Site icon Vistara News

Donald Trump: ಜಗನ್ನಾಥನ ಕೃಪೆಯಿಂದ ಡೊನಾಲ್ಡ್‌ ಟ್ರಂಪ್‌ ಪಾರು; ಏನಿದು ದೈವಿಕ ಪವಾಡ? ವೈರಲ್‌ ಪೋಸ್ಟ್‌ ಇಲ್ಲಿದೆ

Donald Trump

Donald Trump

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲೇ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣವು ಜಗತ್ತನ್ನೇ ಬೀಳಿಸಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆ ನಡೆದ ಗುಂಡಿನ ದಾಳಿಯಿಂದ ಪಾರಾದ ಬಳಿಕ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ “ಊಹಿಸಲಾಗದ ಘಟನೆ ಸಂಭವಿಸದಂತೆ ದೇವರು ತಡೆದಿದ್ದಾನೆ” ಎಂದು ಹೇಳಿದ್ದಾರೆ. ಈ ಮಧ್ಯೆ ದಶಕಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಜಗನ್ನಾಥ ರಥಯಾತ್ರೆ (Jagannath Rath Yatra)ಗೆ ಟ್ರಂಪ್‌ ನೀಡಿದ ಕೊಡುಗೆಯಿಂದಾಗಿ ಜುಲೈ 13ರ ಹತ್ಯೆ ಪ್ರಯತ್ನದಿಂದ ಅವರು ಬದುಕುಳಿದಿದ್ದಾರೆ ಎಂಬ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಒಡಿಶಾದ ಪುರಿ ನಗರದಲ್ಲಿ ನಡೆಯುವ ಜಗನ್ನಾಥ ರಥಯಾತ್ರೆಯು ಭಾರತದ ಅತ್ಯಂತ ಪುರಾತನ ಮತ್ತು ಅತಿದೊಡ್ಡ ರಥೋತ್ಸವ ಎಂದು ಪರಿಗಣಿಸಲಾಗಿದೆ. ಮೂರು ದೇವತೆಗಳಾದ ಭಗವಾನ್ ಜಗನ್ನಾಥ, ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ಅವರನ್ನೊಳಗೊಂಡ ಈ ರಥಯಾತ್ರೆ ವಿಶ್ವ ಪ್ರಸಿದ್ಧ. ಇನ್ನು 1976ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಸಾಂಕೇತಿಕ ಜಗನ್ನಾಥ ರಥಯಾತ್ರೆಗೆ ಟ್ರಂಪ್‌ ನೀಡಿದ್ದ ಸಹಕಾರವನ್ನು ನೆನಪಿಸಿಕೊಂಡ ಇಸ್ಕಾನ್‌ (ISKCON) ಅಧಿಕಾರಿಗಳು ಇದೇ ಕಾರಣಕ್ಕೆ ಅಮೆರಿಕದ ಮಾಜಿ ಅಧ್ಯಕ್ಷರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದೆ.

ಇಸ್ಕಾನ್‌ ಅಧಿಕಾರಿ ಹೇಳಿದ್ದೇನು?

ದೈವಿಕ ಹಸ್ತಕ್ಷೇಪದಿಂದ ತಾವು ಪಾರಾಗಿದ್ದಾಗಿ ಹೇಳಿರುವ ಟ್ರಂಪ್‌ ಅವರ ಪೋಸ್ಟ್‌ಗೆ ಇಸ್ಕಾನ್ ಕೋಲ್ಕತಾ ಮುಖ್ಯಸ್ಥ ರಾಧಾರಾಮ್ ದಾಸ್ ಪ್ರತಿಕ್ರಿಯಿಸಿ, “ಹೌದು, ಖಂಡಿತವಾಗಿಯೂ ಇದು ದೈವಿಕ ಹಸ್ತಕ್ಷೇಪವಾಗಿದೆ” ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡ ಅವರು, ʼʼ1976ರ ಜುಲೈಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಇಸ್ಕಾನ್ ಭಕ್ತರಿಗೆ ನ್ಯೂಯಾರ್ಕ್‌ನಲ್ಲಿ ರಥಯಾತ್ರೆಯನ್ನು ಆಯೋಜಿಸಲು ಸಹಾಯ ಮಾಡಿದ್ದರು. ಹೀಗಾಗಿ ಜಗನ್ನಾಥನು ಈ ಭಯಾನಕ ದಾಳಿಯಿಂದ ಅವರನ್ನು ಪಾರು ಮಾಡಿದ್ದಾರೆʼʼ ಎಂದಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮೊದಲ ಜಗನ್ನಾಥ ರಥಯಾತ್ರೆ

