Site icon Vistara News

Travel Tips: Beach Tourism: ಬ್ಲೂ ಸರ್ಟಿಫಿಕೇಶನ್‌ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)

Womens Day 2023 Radhanagar Beach

ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಬಹುದಾದ, ಚಂದನೆಯ ಸಮುದ್ರ ತೀರಗಳಿವೆ. ಸ್ಫಟಿಕ ಶುದ್ಧ ಸೊಗಸಿನ ಈ ಬೀಚ್‌ಗಳಲ್ಲಿ 12 ತೀರಗಳು ಬ್ಲೂ ಸರ್ಟಿಫಿಕೇಶನ್‌ ಪಡೆದಿವೆ. ಮೊದಲ ಭಾಗದಲ್ಲಿ ಆರು ಬೀಚ್‌ಗಳ ವಿವರ ಓದಿದ್ದೀರಿ. ಪಟ್ಟಿಯ ಮುಂದುವರಿದ ಭಾಗ ಇಲ್ಲಿದೆ!

೭. ಕಪ್ಪದ್‌, ಕೇರಳ: ಕೇರಳದ ಈ ಕಡಲ ಕಿನಾರೆಗೊಂದು ಇತಿಹಾಸವೇ ಇದೆ. ೧1498ರಲ್ಲಿ ವಾಸ್ಕೋಡಗಾಮ 170 ಮಂದಿ ಸಹಚರರೊಂದಿಗೆ ಭಾರತಕ್ಕೆ ಬಂದಿಳಿದ ಕಡಲ ಕಿನಾರೆಯಿದು. ಇದು ಸ್ವಚ್ಛವಷ್ಟೇ ಅಲ್ಲ, ಚಂದನೆಯ ವಲಸಿಗ ಹಕ್ಕಿಗಳಿಗೂ ತಾಣ. ಸದ್ಯ ಪ್ರವಾಸೋದ್ಯಮಕ್ಕೆ ಸೂಕ್ತವಾಗುವಂತೆ ವಾಕಿಂಗ್‌ ಟ್ರ್ಯಾಕ್‌, ವಾಶ್‌ರೂಂಗಳು ಸೇರಿದಂತೆ ಹಲವು  ನಾಗರಿಕ ಸೇವೆಗಳು ಇಲ್ಲಿ ಲಭ್ಯವಿವೆ.

೮. ಗೋಲ್ಡನ್‌ ಬೀಚ್‌, ಪುರಿ, ಒಡಿಶಾ: ಒಡಿಶಾದ ಪುರಿಯ ಗೋಲ್ಡನ್‌ ಬೀಚ್‌ ಸಾವಿರಾರು ಜನರನ್ನು ನಿತ್ಯವೂ ಸೆಳೆಯುವ ಪ್ರಸಿದ್ಧ ಕಡಲತೀರಗಳಲ್ಲೊಂದು. ಇಲ್ಲಿ ಮಾಡಲಾದ ಸಾರ್ವಜನಿಕ ಸೇವೆಗಳಾದ, ಟಾಯ್ಲೆಟ್‌, ವಿಕಲಚೇತನರಿಗೆ ಸರಳ ವ್ಯವಸ್ಥೆಗಳು, ವಾಚ್‌ಟವರ್‌ಗಳು, ಸ್ನಾನದ ಝೋನ್‌ಗಳು ಎಲ್ಲವೂ ಇದನ್ನು ಅಧ್ಬುತವನ್ನಾಗಿಸಿದೆ. ಪ್ರತಿ ವರ್ಷವೂ ಇಲ್ಲಿ ನಡೆಯುವ ಬೀಚ್‌ ಉತ್ಸವ, ಮರಳು ಚಿತ್ರಕಲೆ ಸಾಕಷ್ಟು ಜನರನ್ನಿಲ್ಲಿಗೆ ಸೆಳೆಯುತ್ತದೆ.‌

ಗೋಲ್ಡನ್‌ ಬೀಚ್

೯. ಮಿನಿಕೋಯ್‌ ತುಂಡಿ ಬೀಚ್‌, ಲಕ್ಷದ್ವೀಪ: ಪಚ್ಚೆ ರತ್ನವೆನ್ನ ನೀರಲ್ಲಿ ಕರಗಿ ಹೋಗಿದೆಯೋ ಎಂಬಂತೆ ಸದಾ ಹರಿರು ಬಣ್ಣದಲ್ಲಿ ಫಳಪಳಿಸುತ್ತಿರುವ ಸಮುದ್ರ ತೀರವಿದು. ಜೀವನದಲ್ಲಿ ಒಮ್ಮೆಯಾದರೂ ಭಾರತದ ಈ ಪುಟಾಣೀ ದ್ವೀಪವನ್ನು ನೋಡಿ, ಇಲ್ಲಿನ ಸ್ಪಟಿಕ ಶುದ್ಧ ತೀರಗಳಲ್ಲಿ ಅಲೆದಾಡಬೇಕು.

