ಪ್ರವಾಸಿಗರಿಗಿನ್ನು ಕ್ರಿಕೆಟಿಗ ಯುವರಾಜ್ ಸಿಂಗ್ ಗೋವಾದ ಮನೆಯಲ್ಲಿರುವ ಅವಕಾಶ ಅಪರೂಪದ ಅವಕಾಶ ಸಿಗಲಿದೆ!
ಅರೆ ಇದೇನಿದು? ಯುವರಾಜ್ ಸಿಂಗ್ ಮನೆಯಲ್ಲಾ? ಎಂದು ನಿಮ್ಮ ಮಿದುಳನ್ನು ಗೊಂದಲಗಳ ಗೂಡಾಗಿಸಬೇಡಿ. ಹೌದು. ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಗೋವಾದಲ್ಲಿರುವ ತನ್ನ ಮನೆಯನ್ನು ಆಸಕ್ತ ಪ್ರವಾಸಿಗರಿಗೆ ಇದ್ದು ಹೋಗಲು ಅವಕಾಶ ಮಾಡಿಕೊಡಲಿದ್ದಾರೆ. ಅದು ಕೇವಲ ಎರಡು ದಿನಗಳಿಗಾಗಿ. ಆರು ಅದೃಷ್ಟಶಾಲಿಗಳು ಈ ಅವಕಾಶ ಪಡೆದುಕೊಳ್ಳಲಿದ್ದಾರೆ!
ಏರ್ ಬಿಎನ್ಬಿ ವೆಬ್ಸೈಟಿನಲ್ಲಿ ಯುವರಾಜ್ ಸಿಂಗ್ ಅವರೇ ಖುದ್ದಾಗಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಬರೆದುಕೊಂಡ ವಿವರಗಳು ಇಂತಿವೆ. “ನನ್ನ ಗೋವಾ ಮನೆ ನನಗೆ ಯಾವತ್ತಿಗೂ ಬಹಳ ವಿಶೇಷ. ನನ್ನ ಕೆಲಸ ನನ್ನನ್ನು ಜಗತ್ತಿನಾದ್ಯಂತ ಸುತ್ತಾಡಿಸಿದರೂ, ಈ ಮನೆ ಮಾತ್ರ ನನ್ನ ಎಲ್ಲ ಒತ್ತಡಗಳನ್ನೂ ಮರೆತು ಇರಬಹುದಾದ ಜಾಗ. ಇಲ್ಲಿ ನಾನು, ನನ್ನ ಹೆಂಡತಿ ಬಂದು ಕೆಲಕಾಲ ಎಲ್ಲ ಮರೆತು, ನಿರಾಳವಾಗಿ ಇರಬಯಸುತ್ತೇವೆ. ನನ್ನ ಕುಟುಂಬ ಗೆಳೆಯರು ಎಲ್ಲರೂ ಇಲ್ಲಿ ಜೊತೆಯಾಗಿ ಸೇರುವ ಜಾಗ ಇದು. ಈಗ ನಾನು ಈ ನನ್ನ ಮನೆಯನ್ನು ಅದೃಷ್ಟಶಾಲಿ ಆರು ಮಂದಿ ಪ್ರವಾಸಿಗರ ಗುಂಪಿಗೆ ಉಳಿದುಕೊಂಡು ಹೋಗಲು ನೀಡಬಯಸಿದ್ದು, ಆಸಕ್ತರು ಬುಕ್ ಮಾಡಬಹುದು” ಎಂದು ಬರೆದುಕೊಂಡಿದ್ದಾರೆ.
