನ: ಮದುವೆಯ ಕನಸಿಗೆ ರಂಗೇರಿಸುವ ಉದಯಪುರವನ್ನೇ ಹೋಲುವಂಥ ಇನ್ನೊಂದು ಜಾಗ. ಪಿಂಕ್‌ ಸಿಟಿ ಹೆಸರಿನ ಅರಮನೆಗಳ ನಗರಿ. ಒಂಟೆಗಳ ಲೋಕ. ಐಷಾರಾಮಿ ರಾಯಲ್‌ ಲುಕ್.‌ ಮದುವೆಯೊಂದರ ಕಲ್ಪನೆಯಲ್ಲಿ ಏನೆಲ್ಲ ಇರಬೇಕೋ ಅವೆಲ್ಲ ಇರುವ ಭರ್ಜರಿ ಜಾಗ. ಹೀಗಾಗಿ ಜೈಪುರ್‌ ಕೂಡಾ ಯುವ ಜೋಡಿಗಳ ಮನಗೆಲ್ಲುವ ಊರು.

೩. ಅಲೆಪ್ಪಿ, ಕೇರಳ: ಸ್ವಲ್ಪ ಆಫ್‌ಬೀಟ್‌ ವೆಡ್ಡಿಂಗ್‌ ಡೆಸ್ಟಿನೇಶನ್‌ ಇದಾಗಿದ್ದರೂ, ಶಾಂತವಾಗಿ, ಪ್ರಕೃತಿಯ ಮಡಿಲಲ್ಲಿ, ಒಂದಿಷ್ಟೇ ಆಪ್ತರನ್ನು ಕಲೆ ಹಾಕಿಕೊಂಡು ಮದುವೆಯಾಗಬೇಕು, ಆಕಾಶವೇ ಚಪ್ಪರ, ಹಸಿರೇ ಹಾಸಿಗೆ ಎಂಬ ಕಲ್ಪನೆಯ ಜೋಡಿಗಳಿಗೆ ಹೇಳಿ ಮಾಡಿಸಿದ ಜಾಗ. ಫೋಟೋಶೂಟ್‌ಗೂ ಸಾಕಷ್ಟು ಅವಕಾಶಗಳಿರುವ, ಹೌಸ್‌ಬೋಟ್‌ನಲ್ಲಿ ರೊಮ್ಯಾಂಟಿಕ್‌ ರಸಗಳಿಗೆಗಳನ್ನು ಕಳೆಯಬಹುದಾದ ಹಲವು ಸಾಧ್ಯತೆಗಳನ್ನೂ ಇದು ಒದಗಿಸುತ್ತದೆ. ಹೀಗಾಗಿ, ಕೇರಳದ ಹಿನ್ನೀರಿನ ಅದ್ಭುತ ಪರಿಸರವೂ ಕೂಡಾ ವಡೆಸ್ಟಿನೇಶನ್‌ ವೆಡ್ಡಿಂಗ್‌ ಲಿಸ್ಟಿನಲ್ಲಿ ಮುಂಚೂಣಿಯಲ್ಲಿದೆ.

ಇದನ್ನೂ ಓದಿ | Jungle safari tips | ಕಾಡಿನ ಸಫಾರಿಗೆ ಹೊರಡುವ ಮುನ್ನ ಇವಿಷ್ಟು ಗೊತ್ತಿರಲಿ!

೪. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು: ಇದೂ ಕೂಡಾ ಲಿಸ್ಟಿನಲ್ಲಿ ಮುಂಚೂಣಿಯಲ್ಲಿರುವ ಜಾಗ. ಅದ್ಭುತ ನಿಸರ್ಗ ಸೌಂದರ್ಯವಿರುವ ಇಂತಹ ಜಾಗ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ನೀಲಿ ಸಮುದ್ರಕ್ಕೆ ತಾಕಿಕೊಂಡಂತಿರುವ ಯಾವುದಾದರೊಂದು ಐಷಾರಾಮಿ ರೆಸಾರ್ಟನ್ನು ಹಿಡಿದು, ಅಲ್ಲಿ ಆಕಾಶದ ನೀಲಿಯನ್ನೇ ಚಪ್ಪರವನ್ನಾಗಿಸಿ, ಬ್ಯಾಕ್‌ಗ್ರಂಡ್‌ನಲ್ಲಿ ಸಮುದ್ರದ ನೀಲಿಯನ್ನೂ ಇಟ್ಟುಕೊಂಡು ಹಸೆಮಣೆಯೇರಲು ಬಯಸುವ ಜೋಡಿಗಳೂ ಇದ್ದಾರೆ. ಅಂಥವರೆಲ್ಲರ ಫೇವರಿಟ್‌ ಆಯ್ಕೆ ಅಂಡಮಾನ್.‌

೫. ಗಂಗಾನದಿ ತಟ: ಕಾಶಿಯೋ, ಹೃಷಿಕೇಶವೋ ಯಾವುದಾದರೊಂದು ಗಂಗಾ ನದಿಯ ದಂಡೆಯ ಮೇಲಿರುವ ಅದ್ಭುತ ರೆಸಾರ್ಟೊಂದನ್ನು ಹುಡುಕಿ, ತೀರದಲ್ಲೊಂದು ಚಪ್ಪರ ಹಾಕಿ, ಹರಿವ ಜುಳುಜುಳು ನಾದವನ್ನೇ ಸಂಗೀತವನ್ನಾಗಿಸಿಕೊಂಡು ನಡೆಯುವ ಮದುವೆಗಳೂ ಇವೆ. ಇವು ಕೇವಲ ಟಿವಿ ಸೀರಿಯಲ್ಲಿನಲ್ಲೋ, ಸಿನಿಮಾದಲ್ಲೋ ಮಾತ್ರ ನಡೆಯುವುದಲ್ಲ. ನಿಜ ಜೀವನದಲ್ಲೂ ಸಾಮಾನ್ಯರ ಜೀವನದೊಳಕ್ಕೆ ನಿಧಾನವಾಗಿ ತೆವಳುತ್ತಾ ಕಾಲಿಟ್ಟಿದೆ. ಧಾರ್ಮಿಕ ಸ್ಥಳದ ಹತ್ತಿರದಲ್ಲೇ ನಡೆಸಿ, ದೇವರ ಆಶೀರ್ವಾದವನ್ನೂ ಪಡೆದು, ಕುಟುಂಬದ ಆಪ್ತರೊಡನೆ ಸಂತೋಷವಾಗಿ ಕಳೆವ, ಸುಮಧುರ ಮದುವೆಯೊಂದನ್ನು ನಡೆಸ ಬಯಸುವ ಮಂದಿ ಇಂತಹ ಜಾಗಗಳನ್ನರಸಿ ಬರುತ್ತಾರೆ.

ಇದನ್ನೂ ಓದಿ | Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ!

Exit mobile version