೧೦. ಕದ್ಮತ್‌ ಬೀಚ್‌, ಲಕ್ಷದ್ವೀಪ: ಲಕ್ಷದ್ವೀಪದ ಕಡಲ ಕಿನಾರೆಗಳೆಲ್ಲವೂ ಅದ್ಭುತವೇ. ಹಸಿರು ಹಸಿರಾಗಿ ಕಂಗೊಳಿಸುವ ಇವು ನಮ್ಮ ಸಾದಾ ಬೀಚ್‌ಗಳಿಗಿಂತ ಕೊಂಚ ಭಿನ್ನವಾಗಿಯೇ ಕಾಣುತ್ತವೆ.

ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!

೧೧. ಈಡನ್‌ ಬೀಚ್‌, ಪಾಂಡಿಚೇರಿ: ಪಾಂಡಿಚೇರಿ ಎಂಬ ಪುಟಾಣಿ ನಗರ ಹಲವಾರು ಕಾರಣಗಳಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅವುಗಳ ಪೈಕಿ ಸುಂದರ ಕಡಲ ಕಿನಾರೆಯೂ ಒಂದು. ಈಡೆನ್‌ ಬೀಚ್‌ ಪಾಂಡಿಯ ಚಂದನೆಯ ಸ್ವಚ್ಛವಾದ ಬೀಚ್‌ಗಳ ಪೈಕಿ ಅಗ್ರಗಣ್ಯ. ಪಾಂಡಿಯ ಆರೋವಿಲ್ಲೆಯಲ್ಲಿ ನಡೆದಾಡಿ, ಧ್ಯಾನ ಮಾಡಿ, ಅರವಿಂದಾಶ್ರಮದಲ್ಲಿ ಒಂದಿಷ್ಟು ಹೊತ್ತು ಕೂತು, ಸಂಜೆ ಈ ಕಡಲ ಕಿನಾರೆಯ ಗಾಳಿ ಸೇವನೆಗೆ ಕೂತರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಬಹುದು.

ಕೋವಲಂ ಬೀಚ್

೧೨. ಕೋವಲಂ ಬೀಚ್‌, ತಮಿಳುನಾಡು: ಸರ್ಫಿಂಗ್‌ ಕಲಿಯಲು ಆಸಕ್ತಿಯಿರುವ ಮಂದಿಗೆ ದಕ್ಕುವ ಕೆಲವೇ ಕೆಲವು ದಕ್ಷಿಣದ ಬೀಚ್‌ಗಳ ಪೈಕಿ ಕೋವಲಂ ಬೀಚ್‌ ಕೂಡಾ ಒಂದು. ಚಂದನೆಯ, ಚಿಪ್ಪುಗಳಿಂದಾವೃತವಾದ ಮರಳ ದಿಣ್ಣೆಗಳಿರುವ ಸಂಜೆಯ ಹೊತ್ತು ತಪ್ಪದೇ ಭೇಟಿಕೊಡಬಹುದಾದ ಸರಳ ಸುಂದರ ಬೀಚ್‌ ಇದು. ಚೈನ್ನೈನ ಜನಜಂಗುಳಿಯ ಸಮುದ್ರ ತೀರಗಳಾದ ಬೆಸೆಂಟ್‌ ನಗರ ಹಾಗೂ ಮರೀನಾ ಬೀಚ್‌ಗಳಿಂದ ದೂರವಿರುವ ಆಫ್‌ಬೀಟ್‌ ಜಾಗ ಬೇಕು ಎಂದು ಆಸೆಪಡುವ ಮಂದಿಗೆ, ಚೆನ್ನೈನಿಂದ ಸುಮಾರು ೪೦ ಕಿಮೀ ದೂರದಲ್ಲಿರುವ ಈ ಬೀಚ್‌ ಬೆಸ್ಟ್‌ ಆಯ್ಕೆ.

ಕೇವಲ ಇವಿಷ್ಟೇ ಅಲ್ಲ, ಇವೆಲ್ಲ ಈಗಾಗಲೇ ಬ್ಲೂ ಸರ್ಟಿಫಿಕೇಶನ್‌ ಪಡೆದ ಸಮುದ್ರ ತೀರಗಳ ಕಥೆಯಾಯಿತು. ಇನ್ನೂ ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ ಎಂಬುದನ್ನು ಮಾತ್ರ ನಾವು ಸದಾ ನೆನಪಿಟ್ಟುಕೊಳ್ಳಬೇಕು.

ಸ್ಪಟಿಕ ಶುದ್ಧ ಚಂದನೆಯ ಬೀಚ್‌ಗಳ ಪಟ್ಟಿಯ ಮೊದಲ ಆರು ಬೀಚ್‌ಗಳ ವಿವರಕ್ಕೆ ಮೊದಲ ಭಾಗ ಓದಿ. ‌

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

Exit mobile version