Site icon Vistara News

Train Travel: ಮಳೆಗಾಲದಲ್ಲಿ ಕಿಟಕಿ ಬದಿಯ ಸೀಟು ಹಿಡಿದು ಈ ಹಾದಿಯ ರೈಲು ಹತ್ತಿಬಿಡಿ!

dhudsagar

ಮಳೆಗಾಲ ಹಾಗೂ ರೈಲು ಪ್ರಯಾಣ (train travel) ಇವೆರಡನ್ನೂ ಜೊತೆ ಸೇರಿಸಿದರೆ ಅದೊಂದು ಮಧುರಾನುಭೂತಿ. ಮಳೆಗಾಲದಲ್ಲಿ (monsoon travel) ಬೆಟ್ಟಗುಡ್ಡಗಳ, ಕಾಡಿನ ಮಧ್ಯೆ ರೈಲಿನಲ್ಲಿ ಕಿಟಕಿ ಬದಿಯ ಸೀಟು ಹಿಡಿದು ಕೂತರೆ ಗಂಟೆಗಟ್ಟಲೆ ಕಿಟಿಕಿಗಾತುಕೊಂಡು ಗಂಟೆಗಟ್ಟಲೆ ನೋಡುತ್ತಲೇ ಇರಬಹುದು. ಕಿಟಕಿಯಿಂದಾಚಾಗೆ ಓಡುವ ದೃಶ್ಯಗಳು ಹೃದಯದೊಳಕ್ಕೆ ಇಳಿಯುತ್ತಿದ್ದರೆ, ಯಾವುದೋ ಲೋಕಕ್ಕೆ ಹೋದ ಭಾವ. ಕೈಯಲ್ಲೊಂದು ಪುಸ್ತಕ, ಬಿಸಿ ಬಿಸಿ ಚಹಾ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅಂದರೂ ತಪ್ಪಲ್ಲ. ಹಾಗಾದರೆ ಬನ್ನಿ, ಈ ಮಳೆಗಾಲದಲ್ಲಿ ಒಮ್ಮೆಯಾದರೂ (travel tips) ನಮ್ಮ ಹತ್ತಿರದಲ್ಲೇ ಇರುವ ಈ ರೈಲುಮಾರ್ಗಗಳಲ್ಲಿ (beautiful train tracks) ಒಂದರ ಮೂಲಕವಾದರೂ ಪಯಣಿಸಿ ಬನ್ನಿ!

1. ಊಟಿಯಿಂದ ಕೂನೂರು: ನೀಲಗಿರಿ ಮೌಂಟೈನ್‌ ರೈಲ್ವೇಸ್‌ ಮುಖಾಂತರ ಊಟಿಯಿಂದ ಕೂನೂರಿಗೆ ಸಾಗುವ ರೈಲು ಮಾರ್ಗ ದಕ್ಷಿಣ ಭಾರತದಲ್ಲಿ ಅತಿ ಸುಂದರ ರೈಲು ಮಾರ್ಗಗಳಲ್ಲಿ ಒಂದು. ಈ ಹಾದಿಯು ನೀಲಗಿರಿ ಬೆಟ್ಟದ ಸಾಲುಗಳ ನಡುವಿನಿಂದ ಸಾಗುವ ಕಾರಣ ಕಾಡಿನ ಹಾದಿಯಾಗಿ ಸಾಗುವ ಅದ್ಭುತ ಅನುಭವವನ್ನು ಕಟ್ಟಿ ಕೊಡುತ್ತದೆ. ಹಸಿರು ಹಸಿರಾದ ಚಹಾ ತೋಟಗಳು, ಮಳೆ ಬಂದು ಹಸಿರಾಗಿ ಕಂಗೊಳಿಸುವ ಹುಲ್ಲುಗಾವಲುಗಳು, ಮಳೆಯಲ್ಲಿ ಮಿಂದು ಚಿಗುರಿದ ಮರಗಿಡಗಳು, ಅಲ್ಲಲ್ಲಿ ಕಾಣುವ ಜಲಪಾತಗಳು, ಜೊತೆಗೆ ರೈಲಿನ ಸಿಳ್ಳೆ ಎಲ್ಲವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ಪಯಣಿಸುವುದೇ ಒಂದು ಜೀವನಾನುಭವ!

chennai rameswaram train

2. ತಿರುವನಂತಪುರದಿಂದ ಕನ್ಯಾಕುಮಾರಿ: ಭಾರತದ ಕೊನೆಯೆಂಬ ಕನ್ಯಾಕುಮಾರಿಯನ್ನು ತಲುಪಲು ತಿರುವನಂತಪುರದಿಂದ ಮೂರು ಗಂಟೆಗಳ ಪಯಣವಿರುವ ಐಲ್ಯಾಂಡ್‌ ಎಕ್ಸ್‌ಪ್ರೆಸ್ಸನ್ನು ಹತ್ತಬೇಕು. ಕೇರಳದ ಈ ಮನಮೋಹಕ ರೈಲು ಮಾರ್ಗದಲ್ಲಿ ಸಾಗುವ ಅನುಭವ ಮಳೆಗಾಲದಲ್ಲಿ ಅದ್ಭುತ. ಮೊದಲೇ ಚಂದನೆಯ ಹಾದಿಯಲ್ಲಿ ಮಳೆಗಾಲದಲ್ಲಿ ಪಯಣಿಸುವುದು ಎಂದರೆ ಕೇಳಬೇಕೇ? ಇದೂ ಅಂಥದ್ದೇ. ಮಳೆಗಾಲದ ಬೋನಸ್‌ ಈ ಹಾದಿಯ ಪ್ರಕೃತಿಯಲ್ಲಿ ಕಾಣಬಹುದು.

