Site icon Vistara News

Viral Video: ಭಾರತದ ಕುರಿಗಾಹಿಗಳ ಬೆದರಿಕೆಗೆ ಚೀನಾ ಆರ್ಮಿ ಸ್ಟನ್‌!

China army stun to the threat of Indian shepherds, Viral Video

ಶ್ರೀನಗರ: ವಾಸ್ತವ ಗಡಿ ರೇಖೆ(LAC) ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಯತ್ನಿಸಿದ ಚೀನಾ ಸೈನಿಕರನ್ನು (China Soldiers) ಲಡಾಖ್ ಕುರಿಗಾಹಿಗಳ (Indian shepherds) ಗುಂಪು ಧೈರ್ಯದಿಂದ ಎದುರಿಸಿದ ಘಟನೆ ನಡೆದಿದೆ. 2020ರ ಗಾಲ್ವಾನ್ ಘರ್ಷಣೆಯ ನಂತರ ಸ್ಥಳೀಯ ಕುರಿಗಾಹಿಗಳು ಈ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದರು. ಲಡಾಖಿ ಕುರಿಗಾಹಿಗಳು ಮತ್ತು ಚೀನಿ ಸೈನಿಕರು ನಡುವಿನ ವಾಗ್ವಾದದ ವಿಡಿಯೋ (Viral Video) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುರಿಗಾಹಿಗಳು ತಾವು ಭಾರತದ ಪ್ರದೇಶದಲ್ಲೇ ಕುರಿ ಮೇಯಿಸುತ್ತಿದ್ದೇವೆ ಎಂದು ಚೀನಿ ಸೈನಿಕರಿಗೆ ಆವಾಜ್ ಹಾಕುತ್ತಿರುವುದನ್ನು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು.

ಕಳೆದ ಮೂರು ವರ್ಷಗಳಲ್ಲಿ, ಪೂರ್ವ ಲಡಾಖ್‌ನಲ್ಲಿ ಅಲೆಮಾರಿಗಳು ಎಲ್‌ಎಸಿ ಬಳಿಯ ಹಲವಾರು ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದರು. ಇದೇ ಮೊದಲ ಬಾರಿಗೆ ಅವರು ಈ ಪ್ರದೇಶದಲ್ಲಿ ಕುರಿ ಮೇಯಿಸುವ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ. ಅಲ್ಲದೇ, ಆ ಜಾಗದಿಂದ ಚೀನಿ ಸೈನಿಕರು ವಾಪಸ್ ಹೋಗುವಂತೆ ಒತ್ತಡ ಹೇರಿದ್ದಾರೆ.

ಎಲ್ಎಸಿ ಎಂಬುದು ಭಾರತ ಮತ್ತು ಚೀನಾದ ಪ್ರದೇಶಗಳನ್ನು ಪ್ರತ್ಯೇಕಿಸುವ ಒಂದು ಗಡಿರೇಖೆಯಾಗಿದೆ. ಆದರೆ, ಈ ರೇಖೆಯ ಬಗ್ಗೆ ಸಹಮತ ಇಲ್ಲದ ಕಾರಣ ಎರಡೂ ಕಡೆಯ ಪಡೆಗಳ ನಡುವಿನ ವಿವಾದಗಳಿಗೆ ಕಾರಣವಾಗಿವೆ, ಕೆಲವು ಸಂದರ್ಭಗಳಲ್ಲಿ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿವೆ.

ಚುಶುಲ್ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಅವರು ಸ್ಥಳೀಯ ಕುರಿಗಾಹಿಗಳು ತೋರಿದ ಪ್ರತಿರೋಧವನ್ನು ಶ್ಲಾಘಿಸಿದ್ದಾರೆ. ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ಭಾರತೀಯ ಸೇನೆಯನ್ನು ಕೊಂಡಾಡಿದ್ದಾರೆ. ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನೆ ಮಾಡಿದ ಧನಾತ್ಮಕ ಪ್ರಭಾವವನ್ನು ನೋಡುವುದು ಹರ್ಷದಾಯಕವಾಗಿದೆ, ಪ್ಯಾಂಗಾಂಗ್‌ನ ಉತ್ತರ ದಂಡೆಯಲ್ಲಿರುವ ಸಾಂಪ್ರದಾಯಿಕ ಹುಲ್ಲುಗಾವಲುಗಳಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಇದರಿಂದ ಅವರಿಗೆ ಸಾಧ್ಯವಾಗಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಸ್ಟಾಂಜಿನ್ ಘಟನೆಯ ಇನ್‌ಸ್ಟಾಗ್ರಾಮ್ ವೀಡಿಯೊಗೆ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಈ ತಿಂಗಳ ಆರಂಭದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಚೀನಾ ಸೈನಿಕರು ಅಲೆಮಾರಿಗಳ ಗೋಮಾಳವನ್ನು ಕಬ್ಜಾ ಮಾಡಲು ಹೊರಟಿದ್ದರು. ಆದರೆ, ನಮ್ಮ ಸ್ಥಳೀಯ ಕುರಿಗಾಹಿಗಳು ಅವರ ಎದುರು ಧೈರ್ಯ ತೋರಿ, ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ. ವಿವಿಧ ಗಡಿ ರೇಖೆಗಳ ಗ್ರಹಿಕೆಯು ಎಂದೂ ಮುಗಿಯದ ಪ್ರಕ್ರಿಯೆಯಾಗಿದೆ. ಆದರೆ, ಯಾವಾಗಲೂ ನಮ್ಮ ನೆಲ ಮತ್ತು ರಾಷ್ಟ್ರದ ಎರಡನೇ ರಕ್ಷಣಾ ಪಡೆಯಾಗಿ ಧೈರ್ಯ ತೋರುತ್ತಿರುವ ಕುರಿಗಾಹಿಗಳಿಗೆ ಸೆಲ್ಯೂಟ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಚೀನಾಗೆ ಪೆಟ್ಟು ಕೊಟ್ಟ ತೈವಾನ್‌ನ ಯಂಗ್‌ ಲಿಯುಗೆ ಪದ್ಮಭೂಷಣ; ಭಾರತಕ್ಕೆ ಇವರ ಕೊಡುಗೆ?

Exit mobile version