Site icon Vistara News

Travel tips: ಹೋದ ಊರಿನಿಂದ ಸಮೃದ್ಧ ಅನುಭವಗಳೊಂದಿಗೆ ಹಿಂದಿರುಗಬೇಕು ಎಂದರೆ…

travel tips

ಮನುಷ್ಯ ಮೂಲತಃ ಅಲೆಮಾರಿ. ನಿಂತಲ್ಲೇ ನಿಲ್ಲಲು ಅವನಿಗೆ ಸಾಧ್ಯವಿಲ್ಲ. ಹಾಗಾಗಿಯೇ ಮನುಷ್ಯ ತನ್ನ ಅಗತ್ಯಗಳಿಗೆ ಒಂದೆಡೆ ನೆಲೆ ನಿಂತರೂ ಆಗಾಗ ತನ್ನ ಶಕ್ತಿಗನುಸಾರವಾಗಿ ತಿರುಗಾಡಿ ಬರುತ್ತಾನೆ. ದೇಹಕ್ಕೂ ಮನಸ್ಸಿಗೂ ಉಲ್ಲಾಸವನ್ನು ನೀಡುವ ಶಕ್ತಿ ಪ್ರವಾಸಕ್ಕಿದೆ. ದಿನನಿತ್ಯದ ಎಷ್ಟೋ ದುಗುಡಗಳನ್ನು ಬದಿಗೊತ್ತಿ ಪ್ರವಾಸ ಮಾಡಿ ಬಂದರೆ ಮನಸ್ಸು ಹಗುರವಾಗಿ ದಿನನಿತ್ಯದ ಕೆಲಸಗಳಿಗೆ ಮತ್ತಷ್ಟು ಚೈತನ್ಯ ಬಂದಂತಾಗುತ್ತದೆ.

ಇತ್ತೀಚಿನ ದಶಕಗಳಲ್ಲಿ ಪ್ರವಾಸವೇ ಬಹುದೊಡ್ಡ ಉದ್ಯಮ. ಪ್ರವಾಸವೆಂಬುದು ವ್ಯಕ್ತಿಯಿಂದ ವ್ಯಕ್ತಿ ತನ್ನ ಅರ್ಥವನ್ನೂ ಬದಲಾಯಿಸಿಕೊಂಡು ತನ್ನ ವ್ಯಾಪ್ತಿಯನ್ನು ಇನ್ನಷ್ಟು ಮತ್ತಷ್ಟು ವಿಸ್ತರಿಸಿಕೊಂಡಿದೆ. ಯುವ ಉತ್ಸಾಹಿಗಳ ಪಾಲಿಗೆ ಪ್ರವಾಸ ಕೊಡುವ ಅನುಭಾವವೇ ಬೇರೆ. ಹಿರಿಯರಿಗೆ ಬೆಳಕಾಗುವ ಬಗೆಯೇ ಬೇರೆ. ಪ್ರತಿ ಜಾಗದ ಹೊಸತನವನ್ನು ತಮ್ಮೊಳಗೆ ಆವಾಹಿಸಿಕೊಂಡು, ಹೊಸಬರೊಂದಿಗೆ ಬೆರೆತು, ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಅಲ್ಲಲ್ಲೇ ಆನ್‌ಲೈನ್‌ ಕೆಲಸ ಮಾಡಿಕೊಂಡು, ತಿರುಗಾಡುವ ಆಸಕ್ತಿ ಹೊಂದಿದ ಹಾಗೆಯೇ ತಿರುಗಾಡಬೇಕೆಂದು ಬಯಸುವ ಯುವ ಆರಂಭಿಕ ಉತ್ಸಾಹಿಗಳಿಗೆ ಕೆಲವೊಂದು ಕಿವಿಮಾತು ಇಲ್ಲಿದೆ.

