ಮನಸ್ಸಿದ್ದರೆ ಮಾರ್ಗ ಅಂತಾರಲ್ಲ, ಅದಕ್ಕೆ ಯಾವ್ಯಾವುದೋ ಉದಾಹರಣೆ ಬೇಕಾಗಿಲ್ಲ. ನಮ್ಮ ಸುತ್ತಮುತ್ತಲ ಸಣ್ಣ ಸಣ್ಣ ಸುದ್ದಿಗಳೂ ಸಾಕು! ಈ ಕಾಲೇಜು ಹುಡುಗಿ ಅದಕ್ಕೊಂದು ಪರ್ಫೆಕ್ಟ್ ಉದಾಹರಣೆ. ಏನೋ ಸಾಧಿಸಬೇಕು, ಆಗುತ್ತಿಲ್ಲ ಎಂದು ಕೈಕಟ್ಟಿ ಕೂರುವುದರಿಂದ ಯಾವ ಲಾಭವೂ ಇಲ್ಲ, ಅಂದುಕೊಂಡಿದ್ದನ್ನು ಸಾಧಿಸಲು ನೀರಿಗಿಳಿಯಲೇ ಬೇಕು. ಈಜಬೇಕೆಂದರೆ ಕೈಕಾಲು ಬಡಿಯಲೇಬೇಕು ಎಂಬುದನ್ನು ತೋರಿಸಿಕೊಡುತ್ತಿರುವ ಈ ಹುಡುಗಿಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈಕೆ ತೋರಿಸಿದ ಧೈರ್ಯಕ್ಕೆ, ʻಇದಪ್ಪಾ, ಛಲ ಎಂದರೆʼ ಎಂಬ ಮಾತುಗಳು ಕೇಳಿ ಬರುತ್ತಿವೆ!
ಬಿಹಾರದಿಂದ ಹರಿಯಾಣದ ಫರೀದಾಬಾದಿಗೆ ಬಿಟೆಕ್ ಓದಲು ಬಂದಿರುವ ವರ್ತಿಕಾ ಸಿಂಗ್ ಎಂಬ ಹುಡುಗಿ ಇದೀಗ ತನ್ನದೇ ಆದ ಚಹಾದ ಅಂಗಡಿ ಇಟ್ಟಿದ್ದಾಳೆ! ಕೇವಲ ಒಂದು ಸ್ಟವ್, ಅಲ್ಯೂಮಿನಿಯಂ ಪಾತ್ರೆ, ಚಹಾಪುಡಿ, ಸಕ್ಕರೆ ಡಬ್ಬ ಇಟ್ಟು ಕೂತಿರುವ ಈ ಹುಡುಗಿ ಓದುತ್ತಿರುವಾಗಲೇ ಚಹಾ ಮಾರಾಟ ಮಾಡುತ್ತಿದ್ದಾಳೆ. ತನ್ನ ಚಹಾದಂಗಡಿಗೆ ʻಬಿಟೆಕ್ ಚಾಯ್‌ವಾಲಿʼ ಎಂದೇ ಹೆಸರಿಟ್ಟಿದ್ದು ಹಲವರಿಗೆ ಸ್ಪೂರ್ತಿಯಾಗಿದ್ದಾಳೆ!
ಈಕೆ ಚಹಾ ಮಾಡುತ್ತಿರುವ ವಿಡಿಯೋ ಈಗ ಇನ್ಸ್ಟಾದಲ್ಲಿ ಜನಮೆಚ್ಚುಗೆ ಪಡೆದಿದ್ದು ಹಲವರು ಈಕೆಯ ಧೈರ್ಯಕ್ಕೆ ತಲೆದೂಗುತ್ತಿದ್ದಾರೆ. ʻಸ್ವಾಗ್ ಸೇ ಡಾಕ್ಟರ್ʼ ಎಂಬವರು ಈ ವಿಡಿಯೋ ಶೇರ್ ಮಾಡಿದ್ದು ಅದರಲ್ಲಿ ಆಕೆ, ತನ್ನ ಚಹಾದಂಗಡಿಗೆ ಎಲ್ಲರೂ ಬಂದು ಚಹಾ ಕುಡಿಯಿರಿ, ಇಷ್ಟವಾದರೆ, ಮತ್ತೆ ಬನ್ನಿ, ಇಲ್ಲವಾದರೆ ಬರಬೇಡಿ ಎಂದು ಹೇಳಿದ್ದಾಳೆ.
