Site icon Vistara News

ವಿಸ್ತಾರ ಸಂಪಾದಕೀಯ: ರಾಜ್ಯದ ಪ್ರವಾಸಿ ತಾಣಗಳಲ್ಲಿ ರೋಪ್ ವೇ ಕನಸು ನನಸಾಗಲಿ, ಆದರೆ ಪರಿಸರಕ್ಕೆ ಧಕ್ಕೆಯಾಗದಿರಲಿ

Rope way

#image_title

ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತದಲ್ಲಿ (kodachadri) ರೋಪ್ ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ. ಉಳಿದ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಒಟ್ಟು 15 ರೋಪ್ ವೇ ಯೋಜನೆಗಳಿಗೆ ಅನುಮತಿ ಕೇಳಿದೆ. ಇದಕ್ಕೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ನೀಡಬೇಕಿದೆ. ಈ ಯೋಜನೆಗಳನ್ನು ಪರಿಸರ ಸೂಕ್ಷ್ಮತೆಯ ಜತೆಗೇ ಜಾರಿ ಮಾಡಿದರೆ ಇವುಗಳನ್ನು ಸ್ವಾಗತಿಸಬಹುದಾಗಿದೆ.

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಪರ್ವತಮಾಲಾ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯಡಿ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ರೋಪ್ ವೇ ನಿರ್ಮಿಸಬಹುದಾಗಿದೆ. ಕರ್ನಾಟಕದ ಹಲವಾರು ಬೆಟ್ಟಗಳು ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಮೈಸೂರಿನ ಚಾಮುಂಡಿಬೆಟ್ಟ, ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತ, ತುಮಕೂರಿನ ದೇವರಾಯನದುರ್ಗ, ಮಧುಗಿರಿ ಕೋಟೆ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಸಾಗರದ ಹಿನ್ನೀರು, ಉತ್ತರ ಕನ್ನಡದ ಯಾಣ, ಜೋಯಿಡಾ, ಕೊಡಗು ಜಿಲ್ಲೆಯ ಕುಮಾರಪರ್ವತ, ಬೆಳಗಾವಿ ಜಿಲ್ಲೆಯ ರಾಜ್ ಹೌಸ್ ಗಢ ಈ ಪ್ರದೇಶಗಳಲ್ಲಿ ರೋಪ್ ವೇ ನಿರ್ಮಿಸಬೇಕೆಂಬ ಕನಸು ಹಲವು ದಶಕಗಳಿಂದ ಕನಸಾಗಿಯೇ ಉಳಿದಿದೆ.

ಕೇವಲ ಯೋಜನೆ ರೂಪಿಸಿ ಪ್ರಸ್ತಾಪ ಕಳಿಸುವುದು ಮಾತ್ರವಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಈ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಉತ್ತರ ಭಾರತದಲ್ಲಿ ಅಸಾಧ್ಯ ಎನ್ನಲಾಗಿದ್ದ ಹಲವು ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಹೆದ್ದಾರಿಗಳ ಕಾಮಗಾರಿಗಳಲ್ಲಿ ತಮ್ಮ ಸಾಮರ್ಥ್ಯ ತೋರಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ರೋಪ್ ವೇ ಯೋಜನೆ ಜಾರಿ ಅವರಿಗೆ ಪ್ರಯಾಸದ ಕೆಲಸವೇನಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಡಬಲ್ ಎಂಜಿನ್ ಸರ್ಕಾರ ಎಂಬ ಘೋಷಣೆಯನ್ನು ಈ ಮೂಲಕ ವಾಸ್ತವ ರೂಪಕ್ಕೆ ತರಬೇಕು.

ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಹಲವು ತಾಣಗಳು ದುರ್ಗಮವಾಗಿದ್ದು, ಅದರಿಂದಲೇ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿವೆ. ಇವುಗಳಿಗೆ ರೋಪ್‌ವೇಯಂಥ ಆಕರ್ಷಣೆಗಳನ್ನು ಜೋಡಿಸಿ ಅಭಿವೃದ್ಧಿಗೊಳಿಸಿ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿದರೆ ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚುತ್ತದೆ. ರಾಜ್ಯದ ಖಜಾನೆಯೂ ಭರ್ತಿಯಾಗುತ್ತದೆ. ನಮ್ಮ ಪಕ್ಕದ ರಾಜ್ಯ ಕೇರಳ ಇದಕ್ಕೆ ಮಾದರಿಯೆನಿಸುವಂಥ ಕೆಲಸ ಮಾಡಿದೆ. ದೇಶ, ವಿದೇಶಗಳ ಹಲವಾರು ಪ್ರವಾಸಿ ತಾಣಗಳೂ ಇದಕ್ಕೆ ಸಾಕ್ಷಿಯಾಗಿವೆ. ಕೆಲವು ದೇಶಗಳು ಕೇವಲ ಪ್ರವಾಸಿ ತಾಣಗಳಿಂದಲೇ ಬದುಕು ಕಟ್ಟಿಕೊಂಡಿವೆ. ಸಿಂಗಾಪುರದಂಥ ದೇಶ ಯಾವ ಪ್ರಾಕೃತಿಕ ಸಂಪನ್ಮೂಲ ಇಲ್ಲದಿದ್ದರೂ ಪ್ರವಾಸಿ ಆಕರ್ಷಣೆಗಳಿಂದಲೇ ಶ್ರೀಮಂತವಾಗಿದೆ. ಕರ್ನಾಟಕದ್ದು ಮಾತ್ರ ‘ಒಡವೆ ಇದ್ದೂ ಬಡವೆ’ ಎಂಬ ಸ್ಥಿತಿ. ‘ಒಂದು ರಾಜ್ಯ, ಹಲವು ಜಗತ್ತುಗಳು’ ಎಂಬ ನಮ್ಮ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಅರ್ಥಪೂರ್ಣವಾಗಬೇಕಿದ್ದರೆ ಪ್ರವಾಸಿ ತಾಣಗಳ ಸುಸಜ್ಜಿತತೆಯೂ ಮುಖ್ಯ.

ಸಂಪಾದಕೀಯ : ವಿಸ್ತಾರ ಸಂಪಾದಕೀಯ: ವೈದ್ಯಕೀಯ ನಿರ್ಲಕ್ಷ್ಯಕ್ಕೂ ತಕ್ಕ ಶಿಕ್ಷೆ ಅಗತ್ಯ

ಪ್ರವಾಸೀ ಆಕರ್ಷಣೆಯ ತಾಣಗಳನ್ನು ಅಭಿವೃದ್ಧಿ ಮಾಡುವುದೆಂದರೆ ಏನು ಎಂಬ ಮಾತನ್ನೂ ಇದೇ ಹೊತ್ತಿನಲ್ಲಿ ಕೇಳಿಕೊಳ್ಳಬೇಕು. ಪಶ್ಚಿಮ ಘಟ್ಟಗಳಂತೆಯೇ ಬಯಲುಸೀಮೆಯ ಬೆಟ್ಟಗಳಲ್ಲೂ ನಾನಾ ಬಗೆಯ ಜೀವ ವೈವಿಧ್ಯ ಹಾಗೂ ಸಸ್ಯ ವೈವಿಧ್ಯ ಇವೆ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ವೈವಿಧ್ಯವನ್ನು ಬೈಪಾಸ್ ಮಾಡಿ ಕಾಮಗಾರಿಗಳನ್ನು ಜಾರಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಪರಿಸರ ಸೂಕ್ಷ್ಮ ತಾಣಗಳಲ್ಲಿ ಬೃಹತ್ ಕಾಮಗಾರಿಗಳಿಂದ ಸೃಷ್ಟಿಯಾಗುವ ಉದ್ಯೋಗ ಹಾಗೂ ವಹಿವಾಟನ್ನೇ ಆದರ್ಶವಾಗಿಟ್ಟುಕೊಂಡು ವನ್ಯಸಂಪತ್ತನ್ನು ನಶಿಸುವಂತೆ ಮಾಡುವುದು ಆದರ್ಶ ಅಭಿವೃದ್ಧಿಯಲ್ಲ. ಭವಿಷ್ಯದ ದೃಷ್ಟಿಯಿಂದ ಅದು ವಿನಾಶಕಾರಿಯೂ ಹೌದು. ಆದ್ದರಿಂದ ಇಂಥ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಪರಿಸರ ಪರಿಣಾಮ ಅಧ್ಯಯನ ಮಾಡಬೇಕು. ಇದಕ್ಕಾಗಿಯೇ ಪರಿಸರ ಇಲಾಖೆ, ಸಂರಕ್ಷಣಾ ಏಜೆನ್ಸಿಗಳೆಲ್ಲ ಇವೆ. ಪರಿಸರಸ್ನೇಹಿ ಅಭಿವೃದ್ಧಿಯನ್ನು ಖಚಿತಪಡಿಸಿಕೊಂಡು ರೋಪ್‌ವೇ ಕನಸು ನನಸು ಮಾಡಬೇಕು. ಪ್ರವಾಸಿ ತಾಣಗಳೂ ಅಭಿವೃದ್ಧಿಯಾಗಬೇಕು. ಅದರ ಜತೆ ಪರಿಸರ ರಕ್ಷಣೆಗೂ ಆದ್ಯತೆ ನೀಡಬೇಕು.

Exit mobile version