ಬೆಂಗಳೂರು: ಬೆಂಗಳೂರಿನ (Bengaluru News) ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿಯಲ್ಲಿರುವ ಚೈತನ್ಯ ಪ್ಯಾರಡೈಸ್ ಅಪಾರ್ಟಮೆಂಟ್‌ನಲ್ಲಿ (Bommanahalli apartment) ರಂಗೋಲಿ ರಗಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಕ್ಕದ ಮನೆಯ ಯುವತಿ ನಿತ್ಯ ಮನೆ ಮುಂದಿನ ರಂಗೋಲಿಯನ್ನು ತುಳಿದು ಅಳಿಸಿ ಹಾಕಿ, ಕಿರುಕುಳ ನೀಡುತ್ತಿದ್ದಾಳೆ ಎಂದು ದಂಪತಿ ದೂರಿದ್ದಾರೆ. ನೆರೆ-ಹೊರೆಯವರ ಗಲಾಟೆ ಪ್ರಕರಣವು ಠಾಣೆ (bengaluru incident)ಮೆಟ್ಟಿಲೇರಿದೆ.
ಪಕ್ಕದ ಮನೆಯಾಕೆ ರಂಗೋಲಿ ಅಳಿಸುವುದು, ಶೂ ರಾಕ್ ಅನ್ನು ಕಾಲಿನಲ್ಲಿ ಒದ್ದು ಬೀಳಿಸುತ್ತಿದ್ದಾಳೆ. ಈ ರೀತಿ ಸಾಕಷ್ಟು ಬಾರಿ ಮಾನಸಿಕ ಕಿರಿಕುಳ ನೀಡುತ್ತಿದ್ದಾಳೆ ಎಂದು ಸರಿತಾ ಎಂಬಾಕೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮೂರನೇ ಮಹಡಿಯಲ್ಲಿರುವ ಮಂಜುನಾಥ್, ಸರಿತಾ ದಂಪತಿ ಹಾಗೂ ನೇಹಾ ಪ್ರಣಬ್, ಜ್ಯೋತಿ ಸಿಂಗ್ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದಾರೆ. ಅಂದಹಾಗೆ ಮನೆ ಮುಂದೆ ಇರುವ ಸಣ್ಣ ಜಾಗದಲ್ಲಿ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಇವರಿಬ್ಬರ ನಡುವೆ ಕಿರಿಕ್ ಆಗಿದೆ. ಇದೇ ಗಲಾಟೆ ದೊಡ್ಡ ಮಟ್ಟಕ್ಕೆ ತಲುಪಿ ದೂರು, ಪ್ರತಿ ದೂರು ಹಂತಕ್ಕೆ ತಲುಪಿದೆ.
ಎರಡು ವರ್ಷದ ಹಿಂದೆ ನೇಹಾಗೆ ಮನೆ ಮುಂದೆ ಚಪ್ಪಲಿ ಸ್ಟ್ಯಾಂಡ್ ಇಡದಂತೆ ಮಂಜುನಾಥ್ ದಂಪತಿ ಹೇಳಿದ್ದರಂತೆ. ಆದರೆ ಇರುವ ಇಷ್ಟು ಜಾಗದಲ್ಲಿ ಇನ್ನೆಲ್ಲಿ ಇಡುವುದು ಎಂದು ಮಾತಿನ ಚಕಮಕಿ ನಡೆದಿದೆ. ಇದೇ ವಿಚಾರವು ಮುಂದುವರಿದಿದ್ದು, ನೇಹಾ ಅವರು ಮಂಜುನಾಥ್ ಮನೆಯವರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
ಬೆಡ್ ರೂಂ ಕಾಣಿಸುವಂತೆ ಸಿಸಿಟಿವಿ ಅಳವಡಿಕೆ
ಈ ವಿಚಾರಕ್ಕೆ ಸಂಬಂಧಿಸಿದಂತೆ ನೇಹಾ ಅವರ ವಾದವೇ ಬೇರೆ.. ಅವರ ವಕೀಲೆ ಹೇಳುವಂತೆ ಬೆಡ್ ರೂಂ ಕಾಣಿಸುವಂತೆ ಸಿಸಿಟಿವಿ ಹಾಕಿದ್ದಾರೆ. ಅದನ್ನು ತೆರವುಗೊಳಿಸಿ. ಇದು ನಮ್ಮ ಪ್ರೈವೇಸಿಗೆ ತೊಂದರೆ ಆಗುತ್ತಿದೆ ಎಂದು ನೇಹಾ ಮನವಿ ಮಾಡಿದ್ದಾರಂತೆ. ಸಿಸಿಟಿವಿ ತೆರವು ಮಾಡದೆ ಇದ್ದಾಗ, ಆರು ತಿಂಗಳ ಹಿಂದೆ ದೂರು ದಾಖಲು ಮಾಡಿದ್ದರಂತೆ. ನೇಹಾ ಕೊಟ್ಟ ಪ್ರತಿ ದೂರಿನ ಮೇಲೆ ಬೊಮ್ಮನಹಳ್ಳಿ ಪೊಲೀಸರು ಕಳೆದ ಡಿಸಂಬರ್‌ನಲ್ಲಿ ಮಂಜುನಾಥ್ ಮೇಲೆ 354A ಅಂದರೆ ಲೈಂಗಿಕ ದೌರ್ಜನ್ಯ ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ.