ಕಾಸಾ ಸಿಂಗ್ ಹೆಸರಿನ ಈ ವಿಲ್ಲಾದಲ್ಲಿ ಇರಲು ಅವಕಾಶ ಗಿಟ್ಟಿಸಿಕೊಂಡ ಆರು ಅದೃಷ್ಟಶಾಲಿಗಳಿಗೆ ಅತ್ಯದ್ಭುತ ದೃಶ್ಯಗಳ ರಸದೌತಣ ಈ ಮನೆಯಲ್ಲೇ ಸಿಗಲಿದೆ. ಬೆಟ್ಟದ ಮೇಲಿರುವ ಈ ಮನೆಯಿಂದ ಗೋವಾದ ಸಮುದ್ರತೀರದ ದೃಶ್ಯ ಮನಮೋಹಕವಾಗಿ ಕಾಣುತ್ತದೆಯಂತೆ. ಗೋವಾದ ಅತ್ಯದ್ಭುತ ಸೂರ್ಯಾಸ್ತವೂ ಮನೆಯಿಂದಲೇ ನೋಡಿ ಸವಿಯಬಹುದು. ಇನ್ನೊಂದು ಬದಿಯಲ್ಲಿ ಗೋವಾದ ಹಳ್ಳಿಹಳ್ಳಿಗಳೂ ಇಲ್ಲಿಂದ ಅದ್ಭುತವಾಗಿ ಕಾಣಿಸುತ್ತದೆಯಂತೆ. ಒಟ್ಟಾರೆ, ಇಡೀ ಗೋವಾವನ್ನು ಈ ಮನೆಯ ಕಿಟಕಿಯಂಚಿನಿಂದಲೇ ನೋಡುವ ಸೌಭಾಗ್ಯ ಈ ಅದೃಷ್ಟಶಾಲಿಗಳಿಗೆ ಸಿಗಲಿದೆ!
ಮೂರು ಬೆಡ್ರೂಂಗಳ ಈ ಐಷಾರಾಮಿ ವಿಲ್ಲಾದಲ್ಲಿ ಚೆಂದನೆಯ ಹೂದೋಟ, ಈಜುಕೊಳ, ಬಾರ್ ಮತ್ತಿತರ ಸಾಕಷ್ಟು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಆರಾಮವಾಗಿ ಕಾಲುಚಾಚಿ ಕೂತು ಲೋಕದ ಗೊಡವೆಯನ್ನೇ ಮರೆತು ಇಲ್ಲಿ ಹಾಯಾಗಿ ಇಲ್ಲಿ ಪ್ರಶಾಂತವಾಗಿ ಸಮಯ ಕಳೆಯಬಹುದಾಗಿದೆ. ಗೋವಾದ ಸಾಂಪ್ರದಾಯಿಕ ಅಡುಗೆಗಳೂ ಈ ಮನೆಯ ಖಾಸಗಿ ಅಡುಗೆಯವರು ವಿಶೇಷವಾಗಿ ಮಾಡಿಕೊಡಲಿದ್ದು. ಒಟ್ಟಾರೆಯಾಗಿ ಇಲ್ಲಿರಲು ಅವಕಾಶ ಪಡೆಯುವ ಮಂದಿಗೆ ಯುವರಾಜ್ ಸಿಂಗ್ ಮನೆಯಲ್ಲಿ ಕೂತು ಅವರಂತೆ ಎಲ್ಲವನ್ನೂ ಅನುಭವಿಸುವ ಅಪರೂಪದ ಅವಕಾಶ ಇಲ್ಲಿ ಸಿಗಲಿದೆ.
ಇದನ್ನೂ ಓದಿ | Vatsal Nahata | 600 ಇ-ಮೇಲ್, 80 ಕರೆ ಮಾಡಿ ದೆಹಲಿಯ ಯುವಕ ವಿಶ್ವ ಬ್ಯಾಂಕ್ನಲ್ಲಿ ಉದ್ಯೋಗ ಪಡೆದಿದ್ದು ಹೇಗೆ?
ಅಷ್ಟೇ ಅಲ್ಲ, ಈ ಮನೆಯ ತುಂಬ ಯುವರಾಜ್ ಸಿಂಗ್ ಅವರ ಕುಟುಂಬದ ನೂರಾರು ಫೋಟೋಗಳು ಗೋಡೆಯಲ್ಲಿ ನೇತಾಡಿಸಲಾಗಿದ್ದು, ಪ್ರತಿಯೊಂದನ್ನೂ ಕಣ್ತುಂಬಿಕೊಳ್ಳಬಹುದಾಗಿದೆ. ಇವರ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಫೋಟೋಗಳೂ ಸೇರಿದಂತೆ ಕ್ರಿಕೆಟ್ ಬದುಕಿನ ಅತ್ಯಮೂಲ್ಯ ಗಳಿಗೆಗಳ ಫೋಟೋಗಳು ಇಲ್ಲಿವೆ.
