Site icon Vistara News

ವಿಮಾನದಲ್ಲಿ ಕಳೆದ ಬ್ಯಾಗು ಕಂಡಿದ್ದು 2,000 ಕಿ.ಮೀ ದೂರದಲ್ಲಿ!

Luggage At Airport

ಕುಟುಂಬದೊಂದಿಗೆ ನೀವು ಪ್ರವಾಸ ಹೋದಾಗ ಬ್ಯಾಗು ಕಳೆದುಹೋದರೆ ತೊಂದರೆಗೊಳಗಾಗುವುದು ಖಚಿತ ತಾನೆ? ಈ ರೀತಿ ತೊಂದರೆಗೆ ಸಿಕ್ಕವರು ಸಾವಿರಾರು ಮಂದಿ ಇದ್ದಾರು. ಈ ಸುದ್ದಿಯೂ ಈ ರೀತಿ ಬ್ಯಾಗು ಕಳೆದುಕೊಂಡವರಿಗೆ ಸೇರಿದ್ದು!

ಲಾರಾ ಸಿಂಪ್ಸನ್‌ ತನ್ನ ಕುಟುಂಬದ ಜತೆ ರಜೆಯ ಮಜಾ ಅನುಭವಿಸಲು ಮೆಡಿಟರೇನಿಯನ್‌ ಸಮುದ್ರದ ದ್ವೀಪವೊಂದಕ್ಕೆ ಹೋಗಿದ್ದರು. ದ್ವೀಪದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೇಲೆ ನೋಡುತ್ತಾರೆ ಅವರ ಲಗೇಜ್ ಒಂದೂ ಇವರೊಂದಿಗೆ ಬಂದಿರಲಿಲ್ಲ!

ಹುಡುಕುವಷ್ಟು ಹುಡುಕಿ, ಈ ಬಗ್ಗೆ ವಿಮಾನಯಾನ ಸಂಸ್ಥೆಗೆ ದೂರಿತ್ತು, ಬಂದ ಕೆಲಸದತ್ತ ಗಮನ ನೀಡಿದರು. ವಿಮಾನಯಾನ ಸಂಸ್ಥೆಯವರೂ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮ ನಿಯಮದನ್ವಯ, ಬ್ಯಾಗೇಜೊಂದು ತಲುಪಲು ತಡವಾದರೆ ದಿನವೊಂದಕ್ಕೆ ಎಷ್ಟು ಭತ್ಯೆ ಕೊಡಬೇಕೊ ಅಷ್ಟು ಕೊಟ್ಟು ಸುಮ್ಮನಾಯಿತು.

ಎರಡು ದಿನಗಳ ನಂತರ, ಲಾರಾಗೆ ಅವರ ಸೂಟ್‌ ಕೇಸ್‌ ಒಂದು ಕಂಡಿತ್ತು, ಅದೂ ಇಂಟರ್‌ನೆಟ್‌ನಲ್ಲಿ! ಅವರಿರುವ ಸ್ಥಳದಿಂದ ಸುಮಾರು ೨,೧೦೦ ಕಿ.ಮೀ. ದೂರದಲ್ಲಿ ಅದಿತ್ತು!! ಬ್ರಿಟನ್‌ನ ಮ್ಯಾಂಚೆಸ್ಟರ್‌ ವಿಮಾನ ನಿಲ್ದಾಣದಲ್ಲಿ ಎಲ್ಲೆಲ್ಲಿಂದಲೋ ಬಂದ ಬ್ಯಾಗ್‌ಗಳು ಬಿದ್ದು ಕೊಳೆಯುತ್ತಿವೆ ಎಂಬ ಸುದ್ದಿಯನ್ನು ಓದುತ್ತಿದ್ದಾಗ, ಅದರೊಂದಿಗಿದ್ದ ಫೋಟೋದಲ್ಲಿ ತಮ್ಮ ಸೂಟ್‌ಕೇಸ್‌ ಅನ್ನೂ ಅವರು ಗುರುತಿಸಿದರು. ತಕ್ಷಣ ವಿಮಾನಯಾನ ಸಂಸ್ಥೆಗೆ ಕರೆಮಾಡಿ ವಿಷಯ ತಿಳಿಸಿದರು. ಸಂಸ್ಥೆ ಆಗಲೂ ದೀರ್ಘ ನಿದ್ದೆಯಲ್ಲಿತ್ತು.

