Site icon Vistara News

Tourism places: ವಸಂತ ಕಾಲದಲ್ಲಿ ಈ ಕಣಿವೆಗಳಿಗೂ ಸ್ವರ್ಗಕ್ಕೂ ವ್ಯತ್ಯಾಸವೇ ಇಲ್ಲ!

tourist places vallies

ಪ್ರವಾಸದ ವಿಷಯಕ್ಕೆ ಬಂದರೆ ನಮ್ಮ ದೇಶದಲ್ಲಿ ಎಲ್ಲವೂ ಇವೆ. ಬೆಟ್ಟ ಕಣಿವೆಗಳಿಂದ ಹಿಡಿದು ನದಿ, ಸರೋವರ, ಸಮುದ್ರ, ಐತಿಹಾಸಿಕ ತಾಣಗಳು, ಹಿಮಪರ್ವತಗಳು, ಮರುಭೂಮಿ, ನಿತ್ಯಹರಿದ್ವರ್ಣದ ಕಾಡುಗಳು… ಹೀಗೆ ಭರಪೂರ ಆಯ್ಕೆಗಳಿವೆ, ಅವರವರ ಆಸಕ್ತಿಗೆ ಅನುಗುಣವಾಗಿ. ಪ್ರವಾಸಪ್ರಿಯರ ಪಾಲಿಗೆ ಭಾರತ ನಿಜವಾಗಿಯೂ ಸ್ವರ್ಗವೇ. ಆದರೂ, ನಮಗೆ ನಮ್ಮದೇ ದೇಶದ ಇಷ್ಟೊಂದು ಅದ್ಭುತ ತಾಣಗಳು ಕಣ್ಣಿಗೆ ಬೀಳುವುದೇ ಇಲ್ಲ!

ಇನ್ನೇನು ಚಳಿಗಾಲ ಮುಗಿದು ವಸಂತ ಋತು ಬರುವ ಕಾಲ. ಎಲೆ ಉದುರಿ ಕೂತಿದ್ದ ಮರಗಳೆಲ್ಲ ಚಿಗುರಿ ಹೂಬಿಡುವ ಕಾಲ. ಹಕ್ಕಿಗಳು, ಚಿಟ್ಟೆಗಳು ಸಂಭ್ರಮದಿಂದ ಹಾರಿ ನಲಿದಾಡುವ ಕಾಲ. ಹದವಾದ ಬಿಸಿಲು, ಹಿತವಾದ ಚಳಿ ಪ್ರವಾಸಕ್ಕೆ ಹೇಳಿ ಮಾಡಿದ್ದು. ಇಂಥ ಕಾಲದಲ್ಲಿ ಭಾರತದ ಕಣಿವೆಗಳನ್ನು ಕಾಣಬೇಕು. ಎಂತಹ ಹೃದಯಹೀನನನ್ನೂ ಕವಿಯಾಗಿಸುವ ಶಕ್ತಿ ಈ ಕಾಲಕ್ಕೂ ಕಣಿವೆಗಳಿಗೂ ಇವೆ. ಭಾರತದ ಅದ್ಭುತ ಸೌಂದರ್ಯದ ಕಣಿವೆಗಳ ಮಾಹಿತಿ ಇಲ್ಲಿವೆ.

೧. ದರ್ಮ ಕಣಿವೆ: ದರ್ಮ ಕಣಿವೆ ಅಥವಾ ದರ್ಮ ಗಂಗಾ ಕಣಿವೆ ಊತ್ತರಾಖಂಡದ ಪಿತ್ತೋಡ್‌ಗಡ್‌ ಸಮೀಪ ಇದೆ. ತಲೆಯೆತ್ತಿ ನೋಡಿದರೆ ಹಿಮಾಲಯದ ಹಿಮಮುಚ್ಚಿದ ಬೆಟ್ಟಗಳ ಪಂಚೂಲಿ ಸಾಲುಗಳು, ಕೆಳಗೆ ಹಸಿರ ಹಬ್ಬ. ನೋಡಲೆರಡು ಕಣ್ಣುಗಳೇ ಸಾಲದು ಅಂತಾರಲ್ಲ ಅಂತಹ ಪ್ರದೇಶವಿದು. ಸುಮ್ಮನೆ ಕೂತರೂ ಹಾಗೆಯೇ ಕೂರಿಸಬಲ್ಲ ಶಕ್ತಿ ಈ ಜಾಗಕ್ಕಿದೆ.

೨. ಪಿನ್‌ ಕಣಿವೆ: ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿರುವ ಪಿನ್‌ ಕಣಿವೆ ತನ್ನದೇ ಆದ ಸಂಪ್ರದಾಯ, ಸಂಸ್ಕೃತಿ, ಜನಜೀವನವನ್ನು ಹೊಂದಿರುವ ಅದ್ಭುತ ಕಣಿವೆ. ಇಲ್ಲಿನ ಎತ್ತರೆತ್ತರ ಬೆಟ್ಟದ ಸಾಲುಗಳ ನಡುವೆ ಹಾವಿನ ಹಾಗೆ ತೆವಳುವ ರಸ್ತೆಗಳಲ್ಲಿ ಪ್ರಯಾಣಿಸುವುದೇ ಜೀವನದ ಮೈನವಿರೇಳಿಸುವ ಅನುಭವ. ಇಲ್ಲಿನ ಮುಗ್ಧ ಜನರ ಜೊತೆಗೆ ಬೆರೆತು, ಇಲ್ಲಿನ ವಿಶೇಷ ಸಂಸ್ಕೃತಿಯನ್ನು ಕಂಡು ಇಲ್ಲಿನ ಊಟ ಹೊಟ್ಟೆಗಿಳಿಸಿ ತಿರುಗಾಡಿ ಬರುವುದು ಜೀವನದ ಮರೆಯಲಾಗದ ಗಳಿಗೆಗಳಲ್ಲೊಂದಾಗಬಹುದು.

