Site icon Vistara News

Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

skiing

ನಮಗೆಲ್ಲ ಚಳಿಗಾಲ ಮುಗಿದು ಇನ್ನೇನು ರಣರಣ ಬಿಸಿಲು ಶುರುವಾಗಲು ತಡವೇನೂ ಇಲ್ಲ. ಹಾಗೆಂದ ಮಾತ್ರಕ್ಕೆ ಚಳಿಯೂರುಗಳಿಲ್ಲಿನ್ನೂ ಚಳಿ ಕಡಿಮೆಯಾಗಿದೆ ಅಂದುಕೊಂಡಿರಾ? ಖಂಡಿತ ಇಲ್ಲ. ಹಿಮ ಸುರಿವ ಊರುಗಳಲ್ಲಿನ್ನೂ ಸುರಿದ ಹಿಮ ಕರಗಿಲ್ಲ. ಇನ್ನೂ ಎತ್ತರದ ಪ್ರದೇಶಗಳಿಗೆ ಹೋದಂತೆ ಸುರಿವ ಹಿಮವೂ ಸಿಗಬಹುದು. ಬೇಸಗೆಯಲ್ಲೂ ಒಂದಷ್ಟು ದಿನ ಚಳಿಗಾಲದ ಸುಖವನ್ನು ಅನುಭವಿಸಬೇಕೆಂದರೆ ನೀವು ಅಂಥ ಜಾಗಗಳನ್ನು ಹುಡುಕಿ ಹೋಗಬೇಕು. ವಿಶೇಷ ಎಂದರೆ, ಸಾಹಸೀ ಪ್ರವೃತ್ತಿಯ ಮಂದಿಗೆ ಇಂಥ ಹಿಮಾಚ್ಛಾದಿತ ಜಾಗಗಳಲ್ಲಿ ಮಜವಾಗಿ ಕಳೆಯಲು ಬೇಕಾದಷ್ಟು ಹಿಮದಾಟಗಳು, ಸಾಹಸಕ್ರೀಡೆಗಳೂ ಲಭ್ಯವಿವೆ. ಜೀವನದಲ್ಲೊಮ್ಮೆ ಹಿಮದೂರಿಗೆ ಹೋದಾಗ ಮಾಡಲೇಬೇಕಾದ ಹಿಮಸಾಹಸ ಕ್ರೀಡೆಗಳು ಇಲ್ಲಿವೆ.

೧. ಸ್ಕೀಯಿಂಗ್‌: ಭಾರತದ ಔಲಿ, ಗುಲ್ಮಾರ್ಗ್‌, ಮನಾಲಿ, ಪೆಹೆಲ್ಗಾಂ, ಶಿಮ್ಲಾದಂತಹ ಜಾಗಗಳಲ್ಲಿ ಸ್ಕೀಯಿಂಗ್‌ ಮಾಡಬಹುದು. ಹಿಮದಲ್ಲಿ ಜಾರುವ ಕ್ರೀಡೆಯಾದ ಇದಕ್ಕೆ ಕೊಂಚ ತರಬೇತಿಯ ಅಗತ್ಯವಿರುತ್ತದೆ. ಔಲಿ, ಗುಲ್ಮಾರ್ಗ್‌ನಂತಹ ಜಾಗಗಳಲ್ಲಿ ಇವುಗಳಿಗೆ ಸರಿಯಾದ ತರಬೇತಿ ನೀಡಬಲ್ಲ ಕೋರ್ಸುಗಳೂ, ತರಬೇತಿ ಗೈಡುಗಳೂ ಇದ್ದಾರೆ. ಕೇವಲ ಮಜಾಕ್ಕಾಗಿ ಮಾಡುವುದಾರೆ ಕೇವಲ ಒಂದರ್ಧ ಗಂಟೆ ಕಲಿತು, ಸಾಮಾಗ್ರಿಗಳನ್ನು ಬಾಡಿಗೆಗೆ ಪಡೆದು ಟ್ರೈ ನೋಡುವ ಅವಕಾಶವೂ ಇದೆ. ಆದರೆ, ವೃತ್ತಿಪರವಾಗಿ, ತಾಸುಗಟ್ಟಲೆ ಹಿಮದಲ್ಲಿ ಜಾರಲು ಸಾಕಷ್ಟು ಅಭ್ಯಾಸವೂ ತರಬೇತಿಯೂ ಅಗತ್ಯವಿದೆ.

