ಟಿಕೇಟು ಖರೀದಿಸಿ ಸಿನೆಮಾ ನೋಡುತ್ತೇವೆ. ಸರ್ಕಸ್ಸು, ನಾಟಕ ನೋಡುತ್ತೇವೆ. ದುಡ್ಡು ಕೊಟ್ಟು ರೆಸಾರ್ಟ್ ಬುಕ್ ಮಾಡಿ ಊಟ ತಿಂಡಿ ಮೋಜು ಮಸ್ತಿಗೆಲ್ಲಾ ದುಡ್ಡು ಖರ್ಚು ಮಾಡುತ್ತೇವೆ. ಏನೆಲ್ಲಾ ಸಾಧ್ಯವೋ ಅವನ್ನೆಲ್ಲ ಟಿಕೇಟು ಕೊಟ್ಟು ನೋಡುತ್ತೇವೆ, ಭಾಗವಹಿಸುತ್ತೇವೆ. ಆದರೆ ಇಂಥದ್ದೊಂದನ್ನು ಮಾತ್ರ ಈವರೆಗೆ ಅಷ್ಟಾಗಿ ಯಾರೂ ಯೋಚಿಸಿಲ್ಲ. ಇಲ್ಲೊಬ್ಬಳು ಸುಂದರಿ ನನ್ನ ಮದುವೆ ನೋಡಬೇಕೆಂದರೆ ಟಿಕೇಟು ಹಣ ಕೊಟ್ಟು ಭಾಗವಹಿಸಿ ಎನ್ನುತ್ತಿದ್ದಾಳೆ!
ತಮಾಷೆಯಲ್ಲ, ಇದು ಸತ್ಯ. ಇಂದು ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಿನಲ್ಲಿ ನಡೆಯುವ ಮದುವೆಗಳನ್ನು ನೋಡಬೇಕಿದ್ದರೆ ಇದು ಸಕಾಲ. ಆಕೆಯ ಮದುವೆಯನ್ನು ಭರ್ಜರಿ ಜಾಗವೊಂದರಲ್ಲಿ ನೋಡಿಕೊಂಡು, ಭರ್ಜರಿಯಾಗಿ ಉಂಡು, ಅಲ್ಲೇ ತಿರುಗಾಡಿ ಬರಬೇಕೆಂದಿದ್ದರೆ ಆಕೆಯ ಮದುವೆಯ ಟಿಕೆಟ್ ಖರೀದಿಸಿ ಮದುವೆ ನೋಡಿ ಚೆನ್ನಾಗಿ ಉಂಡು ತೇಗಿ ಬರಬಹುದು. ಆದರೆ ಊಟಕ್ಕೂ ಪ್ರತ್ಯೇಕ ದರವಿದೆ. ಜೊತೆಗೆ ಅಲ್ಲಿಗೆ ಹೋಗಿ ಬರುವ ಖರ್ಚು, ವಿಮಾನ ದರ ಎಲ್ಲವನ್ನೂ ನೀವೇ ನೋಡಿಕೊಳ್ಳಬೇಕು ಎಂದು ಆಕೆ ಹೇಳಿದ್ದಾಳೆ.
೪೦ರ ಹರೆಯದ ಇಂಗ್ಲೆಂಡ್ ಮೂಲದ ಮಾಡೆಲ್ ಕಾರ್ಲಾ ಬೆಲ್ಲೂಸಿ ತನ್ನ ೫೨ರ ಹರೆಯದ ಪ್ರಿಯಕರ ಜೋವನ್ನಿ ಜೊತೆಗೆ ಸುಮಾರು ೪೦ ಸಾವಿರ ಪೌಂಡ್ ವೆಚ್ಚದ ಭಾರೀ ಬಜೆಟ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾಳೆ. ಈ ಸಂದರ್ಭದಲ್ಲಿ ಕೊಂಚವಾದರೂ ಹಣ ಉಳಿಸಬೇಕೆನ್ನುವ ಯೋಚನೆ ಮಾಡಿರುವ ಈಕೆ, ಯಾರಿಗಾದರೂ ತನ್ನ ಅದ್ದೂರಿ ಮದುವೆ ನೋಡಬೇಕೆಂದಿದ್ದಲ್ಲಿ ೧೦೦ ಪೌಂಡ್ ಕೊಟ್ಟು ಸೀಟು ಬುಕ್ ಮಾಡಿಕೊಳ್ಳಬಹುದು ಎಂದು ಆಕೆ ಹೇಳಿದ್ದಾಳೆ.
ಇದನ್ನೂ ಓದಿ: ದುರ್ಗಾಪುರದ ಯುವಕರಿಗೆ ನಿತ್ಯವೂ ಬೇಕು ರಾಶಿ ರಾಶಿ ಕಾಂಡೊಮ್; ಇವರಿಗೆ ನಶೆಯ ಚಟ !
ಹಾಗಂತ ನಾನು ಯಾರನ್ನೂ ನನ್ನ ಮದುವೆಗೆ ಬನ್ನಿ ಎಂದು ಒತ್ತಾಯ ಮಾಡುವುದಿಲ್ಲ. ಅದು ಅವರವರ ಆಸಕ್ತಿ, ಇಷ್ಟಕ್ಕೆ ಬಿಟ್ಟದ್ದು. ಮದುವೆಯಲ್ಲಿ ಭಾಗವಹಿಸಲು ಯಾರಾದರೂ ಅವರಾಗಿಯೇ ಆಸಕ್ತಿ ತೋರಿಸಿದರೆ ಅವರು ಈ ದರ ನೀಡಿ ಭಾಗವಹಿಸಲು ಅನುವು ಮಾಡಿಕೊಡಲಾಗುತ್ತದೆ ಎಂದಿದ್ದಾಳೆ.
