ಮುಂಬಯಿ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ (Anant Ambani wedding) ಸದ್ದು ಮಾಡುತ್ತಿದೆ. ಮುಕೇಶ್ ಅಂಬಾನಿ (Mukesh Ambani) ಕುಟುಂಬ ಇಂದೋರ್ ಮೂಲದ 21 ಬಾಣಸಿಗರನ್ನು ವಿವಾಹಪೂರ್ವ ಕಾರ್ಯಕ್ರಮಗಳಿಗಾಗಿ ನೇಮಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿರೋ ಈ ಅದ್ಧೂರಿ ಮದುವೆಗೆ ಭೂಮಿ ಮೇಲಿನ ಸ್ವರ್ಗದಂಥಾ ವೇದಿಕೆ ರಚಿಸಲಿದ್ದಾರಂತೆ. ಸುಮಾರು 1,000 ಅತಿ ಗಣ್ಯ ಅತಿಥಿಗಳು ಭಾಗವಹಿಸ್ತಾರೆ. ಇವರಿಗೆ ಬಡಿಸೋ ಊಟವನ್ನು 20 ಮಹಿಳೆಯರು ಸೇರಿದ 21 ಬಾಣಸಿಗರ ತಂಡವು ತಯಾರಿಸಲಿದೆ. ವಿಶೇಷವಾಗಿ ಟೆಕ್ ದೈತ್ಯರಾದ ಮಾರ್ಕ್ ಜುಕರ್‌ಬರ್ಗ್, ಬಿಲ್ ಗೇಟ್ಸ್, ಸುಂದರ್ ಪಿಚೈ, ಬಾಬ್ ಇಗರ್ ಮುಂತಾದ ವಿವಿಐಪಿಗಳು ಭಾಗವಹಿಸಲಿದ್ದು, ಅವರಿಗಾಗಿ ಜಪಾನೀಸ್, ಥಾಯ್. ಮೆಕ್ಸಿಕನ್, ಪಾರ್ಸಿ ಥಾಲಿ ಮುಂತಾದ ವಿವಿಧ ರೀತಿಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿ ಬಡಿಸಲಿದ್ದಾರೆ.
ಅಂಬಾನಿ ಕುಟುಂಬದ ಕಿರಿಯ ಸದಸ್ಯ ಅನಂತ್ ಅಂಬಾನಿ ಹಾಗೂ ಭಾರತೀಯ ಉದ್ಯಮಿ ವೀರೆನ್ ಮರ್ಚೆಂಟ್ ಮಗಳು ರಾಧಿಕಾ ಮರ್ಚೆಂಟ್ ಮದುವೆ ದಿನಾಂಕ ಫಿಕ್ಸ್ ಆಗಿದೆ. ಇದರಲ್ಲಿ ಭಾಗವಹಿಸುವ ಅತಿಥಿಗಳ ಪಟ್ಟಿಯಿಂದ ಹಿಡಿದು ಉಡುಗೊರೆಗಳು ಮತ್ತು ಆಹಾರದವರೆಗೆ ಎಲ್ಲವೂ ಕೋಟ್ಯಂತರ ವೆಚ್ಚದ ವ್ಯವಹಾರವಾಗಲಿದೆ. ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.
ವರದಿಗಳ ಪ್ರಕಾರ ಇವರ ಮದುವೆಯ ಮೊದಲಿನ ಕಾರ್ಯಕ್ರಮಗಳು ಮಾರ್ಚ್ 1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿವೆ. ಸುಮಾರು 1,000 ಅತಿಥಿಗಳು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ. ಪ್ರಸಿದ್ಧ ಜಾರ್ಡಿನ್ ಹೋಟೆಲ್‌ನ 21 ಬಾಣಸಿಗರಲ್ಲಿ ಇದರಲ್ಲಿರುತ್ತಾರೆ. ಇವರಲ್ಲಿ ಒಬ್ಬನೇ ಪುರುಷ ಬಾಣಸಿಗನಂತೆ.
