ಬೆಂಗಳೂರು: ನಿಮ್ಮ ಧರ್ಮಪತ್ನಿಯವರನ್ನು ಒಮ್ಮೆ ನೋಡಬೇಕು ಅಂತ ಆಸೆ ಸರ್, ಒಮ್ಮೆಯಾದರೂ ಅವರನ್ನು ತೋರ್ಸಿ ಸರ್, ಪರಿಚಯ ಮಾಡ್ಸಿ ಸರ್.. ಹೀಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ದುಂಬಾಲು ಬಿದ್ದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar). ಆಗ ಅವರಿಗೆ ಸಾಥ್ ನೀಡಿದ್ದಾರೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan). ಅಮ್ಮನನ್ನು ನಂಗೂ ಒಮ್ಮೆ ನೋಡ್ಬೇಕು ಸರ್ ಅಂತ ಅವರೂ ಬೆನ್ನು ಬಿದ್ದರು.
ಈ ಘಟನಾವಳಿ ನಡೆದಿದ್ದು, ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ದಿನ (ಫೆ. 16ರಂದು) ಮಧ್ಯಾಹ್ನದ ಬಳಿಕ ಆಯೋಜಿಸಲಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ನಡೆಸಿದ ಚಿಟ್ ಚಾಟ್ ವೇಳೆ (Chit chat with Siddaramaiah). ಈ ಚಿಟ್ ಚಾಟ್‌ನ್ನು ನಡೆಸಿಕೊಟ್ಟಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್.
ಸಿಎಂ ಸಿದ್ದರಾಮಯ್ಯ ಅವರ ಅಪರ ಕಾರ್ಯದರ್ಶಿ ಎಲ್.ಕೆ. ಅತೀಕ್, ಸಚಿವರಾದ ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಎಂ.ಸಿ. ಸುಧಾಕರ್, ಶಿವರಾಜ್ ತಂಗಡಗಿ ಮತ್ತಿತರರು ಬಜೆಟ್ ಮತ್ತು ಇತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಭಿವೃದ್ಧಿ, ಅರ್ಥ ಶಾಸ್ತ್ರ ಅರಿತಿರುವ ಜನನಾಯಕ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಬದುಕಿನ ಬಗ್ಗೆಯೂ ಲೋಕಾಭಿರಾಮ ಚರ್ಚೆಯೂ ನಡೆಯಿತು. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಅವರ ಖಾಸಗಿ ಬದುಕನ್ನು ಕೆಣಕಿದರು ಮತ್ತು ಇತರರು ತಮಾಷೆಯಾಗಿ ಕಾಲೆಳೆದರು.
ಅಲ್ಲಿ ನಡೆದ ಸಂಭಾಷಣೆಯ ಸಾರ ಇಲ್ಲಿದೆ
ಲಕ್ಷ್ಮೀ ಹೆಬ್ಬಾಳ್ಕರ್: ನೀವು ನಿಮ್ಮ ಜೀವನದ ಬಹುಶಃ 80% ಭಾಗವನ್ನು ಸಮಾಜಕ್ಕಾಗಿ, ಸಾಮಾಜಿಕ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರು. ನೀವು ಯಾವತ್ತಾದರೂ ನಿಮ್ಮ ಫ್ಯಾಮಿಲಿ ಜತೆ ಕೂತ್ಕೊಂಡು ಎಂಜಾಯ್ ಮಾಡ್ತೀರಾ ಅಥವಾ ಬೆಳಗ್ಗೆ ಅತೀಕ್ ಸರ್ ಬರ್ತಾರೆ, ನಂತ್ರ ನಾವೆಲ್ಲ ಬಂದು ಕೂರ್ತೀವಿ.. ಬರೇ ಇದೇ ಜೀವನ ಆಗಿ ಹೋಯ್ತಾ? ಸ್ವಲ್ಪ ಫ್ಯಾಮಿಲಿಗೂ ಟೈಮ್ ಕೊಡ್ತೀರಾ ಸಾರ್ ನೀವು?