ನ್ಯೂಯಾರ್ಕ್‌ನಲ್ಲಿ ಭಗವಾನ್ ಜಗನ್ನಾಥನ ಮೊದಲ ರಥಯಾತ್ರೆ 1976ರಲ್ಲಿ ಪ್ರಾರಂಭವಾಯಿತು. ಅಂದಿನ 30 ವರ್ಷದ ಉದಯೋನ್ಮುಖ ರಿಯಲ್ ಎಸ್ಟೇಟ್ ಉದ್ಯಮಿ ಡೊನಾಲ್ಡ್ ಟ್ರಂಪ್ ಈ ಐತಿಹಾಸಿಕ ಕಾರ್ಯಕ್ಕೆ ಸಹಾಯ ಮಾಡಿದ್ದರು. ಅಂದು ಅಂದರೆ ಸುಮಾರು 48 ವರ್ಷಗಳ ಹಿಂದೆ ಇಸ್ಕಾನ್ ನ್ಯೂಯಾರ್ಕ್ ನಗರದಲ್ಲಿ ಮೊದಲ ರಥಯಾತ್ರೆಯನ್ನು ಆಯೋಜಿಸಲು ಚಿಂತನೆ ನಡೆಸುತ್ತಿದ್ದಾಗ ಹಲವು ಸವಾಲುಗಳಿದ್ದವು ಎಂದು ಅಂದಿನ ದಿನಗಳನ್ನು ರಾಧಾರಾಮ್ ದಾಸ್ ನೆನಪಿಸಿಕೊಂಡಿದ್ದಾರೆ.

“ಫಿಫ್ತ್ ಅವೆನ್ಯೂನಲ್ಲಿ ಮೆರವಣಿಗೆಗೆ ಪರವಾನಗಿ ಲಭಿಸುವುದು ಕಷ್ಟವಾಗಲಿಲ್ಲ. ಆದರೆ ರಥಗಳನ್ನು ನಿರ್ಮಿಸಬಹುದಾದ ದೊಡ್ಡ ಖಾಲಿ ಸ್ಥಳವನ್ನು ಕಂಡುಹಿಡಿಯುವುದೇ ಬಹುದೊಡ್ಡ ಸವಾಲಾಗಿತ್ತು. ನಾವು ಕೈಗೊಂಡ ಪ್ರಯತ್ನಗಳೆಲ್ಲ ವ್ತರ್ಥವಾಗಿತ್ತು. ಈ ವೇಳೆ ಡೊನಾಲ್ಡ್ ಟ್ರಂಪ್ ಕೃಷ್ಣ ಭಕ್ತರಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದರು” ಎಂದು ದಾಸ್ ಹೇಳಿದ್ದಾರೆ.

ಇದನ್ನೂ ಓದಿ: Donald Trump: ಡೊನಾಲ್ಡ್‌ ಟ್ರಂಪ್‌ ಕಿವಿಗೆ ತಾಗಿದ್ದು ಬುಲೆಟ್‌ ಅಲ್ಲ? ಹಾಗಾದ್ರೆ ಏನದು? ಹುಸಿ ದಾಳಿಯ ಅನುಮಾನ ಏಕೆ?

ʼʼನ್ಯೂಯಾರ್ಕ್ ರಥಯಾತ್ರೆಯ ಸಂಘಟಕರು ಪ್ರಸಾದ ಮತ್ತು ವಿನಂತಿ ಪತ್ರದೊಂದಿಗೆ ಕಚೇರಿಗೆ ತೆರಳಿ ಟ್ರಂಪ್ ಆಗಷ್ಟೇ ಖರೀದಿಸಿದ ಹಳೆಯ ರೈಲ್ವೆ ಯಾರ್ಡ್‌ನಲ್ಲಿ ರಥವನ್ನು ನಿರ್ಮಿಸಲು ಅನುಮತಿ ನೀಡುವಂತೆ ಕೋರಿದ್ದರು. ಮೂರು ದಿನಗಳ ನಂತರ ಟ್ರಂಪ್ ಅವರ ಕಾರ್ಯದರ್ಶಿ ಕರೆ ಮಾಡಿ ಅನುಮತಿ ನೀಡಿರುವ ಸಂಗತಿಯನ್ನು ತಿಳಿಸಿದ್ದರು. ಇದರಿಂದ ರಥಯಾತ್ರೆ ಸುಸೂತ್ರವಾಗಿ ನಡೆಯಿತುʼʼ ಎಂದು ರಾಧಾರಾಮ್ ದಾಸ್ ತಿಳಿಸಿದ್ದಾರೆ. ಸದ್ಯ ಅವರ ಈ ಪೋಸ್ಟ್‌ ವೈರಲ್‌ ಆಗಿದೆ.

Exit mobile version