Site icon Vistara News

Women’s Day 2023: ಪ್ರವಾಸ ಮಾಡುವ ಮಹಿಳೆಯರಿಗಾಗಿ ಇಲ್ಲಿವೆ ಟಾಪ್ 10 ಸ್ಥಳಗಳು

Womens Day 2023 Tourist spots

ಹೆಣ್ಣು ಕೂಡ ಗಂಡಿನಂತೆ ಸ್ವತಂತ್ರವಾಗಿ ಬದುಕುವ ಸಮಾಜದಲ್ಲಿ ಇಂದು ನಾವಿದ್ದೇವೆ. ಹೀಗಿರುವಾಗ ನೀವೊಬ್ಬರೇ ಅಥವಾ ನಿಮ್ಮ ಸ್ನೇಹಿತೆಯರೆಲ್ಲ ಸೇರಿಕೊಂಡು ಎಲ್ಲಾದರೂ ಲೇಡೀಸ್‌ ಟ್ರಿಪ್‌, ಗರ್ಲ್ಸ್‌ ಟ್ರಿಪ್‌ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಈ ಸ್ಥಳಗಳನ್ನೊಮ್ಮೆ ನೋಡಿ ಬನ್ನಿ.

ಪಾಂಡಿಚೆರಿ

ಗರ್ಲ್ಸ್‌ ಟ್ರಿಪ್‌ ಅಥವಾ ಲೇಡೀಸ್‌ ಟ್ರಿಪ್‌ ಎಂದಾಕ್ಷಣ ಮೊದಲು ಬರುವ ಹೆಸರೇ ಪಾಂಡಿಚೆರಿ. ಅತ್ಯಂತ ಸುಂದರವಾಗಿರುವ ಈ ನಗರದ ಫ್ರೆಂಚ್‌ ಶೈಲಿಯ ಕಾಲೋನಿಗಳು ಹೆಂಗಳೆಯರ ಮನಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ. ವರ್ಣಮಯವಾಗಿರುವ ಈ ಸ್ಥಳ ಫೋಟೋಶೂಟ್‌ಗೂ ಹೇಳಿ ಮಾಡಿಸಿರುವುದು.

ರಿಷಿಕೇಶ

ಪ್ರವಾಸ ಸ್ವಲ್ಪ ಧಾರ್ಮಿಕವಾಗಿಯೂ ಇರಲಿ ಎನ್ನುವವರು ಉತ್ತರಾಖಂಡದ ರಿಷಿಕೇಶಕ್ಕೆ ತೆರಳಬಹುದು. ಒಂದತ್ತ ಎತ್ತರದ ಹಿಮಾಲಯ ಪರ್ವತ ಶ್ರೇಣಿ ಇನ್ನೊಂದತ್ತ ಗಂಗಾ ಮಾತೆಯನ್ನು ಹೊಂದಿರುವ ಈ ನಗರ ದೈವೀಕ ಭಾವನೆಯನ್ನು ನಿಮ್ಮಲ್ಲಿ ತುಂಬುತ್ತದೆ. ಯೋಗ ಮತ್ತು ಧ್ಯಾನಕ್ಕೂ ಈ ನಗರ ಹೆಸರುವಾಸಿ.

ಉದಯ್‌ಪುರ

ಇತಿಹಾಸ, ಕಲೆ ಮತ್ತು ಅದ್ಧೂರಿತನವನ್ನು ಇಷ್ಟಪಡುವವರು ಉದಯ್‌ಪುರಕ್ಕೆ ಹೋಗಬಹುದು. ರಜಪೂತ ಶೈಲಿಯ ಈ ನಗರದಲ್ಲಿ ದೊಡ್ಡ ಅರಮನೆ, ಮಾನವ ನಿರ್ಮಿತ ಸರೋವರಗಳು ಸೇರಿದಂತೆ ಹಲವಾರು ರೀತಿಯ ವಿಶೇಷತೆಯಿದೆ. ಈ ನಗರ ನಿಮ್ಮನ್ನು ರಾಜರ ಕಾಲಕ್ಕೆ ಕರೆದೊಯ್ಯುವುದರಲ್ಲಿ ಅನುಮಾನವಿಲ್ಲ.

ಹಂಪಿ

ಇತಿಹಾಸ, ಐತಿಹಾಸಿಕ ಸ್ಮಾರಕಗಳೆಂದರೆ ಅದರಲ್ಲಿ ಮೊದಲು ನಿಲ್ಲುವುದು ನಮ್ಮ ಕರ್ನಾಟಕದ ಹಂಪಿ. ಈ ಸ್ಥಳದಲ್ಲಿ ಅಡ್ಡಾಡಿ ಬಂದರೆ ಮನಸ್ಸಿನ ದುಗುಡವೆಲ್ಲ ದೂರಾಗಿ ಒಂದು ರೀತಿಯ ಶಾಂತಿ, ನೆಮ್ಮದಿ ನಿಮ್ಮನ್ನಾವರಿಸಿಕೊಳ್ಳುತ್ತದೆ. ಹಿಂದಿನ ಕಾಲದ ಶಿಲ್ಪಿಗಳ ಬಗ್ಗೆ ಉದ್ಘಾರ ತೆಗೆಯುವಂತೆ ಮಾಡುತ್ತದೆ ನಮ್ಮ ಹಂಪಿ.

