ಅದೆಷ್ಟೋ ಹೊತ್ತು ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದ ನಾವು, ಒಮ್ಮೆಲೇ ತಲೆ ಎತ್ತಿದಾಗ ಅದ್ಯಾವುದೋ ಕಾಡು ಪ್ರಾಣಿಯೋ, ಹಾವೋ ಅಥವಾ ಇನ್ನೇನೋ ಭಯ ಹುಟ್ಟಿಸುವಂಥದ್ದು ನಮ್ಮ ಕಣ್ಣೆದುರು ಕಂಡರೆ ಏನಾಗುತ್ತದೆ ಹೇಳಿ? ಒಮ್ಮೆಲೇ ಶಾಕ್ ಆಗಿ, ನಾವೇನು ಮಾಡಬೇಕು? ಎಲ್ಲಿ ಓಡಬೇಕು? ಈ ಕ್ಷಣವನ್ನು ಹೇಗೆ ಎದುರಿಸಬೇಕು ಎಂಬುದು ಅರ್ಥವಾಗದೆ ದಿಗುಲು ಬೀಳುತ್ತೇವೆ. ಅಂಥದ್ದೇ ಒಂದು ಸನ್ನಿವೇಶ ಯುಎಸ್ನ ಡೆವಿಡ್ ಓಪನ್ಹೈಮರ್ ಎಂಬುವರಿಗೆ ಎದುರಾಗಿತ್ತು. ರಿಲ್ಯಾಕ್ಸ್ ಮೂಡ್ನಲ್ಲಿ ಕುಳಿತಿದ್ದ ಅವರು ತಲೆ ಎತ್ತಿ, ತಿರುಗಿ ನೋಡಿದಾಗ ಅವರ ಎಡಭಾಗದಲ್ಲೊಂದು ಕರಡಿ ನಿಂತಿತ್ತು..!, ಮುಂದೇನಾಯ್ತು?-ಈ ಸ್ಟೋರಿ ಓದಿ, ವಿಡಿಯೊ ನೋಡಿ
ಮನೆಯ ಎದುರಿನ ಉದ್ಯಾನವನದಲ್ಲಿ ಡೆವಿಡ್ ಅವರು ಒಂದು ಆರಾಮ ಕುರ್ಚಿ ಹಾಕಿಕೊಂಡು, ಫೋನ್ ನೋಡುತ್ತ ಇದ್ದರು. ಮೈಮೇಲೆಲ್ಲ ದಿಂಬು ಇಟ್ಟುಕೊಂಡು ಅತ್ಯಂತ ಆರಾಮದಾಯಕ ಭಂಗಿಯಲ್ಲಿ ಕುಳಿತಿದ್ದರು. ಆಗ ಅಲ್ಲಿಗೆ ಒಂದು ಕರಡಿ ಬಂದಿದೆ. ತನ್ನದೇ ಮನೆಯಂಗಳ ಎಂಬ ಭಾವದಲ್ಲಿ ಕರಡಿ ಹೆಜ್ಜೆ ಹಾಕುತ್ತ ಅಲ್ಲಿಗೆ ಬಂತು. ತಕ್ಷಣಕ್ಕೆ ಡೆವಿಡ್ಗೆ ಅದು ಕಾಣಲಿಲ್ಲ. ಆ ಕರಡಿಗೂ ಡೆವಿಡ್ ಇರುವುದು ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಮರುಕ್ಷಣದಲ್ಲೇ ಡೆವಿಡ್ ಮತ್ತು ಕರಡಿ ಪರಸ್ಪರರು ನೋಡಿಕೊಂಡಿದ್ದಾರೆ. ಡೆವಿಡ್ ಭಯಗೊಂಡರೆ, ಕರಡಿಯೂ ಗಾಬರಿಗೊಂಡಿತು. ಡೆವಿಡ್ ಅಲ್ಲಿಂದ ಏಳಲಿಲ್ಲ, ಓಡಲಿಲ್ಲ. ಕರಡಿಯನ್ನು ನೋಡುತ್ತ ಹಾಗೇ ಕುಳಿತೇ ಇದ್ದರು. ಕರಡಿ ಇದು ತನಗೆ ಸೇರಿದ ಏರಿಯಾ ಅಲ್ಲ ಎಂದು ಅಲ್ಲಿಂದ ಕಾಲ್ಕಿತ್ತಿತು. ಡೆವಿಡ್ಗೂ ಅಪಾಯವಾಗಲಿಲ್ಲ, ಕರಡಿಗೂ ಏನೂ ಆಗಲಿಲ್ಲ. ಇವಿಷ್ಟೂ ದೃಶ್ಯ ಡೆವಿಡ್ ಮನೆಯ ಡೋರ್ಬೆಲ್ ಕ್ಯಾಮರಾದಲ್ಲಿ ಸೆರೆಯಾಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:Viral Video: ‘ಪ್ರೀತಿನೇ ಆ ದ್ಯಾವ್ರು ತಂದ..’; ಕಾಯಿಲೆ ಪೀಡಿತ ಪತ್ನಿಗೆ ತುತ್ತುಣಿಸಿದ ಅಜ್ಜ, ಮನಮಿಡಿಯುವ ದೃಶ್ಯವಿದು
ವಿಡಿಯೊವನ್ನು ಮೂರು ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಹಲವರು ಕಮೆಂಟ್ ಮಾಡಿ, ತಮಗೂ ಬೇರೆಬೇರೆ ಸನ್ನಿವೇಶದಲ್ಲಿ ಇಂಥದ್ದೇ ಅನುಭವ ಆಗಿತ್ತು ಎಂದು ಹೇಳಿದ್ದಾರೆ. ‘ಕರಡಿಗಳು ಹೀಗೆ ಮನೆಯಿದ್ದಲ್ಲಿ ಬಂದರೆ ದಾಳಿ ಮಾಡುವುದಿಲ್ಲ’ ಎಂದು ಒಬ್ಬರು ಹೇಳಿದ್ದಾರೆ. ‘ಅಬ್ಬಾ, ಎಚ್ಚರಿಕೆಯಿಂದ ಇರಬೇಕು’ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.