ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 17 ಮಂದಿಯ ಮೇಲೆ ಉತ್ತರ ಪ್ರದೇಶದ (uttarpradesh) ಗೋರಖ್‌ಪುರದ ಶಹಪುರದಲ್ಲಿ ಆಗಸ್ಟ್ 14ರಂದು ಹುಚ್ಚು ನಾಯಿಯೊಂದು ದಾಳಿ (Dog Attack) ನಡೆಸಿದೆ. ಇದರ ಭಯಾನಕ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆವಾಸ್ ವಿಕಾಸ್ ಕಾಲೋನಿಯಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ 22 ವರ್ಷದ ಆಶಿಶ್ ಯಾದವ್ ಮೇಲೆ ನಾಯಿಯು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಿಬಿಎ ವಿದ್ಯಾರ್ಥಿಯಾಗಿರುವ ಆಶಿಶ್ ಯಾದವ್ ಅವರು ರಾತ್ರಿ 9.45ರ ಸುಮಾರಿಗೆ ಮನೆಯ ಹೊರಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಂದ ನಾಯಿ ಏಕಾಏಕಿ ಅವರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ.
ಆಶಿಶ್ ನಾಯಿಯನ್ನು ಹಿಮ್ಮೆಟ್ಟಿಸಲು ಮತ್ತು ಅದರ ಮೇಲೆ ಪ್ರತಿ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಬೊಗಳುವುದು ಮತ್ತು ಕಚ್ಚುವುದನ್ನು ನಿಲ್ಲಿಸಲಿಲ್ಲ. ಆಶಿಶ್ ನೆಲಕ್ಕೆ ಬೀಳುತ್ತಿದ್ದಂತೆ ಅದು ಅವರ ಕಾಲಿಗೆ ಕಚ್ಚಿದೆ. ಅಲ್ಲದೇ ಜಿಗಿದು ಮುಖದ ಮೇಲೂ ಕಚ್ಚಿದೆ. ನಾಯಿಯ ದಾಳಿಯಿಂದ ಅವರ ಬಾಯಿ, ಕಣ್ಣು ಮತ್ತು ತುಟಿಗಳಿಂದ ರಕ್ತಸ್ರಾವವಾಗುತ್ತಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದಾದ ನಂತರ ಇನ್ನೊಂದು ಮನೆಯ ಗೇಟ್ ಬಳಿ ನಿಂತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ ನಾಯಿ ಆಕೆಯ ಕಾಲನ್ನು ಕಚ್ಚಿದೆ. ಇದರಿಂದ ಆಕೆಗೆ ಆಳವಾದ ಗಾಯವಾಗಿದ್ದು, ಹಲವಾರು ಹೊಲಿಗೆಗಳನ್ನು ವೈದ್ಯರು ಹಾಕಿದ್ದಾರೆ ಎನ್ನಲಾಗಿದೆ. ಅನಂತರ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೂ ನಾಯಿ ದಾಳಿ ಮಾಡಿದೆ.
ಆಶಿಶ್ ಅವರನ್ನು ರೇಬಿಸ್ ಲಸಿಕೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಔಷಧ ಖಾಲಿಯಾಗಿತ್ತು ಎಂದು ಆಶಿಶ್ ತಂದೆ ವಿಜಯ್ ಯಾದವ್ ಹೇಳಿದ್ದಾರೆ. ಬೀದಿ ನಾಯಿಗಳ ಹಾವಳಿ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ ಎಂದು ನಾಯಿ ದಾಳಿಯಿಂದ ಗಾಯಗೊಂಡಿರುವ ಅನೇಕರು ದೂರಿದ್ದಾರೆ.
ಇದನ್ನೂ ಓದಿ: Viral Video: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ
ಈ ಕುರಿತು ಪ್ರತಿಕ್ರಿಯಿಸಿರುವ ಗೋರಖ್‌ಪುರದ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ದುರ್ಗೇಶ್ ಮಿಶ್ರಾ ಅವರು, ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದರು. ಬೀದಿ ನಾಯಿಗಳ ಸಂತಾನಹರಣ ಅಭಿಯಾನವನ್ನು ನಾವು ನಿಯಮಿತವಾಗಿ ನಡೆಸುತ್ತಿದ್ದೇವೆ. ಪ್ರಾಣಿ ಜನನ ನಿಯಂತ್ರಣ ಕೇಂದ್ರವನ್ನು ಸಹ ನಿರ್ಮಿಸಲಾಗುತ್ತಿದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚು ಮದ್ದು ನೀಡಲಾಗುತ್ತಿದೆ ಮತ್ತು ಸಾಕು ನಾಯಿಗಳಿಗೆ ಲಸಿಕೆ ಹಾಕಲು ನಾವು ಜಾಗೃತಿ ಅಭಿಯಾನವನ್ನು ನಡೆಸುತ್ತೇವೆ ಎಂದು ಹೇಳಿದರು.