Site icon Vistara News

Rahul Gandhi: ರಾಹುಲ್‌ ಗಾಂಧಿಗೆ “ಮೊದಲು ರಾಯ್‌ಬರೇಲಿಯಿಂದ ಗೆಲ್ಲಿ…” ಎಂದ ಚೆಸ್‌ ದಂತಕಥೆ ಗ್ಯಾರಿ ಕಾಸ್ಪರೋವ್!

rahul gandhi gary Kasparov

ಹೊಸದಿಲ್ಲಿ: ಖ್ಯಾತ ಚೆಸ್ ಆಟಗಾರ (Chess legend) ಗ್ಯಾರಿ ಕಾಸ್ಪರೋವ್ (Gary Kasparov) ಅವರು “ಚೆಸ್‌ನಲ್ಲಿ ಅಗ್ರಸ್ಥಾನಕ್ಕೆ ಸವಾಲು ಹಾಕುವ ಮೊದಲು ರಾಯ್ ಬರೇಲಿಯನ್ನು *Rae Bareli) ಮೊದಲು ಗೆಲ್ಲಿರಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ (Social Media X) ಬಳಕೆದಾರರ ಜೊತೆ ನಡೆದ ಒಂದು ಚಾಟ್‌ ವೇಳೆ ಅವರ ಈ ಮಾತು ಬಂತು.

2005ರಲ್ಲಿ ಸ್ಪರ್ಧಾತ್ಮಕ ಚೆಸ್‌ನಿಂದ ನಿವೃತ್ತರಾದ ರಷ್ಯಾದ ಚೆಸ್‌ ದಂತಕಥೆ ಎನಿಸಿದ ಕಾಸ್ಪರೋವ್‌, ಶುಕ್ರವಾರ ಎಕ್ಸ್‌ನಲ್ಲಿ ಬಳಕೆದಾರರ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿದ್ದರು. ಕಾಸ್ಪರೋವ್‌ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಟು ವಿಮರ್ಶಕರಾಗಿದ್ದು, ಇದಕ್ಕಾಗಿ ಆಡಳಿತದ ಆಕ್ರೋಶ ಎದುರಿಸಿ ದೇಶದಿಂದ ಪಲಾಯನ ಮಾಡಿ ಕ್ರೊಯೇಷಿಯಾದಲ್ಲಿ ನೆಲೆಸಿದ್ದಾರೆ.

ಇತ್ತೀಚೆಗಷ್ಟೇ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ ತಮ್ಮ ಮೊಬೈಲ್ ಫೋನ್‌ನಲ್ಲಿ ಚೆಸ್ ಆಡುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಪೋಸ್ಟ್ ಮಾಡಿತ್ತು. ಈ ವಿಡಿಯೋವನ್ನು ಬಳಕೆದಾರರೊಬ್ಬರು ಕಾಸ್ಪರೋವ್‌ಗೆ ಟ್ಯಾಗ್‌ ಮಾಡಿದ್ದರು. ವೀಡಿಯೊದಲ್ಲಿ ರಾಹುಲ್‌, ಕಾಸ್ಪರೋವ್ ಅವರನ್ನು ತಮ್ಮ ನೆಚ್ಚಿನ ಚೆಸ್ ಆಟಗಾರ ಎಂದು ಹೇಳಿದ್ದರು. ಚೆಸ್‌ ಆಟ ಮತ್ತು ರಾಜಕೀಯದ ನಡುವಿರುವ ಸಾಮ್ಯತೆಗಳ ಬಗ್ಗೆ ಮಾತಾಡಿದ್ದರು.

“…ಒಮ್ಮೆ ನೀವು ಆಟದಲ್ಲಿ ಸ್ವಲ್ಪ ಉತ್ತಮಗೊಂಡರೆ, ಎದುರಾಳಿಯ ಕಾಯಿಗಳು ವಾಸ್ತವವಾಗಿ ನಿಮ್ಮ ಇಚ್ಛೆಯಂತೆಯೇ ಕಾರ್ಯನಿರ್ವಹಿಸುತ್ತವೆ” ಎಂದು ರಾಹುಲ್‌ ಗಾಂಧಿ ಚದುರಂಗ ಮತ್ತು ರಾಜಕೀಯವನ್ನು ಹೋಲಿಸಿದ್ದರು.

