Site icon Vistara News

Viral News | ಪಾಕಿಸ್ತಾನದ ವಕ್ರ ಕುತ್ತಿಗೆಯ ಬಾಲಕಿಗೆ ದೇವರಾದ ಭಾರತದ ಡಾಕ್ಟರ್!

ನವ ದೆಹಲಿ: ಪಾಕಿಸ್ತಾನದ 13 ವರ್ಷದ ಬಾಲಕಿಯ ಬಾಲ್ಯದಲ್ಲಿ ನಡೆದ ಒಂದು ಅಪಘಾತದಲ್ಲಿ ಕುತ್ತಿಗೆ 90 ಡಿಗ್ರಿ ತಿರುಗಿ ಹೋಗಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಈ ಸಂಬಂಧಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಕುತ್ತಿಗೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ (Viral News). ಈ ರೀತಿಯ ಪ್ರಕರಣ ವಿಶ್ವದಲ್ಲೇ ಮೊದಲಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಅಫ್ಷೀನ್‌ ಜೀವನದ ಆಘಾತಕಾರಿ ಘಟನೆ

ಅಫ್ಷೀನ್‌ ಗುಲ್‌ ಎಂಬ ಬಾಲಕಿ 10 ತಿಂಗಳ ಶಿಶುವಿದ್ದಾಗ ಒಂದು ಅಪಘಾತಕ್ಕೆ ಒಳಗಾಗುತ್ತಾಳೆ. ಆಕೆಯ ಸಹೋದರಿಯ ಕೈಯ್ಯಿಂದ ಜಾರಿ ಬೀಳುತ್ತಾಳೆ. ಈ ಘಟನೆಯ ದುಷ್ಪರಿಣಾಮವಾಗಿ ಆಕೆಯ ಕುತ್ತಿಗೆ 90 ಡಿಗ್ರಿ ತಿರುಗಿಬಿಡುತ್ತದೆ. ಇದು ಆಕೆಯ ಬದುಕಿನಲ್ಲಿ ನಡೆದ ದುರಂತ ಘಟನೆಯಾಗಿ ಉಳಿದುಬಿಟ್ಟಿತ್ತು. ಬೆಳೆಯುತ್ತ ಆಕೆ ತನ್ನ ಬಾಲ್ಯದ ಎಲ್ಲ ಆನಂದದ ಕ್ಷಣಗಳಿಂದ ಆಕೆ ವಂಚಿತಳಾಗುತ್ತಾಳೆ. ಆಕೆ ಎಲ್ಲರಂತೆ ಶಾಲೆಗೆ ಹೋಗಲು ಸಾಧ್ಯವಿರಲಿಲ್ಲ, ಉಳಿದ ಮಕ್ಕಳಂತೆ ಆಟವಾಡಲು ಆಗುತ್ತಿರಲಿಲ್ಲ.

ಆಕೆಗೆ ಚಿಕಿತ್ಸೆ ಕೊಡಿಸಲು ಮನೆಯವರ ಆರ್ಥಿಕ ಪರಿಸ್ಥಿತಿ ಪೂರಕವಾಗಿರಲಿಲ್ಲ. ಅಫ್ಷೀನ್‌ ಅವರಿಗೆ ಇನ್ನೊಂದು ಬಾಧಕವಿತ್ತು. ಸೆರೆಬ್ರಲ್‌ ಪಾಲ್ಸಿ ಎಂಬ ಕಾಯಿಲೆಯಿತ್ತು. ಸೆರೆಬ್ರಲ್‌ ಪಾಲ್ಸಿ ಕಾಯಿಲೆಯಲ್ಲಿ ಅನೇಕ ಅನಾರೋಗ್ಯಗಳು ಒಟ್ಟಿಗೆ ಕಾಡುತ್ತವೆ. ಇದರಿಂದ ವ್ಯಕ್ತಿ ತನ್ನ ದೇಹದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಉಳಿದವರ ಸಹಾಕರವಿಲ್ಲದೆ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.

