ಪ್ರವಾಸ ಎಂಬುದು ಖುಷಿ. ಈಗ ಬೇಸಗೆ ಹತ್ತಿರ ಬರುತ್ತಿದ್ದಂತೆ ಬಹುತೇಕ ಎಲ್ಲರೂ ಕುಟುಂಬ ಸಮೇತರಾಗಿ ಒಂದಲ್ಲ ಒಂದು ಪ್ರವಾಸದ ಸಿದ್ಧತೆಯಲ್ಲಿರುತ್ತಾರೆ. ವಿಮಾನದ ಮೂಲಕವೋ, ರಸ್ತೆ ಮಾರ್ಗವೋ, ರೈಲು ಮಾರ್ಗವೋ ಏನೇ ಆದರೂ ಪ್ರವಾಸ ತರುವ ಅನುಭವವೇ ಬೇರೆ. ಪ್ರವಾಸಕ್ಕೆ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುವುದು ಒಂದು ಸಡಗರವಾದರೆ, ಪ್ರವಾಸದಲ್ಲಿ ಮೂರೂ ಹೊತ್ತು ಏನೆಲ್ಲ ತಿನ್ನುವುದು, ಎಲ್ಲೆಲ್ಲಿ ತಿನ್ನಬೇಕು ಎಂಬು ಪ್ಲಾನ್ ಮಾಡಿಕೊಳ್ಳುವುದೂ ಕೂಡಾ ಇನ್ನೊಂದು ಹರುಷ. ಚೆನ್ನಾಗಿ ತಿಂದುಂಡು ಸ್ಥಳಗಳನ್ನು ನೋಡಿ ಎಲ್ಲ ಒತ್ತಡವನ್ನು ಬದಿಗಿಟ್ಟು ಪ್ರವಾಸದ ಮಜಾವನ್ನು ಅನುಭವಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಪ್ರವಾಸದ ಖುಷಿಯನ್ನು ಅನುಭವಿಸುವ ಭರದಲ್ಲಿ ತಿನ್ನುವ ಸಂಭ್ರಮದಲ್ಲಿ ಬಹಳಷ್ಟು ಮಂದಿ ತಪ್ಪನ್ನೇ ಮಾಡುತ್ತಾರೆ. ಚೆನ್ನಾಗಿ ತಿಂದು ಹೇರ್‌ಪಿನ್ ಬೆಂಡ್‌ಗಳಿರುವ ಹಾವಿನಂತೆ ತೆವಳುವ ರಸ್ತೆಯಲ್ಲಿ ಪ್ರಯಾಣ ಆರಂಭಿಸುತ್ತಾರೆ. ಆಗ ಹೊಟ್ಟೆ ನಮ್ಮ ಮಾತನ್ನು ಕೇಳದೆ ಇನ್ನೊಂದು ಹಾಡು ಹಾಡುತ್ತದೆ. ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ.
1. ಎಣ್ಣೆತಿಂಡಿಗಳನ್ನು ಬದಿಗಿಡಿ: ಹೌದು, ಪ್ರವಾಸದ ಸಂದರ್ಭ ಏನಾದರೊಂದು ಮೆಲ್ಲುತ್ತಾ ಕಾರಿನಲ್ಲೋ ಬಸ್ಸಿನಲ್ಲೋ ಪಯಣಿಸುವ ಮಜಾವೇ ಬೇರೆ. ಆದರೆ, ಸಿಕ್ಕಸಿಕ್ಕಲ್ಲೆಲ್ಲ ಪಕೋಡಾ, ಬಜ್ಜಿ, ಬೋಂಡಾ ಅಥವಾ ಏನಾದರೂ ಎಣ್ಣೆ ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಕಡಿದಾದ ಹಾದಿಯಲ್ಲಿ ಎಣ್ಣೆತಿಂಡಿಗಳನ್ನು ಅತಿಯಾಗಿ ತಿಂದರೆ ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆ ಕೆಡುವ ಸಂಭವ ಇದೆ. ಪಕೋಡಾ, ಆಲೂ ಟಿಕ್ಕಿ, ಚಿಪ್ಸ್, ಫ್ರೈಸ್, ಫ್ರೈಡ್ ಚಿಕನ್ ಇತ್ಯಾದಿಗಳನ್ನು ಸಾಧ್ಯವಾದಷ್ಟೂ ಅವಾಯ್ಡ್ ಮಾಡಿ.
