Site icon Vistara News

Basavaraj Horatti: ಹೊರಟ್ಟಿಗೆ ಲಿಮ್ಕಾ ಬುಕ್ ರೆಕಾರ್ಡ್‌; ಗಿನ್ನಿಸ್‌ಗೆ ಸೇರಲೆಂದು ಪರಿಷತ್‌ನಲ್ಲಿ ಶುಭ ಹಾರೈಕೆ

Limca Book Award for Basavaraj Horatti Best wishes at the Council for joining the Guinness Book of World Records

ವಿಧಾನ ಪರಿಷತ್: ಎಂಟು ಬಾರಿ ಒಂದೇ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ (Member of Legislative Council) ಆಯ್ಕೆಯಾಗುವ ಮೂಲಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಿಮ್ಕಾ ಬುಕ್ ರೆಕಾರ್ಡ್‌ಗೆ (Limca Book of record) ಭಾಜನರಾಗಿದ್ದರು. ಈ ಸಂಬಂಧ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಸವರಾಜ ಹೊರಟ್ಟಿ (Basavaraj Horatti) ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಎಂಟು ಬಾರಿ ಒಂದೇ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗುತ್ತಾ ಬರುತ್ತಿರುವ ಬಸವರಾಜ ಹೊರಟ್ಟಿ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಸ್ತಾಪ ಮಾಡಿದರು. ‌ಇದಕ್ಕೆ ಪರಿಷತ್‌ನ ಎಲ್ಲ ಸದಸ್ಯರು ಸಂತಸವನ್ನು ವ್ಯಕ್ತಪಡಿಸಿದ್ದಲ್ಲದೆ, ಅವರ ಬಳಿ ತೆರಳಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಾಂಗ್ರೆಸ್‌ಗೆ ಕರೆದರೂ ಬಾರದ ಬಸವರಾಜ ಹೊರಟ್ಟಿ

ವಿಧಾನ ಪರಷತ್‌ನಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಅನ್ನೋದೇ ಒಂದು ಗೌರವ. ಇತಿಹಾಸ ನೆನಪಿಟ್ಟುಕೊಳ್ಳುವ ಪ್ರಶಸ್ತಿ ಇದಾಗಿದೆ. 43 ವರ್ಷಗಳಿಂದ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು ಇವರಾಗಿದ್ದಾರೆ. ನಾವು ಕರೆದರೂ ಅವರು ಕಾಂಗ್ರೆಸ್‌ಗೆ ಬರಲಿಲ್ಲ. ಚುನಾವಣೆ ಬಂದಾಗ ವಲಸೆ ಹಕ್ಕಿಯಾಗುತ್ತಾರೆ. ಕಾಂಗ್ರೆಸ್ ಪಕ್ಷ ಸಿಎಂ ಆಸೆ ತೋರಿಸಿದರೂ ಅವರು ಬರಲಿಲ್ಲ ಎಂದು ಹೇಳಿದರು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಸೇರಲಿ: ಬಿ.ಕೆ. ಹರಿಪ್ರಸಾದ್

ಶೈಕ್ಷಣಿಕ ವಲಯದಲ್ಲಿ ಆ ಭಾಗದಲ್ಲಿ ಇಷ್ಟು ಸಲ ಗೆಲ್ಲೋದು ತಮಾಷೆಯ ಮಾತಲ್ಲ. ಹೊರಟ್ಟಿಯವರು ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತಹ ಸರಳ ವ್ಯಕ್ತಿ ಇವರಾಗಿದ್ದಾರೆ. ಹೊರಟ್ಟಿ ಅವರನ್ನು ನಾನು ಕಾಂಗ್ರೆಸ್‌ಗೆ ಕರೆದೆ. ಆದರೆ, ಅವರು ನಮ್ಮ ಪಕ್ಷಕ್ಕೆ ಬರಲೇ ಇಲ್ಲ ಎಂದು ಹೇಳಿದ ಬಿ.ಕೆ. ಹರಿಪ್ರಸಾದ್‌, ಬಸವರಾಜ ಹೊರಟ್ಟಿ ಅವರಿಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಸೇರಲಿ ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Lok Sabha Election 2024: ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ; ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ?

ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪರಿಷತ್ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು. ಇನ್ನಷ್ಟು ದಾಖಲೆಗಳು ಅವರಿಂದ ಆಗಲಿ ಎಂದು ಶುಭ ಹಾರೈಸಿದರು.

Exit mobile version