Site icon Vistara News

Travel Tips: ನೀವು ತಿಂಡಿಪೋತರಾದರೆ ಈ ಜಾಗಗಳಿಗೆ ಪ್ರವಾಸ ಮಾಡಲೇಬೇಕು!

kashmiri food

(ಇದರ ಹಿಂದಿನ ಭಾಗವನ್ನು ಇಲ್ಲಿ ಓದಿ)

ಪ್ರವಾಸದ ನಿಜದ ಖುಷಿಗಳಲ್ಲಿ ಆಯಾ ಊರಿನ ವಿಶೇಷ ತಿಂಡಿ ತಿನಿಸುಗಳ ರುಚಿ ನೋಡುವುದರಲ್ಲೂ ಅಡಗಿದೆ. ಭಾರತದಲ್ಲಿ ಒಂದೊಂದು ಊರೂ ಕೂಡಾ ಒಂದೊಂದು ಬಗೆಯ ವಿಶೇಷ ತಿನಿಸುಗಳನ್ನು ತನ್ನಲ್ಲಿ ಅಡಗಿಸಿಟ್ಟೇ ಇರುತ್ತದೆ. ಅದರಲ್ಲೂ ಕೆಲವು ಊರುಗಳಿಗೆ ಕೇವಲ ತಿನ್ನಲಾದರೂ ಹೋಗಲೇಬೇಕು. ಹಾಗಾದರೆ ಬನ್ನಿ, ಸುಮ್ಮನೆ ತಿನ್ನಲಾದರೂ ಈ ಊರುಗಳಲ್ಲೊಮ್ಮೆ ತಿರುಗಾಡಿ ಬನ್ನಿ.

4. ಕಾಶ್ಮೀರ: ಭೂಲೋಕದ ಸ್ವರ್ಗ ಎಂಬುದು ನಿಜವೇ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಕಾಶ್ಮೀರದಲ್ಲಿ ಕೇವಲ ಈ ಸ್ವರ್ಗವನ್ನು ನೋಡಲಷ್ಟೇ ಹೋಗುವುದಲ್ಲ, ಅಲ್ಲಿ ಊಟ ತಿಂಡಿಯ ಬಗ್ಗೆಯೂ ಒಂದಷ್ಟು ಜ್ಞಾನ ಇಟ್ಟುಕೊಂಡು ಅಲ್ಲಿಗೆ ಪಯಣಿಸಬೇಕು. ಗೊತ್ತಿಲ್ಲದಿದ್ದರೆ ಓದಿ ತಿಳಿದುಕೊಂಡು ಹೋಗಬಹುದು. ಯಾಕೆಂದರೆ, ಕಾಶ್ಮೀರದಲ್ಲಿ ಎರಡು ಬಗೆಯ ವಿಶೇಷ ಆಹಾರವನ್ನು ಕಾಣಬಹುದು. ಒಂದು ಅಲ್ಲಿನ ಪಂಡಿತರ ಆಹಾರ ಶೈಲಿಯಾದರೆ ಇನ್ನೊಂದು ಅಲ್ಲಿನ ಮುಸ್ಲಿಮರ ಮಾಂಸಾಹಾರ ಶೈಲಿ. ಮಾಂಸಾಹಾರ ಪ್ರಿಯರು ಅಲ್ಲಿನದೇ ಆದ ಬಗೆಬಗೆಯ ಮಾಂಸಾಹಾರದ ರುಚಿಯನ್ನು ಕಾಶ್ಮೀರದಲ್ಲಿಯೇ ಸವಿಯಬೇಕು. ಯಾಕೆಂದರೆ, ಕಾಶ್ಮೀರಿ ಪುಲಾವನ್ನು ಬೆಂಗಳೂರಿನಲ್ಲಿ ಸವಿಯುವುದಕ್ಕೂ, ಕಾಶ್ಮೀರದಲ್ಲಿ ಸವಿಯುವುದಕ್ಕೂ ವ್ಯತ್ಯಾಸವಿದೆ. ಕಾಶ್ಮೀರಿ ಗ್ರೇವಿ, ಕಾಶ್ಮೀರಿ ಪುಲಾವ್‌, ಮೋಮೋಗಳು, ವಾಝ್‌ವಾನ್‌ ಎಂಬ ಬಗೆಬಗೆಯ ಮಾಂಸಾಹಾರದ ಭಕ್ಷ್ಯಗಳಿರುವ ಥಾಲಿ, ಗೋಶ್ತಬಾ ಎಂಬ ಕ್ರೀಮೀ ಮೀಟ್‌ಬಾಲ್ಸ್‌, ಯಾಕ್ನಿ ಎಂಬ ಲ್ಯಾಂಬ್‌ ಕರಿ, ಪ್ರಸಿದ್ಧವಾದ ರೋಗನ್‌ ಜೋಶ್‌, ಕಾಶ್ಮೀರದ್ದೇ ಆದ ವಿಶೇಷವಾದ ದಮ್‌ ಆಲೂ ಇತ್ಯಾದಿ ಪಟ್ಟಿ ದೊಡ್ಡದಿದೆ. ಕಾಶ್ಮೀರಕ್ಕೆ ಹೋಗಿಯೇ ಇವನ್ನೆಲ್ಲ ಸವಿಯಬೇಕು. ಇವಿಷ್ಟೆಲ್ಲ ಸಾಧ್ಯವಾಗದಿದ್ದರೂ, ಇಲ್ಲಿನ ನೂನ್‌ ಹಾಗೂ ಖಾವಾ ಚಹಾವನ್ನಾದರೂ ಮರೆಯದೆ ಟ್ರೈ ಮಾಡಬೇಕು.

