Site icon Vistara News

Elephant Attack: ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ; ಬೆಚ್ಚಿಬಿದ್ದ ಡ್ರೈವರ್‌ನಿಂದ ಅಪಘಾತ!

elephant attack charmadi ghat

ಚಿಕ್ಕಮಗಳೂರು: ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದ ಪ್ರಮುಖ ಕೊಂಡಿಯಾದ ಘಾಟಿಗಳಲ್ಲಿ ಒಂದಾಗಿರುವ ಚಾರ್ಮಾಡಿ ಘಾಟಿಯ (Charmadi Ghat) ರಸ್ತೆಯಲ್ಲಿ ಕಾಡಾನೆ ((Elephant Attack) ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ನಿನ್ನೆ ರಾತ್ರಿ ‌ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ಗಾಬರಿಯಾದ ಮಹಿಂದ್ರ ಜೀಪ್‌ ಚಾಲಕನೊಬ್ಬ ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಓಡಾಟ ಮಿತಿಮೀರಿದೆ. ಪ್ರತಿ ರಾತ್ರಿ ಎಂಬಂತೆ ಇಲ್ಲಿ 8, 9, 10 ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ರಾತ್ರಿ 9ನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಗಾಬರಿಯಾದ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ರಸ್ತೆಯ ಬದಿಗೆ ಸರಿದು ಚರಂಡಿಗೆ ಬಿದ್ದಿದೆ.

ಮಂಜು ಕವಿದ ವಾತಾವರಣದಲ್ಲಿ ರಸ್ತೆಯೇ ಸರಿಯಾಗಿ ಕಾಣುತ್ತಿಲ್ಲ. ವಾಹನ ಚಾಲಕರು ಪರದಾಡುತ್ತ ವಾಹನ ಚಲಾಯಿಸುತ್ತಾರೆ. ಇಂಥ ಹೊತ್ತಿನಲ್ಲಿ ಏಕಾಏಕಿ ಕಾಡಾನೆ ಪ್ರತ್ಯಕ್ಷವಾಗುತ್ತಿರುವುದರಿಂದ ವಾಹನ ಸವಾರರು ಭಯಭೀತರಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಚಾರ್ಮಾಡಿ ಘಾಟಿಯಲ್ಲಿ ಆನೆ ಪ್ರತ್ಯಕ್ಷವಾಗುತ್ತಿದೆ. ಹಗಲು ಕೂಡ ಆನೆ ಕಾಣಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರು ಗಲಿಬಿಲಿ ಆಗುತ್ತಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಘಾಟಿ ಕೆಳಗಿನ ಧರ್ಮಸ್ಥಳ ಮುಂತಾದ ತೀರ್ಥಕ್ಷೇತ್ರಗಳಿಗೆ ಬರುವವರ ವಾಹನಗಳ ಸಂಖ್ಯೆ ಹೆಚ್ಚು ಇದೆ. ಈಗ ಶಾಲೆಗಳಿಗೆ ರಜೆಯೂ ಇರುವುದರಿಂದ ವಾಹನಗಳು ಇನ್ನಷ್ಟು ಹೆಚ್ಚಿವೆ. ದೊಡ್ಡ ವಾಹನಗಳಲ್ಲಿ ಇರುವವರು ಆನೆಗೆ ಕ್ಯಾರೇ ಎನ್ನದೆ ಸ್ಲೋ ಮಾಡಿ ಆನೆ ನೋಡಲು ನಿಲ್ಲಿಸುತ್ತಿರುವುದರಿಂದ, ಸಣ್ಣ ವಾಹನಗಳಿಗೆ ಹಾಗೂ ದ್ವಿಚಕ್ರ ಸವಾರರಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಆನೆ ಓಡಾಟದಿಂದ ಪದೇಪದೇ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸಲಗ ವಾಹನಗಳ ಮೇಲೆ ಎರಗುವುದಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ವಾಪಸ್‌ ಬದುಕಿ ಬರುವ ಗ್ಯಾರಂಟಿ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮನೆ ಸಮೀಪದ ಕಾಡಿಗೆ ತೆರಳುತ್ತಿದ್ದ ವ್ಯಕ್ತಿ ಮಸಣ ಸೇರಿದ್ದಾನೆ. ಕಾಡಾನೆ ದಾಳಿಗೆ ವ್ಯಕ್ತಿ (Elephant attack) ಬಲಿಯಾಗಿದ್ದಾರೆ.

ಶಿವಮೊಗ್ಗದ ಹೊಸನಗರ ತಾಲೂಕಿನ ಬಸವಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಿಮ್ಮಪ್ಪ (58) ಕಾಡಾನೆ ದಾಳಿಯಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜನರ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯುವಂತೆ ಒತ್ತಾಯ ಕೇಳಿ ಬಂದಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರ ಹೋಗಲು ಎದುರುವಂತಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.

ಇದನ್ನೂ ಓದಿ: Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

Exit mobile version