ಜನರ ಗದ್ದಲವಿರಬಾರದು, ಪ್ರಶಾಂತ ವಾತಾವರಣವಿರಬೇಕು, ಆದರೆ ಹೊಸ ಅನುಭವಗಳನ್ನೂ ನೀಡಬೇಕು ಇದು ಈಗಿನ ಯುವ ಉತ್ಸಾಹಿಗಳ ಬಹುಮುಖ್ಯ ಆದ್ಯತೆ. ಹೀಗಿದ್ದಾಗ ನೀವು ಖಂಡಿತ ಅದೇ ಟೂರಿಸ್ಟ್‌ ಪ್ಯಾಕೇಜುಗಳ ಮೊರೆ ಹೋಗಬಾರದು. ತಮಗೆ ಬೇಕಾದ ಯೋಜನೆಯನ್ನು ತಾವೇ ಸಿದ್ಧಪಡಿಸಬೇಕು. ಪ್ರಸಿದ್ಧ ಟೂರಿಸ್ಟ್‌ ಜಾಗಗಳಿಗೆ ಹತ್ತಿರದಲ್ಲೇ ಇರುವ ಸಣ್ಣ ಊರುಗಳು ಇಂತಹ ಆಸಕ್ತಿಯ ಮಂದಿಗೆ ಉತ್ತಮ ಆಯ್ಕೆ.

ಹೋಟೇಲುಗಳಿಗಿಂತ ಊರ ಹೊರಗಿನ ಹೋಂಸ್ಟೇಗಳು ನಿಮ್ಮ ಬಜೆಟ್‌ಗೂ ಅಭಿರುಚಿಗೂ ಸರಿಯಾಗಿ ಹೊಂದುತ್ತವೆ. ಪ್ರಶಾಂತ ವಾತಾವರಣ, ಮಾಡಲು ಕೆಲಸವಿದ್ದರೆ, ಪರವೂರಿನಿಂದಲೇ ನೆಮ್ಮದಿಯಾಗಿ ಕೆಲಸವನ್ನೂ ಮಾಡಬಹುದು.

ಯಾವುದೇ ಊರಿಗೆ ಹೋದರೂ ಹೋಗುವ ಮೊದಲು ಆಯಾ ಊರಿನ ಬಗೆಗೆ ಒಂದಷ್ಟು ತಿಳಿದುಕೊಳ್ಳಿ. ಓದಿ. ಓದಿ ತಿಳಿದುಕೊಂಡು ಹೋದಲ್ಲಿ ನೀವು ಆ ಜಾಗವನ್ನು ಮೊದಲೇ ಸ್ವಲ್ಪ ಮಟ್ಟಿಗೆ ಅರಿತುಕೊಳ್ಳಬಹುದು. ಹೋದ ಮೇಲೆ ಇನ್ನೂ ಹೆಚ್ಚು ಅರಿಯಲು ನೆರವಾಗುತ್ತದೆ.

ಸ್ಥಳೀಯರಂತೆ ಓಡಾಡಿ, ಸ್ಥಳೀಯರೊಡನೆ ಬೆರೆಯಿರಿ. ಊರಿನ ಉದ್ದಗಲಕ್ಕೂ ನಡಿಗೆಯಲ್ಲೊಮ್ಮೆ ಸುತ್ತು ಹಾಕಿ. ಗಲ್ಲಿಗಳಲ್ಲಿ ತಿರುಗಾಡಿ. ಅಲ್ಲಿನ ಹಿರಿಯರು ಮಕ್ಕಳು ಹೆಂಗಸರು ಬದುಕಿನ ಬಗೆಗಿನ ನಿಮ್ಮ ದೃಷ್ಟಿಕೋನವನ್ನೇ ಬದಲಾಯಿಸಬಹುದು. ಬದುಕಿಗೊಂದಿಷ್ಟು ಜೀವಜಲವನ್ನೂ ನೀಡಬಹುದು. ಸದಾಕಾಲ ನೆನಪಿನಲ್ಲಿಡಬಹುದಾದ ಕತೆಗಳನ್ನೂ ಹೇಳಬಹುದು.

