Site icon Vistara News

Dog farewell : ಹತ್ತಾರು ಅಪರಾಧ ಭೇದಿಸಿದ ಲೈಕಾಗೆ ನಿವೃತ್ತಿ; ಶೂ ಕಳಚಿಟ್ಟು ಹಾರ ಹಾಕಿ ಸನ್ಮಾನಿಸಿದ ಎಸ್‌ಪಿ, ಎಂಥಾ ಗೌರವ?

Farewell to dog lyca in kolar

ಕೋಲಾರ: ಯಾರೋ ಒಬ್ಬ ದೊಡ್ಡ ಸಾಧಕರಿಗೆ ಸನ್ಮಾನ ಮಾಡುವಾಗಲೂ ನಾವು ಚಪ್ಪಲಿ ಕಳಚಿಟ್ಟು ನಿಲ್ಲುವುದಿಲ್ಲ. ಆದರೆ, ಕೋಲಾರದ ಎಸ್‌ಪಿ ನಾರಾಯಣ (Kolara SP Naranayana) ಅವರು 11 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ವಾನ ಲೈಕಾ (Lyca, dog from dog squad) ಬೀಳ್ಕೊಡುಗೆ ಸಂದರ್ಭದಲ್ಲಿ (Dog farewell function) ಶೂ ಕಳಚಿಟ್ಟು ಆ ನಾಯಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು.

ನಾಯಿಗೆ ಈ ಸನ್ಮಾನ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ, ನಾಯಿಯ ಬಗೆಗಿನ ಪೊಲೀಸರ ಪ್ರೀತಿ ಮಾತ್ರ ಜಗತ್ತಿಗೆ ಅರ್ಥವಾಯಿತು.

ಸನ್ಮಾನ ಮಾಡುವಾಗ ಈ ರೀತಿ ಸಂಪ್ರದಾಯ ಪಾಲಿಸಬೇಕೂ ಅಂತಲ್ಲ. ಆದರೆ, ಹೀಗೆ ಮಾಡುತ್ತೇವೆ ಎಂದರೆ ನಾವು ಆ ನಾಯಿಗೆ ಅದೆಷ್ಟು ಗೌರವ ಕೊಡುತ್ತೇವೆ, ಪ್ರೀತಿಯನ್ನು ತೋರಿಸುತ್ತೇವೆ, ಹೃದಯದಲ್ಲಿ ಅದೆಷ್ಟು ಪೂಜ್ಯ ಭಾವನೆಯನ್ನು ಹೊಂದಿದ್ದೇವೆ ಎನ್ನುವುದರ ದ್ಯೋತಕ ಇದು. ಕೋಲಾರದ ಎಸ್‌ಪಿಯಾಗಿರುವ ಈ ಐಪಿಎಸ್‌ ಅಧಿಕಾರಿಯ ನಡವಳಿಕೆ ಎಲ್ಲ ಕಡೆ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ಇದು ಪೊಲೀಸ್‌ ಇಲಾಖೆಯಲ್ಲಿ ಒಂದು ನಾಯಿಯನ್ನು ಕೂಡಾ ಹೇಗೆ ಮನುಷ್ಯರಂತೆಯೇ ಟ್ರೀಟ್‌ ಮಾಡಲಾಗುತ್ತಿದೆ ಎನ್ನುವುದಕ್ಕೆ ಉದಾಹರಣೆ.

ಅಂದ ಹಾಗೆ ಹೀಗೆ ಸನ್ಮಾನ ಮಾಡಿಸಿಕೊಂಡ ಶ್ವಾನದಳದ ನಾಯಿ ಏನು ಸಾಮಾನ್ಯದ್ದಲ್ಲ. ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ನಾಯಿ 35ಕ್ಕೂ ಅಧಿಕ ಕಠಿಣ ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಿದೆ, ಅಪರಾಧಿಗಳನ್ನು ಪತ್ತೆ ಹಚ್ಚಿಕೊಟ್ಟಿದೆ.