೨. ಚಾರಣ: ಹಿಮದಲ್ಲಿ ಚಾರಣ ಸಾಮಾನ್ಯ ಚಾರಣಕ್ಕಿಂತ ಭಿನ್ನ. ನೋಡಲು ಹೂವಿನ ಹಾಸಿಗೆಯಂತೆ ಕಂಡರೂ ಹಿಮಪರ್ವತಗಳಲ್ಲಿ ಚಾರಣ ಕಷ್ಟ. ಜಾರುವ ಹಿಮದಲ್ಲಿ ಜಾರದಂತೆ ಬ್ಯಾಲೆನ್ಸ್‌ ಮಾಡಿಕೊಂಡು ಕ್ಲಿಷ್ಟಕರ ಮಾರ್ಗಗಳಲ್ಲಿ ಏರುತ್ತಾ ಸಾಗುವುದು, ಥರಗುಟ್ಟುವ ಚಳಿಯಲ್ಲಿ ಟೆಂಟ್‌ಗಳಲ್ಲಿ ರಾತ್ರಿ ಕಳೆಯುವುದು ಸಾಮಾನ್ಯ ವಿಷಯವೇನಲ್ಲ. ಆದರೆ, ಚಾರಣವನ್ನು ಇಷ್ಟಪಡುವ ಮಂದಿ ಹಿಮದಲ್ಲಿನ ಚಾರಣದ ಅನುಭವ ಪಡೆಯದಿದ್ದರೆ ಬದುಕಿನ್ಲ್ಲಿ ಒಂದು ಒಳ್ಳೆಯ ಅನುಭವ ಮಿಸ್‌ ಮಾಡಿದಂತೆ. ಕ್ವಾರಿ ಪಾಸ್‌, ಕೇದಾರಕಂಠ ಚಾರಣ, ಖಾಲಿಯಾ ಟಾಪ್‌ ಚಾರಣ, ಬ್ರಹ್ಮತಾಲ್‌ ಚಾರಣ ಸೇರಿದಂತೆ ಹಲವಾರು ಹಿಮ ಚಾರಣಗಳನ್ನು ಮಾಡಬಹುದು. ಇದರಲ್ಲಿ ಅನುಭವ ಇರುವ ಮಂದಿಗೆ ಇನ್ನೂ ಕ್ಲಿಷ್ಟಕರ ಹಿಮಚಾರಣಗಳಾದ ಚಾದರ್‌ ಫ್ರೋಜನ್‌ ಲೇಕ್‌ ಚಾರಣ, ನಂದಾದೇವಿ ಚಾರಣ, ಝಂಸ್ಕಾರ್‌ ಚಾರಣ ಮತ್ತಿತರ ಹಲವು ಚಾರಣಗಳನ್ನು ಮಾಡಬಹುದು.

೩. ಐಸ್‌ ಸ್ಕೇಟಿಂಗ್‌: ಸ್ಕೇಟಿಂಗ್‌ ರಿಂಕ್‌ಗಳಲ್ಲಿ ನೆಲದ ಮೇಲೆ ಟ್ರ್ಯಾಕ್‌ಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡ್ವರವರೆಗೆ ಸ್ಕೇಟಿಂಗ್‌ ಮಾಡುವುದನ್ನು ನೀವು ನೋಡಿರಬಹದು. ಆದರೆ ಗಟ್ಟಿಯಾದ ಹಿಮದ ನೆಲದ ಮೇಲೆ ಸ್ಕೇಟಿಂಗ್‌ ಮಾಡಿದ್ದೀರಾ? ಇಲ್ಲವೆಂದಾದಲ್ಲಿ ಅದನ್ನೂ ಮಾಡಲು ಇಂಥ ಜಾಗಗಳಲ್ಲಿ ಆಸ್ಪದವಿದೆ.