ನಾನು ಬಿಹಾರದಿಂದ ಬಂದವಳು. ಬಿಟೆಕ್ ಓದಲು ಇಲ್ಲಿ ಬಂದಿದ್ದೇನೆ. ನನಗೆ ಮೊದಲಿನಿಂದಲೂ ನನ್ನದೇ ಬ್ಯುಸಿನೆಸ್ ಮಾಡಬೇಕೆಂಬ ಆಸೆಯಿದೆ. ಬಿಟೆಕ್ ಓದು ಮುಗಿಯಲು ಇನ್ನೂ ನಾಲ್ಕು ವರ್ಷ ಇದೆ. ಅಲ್ಲಿಯವರೆಗೆ ನಾನ್ಯಾಕೆ ಸುಮ್ಮನೆ ಕೂತು ಟೈಮ್ ವೇಸ್ಟ್ ಮಾಡಬೇಕು ಹೇಳಿ? ನನ್ನದೇ ಬ್ಯುಸಿನೆಸ್ ಮಾಡಲು ಓದು ಮುಗಿಯಲಿ ಎಂದು ಕಾಯುವುದು ಅಗತ್ಯವಿಲ್ಲ ಅನಿಸಿತು. ಅದಕ್ಕೇ ಓದುತ್ತಲೇ ಜೊತೆಗೇ ಈ ಬ್ಯುಸಿನೆಸ್ ಶುರು ಮಾಡಿದ್ದೇನೆ. ಫರೀದಾಬಾದಿನ ಗ್ರೀನ್‌ಫೀಲ್ಡ್ ಬಳಿ ನನ್ನ ಪುಟ್ಟ ಚಹಾದಂಗಡಿ ಇದೆ. ಸಂಜೆ ೫.೩೦ರಿಂದ ರಾತ್ರಿ ೯ ಗಂಟೆವರೆಗೆ ಚಹಾ ಮಾರುತ್ತಿರುತ್ತೇನೆ. ಸಾಮಾನ್ಯ ಚಹಾ, ಲೆಮೆನ್ ಚಹಾ, ಮಸಾಲೆ ಚಹಾ ಎಲ್ಲವೂ ಇಲ್ಲಿರಲಿದೆ. ದುಡ್ಡು ಹೆಚ್ಚೇನಿಲ್ಲ. ೨೦ ರೂಪಾಯಿ ಲೆಮೆನ್ ಚಹಾ, ಮಸಾಲೆ ಚಹಾಕ್ಕಾದರೆ, ಸಾಮಾನ್ಯ ಚಹಾಕ್ಕೆ ೧೦ ರೂಪಾಯಿ ಇಟ್ಟಿದ್ದೇನೆ. ಬಂದು ಕುಡಿದು ಹೇಗಿದೆ ಅಂತ ಹೇಳಿ. ಇಷ್ಟವಾದರೆ ಮತ್ತೆ ಬನ್ನಿ. ಹೀಗೆ ವಿಡಿಯೋ ಮಾಡಿ ವೈರಲ್ ಮಾಡುವುದರಿಂದ ಏನೂ ಆಗಲಾರದು. ಬಂದು ಕುಡಿದು ಹೋದರೆ ಖುಷಿ. ಇಷ್ಟವಾಗದಿದ್ದರೆ ಮತ್ತೆ ಬನ್ನಿ ಎಂದು ಹೇಳುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ | Viral news | ತಿಂಗಳಿಗೊಂದು ಫ್ರೀ ಪಿಜ್ಜಾ: ಮದುವೆಯ ವಿಚಿತ್ರ ಒಪ್ಪಂದಕ್ಕೆ ಸಿಕ್ಕ ಉಡುಗೊರೆ!
ಈಕೆಯ ಮಾತು, ಧೈರ್ಯ ಎಲ್ಲವೂ ಸಾವಿರಾರು ಮಂದಿಗೆ ಇಷ್ಟವಾಗಿದ್ದು ಈಗಾಗಲೇ ಹಲವರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಈ ಛಲ ಇಷ್ಟವಾಯಿತು, ಒಳ್ಳೆಯದಾಗಲಿ ಎಂದು ಕೆಲವರು ಹಾರೈಸಿದರೆ, ಇನ್ನೂ ಕೆಲವರು, ಅದ್ಭುತ! ನಿಮ್ಮ ಧೈರ್ಯಕ್ಕೆ ಸಲಾಂ! ಒಂದೇ ವರ್ಷದಲ್ಲಿ ಇದೊಂದು ದೊಡ್ಡ ಬ್ರಾಂಡ್ ಆಗಲಿದೆ ನೋಡಿ! ಒಳ್ಳೆಯದಾಗಲಿ. ನಿಮಗೆ ಗೌರವಪೂರ್ವಕ ಹಾರೈಕೆಗಳು ಎಂದೂ ಮನತುಂಬಿ ಹರಸಿದ್ದಾರೆ.
ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ಇದೇ ಮಾದರಿಯಲ್ಲಿ ಎಂಬಿಎ ಓದಿದ ಹುಡುಗಿಯೊಬ್ಬಳು ತನಗೆ ಕೆಲಸ ಸಿಕ್ಕಲಿಲ್ಲವೆಂದು ಪಾಟ್ನಾ ಮಹಿಳಾ ಕಾಲೇಜಿನ ಎದುರು ಸಣ್ಣ ಚಹಾದಂಗಡಿಯನ್ನು ಆರಂಭಿಸಿದ್ದು ಹಲವರಿಗೆ ಸ್ಪೂರ್ತಿಕತೆಯಾಗಿತ್ತು. ಈಕೆ ಎಂಬಿಎ ಚಾಯ್‌ವಾಲಿ ಎಂದೇ ಪ್ರಖ್ಯಾತಿ ಪಡೆದಿದ್ದಳು. ಇದೀಗ ವರ್ತಿಕಾ, ಓದುವ ಜೊತೆಜೊತೆಗೇ, ತನ್ನ ಕನಸನ್ನು ನನಸಾಗಿಸಲು, ಕಷ್ಟಪಟ್ಟು ದುಡಿಯಲು ಹೊರಟಿದ್ದು, ಮನಸ್ಸು, ಛಲ ಇದ್ದರೆ ಹುಡುಗಿಯರೂ ಹೀಗೂ ಮಾಡಬಹುದು, ಕೈಕಟ್ಟಿ ಕೂರುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಎಲ್ಲರಿಗೂ ಮೌನವಾಗಿಯೇ ದಾಟಿಸಿದ್ದಾಳೆ.
ಇದನ್ನೂ ಓದಿ | Viral news | ಲೋಕಲ್ ರೈಲಿನಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಭಾರತದ ಸ್ಪೈಡರ್ ಮ್ಯಾನ್!