ಮೈಸೂರು: ಏಯ್ ಬಸವೇಗೌಡ.. ನಾನು ಇನ್ನೂ 25 ವರ್ಷ ಬದುಕುತ್ತೇನೆ (I Will live for another 25 years) ಕಣೋ.. ಹೀಗೆಂದು ಗೆಳೆಯನನ್ನು ಕರೆದು ತನ್ನ ಶತಾಯುಷ್ಯದ ಆಸೆ ವ್ಯಕ್ತಪಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ (CM Siddaramaiah). ಈಗ 76ನೇ ವಯಸ್ಸಿನಲ್ಲಿರುವ ಸಿದ್ದರಾಮಯ್ಯ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಸದಾ ಕಾಲ ಮನಸ್ಸನ್ನು ಜಾಗೃತ ಸ್ಥಿತಿಯಲ್ಲಿಟ್ಟುಕೊಂಡಿರುವ, ಈಗಲೂ ಜೀವನೋತ್ಸಾಹ ತುಂಬಿ ತುಳುಕುತ್ತಿರುವ ಸಿದ್ದರಾಮಯ್ಯ ಅವರಿಗೆ ಶತಾಯುಷಿಯಾಗಿ (Centenarian) ಬಾಳುವುದು ಕಷ್ಟವೇನಲ್ಲ. ಅವರೂ ಅದನ್ನು ಅಷ್ಟೇ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಇತ್ತು. ಮೈಸೂರಿನ ವಿಜಯನಗರದಲ್ಲಿರುವ ಬಂಟರ ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಆಗಿತ್ತು. ಆಗ ಮಾತನಾಡಿದ ಸಿದ್ದರಾಮಯ್ಯ ಅವರು, “”ಪತ್ತಿನ ಸಹಕಾರ ಸಂಘವನ್ನುಉದ್ಘಾಟನೆ ಮಾಡಿದ್ದು ನಾನೇ.. ರಜತ ಮಹೋತ್ಸವವನ್ನೂ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಸುವರ್ಣ ಮಹೋತ್ಸವವನ್ನೂ ನಾನೇ ಮಾಡಬೇಕು ಅಂದುಕೊಂಡಿದ್ದೇನೆ. ನೂರು ವರ್ಷಕ್ಕಿಂತ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆʼʼ ಎಂದರು.
ಅಲ್ಲೇ ಮುಂದೆ ಕೂತಿದ್ದ ತಮ್ಮ ಗೆಳೆಯರನ್ನು ಕರೆದು ʻʻಏಯ್, ಬಸವೇಗೌಡ ಇನ್ನು 25 ವರ್ಷ ಬದುಕುತ್ತೀನಿʼʼ ಎಂದು ಹೇಳಿದರು. ಈ ಮೂಲಕ ಶತಾಯುಷಿಯಾಗಿ ಬದುಕುವ ಆಸೆ ವ್ಯಕ್ತಪಡಿಸಿದರು ಸಿಎಂ ಸಿದ್ದರಾಮಯ್ಯ.
ಹೋಟೆಲ್ ಮತ್ತು ತಿನ್ನುವ ಆಸೆ ತೆರೆದಿಟ್ಟ ಸಿದ್ದರಾಮಯ್ಯ
ಇಡೀ ಕಾರ್ಯಕ್ರಮದಲ್ಲಿ ತುಂಬ ಲಹರಿಯಿಂದಲೇ ಮಾತನಾಡಿದ ಸಿದ್ದರಾಮಯ್ಯ ಅವರು, ʻʻಮೈಸೂರು ಪ್ರವಾಸಿಗರ ಸ್ವರ್ಗ. ಹೋಟೆಲ್ ಉದ್ಯಮ ಬೆಳೆದರೆ ಮೈಸೂರು ಬೆಳೆಯುತ್ತದೆ. ಡಾ.ರಾಜಕುಮಾರ್ ಅವರು ಅಭಿಮಾನಿಗಳೇ ದೇವರು ಅಂತ ಕರಿತಿದ್ರು. ನಾವು ಅತಿಥಿಗಳನ್ನೇ ದೇವರು ಅಂತ ಕರಿತಿದ್ದೀವಿ. ಆ ರೀತಿ ನಾವು ಕಾಣಬೇಕು, ಆತಿಥ್ಯ ನೀಡಬೇಕುʼʼ ಎಂದು ಕಿವಿ ಮಾತು ಹೇಳಿದರು.
