ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ ʻಬ್ರಹ್ಮಾಸ್ತ್ರ, ಪಾರ್ಟ್ ಒನ್- ಶಿವʼ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಸೆಪ್ಟೆಂಬರ್ 9ಕ್ಕೆ ಬಿಡುಗಡೆಯಾಗಲು ಸಜ್ಜಾಗಿರುವ ಆಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಡಿಂಪಲ್ ಕಪಾಡಿಯಾ, ಮೌನಿ ರಾಯ್ ಅವರಂತಹ ದಿಗ್ಗಜರ ತಾರಾಗಣವೂ ಇದೆ.
ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ದೇಶದೆಲ್ಲೆಡೆ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ, ಟ್ರೈಲರ್‌ನಲ್ಲಿ ತನ್ನ ಅದ್ದೂರಿತನದಿಂದ ಹಾಗೂ ಬೆರಗುಗೊಳಿಸುವ ಮೇಕಿಂಗ್‌ನಿಂದ ಕುತೂಹಲ ಹುಟ್ಟು ಹಾಕಿದ್ದು, ಈ ಚಿತ್ರದ ಬಗೆಗಿದ್ದ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ಬೇಕಾದಂಥ ಮೇಕಿಂಗ್ ತೋರಿಸಿದೆ.
ಮೂರು ನಿಮಿಷದ ಟ್ರೈಲರ್ ತುಂಬ ಸಾಕಷ್ಟು ಮೈ ನವಿರೇಳಿಸುವ ದೃಶ್ಯಗಳಿದ್ದು, ಬೆರಗುಗೊಳಿಸುವ ವಿಎಫ್‌ಎಕ್ಸ್ ಕೂಡಾ ಇದೆ. ಬಾಲಿವುಡ್‌ನಲ್ಲಿ ಈವರೆಗೆ ತೆರೆ ಕಾಣುತ್ತಿದ್ದ ಪ್ರೇಮ ಕಥಾನಕಗಳಿಂದ ಈ ಚಿತ್ರ ಭಿನ್ನ ಲೋಕವನ್ನು ಪರಿಚಯಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿರುವುದು, ಸಿನಿಪ್ರಿಯರಲ್ಲಿ ಕುತೂಹಲ ಉಳಿಸಿಕೊಂಡಿದೆ. ಇಂಥದ್ದೊಂದು ಕಥಾಹಂದರ ಅದ್ಭುತ ಮೇಕಿಂಗ್ ಜೊತೆಗೆ ಹೊರಬರುತ್ತಿರುವುದು ಬಾಲಿವುಡ್ ಪಾಲಿಗೆ ಹೊಸತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮಿತಾಭ್ ಬಚ್ಚನ್ ಧ್ವನಿಯಿಂದ ಟ್ರೈಲರ್ ಆರಂಭವಾಗುತ್ತದೆ. ʼʼಪುರಾತನ ಕಾಲದಿಂದಲೂ ಜಲ, ವಾಯು ಅಗ್ನಿಗಳಂಥ ಪಂಚತತ್ವಗಳ ಶಕ್ತಿಗಳು ಅಸ್ತ್ರಗಳಲ್ಲಿದ್ದು, ಈ ಅಸ್ತ್ರಗಳೆಲ್ಲವುಗಳ ಮುಖ್ಯ ದೇವರ ಕಥೆ ಇದಾಗಿದೆ. ಅದುವೇ ಬ್ರಹ್ಮಾಸ್ತ್ರ” ಎಂಬ ಪೀಠಿಕೆಯಿದೆ. ಚಿತ್ರದಲ್ಲೊಬ್ಬ ಯುವಕ ಶಿವ, ಆತನಿಗೊಬ್ಬಳು ಪ್ರೇಯಸಿ, ಈಶಾ ನಡುವಿನ ಪ್ರೇಮ ಕಥಾನಕ ಹಾಗೂ ಈ ಶಿವ ಹಾಗೂ ಬ್ರಹ್ಮಾಸ್ತ್ರದ ನಡುವಿನ ಸಂಬಂಧ ಕಥೆಯ ಎಳೆಯಾಗಿದೆ. ಈಗಷ್ಟೇ ಪತಿ ಪತ್ನಿಯರಾಗಿ ಬಡ್ತಿ ಹೊಂದಿದ ರಣಬೀರ್ ಆಲಿಯಾ ಜೋಡಿ ತೆರೆ ಮೇಲೂ ತಮ್ಮ ಲವ್ ಕೆಮೆಸ್ಟ್ರಿ ಮೂಲಕ ಸಿನಿರಸಿಕರನ್ನು ಮೋಡಿ ಮಾಡಲಿದೆ.
ಚಿತ್ರದಲ್ಲಿ ಶಾರುಖ್ ಖಾನ್ ಕೂಡ ವಿಶೇಷ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸುಮಾರು 20 ನಿಮಿಷಗಳ ಪಾತ್ರ ಇದಾಗಿದ್ದು, ವಿಜ್ಞಾನಿಯ ಪಾತ್ರದಲ್ಲಿ ಅವರು ಮಿಂಚಲಿದ್ದಾರೆ. ಇದು ಚಿತ್ರದ ನಿರ್ಣಾಯಕ ಪಾತ್ರವೂ ಆಗಿದೆ ಎನ್ನಲಾಗಿದೆ.
ವೇಕ್ ಅಪ್ ಸಿದ್, ಯೇ ಜವಾನಿ ಹೇ ದಿವಾನಿಯಂತಹ ಚಿತ್ರಗಳನ್ನು ನೀಡಿರುವ ನಿರ್ದೇಶಕ ಅಯಾಯ್ ಮುಖರ್ಜಿ ಪಾಲಿಗೆ ಇದು ಕನಸು ನನಸಾದ ಕ್ಷಣ ಎಂದು ಅವರು ಭಾವುಕರಾಗಿದ್ದಾರೆ. ಇದು ನನ್ನ ಕನಸಿನ ಕೂಸು. ಈ ಚಿತ್ರ ಖಂಡಿತ ನಮ್ಮ ದೇಶದ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣಗಳನ್ನು ದೊರಕಿಸಿಕೊಡಲಿದೆ. ನಮ್ಮ ಶ್ರೀಮಂತ ಸಂಸ್ಕೃತಿಯ ಬೇರುಗಳ ಆಳಕ್ಕಿಳಿವ ಕಥಾ ಹಂದರವಿರುವ ಚಿತ್ರ ಇದಾಗಿದ್ದು, ಕಲ್ಪನಾ ಲೋಕಕ್ಕೆ ಸಿನಿಮಾಲೋಕದ ಮೂಲಕ ಕೊಂಡೊಯ್ಯಬಲ್ಲ ಶಕ್ತಿಯನ್ನು ನೀಡಲಿದೆ. ಕೇವಲ ಹಿಂದಿನ ಬೇರಷ್ಟೇ ಅಲ್ಲದೆ, ಆಧುನಿಕ ಜಗತ್ತಿನ ತಂತ್ರಜ್ಞಾನ, ವಿಜ್ಞಾನ ಲೋಕದ ಸಂಬಂಧ ಈ ಚಿತ್ರದಲ್ಲಿದ್ದು, ಆ ಮೂಲಕ ಪ್ರೇಕ್ಷಕರನ್ನು ಅನೂಹ್ಯ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ತಾಂತ್ರಿಕವಾಗಿಯೂ ಅತ್ಯಂತ ಶ್ರೀಮಂತವಾಗಿ ಚಿತ್ರವನ್ನು ಮಾಡಲಾಗಿದೆ ಎಂದಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ಈಗಾಗಲೇ ಟ್ರೈಲರ್ ವೀಕ್ಷಿಸಿದ ಮಂದಿ ಪ್ರತಿಕ್ರಿಯೆಗಳ ಸುರಿಮಳೆ ಸುರಿಸುತ್ತಿದ್ದು, ಬಾಲಿವುಡ್ ಕೊನೆಗೂ ತನ್ನ ಪ್ರೇಮ ಕಥಾನಕಗಳಿಂದ ಹೊರ ಬಂದು ಹೊಸತೊಂದು ಪ್ರಯತ್ನಕ್ಕೆ ಕೈಹಾಕಿದ್ದು ಸಂತಸ ತಂದಿದೆ ಎಂದಿದ್ದಾರೆ.