5. ಇಂದೋರ್: ಮಧ್ಯಪ್ರದೇಶದ ಇಂದೋರ್‌ಗೆ ಒಮ್ಮೆಯಾದರೂ ಹೋಗಿ ಚಾಟ್‌ ಸವಿಯಬೇಕು. ಏಕೆಂದರೆ, ಇಲ್ಲಿನ ಚಾಟ್‌ಗೆ ಬೇರೆ ಚಾಟ್‌ಗಳ ರುಚಿಯನ್ನು ಹೋಲಿಸುವಂತಿಲ್ಲ. ರಾಜಸ್ಥಾನ, ಗುಜರಾತ್‌ ಹಾಘೂ ಮಹಾರಾಷ್ಟ್ರಗಳ ರುಚಿಗಳೆಲ್ಲ ಇಲ್ಲಿ ಮಿಶ್ರ ತಳಿಯಾಗಿ ಅಭಿವೃದ್ಧಿ ಹೊಂದಿ ತನ್ನದೇ ಆದ ವಿನೂತನ ವಿಶೇಷ ರುಚಿಯನ್ನು ಹೊಂದಿದೆ. ಇಲ್ಲಿನ ಪೋಹಾ, ಇಮಾರ್ತಿ ಸೇರಿದಂತೆ ಅನೇಕ ಸ್ಥಳೀಯ ಆಹಾರಗಳನ್ನು ತಿನ್ನಲು ಇಂದೋರ್‌ ಬೆಸ್ಟ್‌ ಜಾಗ. ಬೇಲ್‌ಪುರಿ, ಕಚೋಡಿ, ಸಮೋಸ, ಸಾಬುದಾನ ಖಿಚಡಿ, ಛೋಲೆ ಬತೂರೆ, ದಾಲ್‌ ಬಾಫ್ಲಾ ಇತ್ಯಾದಿಗಳ ಹೆಸರು ಕೇಳಿಯೇ ಬಾಯಲ್ಲಿ ನೀರೂರೀತು.

6. ರಾಜಸ್ಥಾನ: ರಾಜಸ್ಥಾನ ಎಂಬ ಮರಳುಗಾಡಿನಲ್ಲಿ ಕೋಟೆ ಕೊತ್ತಲಗಳು ಬಿಟ್ಟು ಇನ್ನೇನಿದೆ ಎಂದರೆ ಅದು ನಿಮ್ಮ ಮೂರ್ಖತನ. ರಾಜಸ್ಥಾನದಲ್ಲಿ ತಿಂಡಿಪೋತರಿಗೆ ಬೆಳಗ್ಗೆ ಎದ್ದ ಕೂಡಲೇ ಥರಹೇವಾರಿ ತಿಂಡಿಗಳು ಬೀದಿಬದಿಯಲ್ಲೇ ಸಿಗುತ್ತದೆ. ಬೀದಿ ಬದಿಯ ಕಚೋಡಿ, ಪೂರಿ ಸಬ್ಜಿ, ಬೆಳಗ್ಗೆಯೇ ಬಿಸಿಬಿಸಿ ಜಿಲೇಬಿ, ಬಾಲುಶಾಹಿ, ಘೇವರ್‌, ಗುಜಿಯಾ ಇತ್ಯಾದಿ ಇತ್ಯಾದಿ ತಿನಿಸುಗಳು, ಆಹಾ ರುಚಿಯ ಪೋಹಾಗಳು ರಾಜಸ್ಥಾನದ ಪ್ರವಾಸವನ್ನು ಸಮೃದ್ಧವಾಗಿ ಮಾಡಬಲ್ಲುದು.

