Site icon Vistara News

Travel Tips: ಗುಹೆಗಳೆಂಬ ಪ್ರಕೃತಿ ವಿಸ್ಮಯಗಳು: ನೋಡಲೇಬೇಕಾದ ಭಾರತದ ಗುಹೆಗಳಿವು!

bhimbetka caves

ನಿಸರ್ಗ ನಿರ್ಮಿತ ಗುಹೆಗಳಿಗೆ ಭಾರತದಲ್ಲೇನೂ ಕೊರತೆಯಿಲ್ಲ. ಅಜಂತಾ ಎಲ್ಲೋರಾ, ಬಾದಾಮಿಯಂತಹ ಗುಹಾಂತರ್ದೇವಾಲಯಗಳು ಒಂದೆಡೆಯಾದರೆ, ಗುಹೆಗಳು ಹೇಗಿದ್ದವೋ ಅದೇ ಸ್ವರೂಪದಲ್ಲಿ ಇಂದಿಗೂ ಉಳಿಸಿಕೊಂಡು ಬಂದಿರುವುದು ಇನ್ನೊಂದು ಬಗೆಯ ಗುಹೆಗಳು. ಇಂಥ ಗುಹೆಗಳ, ಜೀವನದಲ್ಲೊಮ್ಮೆಯಾದರೂ ಗುಹೆಗಳೆಂಬ ರೋಮಾಂಚನದೊಳಕ್ಕೆ ಹೊಕ್ಕು ನೋಡಲೇಬೇಕಾದ ಪ್ರಕೃತಿ ವಿಸ್ಮಯಗಳಿವು.

ಭೀಮ್‌ಬೆಟ್ಕಾ ಗುಹೆಗಳು, ಮಧ್ಯ ಪ್ರದೇಶ: ಮಧ್ಯಪ್ರದೇಶದ ರಾತಾಪಾನಿ ವನ್ಯಜೀವಿ ರಕ್ಷಿತಾರಣ್ಯದಲ್ಲಿರುವ ಭೀಮ್‌ಬೆಟ್ಕಾ ಗುಹೆಗಳು ಭಾರತದ ಪ್ರಮುಖ ಗುಹೆಗಳಲ್ಲೊಂದು. ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವ ಈ ಗುಹೆಗಳ ಒಳಗೆ ಶಿಲಾಯುಗದ ಕಾಲದ ಚಿತ್ರಗಳನ್ನೂ ಹೊಂದಿದೆ. ಈ ಗುಹೆಗಳಿಗೆ ಪೌರಾಣಿಕ ಹಿನ್ನೆಲೆಯ ಕಥೆಗಳೂ ಇದ್ದು, ಹಿಂದೆ, ಪಾಂಡವರು ಅಜ್ಞಾತವಾಸದ ಸಂದರ್ಭ ಇಲ್ಲಿ ಯಾರಿಗೂ ಕಾಣದಂತಿರಲು ತಂಗಿದ್ದರು ಎಂಬ ಉಲ್ಲೇಖವೂ ಇದೆ. ಭಾರತದ ಪ್ರಮುಖ ಗುಹೆಗಳ ಪೈಕಿ ಇದೂ ಒಂದು.

ಬೋರಾ ಗುಹೆಗಳು, ಆಂಧ್ರಪ್ರದೇಶ: ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿರುವ ಬೋರಾ ಗುಹೆಗಳು ನಿಸರ್ಗದ ವಿಸ್ಮಯಗಳಲ್ಲೊಂದು. ಗುಹೆಯ ಒಳಗೆ ನೈಸರ್ಗಿಕ ಶಿವಲಿಂಗವಿದ್ದು ಅತ್ಯಂತ ಸುಂದರ ಗುಹೆಗಳ ಪೈಕಿ ಇದೂ ಒಂದು.

ಎಡಕಲ್‌ ಗುಹೆಗಳು, ಕೇರಳ: ಕೇರಳದ ವಯನಾಡಿನಲ್ಲಿರುವ ಎಡಕಲ್ಲು ಕನ್ನಡ ಸಿನಿಮಾವೊಂದರ ಹೆಸರಿನಿಂದ ಬಹಳ ಪ್ರಸಿದ್ಧ. ವಯನಾಡಿನ ಅದ್ಭುತ ಬೆಟ್ಟಗುಡ್ಡಗಳ ನಡುವಿರುವ ಈ ಗುಹೆಯಲ್ಲಿ ಶಿಲಾಯುಗದ ಕಾಲದ ಅಂದರೆ ಸುಮಾರು ಕ್ರಿಸ್ತಪೂರ್ವ ೬೦೦೦ನೇ ಇಸವಿಯ ಆಸುಪಾಸಿನದ್ದೆಂದು ಹೇಳಲಾದ ಚಿತ್ರಗಳೂ ಇವೆ. ಕಲ್ಲು ಬಂಡೆಗಳ ಮೇಲೆ ಬರೆಯಲಾದ ಈ ಚಿತ್ರಗಳು ಶಿಲಾಯುಗದ ಕಥೆಗಳನ್ನು ನಮಗೆ ದಾಟಿಸುತ್ತವೆ. ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿರುವ ಇದು ಮೂರ್ನಾಲ್ಕು ದಿನಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ.

