Site icon Vistara News

Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್‌ಬೈ ಹೇಳಿ ತಿರುಗಾಟವೇ ಕೆಲಸ!

traveling resigning job

ವೃತ್ತಿ ಹಾಗೂ ಹವ್ಯಾಸ ಇವೆರಡರನ್ನು ಮುಂದಿಟ್ಟು ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದರೆ ಬಹುತೇಕರು, ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಸಹಜ. ಕಾರಣ ಇಷ್ಟೇ, ವೃತ್ತಿ ನೀಡುವ ಆರ್ಥಿಕ ಭದ್ರತೆಯನ್ನು ಹವ್ಯಾಸ ನೀಡಲಾರದು. ಹವ್ಯಾಸದ ಹಿಂದೆ ಬಿದ್ದು, ವೃತ್ತಿಯನ್ನು ನಿರ್ಲಕ್ಷ್ಯ ಮಾಡಿದರೆ ಖಂಡಿತಾ ಊಟಕ್ಕೆ ಗತಿಯಿಲ್ಲದಂತಾಗುತ್ತದೆ ಎಂಬುದು ಹಲವರ ಅಭಿಪ್ರಾಯ. ಅದಕ್ಕಾಗಿಯೇ. ಅನೇಕರು, ಮನಸ್ಸಿದ್ದರೂ, ಇಲ್ಲದಿದ್ದರೂ ವೃತ್ತಿಗೆ ಆತುಕೊಂಡೇ ಇರುತ್ತಾರೆ. ಇನ್ನೂ ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಬದಲಾಯಿಸಿಕೊಂಡು ಯಶಸ್ಸು ಸಾಧಿಸುವವರೂ ಇದ್ದಾರೆ. ಆದರೆ, ಅದಕ್ಕೆ ಸಾಕಷ್ಟು ಶ್ರಮ, ತಾಳ್ಮೆ ಹಾಗೂ ಕಠಿಣ ಪರಿಶ್ರಮದ ಅಗತ್ಯ ಇದ್ದೇ ಇರುತ್ತದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಚರ್ಚೆಯನ್ನು ಹುಟ್ಟು ಹಾಕುತ್ತಲೇ ಇರುತ್ತದೆ.

ಇತ್ತೀಚೆಗೆ ಯುವ ಮನಸ್ಸುಗಳು, ಹವ್ಯಾಸಗಳನ್ನೂ ಬದುಕಿನ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿ ಬದುಕನ್ನು ಇಷ್ಟ ಬಂದ ಹಾಗೆ ಜೀವಿಸಬೇಕು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುವುದುಂಟು. ಪ್ರವಾಸ ಮಾಡುತ್ತಾ ಬದುಕು ಕಳೆಯಬೇಕು ಎಂದು ಬಯಸುವ ಯುವಜನರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ತಿರುಗಾಡುವುದೇ ಜೀವನ. ತಿರುಗಾಟಕ್ಕೆ ಬೇಕಾದ ಹಣವನ್ನು ತಿರುಗಾಡುತ್ತಲೇ ಕೆಲಸ ಮಾಡಿ ಸಂಪಾದಿಸುತ್ತೇವೆ ಎಂದು ಹೊರಟ ಅನೇಕರ ಉದಾಹರಣೆಗಳು ಇಂದು ಸಿಗುತ್ತಿವೆ. ಇದೂ ಕೂಡಾ ಅಂಥದ್ದೇ ಒಂದು ಉದಾಹರಣೆ. ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೂಲದ ಯುವತಿ ಆಕಾಂಕ್ಷಾ ಮೋಂಗಾ ಎಂಬಾಕೆ 2022ರಲ್ಲಿ ತಾನು ಲಿಂಕ್ಡ್‌ ಇನ್‌ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್‌ ಬೈ ಹೇಳಿ ಈಗ ಪ್ರಪಂಚ ಸುತ್ತುವುದನ್ನೇ ನನ್ನ ಕೆಲಸವನ್ನಾಗಿ ಮಾಡಿ ಒಂದು ವರ್ಷವಾಯಿತು ಎಂದು ಬರೆದುಕೊಂಡಿರುವ ಪೋಸ್ಟ್‌ ಈಗ ಸಾಕಷ್ಟು ವೈರಲ್‌ ಆಗಿದ್ದು ಅಷ್ಟೇ ಚರ್ಚೆಯನ್ನೂ ಹುಟ್ಟು ಹಾಕಿದೆ.

ಕಳೆವ ವರ್ಷ ಇದೇ ಸಮಯಕ್ಕೆ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಪ್ರಪಂಚ ಸುತ್ತಲು ಹೊರಟೆ. ನಾನು ನನ್ನ ಈ ಕನಸನ್ನು ನನಸಾಗಿಸಲು ಬಹಳ ಕಷ್ಟ ಪಟ್ಟೆ. ಒಬ್ಬಳೇ ಕೆಲಸ ಮಾಡಿದೆ. ಸುಮಾರು ಎರಡೂವರೆ ಲಕ್ಷ ಫಾಲೋವರ್‌ಗಳನ್ನು ಇನ್ಸ್‌ಟಾದಲ್ಲಿ ಪಡೆದೆ. ಹೇಗೆ ಇವನ್ನೆಲ್ಲಾ ಮಾಡಿದೆ ಎಂದು ತಿಳೆಯಬೇಕೇ?ʼ ಎಂದು ಆಕೆ ತನ್ನ ಫಾಲೋವರ್ಸ್‌ಗೆ ಪ್ರಶ್ನೆ ಎಸೆದಿದ್ದರು. ಈಕೆ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಆರು ತಿಂಗಳ ಕಾಲ ಲಿಂಕ್ಡ್‌ ಇನ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು.