ಹೌದು, ಕೋಲಾರದ ಡಿ.ಎ.ಆರ್ ಘಟಕದ ಅಪರಾಧ ದಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲೈಕಾ ಎಂಬ ಹೆಸರಿನ ಶ್ವಾನ ಕೊಲೆಗಾರರಿಗೆ, ದರೋಡೆಕೋರರಿಗೆ ನಿಜಕ್ಕೂ ಸಿಂಹಸ್ವಪ್ನವಾಗಿತ್ತು. 11 ವರ್ಷಗಳಿಂದ ಜಿಲ್ಲಾದ್ಯಂತ ಸುಮಾರು 300 ಕ್ಕೂ ಹೆಚ್ಚು ಕೊಲೆ, ದರೋಡೆ, ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿ 35 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸುವಲ್ಲಿ ಸಫಲವಾಗಿತ್ತು.

ಇಂಥ ನಾಯಿಯನ್ನು ಶ್ವಾನದಳ ಸಿಬ್ಬಂದಿ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲೇ ಸನ್ಮಾನ ಮಾಡಿದ್ದು ವಿಶೇಷ.

ಸೆಪ್ಟೆಂಬರ್ 14ರಂದು ಸೇವೆಯಿಂದ ವಯೋ ನಿವೃತ್ತಿ ಪಡೆದಿದೆ ಲೈಕಾ. ಕಾರ್ಯಕ್ರಮದಲ್ಲಿ ನಾಯಿಗೆ ಹಾರ, ಶಾಲು ಹಾಕಿ ಸನ್ಮಾನಿಸಲಾಗಿದೆ. ಈ ಹೊತ್ತಿನಲ್ಲಿ ಸ್ವತಃ ಎಸ್‌ಪಿ ನಾರಾಯಣ ಅವರು ನಾಯಿಯ ಗುಣಗಾನ ಮಾಡಿದರು. ಜತೆಗೆ ಉಳಿದ ಸಿಬ್ಬಂದಿ ಕೂಡಾ ಅದರ ಸಾಹಸಗಳನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ: Viral Video: ಅಭ್ಯಾಸದ ವೇಳೆ ನಾಯಿ ಮರಿಯೊಂದಿಗೆ ಆಟವಾಡಿದ ವಿರಾಟ್​ ಕೊಹ್ಲಿ

ಇದೆಲ್ಲವನ್ನೂ ಪ್ರೀತಿಯಿಂದಲೇ ಸ್ವೀಕರಿಸಿದ ನಾಯಿ ಕೂಡಾ ಕೃತಜ್ಞತಾ ಭಾವದಿಂದ ಕುಳಿತಿತ್ತು. ನಾಯಿಗೆ ಇದೆಲ್ಲ ಅರ್ಥವಾಯಿತೋ ಗೊತ್ತಿಲ್ಲ. ಆದರೆ, ಮೂಕ ಪ್ರಾಣಿಯೊಂದರ ಸಾಧನೆಯನ್ನು ಇಷ್ಟು ಪ್ರೀತಿಯಿಂದ ಗೌರವಿಸುವ ಮೂಲಕ ಕೋಲಾರ ಪೊಲೀಸ್‌ ಇಲಾಖೆ ಮಾತ್ರ ತನ್ನ ಗೌರವವನ್ನು ಹೆಚ್ಚಿಸಿಕೊಂಡಿತು. ಅದರಲ್ಲೂ ಎಸ್‌ಪಿ ನಾರಾಯಣ ಅವರ ಶೂ ಬಿಚ್ಚಿ ನಿಂತ ಚಿತ್ರ ಕದಲದೆ ನಿಂತಿತು. ಈ ಅಭಿಮಾನ, ಗೌರವ ಸಾರ್ವಜನಿಕರಲ್ಲಿ ಎಸ್‌ಪಿ ಹಾಗೂ ಪೊಲೀಸ್‌ ಇಲಾಖೆ ಮೇಲಿನ ಗೌರವ ಭಾವ ಹೆಚ್ಚಿಸಿದೆ.

Exit mobile version