Site icon Vistara News

Icon of the Seas: ಐಕಾನ್‌ ಆಫ್‌ ದಿ ಸೀಸ್! ಟೈಟಾನಿಕ್‌ಗಿಂತ ಐದು ಪಟ್ಟು ದೊಡ್ಡದಾದ ಹಡಗಿನಲ್ಲಿ ನೀವೀಗ ಪ್ರಯಾಣಿಸಬಹುದು!

icon of the seas ship

ನಿಮ್ಮಲ್ಲಿ ಸಿಕ್ಕಾಪಟ್ಟೆ ದುಡ್ಡಿದೆಯಾ? ಅದ್ಭುತವಾದೊಂದು ಪ್ರವಾಸ ಮಾಡಬೇಕು ಎಂಬ ಬಯಕೆಯಿದೆಯೇ? ಈವರೆಗೆ ಯಾರೂ ಮಾಡದಂತಹ ವಿಶೇಷವಾದ ಪ್ರವಾಸ (travel guide) ಇದಾಗಿರಬೇಕು ಎಂಬ ಆಸೆ ನಿಮ್ಮಲ್ಲಿದೆಯಾ? ಈ ಪ್ರವಾಸ ಆದಷ್ಟೂ ಅದ್ದೂರಿಯದ್ದಾಗಿರುವ ಜೊತೆಗೆ ಸಕಲ ವೈಭೋಗವೂ ಇದರಲ್ಲಿರಬೇಕು ಎಂಬ ಕನಸಿದೆಯಾ? ದುಡ್ಡು ಎಷ್ಟಾದರೂ ಖರ್ಚಾಗಲಿ, ಪ್ರೀತಿಪಾತ್ರರ ಜೊತೆಗೆ ಜೀವಮಾನದಲ್ಲೇ ಮರೆಯಲಾಗದಂತಹ ಘಳಿಗೆ ಕಳೆಯಬೇಕು ಎಂಬ ಆಸೆಯೇ? ಹಾಗಾದರೆ ನಿಮಗೆ ಪರ್ಫೆಕ್ಟ್‌ ಪ್ರವಾಸವಿದು. ಯಾಕೆಂದರೆ ಐಕಾನ್‌ ಆಫ್‌ ದಿ ಸೀಸ್‌ (icon of the seas cruise) ಎಂಬ ಅತ್ಯಂತ ಅದ್ದೂರಿ ವೆಚ್ಚದ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರೂಸ್‌ ಶಿಪ್‌ ಹೆಗ್ಗಳಿಕೆಯ ಹಡಗು ಇದೀಗ ವಿಶ್ವ ಪ್ರವಾಸೋದ್ಯಮದಲ್ಲಿ ಪ್ರವೇಶ ಪಡೆಯಲು ಸಜ್ಜಾಗಿದ್ದು, ಮುಂದಿನ ವರ್ಷಾರಂಭದಿಂದ ಸೇವೆ ಆರಂಭಿಸಲಿದೆ. ʻಐಕಾನ್‌ ಆಫ್‌ ದಿ ಸೀಸ್‌ʼ ಎಂಬ ಈ ಕ್ರೂಸ್‌ ಶಿಪ್‌ ವಿಶ್ವದಲ್ಲೇ ಅತ್ಯಂತ ಐಷಾರಾಮಿ ದುಬಾರಿ ಹಡಗಾಗಿದ್ದು, ಝಗಮಗಿಸುವ ಎಲ್ಲ ಸೌಲಭ್ಯಗಳೂ ಲಭ್ಯವಿರುವ ಸುಸಜ್ಜಿತ ಹಡಗಾಗಿದೆ. ಈ ಐಷಾರಾಮಿ ಹಡಗಿನ ಚಿತ್ರಗಳು, ವಿಡಿಯೋಗಳು ಇದೀಗ ವೈರಲ್‌ (viral story) ಆಗತೊಡಗಿವೆ.