ಇಲ್ಲಿರಲು ದರವನ್ನೂ ನಿಗದಿಪಡಿಸಲಾಗಿದ್ದು ಇದು ರಾತ್ರಿಯೊಂದಕ್ಕೆ ೧,೨೧೨ ರೂಪಾಯಿ (೧೫ ಡಾಲರ್) ಗಳಾಗಿವೆ. ಎರಡು ೧೨ ಸಂಖ್ಯೆಗಳಿರುವ ಈ ಬೆಲೆಯನ್ನು ಯುವರಾಜ್ ಸಿಂಗ್ ಅವರ ಹುಟ್ಟುಹಬ್ಬದ ದಿನಾಂಕ ಹಾಗೂ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ನ ಜೆರ್ಸಿ ನಂಬರ್ ಆಗಿರುವುದು ವಿಶೇಷ. ಈ ಬುಕಿಂಗ್ ಕೇವಲ ಅಕ್ಟೋಬರ್ ೧೪ರಿಂದ ೧೬ರವರೆಗೆ ಮಾತ್ರ ಲಭ್ಯವಿದೆ. ಬುಕಿಂಗ್ ಇದೇ ಸೆಪ್ಟೆಂಬರ್ ೨೮ರಿಂದ airbnb.co.inನಲ್ಲಿ ತೆರೆಯಲಿದೆ.
ಈ ಅವಕಾಶದ ಜೊತೆಗೆ ಇಲ್ಲಿರಲು ಆಯ್ಕೆಯಾದ ಮಂದಿಗೆ, ಸ್ವತಃ ಯುವರಾಜ್ ಸಿಂಗ್ ಅವರಿಂದಲೇ ವರ್ಚುವಲ್ ಸ್ವಾಗತ ಸಿಗಲಿದ್ದು, ಯುವರಾಜ್ ಸಿಂಗ್ ಅವರ ಗೋವಾದ ಇಷ್ಟದ ಜಾಗಗಳ ಕುರಿತ ವಿವರಗಳಿರುವ ಸ್ವಾಗತ ನೋಟ್ ಕೂಡಾ ಸಿಗಲಿದೆ. ಮನೆಯಲ್ಲಿ ಯುವರಾಜ್ ಸಿಂಗ್ ಅವರ ಕ್ರಿಕೆಟ್ ಬದುಕಿನ ಸುಪ್ರಸಿದ್ಧ ಗಳಿಗೆಗಳನ್ನೂ ತೋರಿಸಲಿದ್ದಾರೆ. ಇಲ್ಲಿನ ದಿವಾರ್ ದ್ವೀಪಕ್ಕೆ ಇ-ಬೈಕ್ನಲ್ಲಿ ಪಯಣ, ಯುವರಾಜ್ ಸಿಂಗ್ ಅವರ ಫೇವರಿಟ್ ಖಾದ್ಯಗಳಿರುವ ಊಟ ಹೀಗೆ ಎಲ್ಲವುಗಳನ್ನೂ ಸವಿಯುವ ಅವಕಾಶ ಈ ಅದೃಷ್ಟಶಾಲಿಗಳಿಗೆ ಸಿಗಲಿದೆ. ಕೊನೆಯಲ್ಲಿ ಮರಳುವ ಸಂದರ್ಭ ಸ್ಮರಣಿಕೆಯೊಂದನ್ನೂ ಗಿಫ್ಟ್ ಆಗಿ ನೀಡಲಾಗುತ್ತದೆ. ಭಾರತೀಯರು ಅಥವಾ ವಿದೇಶಿಯರು ಸೇರಿದಂತೆ ಎಲ್ಲರಿಗೂ ಇದಕ್ಕೆ ಅರ್ಜಿ ಹಾಕುವ ಮುಕ್ತ ಅವಕಾಶವಿದೆ.
ಇದನ್ನೂ ಓದಿ | King Charles | ಕೆಂಪು ಪೆಟ್ಟಿಗೆಯ ಕಡತಗಳಿಗೆ ಸಹಿ ಮಾಡಲು ರೆಡಿ; ಬ್ರಿಟನ್ ರಾಜನ ಹೊಸ ಫೋಟೋ ವೈರಲ್