ಮಾಸ್ಮಾಯ್‌ ಗುಹೆಗಳು, ಚಿರಾಪುಂಜಿ: ಮೇಘಗಳ ತವರು, ಭಾರತದ ಮಳೆನಾಡು ಮೇಘಾಲಯದ ತುಂಬ ಗುಹೆಗಳೂ ಬೇಕಾದಷ್ಟಿವೆ. ಚಿರಾಪುಂಜಿಯಲ್ಲಿರುವ ಮಾಸ್ಮಾಯ್‌ ಗುಹೆಗಳು ಇವುಗಳ ಪೈಕಿ ಅತ್ಯಂತ ಪ್ರಸಿದ್ಧವಾದದ್ದು. ತೆವಳಿಕೊಂಡೇ ಒಳಗೆ ಹೋಗಬೇಕಾದ ಈ ಗುಹೆ ಒಂದು ಅತ್ಯಪೂರ್ವ ಅನುಭವ ನೀಡುತ್ತದೆ.

ಬೆಲ್ಲುಂ ಗುಹೆಗಳು, ಆಂಧ್ರಪ್ರದೇಶ: ಭಾರತದ ಎರಡನೇ ಅತ್ಯಂತ ದೊಡ್ಡ ನೈಸರ್ಗಿಕವಾದ ಗುಹೆಯಿದು. ಇದು ಸುಮಾರು ೩೨೨೯ ಮೀಟರ್‌ಗಳಷ್ಟು ಉದ್ದವಿದ್ದು, ೧೨೦ ಟಡಿಗಳಷ್ಟು ನೆಲದಿಂದ ಆಳದಲ್ಲಿದೆ. ಕರ್ನೂಲ್‌ ಜಿಲ್ಲೆಯ ಬೆಲ್ಲುಂ ಎಂಬಲ್ಲಿ ಈ ಗುಹೆಯಿದ್ದು ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿದೆ. ಈ ಗುಹೆಗಳು ಬಹಳ ಹಿಂದೆ ಚಿತ್ರಾವತಿ ನದಿಯ ಹರಿವಿನಿಂದ ಭೂಗರ್ಭದಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಗುಹೆಗಳೆಂದು ಹೇಳಲಾಗಿದ್ದು, ಇಂದಿಗೂ ಗುಹೆಯೊಳಗೆ ಸಾಕಷ್ಟು ನೀರಿನ ಮೂಲಗಳನ್ನು ಕಾಣಬಹುದು. ಇಲ್ಲಿ ಬೌದ್ಧ ಸನ್ಯಾಸಿಗಳೂ ಒಂದು ಕಾಲದಲ್ಲಿ ವಾಸವಿದ್ದರು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿದ್ದು ಇವೆಲ್ಲವನ್ನೂ ಅನಂತಪುರದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ, ಗುಹೆಯೊಂದರ ಅದ್ಭುತ ಅನುಭವ ನೀಡಬಹುದಾದ ಗುಹೆ ಇದಾಗಿದ್ದು, ಕುಟುಂಬ ಸಮೇತರಾಗಿ ಒಂದೆರಡು ದಿನಗಳ ಪ್ರವಾಸದಲ್ಲಿ ನೋಡಿ ಬರಬಹುದಾದ ಸ್ಥಳವಿದು.

ಕುಟುಂಸಾರ್‌ ಗುಹೆಗಳು, ಛತ್ತೀಸ್‌ಗಢ: ಛತ್ತೀಸ್‌ಘಡದ ಬಸ್ತರ್‌ನ ಕಂಗೇರ್‌ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿರುವ ಈ ಗುಹೆ ನೈಸರ್ಗಿಕವಾಗಿ ನಿರ್ಮಿತವಾದ ಪ್ರಮುಖ ಗುಹೆಗಳಲ್ಲಿ ಒಂದು. ಇದರಲ್ಲಿ ಐದು ವಿಭಾಗಗಳಿದ್ದು, ಕೆಲವು ಬಾವಿಗಳನ್ನೂ ಹೊಂದಿದೆ. ೧೩೨೭ ಮೀಟರ್‌ ಉದ್ದವಿರುವ ಈ ಗುಹೆಯೊಳಗೆ ಸೂರ್ಯನ ಬಿಸಿಲು ತಾಗುವುದೇ ಇಲ್ಲ.

ನೆಲ್ಲಿತೀರ್ಥ, ಕರ್ನಾಟಕ: ಕರ್ನಾಟಕದೊಳಗೇ ಗುಹೆಯನ್ನು ನೋಡುವ ಆಸೆಯಿದ್ದವರಿಗೆ ನೆಲ್ಲಿತೀರ್ಥ ಉತ್ತಮ ಆಯ್ಕೆ. ದಕ್ಷಿಣ ಕನ್ನಡದಲ್ಲಿರುವ ಈ ಗುಹೆ ಸುಮಾರು ೨೦೦ ಮೀಟರ್‌ ಉದ್ದವಿದ್ದು, ಗುಹೆಯೊಳಗೆ ಶಿವಲಿಂಗವಿದೆ. ಗುಹೆಯೊಳಗೆ ನೆಲ್ಲಿಕಾಯಿ ಗಾತ್ರದ ನೀರಿನ ಬಿಂದುಗಳು ಬಿದ್ದು ಇಲ್ಲೆ ಕೊಳವೊಂದು ಉಂಟಾಗಿದ್ದು, ಈ ಕಾರಣದಿಂದಲೇ ಇಲ್ಲಿಗೆ ನೆಲ್ಲಿತೀರ್ಥವೆಂಬ ಹೆಸರು ಬಂದಿದೆ. ತೀರ್ಥೋದ್ಭವದ ದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ಇದನ್ನೂ ಓದಿ: Travel Tips: Beach Tourism: ಬ್ಲೂ ಸರ್ಟಿಫಿಕೇಶನ್‌ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)

Exit mobile version