Site icon Vistara News

Cancer survivor | 12 ಬಾರಿ ಕ್ಯಾನ್ಸರ್‌ ಬಂದರೂ ಎಲ್ಲರಂತೆ ಜೀವನ ನಡೆಸುತ್ತಿರುವ ಗಟ್ಟಿಗಿತ್ತಿ!

Cancer survivor

ಕೆಲವೊಮ್ಮೆ ತನಗಿರುವ ಕಾಯಿಲೆಯ ಹೆಸರು ಕೇಳಿಯೇ ಅರ್ಧ ಜೀವ ಹಾರಿ ಹೋದಂತಾಗುತ್ತದೆ. ಎಷ್ಟೇ ಆಧುನಿಕ ಚಿಕಿತ್ಸೆಗಳ ಲಭ್ಯತೆಗಳ ಬಗ್ಗೆ ತಿಳಿದಿದ್ದರೂ, ರೋಗದ ಹೆಸರೇ ಸಾಕು ರೋಗಿಯ ಆತ್ಮವಿಶ್ವಾಸವನ್ನು ಕುಗ್ಗಿಸಲು. ಅಂಥ ರೋಗಗಳ ಪೈಕಿ ಕ್ಯಾನ್ಸರ್‌ ಕೂಡಾ ಒಂದು. ಎಷ್ಟೇ ಅತ್ಯಾಧುನಿಕ ಚಿಕಿತ್ಸೆಗಳಿವೆಯೆಂದು ಅರಿವಿದ್ದರೂ, ಎಷ್ಟು ದುಡ್ಡು ಖರ್ಚು ಮಾಡಲು ತಯಾರಿದ್ದರೂ, ರೋಗಿಯ ಆತ್ಮವಿಶ್ವಾಸ ಗಟ್ಟಿಯಾಗಿರುವುದು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ನಮ್ಮ ತರ್ಕಕ್ಕೂ ನಿಲುಕದ ವಿಚಾರಗಳೂ ನಡೆದು ನಮ್ಮನ್ನು ಆಶ್ಚರ್ಯಕ್ಕೆ ಸಿಲುಕಿಸುತ್ತವೆ. ಇದೂ ಅಂಥದ್ದೇ ವೈದ್ಯರ ತಿಳಿವಿಗೂ ನಿಲುಕದ ಕಥೆ.

ವೈದ್ಯರೆಂದರೆ ದೇವರಿಗೆ ಹೋಲಿಸುತ್ತಾರೆ. ಯಾಕೆಂದರೆ, ವೈದ್ಯರು ಜೀವದಾನ ಮಾಡುವವರು. ಜೀವದಾನಕ್ಕಿಂತ ಬೇರೆ ದಾನ ಎಲ್ಲಿದ್ದೀತು. ಅದಕ್ಕಾಗಿಯೇ, ವೈದ್ಯರು ಜೀವ ನೀಡುವವರು. ಇಂತಹ ವೈದ್ಯರೂ ಕೂಡಾ ರೋಗಿಗೆ ಚಿಕಿತ್ಸೆ ನೀಡುವ ಸಂದರ್ಭ, ʻನನ್ನ ಪ್ರಯತ್ನ ನನ್ನದು, ಮಿಕ್ಕದ್ದು ಮೇಲಿನವನಿಗೆ ಬಿಟ್ಟದ್ದುʼ ಎಂದು ಹೇಳುವುದನ್ನೂ ಕೇಳಿದ್ದೇವೆ. ಯಾಕೆಂದರೆ, ಬಹಳಷ್ಟು ಸಾರಿ ವೈದ್ಯರ ಆಲೋಚನೆಗೂ ಮೀರಿದ್ದು ನಡೆದು ಬಿಡುತ್ತದೆ ಎಂಬ ವಿಶ್ವಾಸ ಎಲ್ಲರದ್ದು.

ಇದೂ ಕೂಡಾ ಅಂಥದ್ದೇ ಒಂದು ಉದಾಹರಣೆ. ಇಲ್ಲಿ ಸ್ಪೈನ್‌ನ ಒಬ್ಬ ಮಹಿಳೆಗೆ ಈವರೆಗೆ ೧೨ ಬಾರಿ ಕ್ಯಾನ್ಸರ್‌ ಬಂದಿದೆ. ಆದರೆ, ೧೨ ಬಾರಿಯೂ ಆಕೆ ಪವಾಡಸದೃಶ ರೀತಿಯಲ್ಲೇ ಬದುಕುಳಿದಿದ್ದಾಳೆ. ಹಾಗಾದರೆ, ಆಕೆ ಬದುಕಿದ್ದು ಹೇಗೆ, ಅದೂ ೧೨ ಬಾರಿ ಕ್ಯಾನ್ಸರ್‌ ಬಂದರೂ ಎಂಬುದೇ ವಿಜ್ಞಾನಿಗಳಿಗೆ ಆಶ್ಚರ್ಯ ತರಿಸಿದೆಯಂತೆ.

೩೬ರ ಹರೆಯದ ಹೆಸರು ಬಹಿರಂಗ ಪಡಿಸಲಿಚ್ಛಿಸದ ಮಹಿಳೆಯೊಬ್ಬಳಿಗೆ ಮೊದಲ ಬಾರಿಗೆ ಕ್ಯಾನ್ಸರ್‌ ಬಂದಿದ್ದು ಆಕೆ ಎರಡು ವರ್ಷದ ಮಗುವಾಗಿದ್ದಾಗ. ೧೫ ವರ್ಷದವಳಿದ್ದಾಗ ಸರ್ವೈಕಲ್‌ ಕ್ಯಾನ್ಸರ್‌ ಕೂಡಾ ಬಂದಿತ್ತು. ೨೦ರ ವಯಸ್ಸಿನಲ್ಲಿ ಜೊಲ್ಲುರಸಗ್ರಂಥಿಯ ಕ್ಯಾನ್ಸರ್‌, ಇದಾಗಿ ಒಂದು ವರ್ಷ ಕಳೆಯುವ ಮೊದಲು ಸಾರ್ಕೋಮ, ಹೀಗೆ ಒಂದಾದ ಮೇಲೆ ಒಂದರಂತೆ ಈಕೆಗೆ ಜೀವನಪೂರ್ತಿ ಕ್ಯಾನ್ಸರ್‌ ಕಾಟ ಕೊಟ್ಟಿದೆ.