ಈ ವಿಡಿಯೋಗೆ ಉತ್ತರಿಸಿದ ಕಾಸ್ಪರೋವ್, “ನೀವು ಅಗ್ರಸ್ಥಾನಕ್ಕಾಗಿ ಸವಾಲು ಹಾಕುವ ಮೊದಲು ಮೊದಲು ರಾಯ್‌ಬರೇಲಿಯಿಂದ ಗೆಲ್ಲಬೇಕು ಎಂದು ಸಾಂಪ್ರದಾಯಿಕವಾಗಿ ಅಪೇಕ್ಷಿಸಲಾಗುತ್ತದೆ” ಎಂದಿದ್ದರು. ನಂತರ ಮತ್ತೊಂದು ಪೋಸ್ಟ್‌ ಹಾಕಿ, ತಮ್ಮ ಸಣ್ಣ ಜೋಕ್‌ ರಾಜಕೀಯ ಪರಿಣತಿಯದ್ದಲ್ಲ ಎಂದಿದ್ದಾರೆ.

“ನನ್ನ ಈ ಚಿಕ್ಕ ಜೋಕ್‌, ಭಾರತೀಯ ರಾಜಕೀಯದಲ್ಲಿ ಪರಿಣತಿಯಿಂದ ಬಂದಿದ್ದಲ್ಲ. ಆದರೆ ಹಿಂದೊಮ್ಮೆ ನನ್ನನ್ನು “ಸಾವಿರ ಕಣ್ಣುಗಳ ದೈತ್ಯ” ಎಂದು ಹೆಸರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ, ರಾಜಕಾರಣಿಯೊಬ್ಬರು ನನ್ನ ಪ್ರೀತಿಯ ಆಟದಲ್ಲಿ ತೊಡಗುವುದನ್ನು ನೋಡಲು ನನಗೆ ಸಂತೋಷವಾಗುತ್ತದೆ” ಎಂದಿದ್ದಾರೆ ಅವರು.

“@Kasparov63 ಮತ್ತು @vishy64theking ಅವರು ಬೇಗನೆ ನಿವೃತ್ತರಾದರು ಮತ್ತು ನಮ್ಮ ಕಾಲದ ಶ್ರೇಷ್ಠ ಚೆಸ್ ಪ್ರತಿಭೆಯನ್ನು ಎದುರಿಸಬೇಕಾಗಿಲ್ಲ” ಎಂದು X ಬಳಕೆದಾರರು ಋಾಹುಲ್‌ ಗಾಂಧಿಯವರ ಪೋಸ್ಟ್‌ಗೆ ಕಾಮೆಂಟ್‌ನಲ್ಲಿ ಹೇಳಿದ್ದರು.

ರಾಹುಲ್‌ ಗಾಂಧಿ ಶುಕ್ರವಾರ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಅವರು ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದಾರೆ. ಮಾಜಿ ವಿಶ್ವ ನಂಬರ್ ಒನ್ ಮತ್ತು ವಿಶ್ವ ಚಾಂಪಿಯನ್ ಚೆಸ್‌ ಆಟಗಾರ ಕಾಸ್ಪರೋವ್ 1985ರಲ್ಲಿ 22ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು. ಈಗ ರಾಜಕೀಯ ಕಾರ್ಯಕರ್ತರಾಗಿದ್ದಾರೆ.

ಅಪ್ರತಿಮ ಆಟಗಾರ, ಭಾರತೀಯ ಶ್ರೇಷ್ಠ ವಿಶ್ವನಾಥನ್ ಆನಂದ್ ಅವರ ಸಮಕಾಲೀನರು. ಇತ್ತೀಚೆಗೆ, 17 ವರ್ಷದ ಡಿ. ಗುಕೇಶ್ ಅವರು ವಿಶ್ವ ಪ್ರಶಸ್ತಿಗೆ ಅತಿ ಕಿರಿಯ ಚಾಲೆಂಜರ್ ಎಂಬ ಕಾಸ್ಪರೋವ್ ಅವರ ದಾಖಲೆಯನ್ನು ಮೀರಿಸಿದರು. ಆಗ ಕಾಸ್ಪರೋವ್‌ ಅವರು Xನಲ್ಲಿ ಗುಕೇಶ್‌ಗೆ ಅಭಿನಂದನಾ ಪೋಸ್ಟ್ ಹಾಕಿದ್ದರು. ಅವರು ಗುಕೇಶನನ್ನು “ಭಾರತೀಯ ಭೂಕಂಪ” ಎಂದು ಬಣ್ಣಿಸಿದ್ದರು.

ಇದನ್ನೂ ಓದಿ: Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Exit mobile version