ಮೊಂಗಾ ಒಂದು ವರ್ಷದಲ್ಲಿ ತನ್ನ ಕನಸನ್ನು ನನಸಾಗಿಸಲು ಸುಮಾರು 12 ದೇಶಗಳಲ್ಲಿ ಸುತ್ತಾಡಿದ್ದು, ಅವುಗಳ ಪೈಕಿ ಎಂಟು ದೇಶಗಳಲ್ಲಿ ಸೋಲೋ ಪ್ರವಾಸ ಮಾಡಿದ್ದಾರೆ. ಟ್ರಾವೆಲ್‌ ಅ ಮೋರ್‌ ಎಂಬ ವೆಬ್‌ಸೈಟ್‌ ಒಂದನ್ನೂ ಈಕೆ ನಡೆಸುತ್ತಿದ್ದು ಈಕೆಯ ಜೊತೆಗೆ ಆರು ಜನರು ಕೆಲಸ ಮಾಡುತ್ತಿದ್ದಾರೆ. 30ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಜೊತೆಗೆ ಕೆಲಸ ಮಾಡಿರುವುದಲ್ಲದೆ, 300ಕ್ಕೂ ಹೆಚ್ಚು ವಿಡಿಯೋಗಳನ್ನು ಈಕೆ ಮಾಡಿದ್ದು ಇವೆಲ್ಲವನ್ನೂ ತನ್ನ ಪ್ರವಾಸ ಮಾಡುತ್ತಲೇ ಮಾಡಿದ್ದಾಳೆ. ರಾತ್ರಿ ಹಗಲೆನ್ನದೆ, ತಿಂಗಳುಗಟ್ಟಲೆ ಇದಕ್ಕಾಗಿ ಕೆಲಸ ಮಾಡಿದ್ದು ಸಾಕಷ್ಟು ಶ್ರಮ ಹಾಕಿದ್ದೇನೆ ಎಂದೂ ಆಕೆ ವಿವರಿಸಿದ್ದಾರೆ.

ಇದನ್ನೂ ಓದಿ: Viral Video: ಹಾರುವ ಸೋಫಾದ ವಿಡಿಯೊ ನೋಡಿ ಅಲ್ಲಾವುದ್ದೀನ್​ ಮ್ಯಾಜಿಕ್ ಕಾರ್ಪೆಟ್​ ನೆನಪಿಸಿಕೊಂಡ ಜನರು

ಈಕೆಯ ಈ ಪೋಸ್ಟ್‌ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು. ಬಹುತೇಕರು, ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿದ ನಿಮಗೆ ಅಭಿನಂದನೆಗಳು, ಖುಷಿಯಾಗಿರಿ ಎಂದಿದ್ದಾರೆ. ಇನ್ನೂ ಕೆಲವರು, ಇವು ನಮಗೆ ಸ್ಪೂರ್ತಿ ಎಂದಿದ್ದಾರೆ. ಹವ್ಯಾಸವನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿ ದೇಶ ಸುತ್ತುವುದು ಅನೇಕರ ಕನಸು. ಆದರೆ, ಅದನ್ನು ನನಸಾಗಿ ಮಾಡುವ ಕೆಲವೇ ಮಂದಿಯಲ್ಲಿ ನೀವೂ ಒಬ್ಬರು. ಶುಭವಾಗಲಿ ಎಂದಿದ್ದಾರೆ.

ಆದರೆ, ವಿಶೇಷವೆಂದರೆ, ಇಂತಹ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳ ಮಧ್ಯದಲ್ಲಿ ಕೆಲವರು ಚರ್ಚೆಯನ್ನೂ ಹುಟ್ಟು ಹಾಕಿದ್ದಾರೆ. ʻಮನೆಯಲ್ಲಿ ಅಪ್ಪ ಅಮ್ಮ ಮಾಡಿದ ಆಸ್ತಿ ಬೆನ್ನಿಗಿದ್ದರೆ ಹೀಗೆ ಹೇಳುವುದು ಸುಲಭ. ಹವ್ಯಾಸದ ಹೆಸರಿನಲ್ಲಿ ಮಹಾನ್‌ ಸಾಧನೆಗೈದವರಂತೆ ಹೇಳುತ್ತಿರುವ ನೀವು ಕಷ್ಟಪಟ್ಟು ದುಡಿಯುತ್ತಿರುವ ನಮ್ಮಂಥ ಸಾಮಾನ್ಯ ಜನರದ್ದೇನೂ ಸಾಧನೆಯೇ ಅಲ್ಲ ಎಂಬ ಭಾವನೆ ಬರುವಂತೆ ಮಾಡುತ್ತಿದ್ದೀರಿʼ ಎಂದಿದ್ದಾರೆ. ಈಕೆ ಒಮ್ಮೆ ತನ್ನ ಹಿರಿಯರು ಮಾಡಿಟ್ಟ ಆಸ್ತಿಯನ್ನು ತ್ಯಜಿಸಿ ಇದೇ ಮಾತು ಹೇಳಲಿ ನೋಡೋಣ ಎಂದೂ ಸವಾಲು ಹಾಕಿದ್ದಾರೆ! 

ಇದನ್ನೂ ಓದಿ: Viral News : ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹುಟ್ಟಿ, ಬೆಳೆದ ಮನೆ ಈಗ ತಮಿಳು ನಟನ ಸ್ವತ್ತು  

Exit mobile version