ಸುಮಾರು 12 ವರ್ಷಗಳ ಕಾಲ ಈ ರೀತಿಯ ಅಸ್ವಸ್ಥತೆಯಿಂದ ಅಫ್ಷೀನ್ ಬಳಲಿದರು. ಬ್ರಿಟಿಷ್‌ ಪತ್ರಕರ್ತೆ ಅಲೆಕ್ಸಾಂಡರ್‌ ಥಾಮಸ್‌ ಎಂಬವರು ಈಕೆಯ ಬಗ್ಗೆ ಒಂದು ವರದಿ ಮಾಡಿ ಪ್ರಕಟಿಸಿದ್ದರು. ಅದನ್ನು ಓದಿ ಭಾರತದ ದೆಹಲಿಯ ವೈದ್ಯ ಡಾ. ರಾಜಗೋಪಾಲನ್‌ ಕೃಷ್ಣ ಎಂಬುವರು ಅಫ್ಷೀನ್‌ ಕುಟುಂಬದವರನ್ನು ಸಂಪರ್ಕಿಸಿದರು.

ಕಳೆದ ಫೆಬ್ರುವರಿ ತಿಂಗಳಲ್ಲಿ ಅಫ್ಷೀನ್‌ ಕುಟುಂಬದವರು ದೆಹಲಿಗೆ ಬಂದು ರಾಜಗೋಪಾಲನ್‌ ಕೃಷ್ಣ ಅವರನ್ನು ಭೇಟಿ ಮಾಡಿದರು. ರಾಜಗೋಪಾಲನ್‌ ಅವರು ಹಣಕಾಸಿನ ಅಪೇಕ್ಷೆಯಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಲು ಒಪ್ಪಿ ಮಾನವೀಯತೆ ಮೆರೆದರು. ಪ್ರಮುಖ ನಾಲ್ಕು ಶಸ್ತ್ರಚಿಕಿತ್ಸೆಗಳ ಬಳಿಕ ಅಫ್ಷೀನ್‌ ಸಂಪೂರ್ಣ ಗುಣಮುಖಳಾದಳು. ಈಗ ಎಲ್ಲರಂತೆ ಅಫ್ಷೀನ್ ಕೂಡ ಆಟವಾಡಿ ನಲಿಯುವುದನ್ನು ನೋಡಬಹುದು, ಆಕೆಯ ಮುಖದಲ್ಲಿ ನಗುವನ್ನು ಕಾಣಬಹುದು ಎಂದು ಅಫ್ಷೀನ್‌ ಹಾಗೂ ಆಕೆಯ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾವುಕರಾದ ಕುಟುಂಬದವರು

ಈ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಖರ್ಚುಗಳನ್ನು ಪೂರೈಸಲು ಆನ್‌ಲೈನ್‌ ಫಂಡ್‌ರೈಸರ್‌ ಸಹಾಯ ಮಾಡಿತು ಎಂದು ಅಫ್ಷೀನ್‌ ಕುಟುಂಬದವರು ಹೇಳಿದ್ದಾರೆ. ದೇವರಂತೆ ಬಂದು ಅಫ್ಷೀನ್‌ಗೆ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಿದ್ದಕ್ಕೆ ರಾಜ್‌ಗೋಪಾಲನ್‌ ಕೃಷ್ಣ ಅವರಿಗೆ ಆಭಾರಿಯಾದ ಕುಟುಂಬದವರು ಕೃತಜ್ಞತೆಯನ್ನು ಸಲ್ಲಿಸಿ ಭಾವುಕರಾಗಿದ್ದಾರೆ.

ಇದನ್ನೂ ಓದಿ: Viral video | ಎಲ್ಲೆಡೆ ಇರುವುದು ದೇವರಲ್ಲ, ತಂದೆ!

Exit mobile version