ಸಿದ್ದರಾಮಯ್ಯ: ಫ್ಯಾಮಿಲಿಗೆ ಟೈಮ್ ಕೊಟ್ಟಿರುವುದು ಭಾರಿ ಕಡಿಮೆ. ಯಾಕೆಂದರೆ ನಾವು ಸಾಮಾಜಿಕ ಜೀವನದಲ್ಲಿರುವಾಗ ಇಡೀ ಸಮಾಜ ನಮ್ಮ ಫ್ಯಾಮಿಲಿ. ಫ್ಯಾಮಿಲಿಗೆ ಸಮಯ ಕೊಡ್ಲೇಬಾರ್ದು ಅಂತೇನಲ್ಲ, ನಾನು ಹಾಗೆ ಹೇಳುವುದಿಲ್ಲ. ಆದರೆ, ಸಮಯ ಸಿಗುವುದಿಲ್ಲ. ಹಾಗಾಗಿ ಅಷ್ಟೆ. ಈ ಬಗ್ಗೆ ಲೋಹಿಯಾ ಅವರು ಒಂದು ಮಾತು ಹೇಳೋರು. ನೀವು ಒಳ್ಳೆಯ ಸಾರ್ವಜನಿಕ ವ್ಯಕ್ತಿ ಆಗಬೇಕು ಎಂದರೆ ಮದುವೆ ಆಗಬಾರದು ಅಂತ (ಎಲ್ಲರೂ ಗೊಳ್ ಎಂದು ನಗು)!
ಸಮಾಜಕ್ಕೆ ನಿಮ್ಮನ್ನು ನೀವು ಅರ್ಪಣೆ ಮಾಡಿಕೊಳ್ಳಬೇಕು ಎಂದರೆ ಮದುವೆ ಆಗಬಾರದು!
ಲಕ್ಷ್ಮೀ ಹೆಬ್ಬಾಳ್ಕರ್ (ಕೈಗಳನ್ನು ಚಾಚಿ ಬೇಡುವಂತೆ ನಟಿಸುತ್ತಾ): ಸರ್ ಒಮ್ಮೆಯಾದರೂ, ಒಮ್ಮೆಯಾದರೂ ನಿಮ್ಮ ಧರ್ಮಪತ್ನಿಯವರನ್ನು ನಮಗೆ ಪರಿಚಯ ಮಾಡಿಸಿ ಕೊಡಿ. ಒಮ್ಮೆ ಅವರನ್ನು ನೋಡಬೇಕು ಅನ್ನುವ ಅಭಿಲಾಷೆ ಇದೆ.
ಜಮೀರ್ ಅಹಮದ್ ಖಾನ್: ನಮಗೆ ಎಲ್ಲಾರ್ಗೂ ಸರ್!
ಲಕ್ಷ್ಮೀ ಹೆಬ್ಬಾಳ್ಕರ್: ನೀವು ಬಸವಣ್ಣನವರ ತತ್ವವನ್ನು ಪಾಲನೆ ಮಾಡ್ತೀರಾ.. ಕಾಯಕವೇ ಕೈಲಾಸ ಎನ್ನು ನಂಬಿಕೆ ಹೊಂದಿದ್ದೀರಾ.. ನಿಮ್ಮ ಧರ್ಮ ಪತ್ನಿಯವರ ಬಗ್ಗೆ ಕೇಳಿದ್ದೇನೆ, ಅವರು ತುಂಬಾ ದೈವ ಭಕ್ತರು ಅಂತ. ನಾವು ಅವರನ್ನು ನೋಡೇ ಇಲ್ಲ ಸರ್, ಒಮ್ಮೆಯಾದರೂ ಅವಕಾಶ ಮಾಡಿಕೊಡಿ ಸರ್.