ವಿಮಾನ ಯಾನ ಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದಾಗ ತಿಳಿದಿದ್ದು, ಅವರು ಈ ವಿಷಯವನ್ನು ಗಂಭೀರವಾಗಿಯೇ ತೆಗೆದುಕೊಂಡೇ ಇರಲಿಲ್ಲ. ʼʼಇವರ ಲಗೇಜನ್ನು ನೀಡಲಾಗಿದೆʼʼ ಎಂದು ಷಾರಾ ಬರೆದು ಪ್ರಕರಣವನ್ನು ಸಂಸ್ಥೆ ಕ್ಲೋಸ್‌ ಕೂಡಾ ಮಾಡಿತ್ತು. ಆದರೆ ವಾಸ್ತವದಲ್ಲಿ ಹಾಗಾಗಿರಲೇ ಇಲ್ಲ.

ಏಳು ದಿನಗಳ ರಜೆಯನ್ನು ಈ ಕುಟುಂಬ ಆರು ದಿನಗಳು ನಮ್ಮ ವಸ್ತುಗಳಿಲ್ಲದೆಯೇ ಕಳೆದಿದೆ. ದಿನವೊಂದಕ್ಕೆ ಒಂದು ಬ್ಯಾಗ್‌ಗೆ ೨೫ ಯೂರೊ ಭತ್ಯೆಯನ್ನು ವಿಮಾನಯಾನ ಸಂಸ್ಥೆ ನೀಡಿದೆ. ʼʼಆದರೆ ಒಂದು ಈಜುಡುಗೆಗೆ ಇಲ್ಲಿ ೪೫ ಯೂರೊ ಬೆಲೆ. ಕೆಲವು ಅಗತ್ಯ ವಸ್ತುಗಳು ಇಲ್ಲಿ ಲಭ್ಯವೂ ಇಲ್ಲದಿದ್ದರಿಂದ, ಸಮೀಪದ ಊರಿಗೆ ತೆರಳಿ ನಾವು ಖರೀದಿಸಬೇಕಾಯಿತುʼʼ ಎಂದು ಆಕೆ ತಮಗಾದ ತೊಂದರೆಯನ್ನು ಲಾರಾ ಸಿಂಪ್ಸನ್‌ ವಿವರಿಸಿದ್ದಾರೆ.

“ನಾವು ವಿಮಾನ ಹತ್ತಿದ್ದು ಜೀನ್ಸ್‌ ಮತ್ತು ಜಾಕೆಟ್‌ನಂತಹ ಬೆಚ್ಚಗಿನ ಉಡುಪಿನಲ್ಲಿ. ಇಲ್ಲಿ ವಾತಾವರಣವೇ ಬೇರೆಯಾಗಿದೆ. ಇದಕ್ಕೆ ಪೂರಕವಾದ ಉಡುಪುಗಳು ನಮ್ಮಲ್ಲಿ ಯಾರ ಬಳಿಯೂ ಇರಲಿಲ್ಲ. ನಮ್ಮ ಮಕ್ಕಳಲ್ಲಿ ಒಬ್ಬನಿಗೆ ಬೇಕಾದ ಅಗತ್ಯ ಔಷಧಗಳು ನಮ್ಮ ಬ್ಯಾಗ್‌ನಲ್ಲಿದ್ದವು. ಆರೋಗ್ಯ ಸಮಸ್ಯೆ ತಲೆದೋರಿದರೆ ಆಸ್ಪತ್ರೆಗೆ ತೆರಳಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲʼʼ ಎಂದು ಲಾರಾ ಬೇಸರ ವ್ಯಕ್ತಪಡಿಸಿದರು.

ಪ್ರಯಾಣಿಕರು ತಮ್ಮ ಬ್ಯಾಗೇಜ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ತಮಗೆ ತಿಳಿದಿದೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಒಟ್ಟಾರೆ ಈ ರೀತಿ ವಿಮಾನಯಾನ ಕಂಪನಿ ಸೇವೆ ನೀಡಿದರೆ ರಜೆಗೆಂದು ತೆರಳಿದವರು ಒಂದು ರೀತಿಯ ಸಜೆ ಅನುಭವಿಸುವುದಂತೂ ಗ್ಯಾರಂಟಿ!

ಇದನ್ನೂ ಓದಿ |ನಿಸರ್ಗದ ಸಂಗೀತವನ್ನೇ ಬಳಸಿಕೊಂಡು ಪ್ರಚಾರ ನಡೆಸುತ್ತಿರುವ ಇಟಲಿ ರೆಸಾರ್ಟ್‌

Exit mobile version