ಬೆಂಗಳೂರು: ಡೀಪ್ ಫೇಕ್ ವಿಡಿಯೋಗೆ (Deep Fake Video) ಈಗಾಗಲೇ ಸಾಕಷ್ಟು ಮಂದಿ ನಟ, ನಟಿಯರು ಬಲಿಯಾಗಿದ್ದಾರೆ. ಈಗ ಇದು ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ನನ್ನೂ (Actor darshan) ಕೂಡ ಬಿಟ್ಟಿಲ್ಲ. ಆರ್ಟಿಫಿಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ಎಡಿಟ್ ಮಾಡಿರುವ ದರ್ಶನ್- ಧನ್ವಿರ್ ವಿಡಿಯೋ (Darshan- Dhanvir Video) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ದರ್ಶನ್ ಅನ್ನು ರಾಜಾತಿಥ್ಯ ಪ್ರಕರಣದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಬಳ್ಳಾರಿ ಜೈಲು ಸೇರಿರುವ ದರ್ಶನ್ ಗೆ ಈಗ ಎಐ ಕಾಟ ಶುರುವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಟ ದರ್ಶನ್ ಹಾಗೂ ಧನ್ವೀರ್ ಪರಸ್ಪರ ಮುತ್ತು ಕೊಡುತ್ತಿರುವಂತೆ ವಿಡಿಯೋ ಎಡಿಟ್ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ.
ಇಷ್ಟು ದಿನ ನಟಿಮಣಿಯರ ಟಾರ್ಗೆಟ್ ಆಗಿದ್ದ ಎಐ ತಂತ್ರಜ್ಞಾನವನ್ನು ಇದೀಗ ದರ್ಶನ್ ಮೇಲೂ ಪ್ರಯೋಗ ಮಾಡಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ದಚ್ಚು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 9 ರವರೆಗೆ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ 24 ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶಿಸಿತ್ತು. ದರ್ಶನ್ ಮತ್ತು ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿ ಬುಧವಾರ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಜೈಲು ಅಧಿಕಾರಿಗಳು ಹಾಜರು ಪಡಿಸಲಾಯಿತು.
ತುಮಕೂರು ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದರು.
ಪವಿತ್ರ ಗೌಡ, ದರ್ಶನ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ನಂದಿಶ್ ,ರಾಘವೇಂದ್ರ, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಹೆಸರು ಕರೆದು ಹಾಜರಾತಿ ತೆಗೆದುಕೊಂಡ ನ್ಯಾಯಾಧೀಶರು ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಳಿಕ ನಟ ದರ್ಶನ್ ನನ್ನು ಬಳ್ಳಾರಿ ಜೈಲ್ ಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: Actor Chikkanna: ರೇಣುಕಾ ಸ್ವಾಮಿ ಕೊಲೆ ಪ್ರಕರಣ: ದರ್ಶನ್ ಭೇಟಿ ಮಾಡಿದ್ದಕ್ಕೆ ನಟ ಚಿಕ್ಕಣ್ಣ ವಿಚಾರಣೆಗೆ ಹಾಜರು
ಸೆಲೆಬ್ರಿಟಿಗಳ ಭೇಟಿಗೆ ಅವಕಾಶವಿಲ್ಲ
ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾವ ಸೆಲೆಬ್ರಿಟಿಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ. ಕೇವಲ ಕೈದಿಯ ಧರ್ಮಪತ್ನಿ, ರಕ್ತಸಂಬಂಧಿಗಳು ಮತ್ತು ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.
ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ವ್ಯಕ್ತಿಗಳು ಯಾರಿಗೂ ದರ್ಶನ್ ಭೇಟಿಗೆ ಅವಕಾಶ ಇರುವುದಿಲ್ಲ. ಇನ್ನೂ ಸಾಮಾನ್ಯ ಖೈದಿಯಂತೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರಲಿದ್ದು, ಗೃಹ, ಮನರಂಜನೆ ಸೌಲಭ್ಯಗಳು, ಕಾರಾಗೃಹದ ನಿಯಮದಂತೆ ಒದಗಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡುವ ಹಾಗಿಲ್ಲ. ಬೇರೆ ಕೈದಿಗಳ ಜತೆ ಬೆರೆಯದಂತೆ ಸೂಕ್ತ ಭದ್ರತೆ ನೀಡಲಾಗಿದೆ.