ಈಕೆಯಿಂದ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಪ್ರತಿ ದಿನ ಜಗಳವಾಡಲು ಆಗುವುದಿಲ್ಲ. ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾಳೆ ಎಂದು ಸರಿತಾ ಶಿಂಧೆ ಪೋಸ್ಟ್ ಮಾಡಿದ್ದಾರೆ. ಇನ್ನೂ ನಾವು ದೂರು ಕೊಟ್ಟರೆ ಪೊಲೀಸರು ಎನ್‌ಸಿಆರ್ ಮಾಡುತ್ತಾರೆ. ಆದರೆ ನಮ್ಮ ಮೇಲೆ ಪ್ರತಿ ದೂರು ಕೊಟ್ಟರೆ ಎಫ್ಐಆರ್ ಮಾಡುತ್ತಾರೆ.
354 A ಸೆಕ್ಷನ್ ಅಡಿಯಲ್ಲಿ ಕೇಸ್ ಹಾಕಿ, ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾತ್ರಿ ಇಡೀ ಠಾಣೆ ಮುಂದೆ ಕುಳಿತ ಮಂಜುನಾಥ್ ಹಾಗೂ ಸರಿತಾ ದಂಪತಿ, ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಾರು ಡಿಕ್ಕಿ; ವ್ಯಕ್ತಿ ಸಾವು, ಕಾಲ್ಕಿತ್ತ ಚಾಲಕ
Assault Case : ಪೊಲೀಸ್ ಠಾಣೆಗೆ ನುಗ್ಗಿ ಎಎಸ್‌ಐಗೆ ಹೊಡೆದ ಮಹಿಳೆ; ಇಬ್ಬರು ಆಸ್ಪತ್ರೆ ಪಾಲು
ಬೆಂಗಳೂರು: ಪ್ರಾಪರ್ಟಿ ವಿಚಾರದಲ್ಲಿ ನ್ಯಾಯ ಸಿಗಲಿಲ್ಲ ಎಂದು ಸಿಟ್ಟಾದ ಮಹಿಳೆಯೊಬ್ಬರು ಪೊಲೀಸ್ ಮೇಲೆ ಹಲ್ಲೆ (Assault Case) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಶನಿವಾರ ಮಧ್ಯಾಹ್ನ ಬೆಂಗಳೂರಿನ (Bengaluru News) ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಅಶ್ವಿನಿ ಎಂಬಾಕೆ ಎಎಸ್ಐ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಹಲವು ದಿನಗಳಿಂದ ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಅಶ್ವಿನಿ ಬಂದು ಹೋಗುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಅಶ್ವಿನಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು ಎನ್ನಲಾಗಿದೆ.ಆದರೆ ತನ್ನ ಸಮಸ್ಯೆಗೆ ನ್ಯಾಯ ಸಿಗುತ್ತಿಲ್ಲವೆಂಬ ಸಿಟ್ಟಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥತೆಯಾಗಿರುವ ಅಶ್ವಿನಿ ಕಳೆದ 15 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ಠಾಣೆಗೆ ಬಂದ ಅಶ್ವಿನಿ ಎಎಸ್‌ಐ ನಾಗರಾಜು ಜತೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಏಕಾಏಕಿ ಸಿಟ್ಟಾಗಿ ಕೈಗೆ ಸಿಕ್ಕ ವಸ್ತುವಿನಿಂದ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾಳೆ.
ಸದ್ಯ ಹಲ್ಲೆಗೊಳಗಾದ ಎಎಸ್ಐ ನಾಗರಾಜು ಅವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಅಶ್ವಿನಿಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