7. ಸಿಕ್ಕಿಂ: ನೀವು ಮೋಮೋ ಪ್ರಿಯರೇ? ಹಾಗಿದ್ದರೆ, ನಿಮ್ಮೂರಿನ ಯಾವುದೋ ಮೋಮೋ ಸ್ಟಾಲ್‌ನಲ್ಲಿ ತಿಂದು ಬಯಕೆ ತೀರಿಸಿಕೊಳ್ಳುವ ಬದಲು ಒಮ್ಮೆ ಸಿಕ್ಕಿಂಗೆ ಹೋಗಿ. ಮೋಮೋ ಪ್ರಿಯರಿಗೆ ಇದೊಂದು ಸ್ವರ್ಗ. ಬಗೆಬಗೆಯ ಮೋಮೋಗಳು, ಕ್ಲೀಯರ್‌ ಸೂಪ್‌ ಜೊತೆಗೆ ಕೊಡುವ ಡಂಪ್ಲಿಂಗ್‌ಗಳು, ನೂಡಲ್‌ ಸೂಪ್‌ ಜೊತೆಗೆ ಕೊಡುವ ಮಾಂಸದ ತುಕ್ಪಾ ಇತ್ಯಾದಿಗಳ ರುಚಿ ನೋಡುತ್ತಾ ಹಿಮಾಲಯದ ಸೊಬಗು ನೋಡುವ ಸುಖ ಎಲ್ಲಿಯೂ ಬೇರೆಲ್ಲೂ ದಕ್ಕದು.

ಇದನ್ನೂ ಓದಿ: Travel Tips: ಬೆಟ್ಟದ ಹಾದಿಯಲ್ಲಿ ಪ್ರವಾಸಕ್ಕೆ ಮೊದಲು ಈ ಆಹಾರಗಳನ್ನು ತಿನ್ನದಿರಿ!

8. ಅಮೃತಸರ: ಗೋಲ್ಡನ್‌ ಟೆಂಪಲ್‌, ಜಲಿಯನ್‌ ವಾಲಾಬಾಗ್‌, ವಾಘಾ ಬಾರ್ಡರ್‌ ನೋಡಬೇಕೆಂದು ಅಮೃತಸರಕ್ಕೆ ಹೋಗೋದೇನೋ ಸರಿ. ಆದರೆ, ತಿನ್ನಲು ಕೂಡಾ ಅಮೃತಸರಕ್ಕೆ ಹೋಗಬಹುದು ಎಂಬುದು ಗೊತ್ತೇ? ಹೌದು. ಪಂಜಾಬಿ ಊಟದ ಮಜಾ ಅನುಭವಿಸಬೇಕೆಂದರೆ ಅಮೃತಸರದ ಬೀದಿ ಬೀದಿ ಸುತ್ತಬೇಕು. ಅಮೃತಸರಿ ಕಲ್ಚಾ, ಚುರ್‌ಚುರ್‌ ನಾನ್‌, ಪೂರಿ ಸಬ್ಜಿ, ಛೋಲೆ ಬತೂರೆ ಇತ್ಯಾದಿಗಳ ರುಚಿ ಅಮೃತಸರದಲ್ಲಿ ಅದ್ಭುತ. ಅಷ್ಟೇ ಅಲ್ಲ, ಇಲ್ಲಿನ ಗುರುದ್ವಾರಗಳಲ್ಲಿ ಪ್ರಸಾದವಾಗಿ ನೀಡುವ ಗೋಧಿ ಹಲ್ವಾದ ತುಪ್ಪದ ಘಮ ಮನೆಗೆ ಮರಳಿದರೂ ಮೂಗಿನಿಂದ ಮಾಸದು.

9. ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಿಮ್ಮ ಕಿಸೆಯಲ್ಲಿ ಚಿಲ್ಲರೆ ಕಾಸಿದ್ದರೂ, ಅದ್ಭುತ ಬೀದಿಬದಿಯ ತಿನಿಸುಗಳನ್ನು ತಿನ್ನಬಹುದು. ಬೆಳಗ್ಗೆ ಐದು ಗಂಟೆಗೇ ಎದ್ದು ರಸ್ತೆಯಲ್ಲಿ ನಡೆದರೆ, ಜಿಲೇಬಿ ತಿನ್ನಲು ಜನ ಸಾಲುಗಟ್ಟಿದ್ದನ್ನು ನೋಡಬಹುದು. ಥರಹೇವಾರಿ ರುಚಿಯ ಮೊಸರು, ಜಿಲೇಬಿಗಳು, ಪಿಚ್ಕಾ ಎಂಬ ಹೆಸರಿನ ಗೋಲ್‌ಗಪ್ಪ, ದಮ್‌ ಆಲೂ ಪುಚ್ಕಾ, ಮೊಘಲೈ ಪರಾಠಾ ಇತ್ಯಾದಿ ಇನ್ನೂ ಅನೇಕ ತಿಂಡಿ ತೀರ್ಥಗಳ್ನು ಮೊದಲೇ ಪಟ್ಟಿಮಾಡಿಯೇ ಕೋಲ್ಕತ್ತಾಕ್ಕೆ ಹೋಗೋದು ಒಳ್ಳೆಯದು.

ಇದನ್ನೂ ಓದಿ: Travel Tips: ರಾತ್ರಿಯಾಕಾಶದ ನಕ್ಷತ್ರಪುಂಜಗಳನ್ನು ನೋಡಬೇಕೆಂದರೆ ನೀವು ಇಲ್ಲಿಗೆ ಪ್ರವಾಸ ಮಾಡಿ!

Exit mobile version