ಈ ಹಡಗು 1200 ಅಡಿ ಅಂದರೆ 366 ಮೀಟರುಗಳಷ್ಟು ಉದ್ದವಿದ್ದು ಸುಮಾರು 5610 ಮಂದಿ ಪ್ರಯಾಣಿಕರನ್ನು ಒಮ್ಮೆ ಕರೆದೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ, ಇದು 2350 ಮಂದಿ ಹಡಗಿನೊಳಗೆ ಕೆಲಸ ಮಾಡುವ ಕ್ರೂಸ್‌ ಸದಸ್ಯರನ್ನೂ ಹೊಂದಿದ್ದು, ಅದನ್ನು ಹೊರತುಪಡಿಸಿ, ಈ 5610 ಮಂದಿ ಇದರಲ್ಲಿ ಪಯಣಿಸಬಹುದಾಗಿದೆ! ಒಂದು ದಿನದ ಪಯಣದಿಂದ ಆರಂಭಗೊಂಡು ಏಳು ರಾತ್ರಿಗಳ ಪಯಣದವರೆಗೆ ಬಗೆಬಗೆಯ ಟ್ರಾವೆಲ್‌ ಪ್ಯಾಕೇಜುಗಳೂ ಇದರಲ್ಲಿ ಲಭ್ಯವಿದದೆ. ಪಯಣ ಫ್ಲೋರಿಡಾದ ಮಿಯಾಮಿಯಿಂದ ಆರಂಭವಾಗಲಿದೆ. ಒಂದು ದಿನದ ಪಯಣಕ್ಕೆ ಒಬ್ಬ ಪಯಣಿಗನ ದರ ಕಡಿಮೆಯೆಂದರೆ 1876 ಯುಎಸ್‌ ಡಾಲರ್‌ಗಳು ಅಂದರೆ ಸುಮಾರು 1,55,145 ರೂಪಾಯಿಗಳಿಂದ 2497 ಯುಎಸ್‌ ಡಾಲರ್‌ಗಳು ಅಂದರೆ 2,05,003 ರೂಪಾಯಿಗಳವರೆಗೂ ಇರಲಿದೆ. ಇದು ಒಬ್ಬನ ಪಯಣದ ವೆಚ್ಚ. ಈ ವೆಚ್ಚವೂ ಕೂಡಾ, ಆಯಾ ಕಾಲಕ್ಕನುಗುಣವಾಗಿ ಬದಲಾಗಲಿದೆ.

ಇಷ್ಟು ದರ ನೀಡಿ ಈ ಹಡಗೇರಿದರೆ, ಯಾವೆಲ್ಲ ಸೌಲಭ್ಯಗಳನ್ನು ಅನುಭವಿಸಬಹುದು ಎಂಬುದು ಗೊತ್ತೇ? ಇಲ್ಲಿ ಇಲ್ಲದ ಸೌಲಭ್ಯವೇ ಇಲ್ಲ. ಈ ಹಡಗಿನಲ್ಲಿ ಅತ್ಯಂತ ದೊಡ್ಡ ವಾಟರ್‌ ಪಾರ್ಕ್‌ ಇದೆಯಂತೆ. ಆ ವಾಟರ್‌ ಪಾರ್ಕಿನಲ್ಲಿ ಅತ್ಯಂತ ಎತ್ತರದ ವಾಟರ್‌ ಸ್ಲೈಡ್‌ ಕೂಡಾ ಇದೆಯಂತೆ. ಸಮುದ್ರದಲ್ಲಿ ಹಡಗಿನಲ್ಲಿ ಪಯಣಿಸುತ್ತಾ ಹಡಗಿನೊಳಗಿನ ವಾಟರ್‌ಪಾರ್ಕಿನಲ್ಲಿ ಆಡುವುದು ಎಂದರೆ ತಮಾಷೆಯೇ! ಕೇಳಿಯೇ ರೋಮಾಂಚನವಾಗದೆ ಇದ್ದೀತೇ! ಇವಿಷ್ಟೇ ಅಲ್ಲ, ಎಲ್ಲ ಬಗೆಯ ಮೋಜಿನ ಆಟಗಳೂ ಇದರೊಳಗೆ ಇರಲಿವೆ. ಏಳು ಈಜುಕೊಳಗಳೂ, ಒಂಬತ್ತು ಕಾರಂಜಿಗಳೂ ಕೂಡಾ ಇದರ ಪ್ರಮುಖ ಆಕರ್ಷಣೆಯಾಗಿದೆ. ವಾಟರ್‌ ಸ್ಪೋರ್ಟ್ಸ್‌ ಇಷ್ಟಪಡದ ಮಂದಿಗೆ ನಾನಾ ಆಟಗಳ ಇತರ ಆಯ್ಕೆಗಳೂ ಇದರಲ್ಲಿರಲಿದ್ದು, ಈ ಹಡಗಿನ 19 ಮಹಡಿಗಳಲ್ಲಿ 20 ಬಗೆಯ ಫುಡ್‌ ಜಾಯಿಂಟ್‌ಗಳೂ ಇರಲಿವೆ. ರಿಲ್ಯಾಕ್ಸ್‌ ಮಾಡಲಿಚ್ಛಿಸುವವರಿಗೆ ಸ್ಪಾ, ಮಸಾಜ್‌ ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳಿಗೂ ಐಷಾರಾಮಿ ಲೇಪನವೂ ಇರಲಿದೆ.