ಈ 3 ದಿನದ ವಿವಾಹಪೂರ್ವ ಸಮಾರಂಭಗಳಲ್ಲಿ 2500 ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ! ಜಪಾನೀಸ್, ಥಾಯ್, ಪ್ಯಾನ್ ಏಷ್ಯನ್ ಪಾಕಪದ್ಧತಿಯ ಜೊತೆಗೆ ಮೆಕ್ಸಿಕನ್ ಮತ್ತು ಪಾರ್ಸಿ ಥಾಲಿ ಇರಲಿವೆ. ಬೆಳಗಿನ ಉಪಾಹಾರಕ್ಕಾಗಿ 75 ವಿಧದ ಭಕ್ಷ್ಯಗಳು ಇರುತ್ತವೆ. ಮಧ್ಯಾಹ್ನದ ಊಟಕ್ಕೆ 225 ಬಗೆಯ ತಿನಿಸುಗಳು, ಮತ್ತು ರಾತ್ರಿಯ ಡಿನ್ನರ್ 85 ರೀತಿಯ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ. ಮಧ್ಯರಾತ್ರಿಯ ಊಟ ರಾತ್ರಿ 12ರಿಂದ 4 ಗಂಟೆಯವರೆಗೆ ಇರಲಿದೆ.
ಮೂರು ದಿನವೂ ಒಂದೇ ಒಂದು ಐಟಂ ಪುನರಾವರ್ತನೆಯಾಗದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಲಾಗಿದೆ. ವಿಶೇಷ ಇಂದೋರಿ ಸರಾಫಾ ಆಹಾರ ಕೌಂಟರ್ ಇರುತ್ತದೆ. ಇದು ಸಾಂಪ್ರದಾಯಿಕ ಇಂದೋರಿ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ. ಇಂದೋರಿ ಕಚೋರಿ, ಭುಟ್ಟೆ ಕಾ ಕೀಸ್, ಖೋಪ್ರಾ ಪ್ಯಾಟೀಸ್, ಉಪ್ಮಾ ಮತ್ತು ಇಂದೋರಿ ಪೋಹ ಜಲೇಬಿ ವಿಶೇಷ. ಈ ಬಾಣಸಿಗರು ಇಂದೋರ್‌ನಿಂದಲೇ ವಿಶೇಷ ಇಂದೋರಿ ರುಚಿ ಹೊಂದಿದ ಮಸಾಲೆಗಳನ್ನು ಕೊಂಡೊಯ್ಯುತ್ತಾರೆ.
ವರದಿಗಳ ಪ್ರಕಾರ ಇದರಲ್ಲಿ ಭಾಗವಹಿಸಲಿರುವ ಗಣ್ಯರು ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಮಾಜಿ CEO ಬಿಲ್ ಗೇಟ್ಸ್, ವಾಲ್ಟ್ ಡಿಸ್ನಿ CEO ಬಾಬ್ ಇಗರ್, ಮೋರ್ಗಾನ್ ಸ್ಟಾನ್ಲಿ ಸಿಇಒ ಟೆಡ್ ಪಿಕ್, ಅಡೋಬ್ ಸಿಇಒ ಶಾಂತನು ನಾರಾಯಣ್, ಬ್ಲ್ಯಾಕ್‌ರಾಕ್ ಸಿಇಒ ಲ್ಯಾರಿ ಫಿಂಕ್, ಬ್ಯಾಂಕ್ ಆಫ್ ಅಮೇರಿಕಾ ಅಧ್ಯಕ್ಷ ಬ್ರಿಯಾನ್ ಥಾಮಸ್ ಮೊಯ್ನಿಹಾನ್ ಮುಂತಾದವರು. ಇವರು ಮಾತ್ರವಲ್ಲದೆ ಭಾರತದ ಮತ್ತು ಹೊರಗಿನ ಕ್ರೀಡೆ ಮತ್ತು ಮನರಂಜನಾ ವಲಯದ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.