ಇದನ್ನೂ ಓದಿ: 777 ಚಾರ್ಲಿ- ಧರ್ಮ ಥರಾ ನೀವು ಜತೆಯಾಗಿ ಪ್ರವಾಸ ಹೋಗ್ತೀರಾ?

ಆಯಾ ಊರಿನ ಟ್ಯಾಕ್ಸಿ ಡ್ರೈವರುಗಳು ಹೇಳುವ ನಾಲ್ಕೈದು ಟೂರಿಸ್ಟ್‌ ಪಾಯಿಂಟ್‌ ಅರಸಿಕೊಂಡು ಹೋಗಿ ರೂಮಿಗೆ ಬಂದು ಅಂಗಾತ ಕಾಲು ಚಾಚಿ ಮಲಗಿಬಿಡಬೇಡಿ. ಅಂಥಾ ಜಾಗಗಳು ಆ ಊರಿನ ನಿಜವಾದ ರುಚಿಯನ್ನು ಪರಿಚಯಿಸಲಾಗದು. ಎಲ್ಲರೂ ಹೋಗುವ ಜಾಗ ಬಿಟ್ಟು ಬೇರೇನಿದೆ ನೋಡಿ. ಸಂಜೆ ಹೊತ್ತು ಊರ ಹಿರಿಯರು ಒಟ್ಟು ಸೇರಿ ಕತೆ ಹೊಡೆವ ಅರಳೀ ಕಟ್ಟೆಯೂ ನಿಮ್ಮ ಖಾಲಿ ಜೋಳಿಗೆಯನ್ನು ಕತೆಗಳಿಂದ ತುಂಬಿಸಬಹುದು.

ಯಾವುದೋ ಖಾಲಿ ರಸ್ತೆಯ ಪುಟಾಣಿ ಗೂಡಂಗಡಿಯ ೧೦ ರುಪಾಯಿ ಚಹಾ, ಪುಟಾಣಿ ಢಾಭಾದ ಪರಾಠಾ ಕೂಡಾ ಬದುಕಿನ ಅತ್ಯಂತ ಖುಷಿ ಕೊಡುವ ಸಂಗತಿಯಾಗಬಹುದು. ಚಂದದ ರೆಸ್ಟೋರೆಂಟಿನಲ್ಲಿ ಕೂತು ಕಾಯುವುದಕ್ಕಿಂತಲೂ ಇಲ್ಲಿ ನಿಂತು ಕುಡಿವ ಚಹಾ ಹೆಚ್ಚು ರುಚಿಯೆನಿಸಬಹುದು. ಹಾಗಾಗಿ ಸದಾ ಹೊಸದಕ್ಕೆ ಸಿದ್ಧವಾಗಿರಿ. ಹೊಸ ಅನುಭವಗಳು ಮತ್ತೆ ಮತ್ತೆ ನಿಮ್ಮ ಕದ ತಟ್ಟುತ್ತದೆ.

ʻಹೋದ ಪುಟ್ಟ ಬಂದ ಪುಟ್ಟʼದಂಥ ಪ್ರವಾಸ ಕಡಿಮೆ ಮಾಡಿ. ಒಂದಿಷ್ಟು ದಿನ ಒಟ್ಟು ಹಾಕಿ, ಒಂದೇ ಊರಿನಲ್ಲಿ ಕೆಲದಿನಗಳು ಕಳೆದರೆ ಸಿಗುವ ಅನುಭವಗಳು ಸಾದಾ ಪ್ರವಾಸಕ್ಕಿಂತ ಅದ್ಭುತವಾಗಿರುತ್ತದೆ.

ಇದನ್ನೂ ಓದಿ: Travel tips: ಪ್ರವಾಸ ದುಡ್ಡಿದ್ದವರಿಗೆ ಮಾತ್ರವೇ ಸಾಧ್ಯವೇ?

Exit mobile version