೩೦ ತಲುಪುವಷ್ಟರಲ್ಲಿ ಈಕೆಗೆ ಒಂದು ಡಜನ್‌ಗೂ ಹೆಚ್ಚು ಕ್ಯಾನ್ಸರ್‌ ಬಂದಾಗಿತ್ತು. ಈಕೆಯ ಕೇಸ್‌ ಸ್ಟಡೀ ಮಾಡಲು ಹೊರಟ ವಿಜ್ಞಾನಿಗಳಿಗೂ ಆಶ್ಚರ್ಯ. ಯಾಕೆಂದರೆ, ಹೀಗೆ ಪದೇ ಪದೇ ಕ್ಯಾನ್ಸರ್‌ಗೆ ತುತ್ತಾದ ಯಾರೂ ಹೀಗೆ ಬದುಕಿ ಉಳಿದಿರುವ ಸಂಭವ ವಿರಳಾತಿವಿರಳ.‌

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕ್ಯಾನ್ಸರ್‌ ರೋಗಿಗಳಿಗೆ ಅನ್ನ ನೀಡುವ ದೇವತಾ ಮನುಷ್ಯ: 30 ವರ್ಷಗಳಿಂದ ನಿಲ್ಲದ ಸಾವ್ಲಾ ಸೇವೆ

ಕೊನೆಗೆ ಈಕೆಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಯ್ತಂತೆ. ಡಿಎನ್‌ಎಯ ಪರೀಕ್ಷೆಯೂ ನಡೆಸಲಾಗಿ, ಈಕೆಯ ಜೀನ್‌ನಲ್ಲೇ ಮ್ಯೂಟೇಶನ್‌ ಇರುವುದು ಪತ್ತೆಯಾಯ್ತಂತೆ. ಆದರೆ, ವೈದ್ಯರ ಪ್ರಕಾರ ಇಷ್ಟು ಮ್ಯೂಟೇಶನ್‌ ಇರುವ ಯಾವ ಜೀವಿಯೂ ಬದುಕಿ ಉಳಿದಿರುವುದೇ ಅಸಾಧ್ಯ, ಯಾಕೆಂದರೆ, ಇಂತಹ ಮ್ಯೂಟೇಶನ್‌ ಮನುಷ್ಯನಲ್ಲಿ ನೋಡಿರಲಿಲ್ಲ. ಹಾಗಾಗಿ ಈಕೆಯ ಅನಾರೋಗ್ಯಕ್ಕೆ ಮುಖ್ಯ ಕಾರಣ ಆಕೆಯ ವಂಶವಾಹಿನಿಯಲ್ಲಿರುವ ತೊಂದರೆಯೇ ಆಗಿದೆ ಎಂದು ಪತ್ತೆಹಚ್ಚಲಾಯ್ತು. ಆದರೆ, ಆಕೆಯ ಜೀವ ಉಳಿಸುತ್ತಿರುವುದು ಮಾತ್ರ ಏನು ಎಂಬುದು ಯಾವ ವೈದ್ಯರಿಗೂ ಅರ್ಥವಾಗಿಲ್ಲ. ಯಾಕೆಂದರೆ, ಆಕೆ ದೊಡ್ಡ ದೊಡ್ಡ ಕ್ಯಾನ್ಸರ್‌ನಿಂದ ರಕ್ಷಿಸುತ್ತಿರುವುದು ಏನು, ಕೇವಲ ಔಷಧಿಯಷ್ಟೇ ಈ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬಹುಶಃ ಯಾವುದೋ ವಂಶವಾಹಿನಿಯೇ ಆಕೆಯನ್ನು ಮರಳಿ ಯಥಾಸ್ಥಿತಿಗೆ ಬರುವಂತೆ ಮಾಡುತ್ತದೆ ಎಂದು ವೈದ್ಯರು ಅಂದಾಜಿಸಿದ್ದಾರಂತೆ.

೨೦೧೪ರ ನಂತರ ಈಕೆಗೆ ಯಾವ ಕ್ಯಾನ್ಸರ್‌ ಕೂಡಾ ಬಂದಿಲ್ಲ ಎನ್ನಲಾಗಿದ್ದು, ಆಕೆ ಎಲ್ಲರಂತೆ ಉದ್ಯೋಗಸ್ಥೆಯಾಗಿದ್ದು ತಮ್ಮ ಜೀವನ ನೆಮ್ಮದಿಯಿಂದ ಸಾಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಕೆಯಲ್ಲಿರುವ ರೋಗ ನಿರೋಧಕ ಶಕ್ತಿಯ ಬಗೆಗೆ ಹೆಚ್ಚಿನ ಸಂಶೋಧನೆಗಳು ನಡೆದಲ್ಲಿ, ಕ್ಯಾನ್ಸರ್‌ನ ಚಿಕಿತ್ಸೆಗೂ ಸಹಾಯವಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. 

ಇದನ್ನೂ ಓದಿ | Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್‌ ಬರುತ್ತಾ?

Exit mobile version