೩. ಝುಕು ಕಣಿವೆ: ನಾಗಾಲ್ಯಾಂಡ್‌ ಹಾಗೂ ಮಣಿಪುರದ ಗಡಿಯಲ್ಲಿರುವ ಝುಕು ಕಣಿವೆಯಲ್ಲಿ ಚಾರಣ ಹೊರಟರೆ ನೀವು ಇಹಲೋಕವನ್ನು ಮರೆಯಬಹುದು. ಎತ್ತ ನೋಡಿದರೂ ಕಣ್ಣಿಂದ ಮರೆಯಾಗದ ಬೆಟ್ಟದ ಸಾಲುಗಳು, ವಿಶೇಷ ಸಸ್ಯ ಸಂಪತ್ತು, ಪಕ್ಷಿಸಂಕುಲ ಪ್ರಕೃತಿ ಪ್ರಿಯರನ್ನು ಮೋಡಿ ಮಾಡುತ್ತವೆ.

೪. ನುಬ್ರಾ ಕಣಿವೆ: ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದಲ್ಲಿರುವ ನುಬ್ರಾ ಕಣಿವೆ ಹಿಮಾಲಯ ಪರ್ವತ ಸಾಲುಗಳಿಂದ ಸುತ್ತುವರಿದಿದೆ. ಸಾಹಸೀಪ್ರಿಯರಿಗೆ ನುಬ್ರಾ ಸೂಜಿಗಲ್ಲು. ನುಬ್ರಾದ ಪ್ರಮುಖ ಆಕರ್ಷಣೆ ಎಂದರೆ, ಅತ್ಯಂತ ಎತ್ತರದ ವಾಹನ ಹೋಗಬಲ್ಲ ಪಾಸ್‌ ಖರ್‌ದುಂಗ್ಲಾ ಪಾಸ್‌ಗೆ ಇಲ್ಲಿಂದಲೇ ಸಾಗಬೇಕು.

ಇದನ್ನೂ ಓದಿ: Astro tourism: ರಾಜಸ್ಥಾನಕ್ಕೆ ಪ್ರವಾಸ ಮಾಡಿ: ರಾತ್ರಿಗಳಲ್ಲಿ ನಕ್ಷತ್ರ ಪುಂಜ ಕಣ್ತುಂಬಿಕೊಳ್ಳಿ!

೫. ವರ್ವಾನ್‌ ಕಣಿವೆ: ಜಮ್ಮು ಕಾಶ್ಮೀರದ ಕಿಶ್ತ್‌ವಾರ್‌ ಜಿಲ್ಲೆಯಲ್ಲಿರುವ ವರ್ವಾನ್‌ ಕಣಿವೆ ಭೂಲೋಕದ ಸ್ವರ್ಗ. ಹಸಿರಿನಿಂದ ಸದಾ ಸಮೃದ್ಧವಾಗಿರುವ ಈ ಕಣಿವೆಯಲ್ಲಿ ಸಾಕಷ್ಟು ಜಲಪಾತಗಳೂ, ಕಣ್ಣು ಹಾಯಿಸಿದಲ್ಲೇಲ್ಲಾ ಹಬ್ಬಿರುವ ಹಸಿರು ಮೈದಾನಗಳೂ, ಅಲ್ಲಿ ಮೇಯುವ ಕುರಿಗಳ ಹಿಂಡೂ, ಎತ್ತರೆತ್ತರದ ಸಿಡಾರ್‌ ಮರಗಳೂ, ಪರ್ವತ ಸಾಲುಗಳೂ, ಶಾಂತವಾಗಿ ಹರಿವ ನದಿಗಳೂ, ದೂರದ ಹಿಮ ಬೆಟ್ಟಗಳೂ ಮನೆಯ ಗೋಡೆಯಲ್ಲಿ ಅಂಟಿಸುವ ಪೋಸ್ಟರ್‌ ಚಿತ್ರದಂತೆ ಸದಾ ಕಾಡುತ್ತವೆ. ಎಲ್ಲ ಮರೆತು ಇಲ್ಲೇ ಇದ್ದುಬಿಡುವ ಅನ್ನುವ ಹಾಗೆ ಸೆಳೆಯುತ್ತವೆ.

ನಮ್ಮ ಭಾರತದ ನಿಜ ಸೌಂದರ್ಯವನ್ನು ಆಸ್ವಾದಿಸಲು ಒಮ್ಮೆಯಾದರೂ ನಾವು ಇಂತಹ ಕಣಿವೆಗಳನ್ನು ನೋಡಬೇಕು, ಆ ಮೂಲಕ ಎಲ್ಲ ದುಃಖಗಳನ್ನು ಮರೆಯಬೇಕು. ಇದಕ್ಕಿಂತ ಹೆಚ್ಚಿನ ಸುಖ ಎಲ್ಲಿ ದಕ್ಕೀತು!

ಇದನ್ನೂ ಓದಿ: Thailand tour: ಕಡಿಮೆ ವೆಚ್ಚದ ಪ್ರವಾಸಕ್ಕೆ ಹೇಳಿ ಮಾಡಿಸಿದ ವಿದೇಶ ಥಾಯ್ಲೆಂಡ್‌!

Exit mobile version