ʻʻಮೈಸೂರಲ್ಲಿ ಓದುವಾಗ, ಲಾಯರ್ ಆಗಿದ್ದಾಗ ಪ್ರತಿದಿನ ಹೋಟೆಲ್‌ಗೆ ಹೋಗ್ತಿದ್ದೆ. ಪ್ರತಿದಿನ ಒಂದೊಂದು ಹೋಟೆಲ್‌ಗೆ ಹೋಗ್ತಿದ್ದೆ. ಎಲ್ಲೆಲ್ಲಿ ಚೆನ್ನಾಗಿ ತಿಂಡಿ ಸಿಗುತ್ತೆ ಅಲ್ಲೆಲ್ಲ ಹೋಗ್ತಿದ್ದೆ. ಅತಿ ಹೆಚ್ಚಾಗಿ ಇಂದ್ರ ಕೆಫೆಗೆ ಹೋಗ್ತಿದ್ದೆ. ರಾತ್ರಿ ವೇಳೆ ನಾನ್ ವೆಜ್ ಹೋಟೆಲ್ ಹುಡುಕಿಕೊಂಡು ಹೋಗ್ತಾ ಇದ್ದೆ. ನಾನು ಚುನಾವಣೆ ಗೆದ್ದಾಗ, ಸೋತಾಗ ಎಲ್ಲಾ ಸಂದರ್ಭದಲ್ಲೂ ಹೋಟೆಲ್‌ಗೆ ಹೋಗುತ್ತಿದ್ದೆʼʼ ಎಂದು ಹೋಟೆಲ್ ಜತೆ ಬೆಸೆದುಕೊಂಡ ಬದುಕನ್ನು ತೆರೆದಿಟ್ಟರು ಸಿದ್ದರಾಮಯ್ಯ.
ಇದನ್ನೂ ಓದಿ : CM Siddaramaiah : ಎಲ್ಲ ಸರ್ಕಾರಿ ಆಸ್ಪತ್ರೆಗಳು ಜಯದೇವದಂತೆ ಇರಲು ಯಾಕೆ ಸಾಧ್ಯವಿಲ್ಲ: ಸಿಎಂ ಪ್ರಶ್ನೆ
ಆ ಸ್ವಾತಿ ಬೇರೆ, ಈ ಸ್ವಾತಿ ಬೇರೆ: ಶ್ರೀವತ್ಸ ಕಾಲೆಳೆದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿದ ಸಿದ್ದರಾಮಯ್ಯ ಬಿಜೆಪಿ ಶಾಸಕ ಶ್ರೀವತ್ಸ ಅವರನ್ನೂ ಬಿಡದೆ ಕಾಲೆಳೆದರು.
ಒಂದು ಹಂತದಲ್ಲಿ ಹಾಸನದ ಸ್ವಾತಿ ಹೋಟಲ್ ಬಗ್ಗೆ ಚರ್ಚೆ ನಡೆಯಿತು. ಆಗ ಬಿಜೆಪಿ ಶಾಸಕ ಶ್ರೀವತ್ಸ ಕಾಲೆಳೆದ ಸಿಎಂ ಸಿದ್ದರಾಮಯ್ಯ ಅವರು, ʻʻನೀನು ಸ್ವಾತಿ ಹೋಟೆಲ್‌ಗೆ ಹೋಗಿ ಬಾʼʼ ಎಂದರು. ತಕ್ಷಣವೇ ಮೈಸೂರಿನ ಸ್ವಾತಿ ಬೇರೆ, ಹಾಸನದ ಸ್ವಾತಿ ಬೇರೆ. ಮೈಸೂರಿನ ಸ್ವಾತಿ ನಾನ್ ವೆಜ್ ಹೋಟೆಲ್ʼʼ ಅಂತ ಕಿಚಾಯಿಸಿದರು.