ಈ ಮದುವೆ ಮುಂದಿನ ವರ್ಷ ಜುಲೈನಲ್ಲಿ ಆಫ್ರಿಕಾದ ಕೇಪ್ ವರ್ಡ್‌ನಲ್ಲಿ ನಡೆಯಲಿದ್ದು, ಈಕೆಯ ಮದುವೆಗೆ ಆಸೆಪಟ್ಟು ನೋಡಲು ಬರುವವರಿಂದ ೩,೦೦೦ ಪೌಂಡ್ ಊಟಕ್ಕೆ ಪೀಕಿಸಲಿದ್ದಾಳಂತೆ. ʻʻನನ್ನ ಮದುವೆಗೆ ಜನರು ಟಿಕೆಟ್ ದರ ಕೊಟ್ಟು ಬಂದು ನೋಡುತ್ತಾರೆ ಎಂದರೆ ಅದಕ್ಕಿಂತ ಸಂತೋಷದ ವಿಷಯ ಇನ್ಯಾವುದಿದೆ? ನನಗಂತೂ ಇದು ನನ್ನ ಕನಸಿನ ಮದುವೆ. ಹಾಗೂ ಕೊನೆಯ ಮದುವೆ. ನನಗೆ ಮುಂದೆ ಇನ್ನು ಮದುವೆಯಾಗುವ ಯೋಚನೆಗಳಿಲ್ಲ. ಹಾಗಾಗಿ ಇದನ್ನು ಎಷ್ಟು ಸಾಧ್ಯವೋ ಅಷ್ಟು ಖುಷಿಯ ಗಳಿಗೆಯನ್ನಾಗಿ ಪರಿವರ್ತಿಸುವ ಆಸೆಯಿದೆʼʼ ಎಂದಿದ್ದಾಳೆ.
ಮದುವೆಗಾಗಿ ೬,೦೦೦ ಪೌಂಡ್ ಬೆಲೆಯ ಡ್ರೆಸ್ ಈಕೆ ಹೊಲಿಸಿಕೊಂಡಿದ್ದು, ಸುಮಾರು ೬,೦೦೦ ಪೌಂಡ್ ಬೆಲೆಯ ಉಂಗುರವನ್ನು ಈಗಾಗಲೇ ತನ್ನ ನಿಶ್ಚಿತಾರ್ಥದ ಉಂಗುರವಾಗಿ ಧರಿಸಿದ್ದಾಳೆ.
ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿರುವ ಈಕೆ ಮಕ್ಕಳನ್ನು ಮದುವೆಯ ನಂತರ ಇಂಗ್ಲೆಂಡ್‌ಗೆ ಕಳುಹಿಸಿ ತಾನು ತನ್ನ ಹೊಸ ಗಂಡನ ಜೊತೆಗೆ ಹನಿಮೂನ್ ಆಚರಿಸಿ ಮತ್ತೆ ಇಂಗ್ಲೆಂಡ್‌ಗೆ ಮರಳುತ್ತೇನೆ ಎಂದಿದ್ದಾಳೆ. ತನ್ನ ಹಾಗೂ ಜೋವನ್ನಿ ನಡುವಿನ ಪ್ರೀತಿಯ ಸೀಕ್ರೇಟ್ಟೇ ಇಂಥದ್ದು. ವಾರಕ್ಕೊಮ್ಮೆ ರೊಮ್ಯಾಂಟಿಕ್ ಡಿನ್ನರ್ ಹಾಗೂ ಮಕ್ಕಳನ್ನು ಬಿಟ್ಟು ನಾವಿಬ್ಬರೇ ಹೋಗುವ ಐಷಾರಾಮಿ ಪ್ರವಾಸಗಳು ನಮಗೆ ಖುಷಿಕೊಡುತ್ತವೆ. ನಾನು ಇಷ್ಟು ಮಾಡಿದರೆ ಜೋವನ್ನಿ ಸಂತೋಷವಾಗಿರುತ್ತಾನೆ ಎಂದು ಆಕೆ ಹೇಳಿದ್ದಾಳೆ. ಕಳೆದ ವರ್ಷ ಆಸ್ಟ್ರೇಲಿಯಾದ ವಧುವೊಬ್ಬರು ತಮ್ಮ ಮದುವೆಗೆ ಬರಲಿಚ್ಛಿಸುವವರಿಗೆ ಇದೇ ರೀತಿ ೯೯ ಡಾಲರ್ ಟಿಕೆಟ್ ದರ ವಿಧಿಸಿದ್ದಳು. ಇದು ಮದುವೆಯಲ್ಲಿ ಭಾಗವಹಿಸಿ ಊಟವನ್ನೂ ಒಳಗೊಂಡಿತ್ತು.
ಇದನ್ನೂ ಓದಿ: Viral News | ಪಾಕಿಸ್ತಾನದ ವಕ್ರ ಕುತ್ತಿಗೆಯ ಬಾಲಕಿಗೆ ದೇವರಾದ ಭಾರತದ ಡಾಕ್ಟರ್!