Site icon Vistara News

Boycott PhonePe: ತಾಕತ್ತಿದ್ರೆ ಫೋನ್ ಪೇ ತರಹದ ಕಂಪನಿ ಹುಟ್ಟುಹಾಕಿ; ಕನ್ನಡಿಗರ ವಿರುದ್ಧ ಯುವಕ ಆಕ್ರೋಶ! ವಿಡಿಯೊ ಇದೆ

Boycott PhonePe

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಫೋನ್‌ ಪೇ ಸಿಇಒ ಸಮೀರ್‌ ನಿಗಮ್‌ ಕ್ಷಮೆ ಕೋರಿದ್ದರು. ಈ ನಡುವೆ ʼಬಾಯ್ಕಾಟ್‌ ಫೋನ್‌ ಪೇʼ ಅಭಿಯಾನ (Boycott PhonePe) ಟ್ರೆಂಡ್‌ ಆಗುತ್ತಿರುವುದಕ್ಕೆ ಯುವಕನೊಬ್ಬ ಕನ್ನಡಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದು, ತಾಕತ್ತಿದ್ದರೆ ಫೋನ್ ಪೇ ತರಹದ ಕಂಪನಿಯನ್ನು ಹುಟ್ಟು ಹಾಕಿ ಎಂದು ಸವಾಲು ಹಾಕಿದ್ದಾನೆ.

ಕಿರಣ್‌ ಎಂಬ ಯುವಕ ವಿಡಿಯೊ ಹಂಚಿಕೊಂಡಿದ್ದು, ಇದರಲ್ಲಿ ಫೋನ್ ಪೇ ಅನ್ ಇನ್‌ಸ್ಟಾಲ್ ಮಾಡುತ್ತಿರುವ ಕನ್ನಡಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಫೋನ್ ಪೇ ಪರ ವಹಿಸಿಕೊಂಡು ಯುವಕ ಮಾತನಾಡಿದ್ದು, ತಾಕತ್ತಿದ್ದರೆ ಫೋನ್ ಪೇ ತರಹದ ಕಂಪನಿಯನ್ನು ಹುಟ್ಟು ಹಾಕಿ, ಇಂತಹ ಕಂಪನಿಗಳು ಇಲ್ಲಿ ಇಲ್ಲವೆಂದರೆ ಯಾರಿಗೂ ಆದಾಯ ಇಲ್ಲ. ಬೆಂಗಳೂರಿನಲ್ಲಿ ಬೇರೆ ದೇಶ, ರಾಜ್ಯದವರಿಂದಲೇ ಅರ್ಥಿಕತೆ ಬೆಳೆಯುತ್ತಿದೆ. ಬೇರೆ ಕಂಪನಿಗಳಿಲ್ಲವೆಂದರೆ ಏನೂ ಸಿಕ್ಕಲ್ಲ ಎಂದು ಹೇಳಿದ್ದಾನೆ. ಸದ್ಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಕನ್ನಡಿಗರಿಗೆ ಮೀಸಲಾತಿ ವಿರೋಧಿಸಿದ್ದಕ್ಕೆ ಫೋನ್‌ ಪೇ ಅನ್‌ ಇನ್‌ಸ್ಟಾಲ್‌ ಮಾಡುವುದು ದೊಡ್ಡ ವಿಚಾರವಲ್ಲ. ಅಂತಹ ಕಂಪನಿಯನ್ನು ಹುಟ್ಟುಹಾಕುವುದಕ್ಕೆ ಗಂಡಸುತನ ಇರಬೇಕು. ನಮ್ಮ ರಾಜಕಾರಣಿಗಳು ಹೇಳೋದನ್ನು ಕೇಳಿಕೊಂಡಿರುವ ನಮಗೆ ಇಂತಹ ಕಂಪನಿ ಸೃಷ್ಟಿಸಲು ಸಾಧ್ಯವಿಲ್ಲ. ಈ ರೀತಿ ಕಂಪನಿಗಳನ್ನು ಬಾಯ್ಕಾಟ್‌ ಮಾಡುವುದರಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ದೊಡ್ಡ ಹೊಡೆತ ಬೀಳುತ್ತೆ ಎಂದು ಯೋಚಿಸಿದ್ದೀರಾ? ರಾಜಕಾರಣಿಗಳು ಇಂತಹವುಗಳ ಬಗ್ಗೆ ಯೋಚಿಸಲ್ಲ. ಯಾಕೆಂದರೆ ಅವರ ಮಕ್ಕಳು, ಮೊಮ್ಮಕ್ಕಳು ವಿದೇಶದಲ್ಲಿರುತ್ತಾರೆ. ಈ ಕೆಟ್ಟ ರಾಜಕಾರಣಿಗಳ ಕುತಂತ್ರಗಳಿಗೆ ನೀವು ಬಲಿಯಾಗಬೇಡಿ. ಇಂತಹ ವಿಚಾರಗಳಿಂದ ದೇಶದ ಏಕತೆ, ಅಭಿವೃದ್ಧಿಗೆ ಅಡ್ಡಿಯಾಗಬಾರದು ಎನ್ನುವುದೇ ನನ್ನ ಉದ್ದೇಶ ಎಂದು ವಿಡಿಯೊದಲ್ಲಿ ಯುವಕ ಹೇಳಿದ್ದಾನೆ.

ಇದನ್ನೂ ಓದಿ | Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ

ಬಾಯ್ಕಾಟ್ ಫೋನ್ ಪೇ ಅಭಿಯಾನ

ಬೆಂಗಳೂರು: ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್‌ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡುವಂತೆ ಅಭಿಯಾನ ಮಾಡಲಾಗುತ್ತಿದೆ.

ಇನ್ನು ಕೆಲ ನೆಟ್ಟಿಗರು, ಯಾರಾದರೂ ನನ್ನ ಹೆಸರಲ್ಲಿ ಫೋನ್ ಪೇ ಮಾಡಿ ಎಂದರೆ ಯಾರು ಮಾಡಬೇಡಿ. ಯಾಕೆಂದರೆ ನನ್ನ ಹತ್ತಿರ ಫೋನ್ ಪೇ ಇಲ್ಲ. ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಕೊಡುವುದಕ್ಕೆ ಎದುರು ಮಾಡಿರುವ ಫೋನ್‌ಪೇ ಸಿಇಒಗೆ ಬುದ್ಧಿ ಕಲಿಸಲು ಫೋನ್‌ಪೇ ಅನ್‌ಇನ್ಸ್ಟಾಲ್ ಮಾಡಿ. ಕನ್ನಡಿಗರ ಬಲ ತೋರಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

Exit mobile version