3. ಕೊಲ್ಲಂನಿಂದ ಸೆಂಗೊಟ್ಟೈ: ಕೊಲ್ಲಂನಿಂದ ಸೆಂಗೊಟ್ಟೈಗೆ ಪಯಣಿಸುವುದು ಎಂದರೆ ಎರಡು ರಾಜ್ಯಗಳಲ್ಲಿ ಪಯಣಿಸುವುದು. ಕೇರಳ ಹಾಗೂ ತಮಿಳುನಾಡಿನ ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಈ ಹಾದಿಯಲ್ಲಿ ಕಾಣಬಹುದು. ದಟ್ಟ ಕಾಡು, ಪರ್ವತಗಳು, ಕಡು ಹಸಿರ ದೊಡ್ಡ ದೊಡ್ಡ ದಪ್ಪ ದಪ್ಪ ಮರಗಳು, ಹಾದಿ ಮಧ್ಯೆ ಸಿಗುವ ನದಿ, ಎಲ್ಲವೂ ಸೇರಿ ಈ ಹಾದಿಯನ್ನು ಸ್ವರ್ಗಸದೃಶವಾಗಿಸಿದೆ. ಮಳೆಗಾಲದಲ್ಲಿ ಇದರ ಸೊಬಗು ಇನ್ನಷ್ಟು ಹೆಚ್ಚಿ, ಪ್ರಕೃತಿಯಲ್ಲಿ ಕಳೆದು ಹೋಗುವ ಮನಸ್ಸುಳ್ಳವರಿಗೆ ನೋಡಲೆರಡು ಕಣ್ಣು ಸಾಲದು ಎಂಬಂಧ ಹಾದಿಯಿದು.

chennai rameswaram train

4. ಚೆನ್ನೈಯಿಂದ ರಾಮೇಶ್ವರಂ: ಸಮುದ್ರಕ್ಕಿರುವ ಸೇತುವೆಗಳ ಪೈಕಿ ಪಾಂಬನ್‌ ಸೇತುವೆ ಭಾರತದ ಮೊದಲ ಸೇತುವೆ. ೨.೨ ಕಿಮೀ ಉದ್ದದ ಈ ಸಮುದ್ರ ಸೇತುವೆಯ ಮೇಲೆ ರೈಲಿನಲ್ಲಿ ಸಾಗುವುದೇ ಒಂದು ಅದ್ಭುತ ಅನುಭವ. ರಾಮೇಶ್ವರಕ್ಕೆ ತಲುಪುವ ಅಂತಿಮ ಕ್ಷಣಗಳಲ್ಲಿ ಈ ಸೇತುವೆ ಮೇಲಿನ ಪಯಣಕ್ಕೆ ನಾವು ಸಾಕ್ಷಿಯಾಗಬಹುದು. ಈ ಹಾದಿಯೂ ನಯನಮಹೋಹರ ದೃಶ್ಯಗಳನ್ನು ಒಳಗೊಂಡಿದ್ದು, ಇದೂ ಕೂಡಾ ಮಳೆಗಾಲದ ಒಂದು ಚೇತೋಹಾರಿ ಪಯಣವಾಗಬಹುದು.

chennai rameswaram train

5. ಮಂಗಳೂರಿನಿಂದ ಗೋವಾ: ಈ ರೈಲುಹಾದಿ ಹಲವು ಬಗೆಯ ಪ್ರಕೃತಿ ವಿಸ್ಮಯಗಳನ್ನು ಹಾದು ಹೋಗುತ್ತವೆ. ಚಂದನೆಯ ಕಾಂಡ್ಲಾವನಗಳು, ಹಿನ್ನೀರು, ಹುಟ್ಟು ಹಾಕುವ ಅಂಬಿಗರು ಎಲ್ಲವನ್ನು ದಾಟಿಕೊಂಡು ರೈಲು ಸಹ್ಯಾದ್ರಿ ಶ್ರೇಣಿಯಲ್ಲಿ ಹಾದು ಹೋಗುವ ಅನುಭವವೇ ವಿಶೇಷವಾದ್ದು. ಮುಖ್ಯವಾಗಿ, ದೇಶದ ಅತ್ಯಂತ ಮೈನವಿರೇಳಿಸುವ ಹಾದಿ ಇದಾಗಿದೆ. ಗೋವಾದ ಬಳಿಯ ದೂದ್‌ಸಾಗರ್‌ ಜಲಪಾತದ ಮೂಲಕ ಹಾದುಹೋಗುವ ಕನಸನ್ನು ನನಸು ಮಾಡಲು ಈ ಹಾದಿಯಲ್ಲಿ ಪಯಣಿಸಬೇಕು. ಜೀವನದಲ್ಲಿ ಒಮ್ಮೆಯಾದರೂ ರೈಲು ಹತ್ತಲೇಬೇಕಾದ ಹಾದಿಯಿದು.

ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!

Exit mobile version