ರಾಧಾನಗರ ಬೀಚ್‌

ಅನೇಕ ಹೆಣ್ಣು ಮಕ್ಕಳಿಗೆ ಬೀಚ್‌ ಎಂದರೆ ಪಂಚ ಪ್ರಾಣವಾಗಿರುತ್ತದೆ. ಅಂಥವರಿಗೆ ಹೇಳಿ ಮಾಡಿಸಿರುವುದು ಈ ರಾಧಾನಗರ ಬೀಚ್‌. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿರುವ ರಾಧಾನಗರ ಏಷ್ಯಾದಲ್ಲಿಯೇ ಅತ್ಯಂತ ಸುಂದರವಾದ ಬೀಚ್‌ಗಳಲ್ಲಿ ಒಂದು. ಮಾಲ್ಡೀವ್ಸ್‌ ಬದಲು ಇಲ್ಲಿಗೇ ಪ್ರಯಾಣ ಬೆಳೆಸಿ ಎಂಜಾಯ್‌ ಮಾಡಬಹುದು.

ಮಡಿಕೇರಿ

ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿರುವ ಮತ್ತೊಂದು ತಾಣವೆಂದರೆ ಅದು ಮಡಿಕೇರಿ. ಬೆಟ್ಟ, ಗುಟ್ಟ, ಜಲಪಾತಗಳು, ಹೀಗೆ ಎಲ್ಲೆ ನೋಡಿದರೂ ಹಸಿರೇ ತುಂಬಿರುವ ತಾಣವದು. ನಿಸರ್ಗವನ್ನು ಇಷ್ಟಪಡುವವರು ಮಡಿಕೇರಿಗೆ ತೆರಳಿ ಖುಷಿಯಿಂದ ಕಾಲ ಕಳೆಯಬಹುದಾಗಿದೆ.

ಮೇಘಾಲಯ

ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮೇಘಾಲಯ ಹೆಣ್ಣು ಮಕ್ಕಳ ಪ್ರವಾಸಕ್ಕೆ ಸರಿಹೊಂದುವ ರಾಜ್ಯ. ಜಲಪಾತಗಳು, ಬೆಟ್ಟ, ಗುಡ್ಡಗಳಿಂದ ತುಂಬಿರುವ ರಾಜ್ಯವಿದು. ಇಲ್ಲಿನ ಉಮಿಯಂ ಸರೋವರ ಮತ್ತು ಮರೈ ಗುಹೆ ಪ್ರವಾಸಿಗರೆಲ್ಲರನ್ನು ಆಕರ್ಷಿಸುವಂತಹ ಸ್ಥಳಗಳಾಗಿವೆ.

ಮೈಸೂರು

ಮಹಿಳೆಯರ ಒಂದು ಅಥವಾ ಎರಡು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾದವೆಂದರೆ ಅದು ನಮ್ಮ ಮೈಸೂರು. ಅರಮನೆ, ಕೆ.ಆರ್‌.ಎಸ್‌, ಮೃಗಾಲಯ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಸ್ವಚ್ಛ ನಗರವೆಂಬ ಖ್ಯಾತಿ ಪಡೆದಿರವ ಮೈಸೂರಿನಲ್ಲಿ ಹೆಂಗಳೆಯರು ಅರಾಮವಾಗಿ ಸುತ್ತಾಡಬಹುದಾಗಿದೆ.

ಗೋಕರ್ಣ

ಗೋವಾ ಎಲ್ಲರ ಕನಸು. ಆದರೆ ಬರೀ ಹೆಣ್ಣು ಮಕ್ಕಳಿಗೆ ಅದು ಸುರಕ್ಷಿತ ಪ್ರವಾಸಿ ತಾಣವಲ್ಲ ಎನ್ನುವಂತವರು ಗೋಕರ್ಣದತ್ತ ಮುಖ ಮಾಡಬಹುದು. ದೇವಸ್ಥಾನದಲ್ಲಿ ದೇವರ ದರ್ಶನ, ಬೀಚ್‌ನ ನೀರಿನಲ್ಲಿ ಆಟ, ಮಾರ್ಕೆಟ್‌ನಲ್ಲಿ ಶಾಪಿಂಗ್‌ ಮಾಡಬಹುದು. ಹಲವಾರು ರೆಸಾರ್ಟ್‌, ರೆಸ್ಟೋರೆಂಟ್‌ಗಳು ಇಲ್ಲಿವೆ.

ಸಕಲೇಶಪುರ

ಕರ್ನಾಟಕದಲ್ಲಿ ಸಕಲೇಶಪುರ ಕೂಡ ಹೆಣ್ಣು ಮಕ್ಕಳ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ನಿಸರ್ಗವನ್ನು ಇಷ್ಟಪಡುವವರು ಈ ಸ್ಥಳದತ್ತ ಹೋಗಬಹುದು. ಬೆಟ್ಟ, ಗುಡ್ಡ, ಜಲಪಾತಗಳು ಇಲ್ಲಿ ಪ್ರಸಿದ್ಧ. ಈ ಸ್ಥಳಕ್ಕೆ ಹತ್ತಿರದಲ್ಲಿ ಇನ್ನೂ ಹಲವು ಪ್ರವಾಸಿ ತಾಣಗಳಿರುವುದರಿಂದ ಪ್ರವಾಸದ ಮಜ ಇನ್ನಷ್ಟು ಹಚ್ಚುತ್ತದೆ.

ಇದನ್ನೂ ಓದಿ: International Women’s Day: ಕೊರೊನಾ ಕಾಲದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು ಹೋರಾಡಿದ ಮಹಿಳೆಯರು

Exit mobile version