೪. ಐಸ್‌ ಸ್ಲೆಡ್ಜಿಂಗ್‌: ಸ್ಲೆಡ್ಜಿಂಗ್‌ ಯಾರೂ ಕೂಡಾ ಮಾಡಬಹುದಾದ ಅತ್ಯಂತ ಮಜಾ ಕೊಡುವ ಉಲ್ಲಾಸ ತುಂಬುವ, ನಮ್ಮನ್ನು ಮತ್ತೆ ಬಾಲ್ಯಕಾಲಕ್ಕೆ ಕರೆದೊಯ್ಯುವ ಎಲ್ಲ ಶಕ್ತಿಯನ್ನೂ ಹೊಂದಿದೆ. ಹಿಮದೂರುಗಳಲ್ಲಿ ಜಾರುವ ಮಣೆಗಳಂತಹ ಮರದ ಬೋರ್ಡುಗಳಲ್ಲಿ ಕೂತು ಳಿಜಾರಿನಲ್ಲಿ ಜಾರುತ್ತಾ ಸಾಗುವುದು ಯಾರಿಗೆ ತಾನೇ ಖುಷಿಕೊಡಲಿಕ್ಕಿಲ್ಲ ಹೇಳಿ. ಇದಕ್ಕಾಗಿ, ಔಲಿ, ಗುಲ್ಮಾರ್ಗ್‌ನಂತಹ ಜಾಗಗಳಲ್ಲಿ ಸ್ಲೆಡ್ಜಿಂಗ್‌ ಅವಕಾಶವಿದ್ದು, ಅಲ್ಲಿ ಬಾಡಿಗೆಗೆ ಪಡೆದು ತರಬೇತುದಾರರ ಜೊತೆ ಜಾರುತ್ತಾ ಹಿಮಕಣಿವೆಗಳನ್ನೂ, ಹಿಮಪರ್ವತಗಳನ್ನೂ ಕಣ್ತುಂಬಬಹುದು.

೫. ಸ್ನೋಬೋರ್ಡಿಂಗ್‌: ಸ್ನೋಬೋರ್ಡಿಂಗ್‌ ಇತ್ತೀಚೆಗೆ ಭಾರತದಲ್ಲಿ ಜನಪ್ರಿಯವಾಗುತ್ತಿರುವ ಹಿಮದ ಸಾಹಸಕ್ರೀಡೆ. ಇದರಲ್ಲಿ ಫೈರ್‌ನ ಗ್ಲಾಸ್‌ಬೋರ್ಡನ್ನು ಕಾಲಿಗೆ ಸಿಕ್ಕಿಸಿ, ವಿಶೇಷವಾದ ಶೂಗಳ ಸಹಾಯದಿಂದ ಹಿಮದ ಇಳಿಜಾರಿನಲ್ಲಿ ಜಾರುತ್ತಾ ಸಾಗುವುದು. ಇಲ್ಲಿ ಸ್ಕೀಯಿಂಗ್‌ನ ಬೇಕಾಗುವ ಹಾಗೆ ವಿಶೇಷ ಇಳಿಜಾರೇ ಇರಬೇಕಾಗಿಲ್ಲ. ಎಂತಹ ಇಳಿಜಾರಿನಲ್ಲೂ ಜಾರಿಕೊಂಡು ಸಾಗಬಹುದು. ಇದು ನೋಡಲು ಸರಳ ಸುಲಭವಾಗಿ ಕಂಡರೂ ಕೊಂಚ ತರಬೇತಿ ಹಾಗೂ ಅಭ್ಯಾಸ ಇದಕ್ಕೆ ಬೇಕಾಗುತ್ತದೆ. ಒಮ್ಮೆ ಕಲಿತರೆ ಬಹಳ ಮಜಾ ಪಡೆಯಬಹುದಾದ ಕ್ರೀಡೆಯಿದು.

ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!

Exit mobile version