ಈ ಕ್ರೂಸ್‌ ಶಿಪ್‌ನ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಈಗಾಗಲೇ ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಗೂ ಈಡಾಗಿವೆ. ಕೆಲವರು ಈ ಹಡಗಿನ ಚಿತ್ರವನ್ನು ನೋಡಿ ಸಿಲೋ ಸೀರೀಸ್‌ನ ಡಿಸ್ಟೋಪಿಯನ್‌ ಅಂಡರ್‌ಗ್ರೌಂಡ್‌ ವರ್ಲ್ಡ್‌ನ ಕ್ಯಾಂಡಿ ಕ್ರಷ್‌ ವರ್ಷನ್‌ನ ಹಾಗೆ ಕಾಣಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರಿಗೆ ಈ ಹಡಗು ಟೈಟಾನಿಕ್‌ (titanic) ನೆನಪನ್ನು ತಂದಿದ್ದು, ಜೇಮ್ಸ್‌ ಕ್ಯಾಮರೂನ್‌ ಮುಂದಿನ ವರ್ಷ ಟೈಟಾನಿಕ್‌ ಟ್ರಯಾಲಜಿ ಮಾಡಬಹುದು ಎಂದಿದ್ದಾರೆ. ಅಂದ ಹಾಗೆ ಇದು ರಾಯಲ್‌ ಕೆರಿಬಿಯನ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ತಯಾರಿಕೆ. ಫಿನ್ಲೆಂಡ್‌ನ ತುರ್ಕು ಶಿಪ್‌ಯಾರ್ಡ್‌ನಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಜಗತ್ತಿನ ಈಗಿರುವ ಅತಿ ದೊಡ್ಡ ವಿಲಾಸಿ ನೌಕೆಯನ್ನು ತಯಾರಿಸಿದ ಖ್ಯಾತಿಯೂ ಈ ಕಂಪನಿಗೇ ಇದೆ. ಅದರ ಹೆಸರು ʼವಂಡರ್‌ ಆಫ್‌ ದಿ ಸೀಸ್‌ʼ.

ಇದನ್ನೂ ಓದಿ: Missing Titanic Sub: ಟೈಟಾನಿಕ್‌ ಮುಳುಗಿದ ತಾಣದಲ್ಲೇ ಇನ್ನೊಂದು ದುರಂತ, ನೋಡಲು ಹೋದ ಸಬ್‌ಮರ್ಸಿಬಲ್‌ ಸ್ಫೋಟ

Exit mobile version