ಡಾ. ಎಂ.ಸಿ ಸುಧಾಕರ್: ಸರ್ ನೀವ್ಯಾಕೆ ನಿಮ್ಮ ಹೋಮ್ ಮಿನಿಸ್ಟರನ್ನು ಗೃಹಬಂಧನದಲ್ಲಿ ಇಟ್ಟಿದ್ದೀರಾ? ಹೋಮ್ ಮಿನಿಸ್ಟರ್ ಶುಡ್ ಬಿ ಪವರ್‌ಫುಲ್. ನಮ್ಮ ಹೋಮ್ ಮಿನಿಸ್ಟರ್ಸ್ ಎಲ್ಲ.. (ಮಾತು ಕಟ್ ಆಗುತ್ತದೆ)
ಸಿದ್ದರಾಮಯ್ಯ: ಸ್ವಾತಂತ್ರ್ಯ ಕೊಟ್ಟಿದ್ದೀನಿ ಅವರಿಗೆ. ಎಲ್ಲಿಗೆ ಬೇಕಾದರೂ ಹೋಗ್ಲಿಕೆ.. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಬಾ ಅಂತ ಹೇಳಿದ್ದೆ. ಬರ್ಲೇ ಇಲ್ಲ.. ಏನ್ಮಾಡೋಕಾಗುತ್ತೆ?
ಲಕ್ಷ್ಮೀ ಹೆಬ್ಬಾಳ್ಕರ್: ನೀವು ಒತ್ತಾಯ ಮಾಡಿ ಕರೀಬೇಕು ಸರ್.
ಜಮೀರ್: ನೀವು ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸಿಲ್ಲ ಸರ್..
ಸಿದ್ದರಾಮಯ್ಯ : ಹೌದು.. ಮೊದಲಿನಿಂದಲೂ ಆ ಅಭ್ಯಾಸ ಮಾಡಿಸಿಲ್ಲ. ಯಾಕೆಂದರೆ ನಾನು 1977ರಲ್ಲಿ ಮದುವೆಯಾದೆ. ಮದುವೆಯಾದ ತಕ್ಷಣ ತಾಲೂಕು ಬೋರ್ಡ್ ಮೆಂಬರ್ ಆದೆ. ಹಾಗಾಗಿ ರಾಜಕೀಯಕ್ಕೆ ಹೆಚ್ಚು ಸಮಯ ಕೊಡುವುದು ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ನೋಡಿ ನಾನು ಅನೇಕ ಸಾರಿ ಲೇಟಾಗಿ ಮನೆಗೆ ಹೋಗ್ತೀನಿ.. ಹೋಗುವಷ್ಟು ಹೊತ್ತಿಗೆ ಮಲಗಿಕೊಂಡು ಬಿಟ್ಟಿರ್ತಾರೆ.
(ಈ ನಡುವೆ ಫ್ಯಾಮಿಲಿಗೆ ಸಮಯ ಕೊಡಲು ಆಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೂ ಹೇಳಿದರು)
ಡಿ.ಕೆ. ಶಿವಕುಮಾರ್: ಆಯ್ತು ಈಗ ಲಕ್ಷ್ಮೀ ಕೇಳ್ತಿದಾರೆ.. ಎಲ್ಲರನ್ನೂ ಒಂದು ಊಟಕ್ಕೆ ಕರೆಸಿ.. ಪರಿಚಯ ಮಾಡಿಕೊಡಿ..
ಜಮೀರ್ ಖಾನ್: ಪರಿಚಯ ಮಾಡಿಕೊಡಿ ಸರ್ ಒಮ್ಮೆ,.. ನಾವು ಅಮ್ಮಾವ್ರನ್ನು ನೋಡಬೇಕು ಅಂತ ತಾನೇ..
ಸಿದ್ದರಾಮಯ್ಯ: ಕೇಳಿ ನೋಡ್ತೀನಿ.. ಅಂತ ನಗು (ಎಲ್ಲರೂ ಜೋರಾಗಿ ನಗು)
ಸಿಎಂ @siddaramaiah ಅವರ ಕೌಟುಂಬಿಕ ಬದುಕಿನ ಬಗ್ಗೆ ಲೋಕಾಭಿರಾಮದ ಮಾತುಗಳು…. pic.twitter.com/bJQZjR8Im5
— Karnataka Congress (@INCKarnataka) February 20, 2024