Site icon Vistara News

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

arunachal pradesh landslide

ಗುವಾಹಟಿ: ಮಳೆಯಿಂದ (Rain) ಉಂಟಾದ ಭಾರೀ ಭೂಕುಸಿತದಿಂದ (Landslide) ಅರುಣಾಚಲ ಪ್ರದೇಶದ ಹೆದ್ದಾರಿಯ ಪ್ರಮುಖ ಭಾಗ ಕೊಚ್ಚಿ (Arunachal Pradesh landslide) ಹೋಗಿದ್ದು, ಚೀನಾ ಗಡಿಗೆ (China Border) ಹೊಂದಿಕೊಂಡಿರುವ ಜಿಲ್ಲೆ ದಿಬಾಂಗ್ ಕಣಿವೆಯೊಂದಿಗೆ ರಸ್ತೆ ಸಂಪರ್ಕ ಕತ್ತರಿಸಿಹೋಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಿನ್ನೆ ರಾಷ್ಟ್ರೀಯ ಹೆದ್ದಾರಿ-313ರಲ್ಲಿ ಹುನ್ಲಿ ಮತ್ತು ಅನಿನಿ ನಡುವೆ ಭಾರೀ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಹಾಗೂ ಕತ್ತರಿಸಿಹೋದ ರಸ್ತೆಯ ಮೂಲಕ ನೀರಿನ ಪ್ರವಾಹ ಹರಿಯುತ್ತಿರುವ ಹಲವು ವೀಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (viral video) ಆಗಿವೆ. ಹೆದ್ದಾರಿಯ ಒಂದು ಭಾಗ ಕಾಣೆಯಾಗಿರುವುದನ್ನು ಇವು ತೋರಿಸಿವೆ.

ರಸ್ತೆ ತುಂಡಾಗಿದ್ದು, ವಾಹನಗಳು ಇನ್ನೊಂದು ಬದಿಗೆ ದಾಟಲು ಅಸಾಧ್ಯವಾಗಿದೆ. ಈ ಕಷ್ಟಕರವಾದ ಭೂಪ್ರದೇಶದಲ್ಲಿ ಹೆದ್ದಾರಿಯನ್ನು ಜೀವನಾಡಿ ಎಂದು ಪರಿಗಣಿಸುವ ಸ್ಥಳೀಯರು ಮತ್ತು ಭದ್ರತಾ ಪಡೆಗಳಿಗೆ ಇದರಿಂದ ಭಾರೀ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಈ ಹೆದ್ದಾರಿಯ ಹಾನಿಗೊಳಗಾದ ಭಾಗವನ್ನು ಸರಿಪಡಿಸಲು ಮುಂದಾಗಿದೆ.

ಪ್ರಸ್ತುತ, ಕತ್ತರಿಸಿಹೋಗಿರುವ ಪ್ರದೇಶಕ್ಕೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಆಗಿಲ್ಲ. “ಹುನ್ಲಿ ಮತ್ತು ಅನಿನಿ ನಡುವಿನ ಹೆದ್ದಾರಿಗೆ ವ್ಯಾಪಕವಾದ ಹಾನಿಯಿಂದಾಗಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ಅನನುಕೂಲತೆಯನ್ನು ನಿವಾರಿಸಲು ಯತ್ನಿಸಲಾಗುತ್ತಿದೆ. ಈ ರಸ್ತೆಯು ದಿಬಾಂಗ್ ಕಣಿವೆಯನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ಹೀಗಾಗಿ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲು ಸೂಚನೆಗಳನ್ನು ನೀಡಲಾಗಿದೆ” ಎಂದು ಅರುಣಾಚಲ ಪ್ರದೇಶದ ಸಚಿವ ಪೆಮಾ ಖಂಡು ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದಿಬಾಂಗ್ ವ್ಯಾಲಿ ಆಡಳಿತದ ಪ್ರಕಾರ ಹೆದ್ದಾರಿ ಮರುಸ್ಥಾಪನೆಗೆ ಕನಿಷ್ಠ ಮೂರು ದಿನಗಳು ಬೇಕಾಗಬಹುದು. ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ಮತ್ತು ಜಲಮೂಲಗಳಿಂದ ಹಾಗೂ ಮೀನುಗಾರಿಕೆಯಂತಹ ಚಟುವಟಿಕೆಗಳಿಂದ ದೂರವಿರಲು ಆಡಳಿತವು ಜನರಿಗೆ ಮನವಿ ಮಾಡಿದೆ. ರಾತ್ರಿಯಲ್ಲಿ ಪ್ರಯಾಣಿಸುವುದರ ವಿರುದ್ಧ ಮತ್ತು ಮಳೆಗಾಲದಲ್ಲಿ ಮಣ್ಣನ್ನು ಕತ್ತರಿಸದಂತೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

Exit mobile version