2. ಮಾಂಸಾಹಾರ: ಪ್ರವಾಸದ ಸಂದರ್ಭ ಬೆಟ್ಟದ ಹಾದಿಯಲ್ಲಿ ಪ್ರಯಾಣವಿದ್ದಾಗ ಮೊದಲೇ ಮಾಂಸಹಾರ ಮಾಡಿ ಇಂತಹ ರಸ್ತೆಯಲ್ಲಿ ಹೊರಡಬೇಡಿ. ಬಟರ್ ಚಿಕನ್, ಮಟನ್ ರೋಗನ್ ಜೋಶ್, ಚಿಕನ್ ಟಿಕ್ಕಾ ಇತ್ಯಾದಿ ಇತ್ಯಾದಿ ಸ್ಪೈಸೀ ಮಾಂಸಾಹಾರವನ್ನು ತಿಂದು ಹೊರಟರೆ,ತಿರುವು ಮುರುವು ರಸ್ತೆಯಲ್ಲಿ ಖಂಡಿತಾ ಹೆಚ್ಚುಕಡಿಮೆಯಾಗಬಹುದು. ಮೀನು ಹಾಗೂ ಮಾಂಸ ದೇಹದಲ್ಲಿ ಸರಿಯಾಗಿ ಪಚನವಾಗಲು ಎರಡು ದಿನಗಳೇ ಬೇಕಾಗುತ್ತದೆ. ಇದರಲ್ಲಿ ಸಂಕೀರ್ಣವಾದ ಪ್ರೋಟೀನ್ ಇರುವುದರಿಂದ ಯಾವುದಾದರೂ ಲಘು ಆಹಾರ ತಿಂದು ಇಂತಹ ಜಾಗಕ್ಕೆ ಪ್ರಯಾಣ ಬೆಳೆಸಿ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
3. ಬಫೆ ಊಟ: ಬಗೆಬಗೆಯ ಭಕ್ಷ್ಯಗಳಿರುವ ಬಫೆ ಸೆಳೆಯುತ್ತದೆ ನಿಜ. ಆದರೆ, ಚೆನ್ನಾಗಿ ಬಫೆ ಉಂಡು ಹೊಟ್ಟೆ ಉಬ್ಬರಿಸಿದಂತಾಗಿ, ಹೊಟ್ಟೆ ಎತ್ತಲು ಶಕ್ತಿ ಇಲ್ಲದಷ್ಟು ತಿಂದಾಗ ಖಂಡಿತವಾಗಿಯೂ ಬೆಟ್ಟದ ಹಾದಿಯ ತಿರುವು ಮುರುವು ರಸ್ತೆ ನಿಮ್ಮ ಹೊಟ್ಟೆಕೆಡಿಸುವುದು ಗ್ಯಾರಂಟಿ. ಹಾಗಾಗಿ, ಪ್ರಯಾಣಕ್ಕೂ ಮುನ್ನ ಇಂತಹ ಹಬ್ಬದೂಟದ ಯೋಚನೆಯನ್ನು ಆದಷ್ಟೂ ಬದಿಗಿಡಿ.
4. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಆಹಾರ ಉತ್ಪನ್ನಗಳಾದ ಚೀಸ್, ಕ್ರೀಂ, ಐಸ್ ಕ್ರೀಂ ಇತ್ಯಾದಿಗಳು ಪ್ರಯಾಣದ ಸಂದರ್ಭ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತದೆ. ಮೋಷನ್ ಸಿಕ್‌ನೆಸ್ ತೊಂದರೆ ಇರುವವರಿಗೆ ಖಂಡಿತವಾಗಿ ಇದು ಒಳ್ಳೆಯದನ್ನು ಮಾಡುವುದಿಲ್ಲ. ದೇಹ ಕುಲುಕಾಡುವಾಗ ಹಾಲಿನ ಉತ್ಪನ್ನಗಳು ಬಹಳ ಸಾರಿ ವಾಂತಿ ತರಿಸುತ್ತದೆ. ಹಾಗಾಗಿ ಕಾರ್, ಬಸ್‌ನಲ್ಲಿ ಪಯಣಿಸುವ ಸಂದರ್ಭ ಹಾಲು ಕುಡಿಯಬೇಡಿ ಹಾಗೂ ಡೈರಿ ಉತ್ಪನ್ನಗಳನ್ನು ತಿನ್ನಬೇಡಿ.
5. ಕಾರ್ಬೋನೇಟೆಡ್ ಡ್ರಿಂಕ್‌ಗಳು ಹಾಗೂ ಆಲ್ಕೋಹಾಲ್: ಕಾರ್ಬೋನೇಟೆಡ್ ಡ್ರಿಂಕ್‌ಗಳು ಅಥವಾ ಸೋಡಾದಲ್ಲಿ ಇದರಲ್ಲಿ ಹೆಚ್ಚು ಸಕ್ಕರೆ ಇರುವುದರಿಂದ ಇದು ಹೊಟ್ಟೆಯನ್ನು ಕೆಡಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಆಗಿ ಪ್ರಯಾಣವೇ ಯಾತನಾಮಯವಾಗಬಹುದು. ಹಾಗಾಗಿ, ಬಾಯಾರಿಕೆಗೆ ಆದಷ್ಟೂ ತಾಜಾ ಹಣ್ಣು ಅಥವಾ ನೀರು ಕುಡಿಯುವುದು ಒಳ್ಳೆಯದು. ಆಲ್ಕೋಹಾಲ್ ಕೂಡಾ ಅಷ್ಟೇ, ಪ್ರಯಾಣದ ಸಂದರ್ಭ ವಾಂತಿ ತರಿಸುವ ಸಂಭವ ಹೆಚ್ಚು. ಹಾಗಾಗಿ ಇವುಗಳಿಂದ ದೂರವಿರಿ.
ಇದನ್ನೂ ಓದಿ: Travel Tips: ಬ್ಲೂ ಸರ್ಟೀಫಿಕೆಟ್ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ!