Site icon Vistara News

Humanity | ಡೆಲಿವರಿ ಬಾಯ್‌ ಆದ ಪುಟ್ಟ ಬಾಲಕ, ಆಕ್ಷೇಪಗಳನ್ನು ಲೆಕ್ಕಿಸದೆ ಬೆನ್ನಿಗೆ ನಿಂತ ಜೊಮ್ಯಾಟೊ

ನವದೆಹಲಿ: ಇತ್ತೀಚೆಗೆ ಒಬ್ಬ ಪುಟ್ಟ ಬಾಲಕ ಜೊಮ್ಯಾಟೊ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಹುಡುಗನ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ ರಾಹುಲ್ ಮಿತ್ತಲ್ ಏಳು ವರ್ಷದ ಬಾಲಕನ ಕೈಯಲ್ಲಿ ಈ ರೀತಿ ಡೆಲಿವರಿ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಬಾಲ ಕಾರ್ಮಿಕತನದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ನಿಜವೆಂದರೆ, ಜೊಮ್ಯಾಟೊ ಕಂಪನಿಗೆ ಈ ವಿಚಾರ ತಿಳಿದಿರಲಿಲ್ಲ. ರಾಹುಲ್‌ ಮಿತ್ತಲ್‌ ಅವರಿಗೆ ಕಂಪನಿ ಅತ್ಯಂತ ತಾಳ್ಮೆಯಿಂದ ಉತ್ತರಿಸಿದೆ. ಝೊಮ್ಯಾಟೊ ಕಂಪನಿ ಟ್ವೀಟ್‌ಗೆ ಉತ್ತರಿಸಿ “ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಾವು ಇಂಟರ್ನೆಟ್ ಸಮುದಾಯಕ್ಕೆ ಕೃತಜ್ಞರಾಗಿರುತ್ತೇವೆ” ಎಂದಿದೆ. ಆದರೆ, ಯಾರಿವನು ಹುಡುಗ ಅಂತ ಬೆನ್ನು ಬಿದ್ದಾಗ ಜೊಮ್ಯಾಟೊ ಕಂಡುಕೊಂಡಿದ್ದು ಒಂದು ಮನ ಕಲಕುವ ಕಥೆ.

ನಿಜವಾಗಿ ಹುಡುಗ ೭ ವರ್ಷದವನೇನೂ ಅಲ್ಲ. ಅವನ ವಯಸ್ಸು ೧೪. ಆದರೂ ಅವನು ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವಂತಿಲ್ಲ. ಹುಡುಗ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ. ಸಂಜೆ ಆರು ಗಂಟೆಯ ನಂತರ ಫುಡ್‌ ಡೆಲಿವರಿ ಮಾಡುತ್ತಿದ್ದ. ಇವನನ್ನು ಡೆಲಿವರಿ ಬಾಯ್‌ ಆಗಿ ನೇಮಕ ಮಾಡಿದ್ದು ಯಾರು ಎಂದು ಜೊಮ್ಯಾಟೊ ವಿಚಾರಿಸಿದೆ. ಆದರೆ, ಆವಾಗ ಅದಕ್ಕೆ ಅಚ್ಚರಿ ಎನಿಸುವ ಸಂಗತಿ ಬಯಲಿಗೆ ಬಂದಿದೆ.

ಅಸಲಿಗೆ ಡೆಲಿವರಿ ಬಾಯ್‌ ಆಗಿದ್ದದ್ದು ಈ ಹುಡುಗನಲ್ಲ. ಅವನ ಅಪ್ಪ. ಅಪ್ಪ ಕೆಲವು ಸಮಯದ ಹಿಂದೆ ತೀರಿಕೊಂಡಿದ್ದರು. ಮನೆಯಲ್ಲಿ ಜೀವನಕ್ಕೆ ಕಷ್ಟ ಇತ್ತು. ಈ ನಡುವೆ, ಅಪ್ಪನ ಮೊಬೈಲ್‌ಗೆ ಬರುತ್ತಿದ್ದ ಜೊಮ್ಯಾಟೊ ಡೆಲಿವರಿ ಮೆಸೇಜುಗಳನ್ನು ಹುಡುಗ ನೋಡುತ್ತಿದ್ದ. ಆವತ್ತೊಂದು ದಿನ ಅಮ್ಮನನ್ನು ಕೇಳಿದ-ಹೇಗೂ ಮೆಸೇಜು ಬರ್ತದೆ. ಈ ಏರಿಯಾವೂ ನನಗೆ ಗೊತ್ತು. ಸಂಜೆ ಶಾಲೆಯಿಂದ ಬಂದ ನಂತರ ನಾನು ಡೆಲಿವರಿ ಮಾಡಲು ಹೋದರೆ ಹೇಗೆ- ಅಂತ. ತಾಯಿ ಮೊದಲು ಒಪ್ಪದೆ ಇದ್ದರೂ ಬಳಿಕ ಹೂಂ ಎಂದರು. ಹೀಗೆ ಆರಂಭವಾಯಿತು. ಪುಟ್ಟ ಹುಡುಗನ ಜೊಮ್ಯಾಟೊ ಪಯಣ.

ಆದರೆ, ಯಾವಾಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಗುಲ್ಲಾಯಿತೋ ಆಗ ಜೊಮ್ಯಾಟೋ ಹುಡುಗನ ಕುಟುಂಬವನ್ನು ಸಂಪರ್ಕಿಸಿದೆ. ನಿಜವೆಂದರೆ, ಡೆಲಿವರಿ ಸಂದರ್ಭದಲ್ಲಿ ಏನಾದರೂ ತೊಂದರೆಯಾದರೆ ಅವರ ಕುಟುಂಬಕ್ಕೆ ನೆರವು ನೀಡುತ್ತದೆ. ಆದರೆ, ಇಲ್ಲಿ ಅಂಥದ್ದೇನೂ ನಡೆದಿಲ್ಲ. ಸಾಲದ್ದಕ್ಕೆ ಹುಡುಗ ಸಂಸ್ಥೆಗೆ ತಿಳಿಸದೆ ಡೆಲಿವರಿ ಮಾಡುತ್ತಿದ್ದಾನೆ. ಕಾನೂನು ಪ್ರಕಾರ ನೋಡಿದರೆ ದೂರು ನೀಡಬಹುದಾದ ಪ್ರಕರಣ. ಆದರೆ, ಕಂಪನಿ ಆ ರೀತಿಯ ಯಾವ ಕ್ರಮಕ್ಕೂ ಮುಂದಾಗಲಿಲ್ಲ. ಬದಲಾಗಿ ತಾನೇ ಕುಟುಂಬದ, ಹುಡುಗನ ಬೆಂಬಲಕ್ಕೆ ನಿಲ್ಲುವುದಾಗಿ ಘೊಷಿಸಿದೆ.

ಸದ್ಯ ಹುಡುಗನ ತಂದೆಯ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಅವನು ಮತ್ತೆ ಕೆಲಸ ಮಾಡಲು ಸಾಧ್ಯವಾದಾಗ ಅದನ್ನು ಅವನಿಗೆ ಅವಕಾಶ ಕೊಡಲಾಗುವುದು ಎಂದು ಹೇಳಿದೆ. ಸದ್ಯಕ್ಕೆ ಆತನ ಶಿಕ್ಷಣಕ್ಕೆ ಕಂಪನಿಯೇ ನೆರವು ನೀಡಲು ನಿರ್ಧರಿಸಿದೆ.

ಇದನ್ನೂ ಓದಿ: Praveen Nettaru | ಮೃತ ಪ್ರವೀಣ್ ಕುಟುಂಬಕ್ಕೆ ₹10 ಲಕ್ಷ ವೈಯಕ್ತಿಕ ನೆರವು; ಸಚಿವ ಡಾ.ಅಶ್ವತ್ಥನಾರಾಯಣ

Exit mobile version