ವಾಷಿಂಗ್ಟನ್: ಟ್ವಿಟರ್ ಸಂಸ್ಥೆ ಎಲಾನ್ ಮಸ್ಕ್ ಅವರ ಕೈ ವಶವಾದ ನಂತರ ಸಂಸ್ಥೆಯ ಹೆಸರು ಕೂಡ ಎಕ್ಸ್ ಆಗಿ ಬದಲಾಗಿಬಿಟ್ಟಿದೆ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಮುಖ್ಯ ಕಚೇರಿಯಲ್ಲಿ ಹಾಕಲಾಗಿದ್ದ ಟ್ವಿಟರ್ ಬೋರ್ಡ್ ಅನ್ನು ತೆಗೆದುಹಾಕಿ ಅದರ ಬದಲಾಗಿ ಎಕ್ಸ್ ಬೋರ್ಡ್ ಅನ್ನು ಹಾಕಲಾಗಿದೆ. ಇದೀಗ ಅದರ ಬೆನ್ನಲ್ಲೇ ಮಸ್ಕ್ ಅವರು ಕಂಪನಿಯ ಹಲವಾರು ಸಾಮಾಗ್ರಿಗಳನ್ನು ಹರಾಜು ಮಾಡಲು ಮುಂದಾಗಿದ್ದಾರೆ. ಈ ವಿಚಾರ ಎಲ್ಲೆಡೆ ಭಾರೀ (Viral News) ಸುದ್ದಿಯಾಗುತ್ತಿದೆ.
ಹರಾಜಾಗುತ್ತಿರುವ ಸಾಮಾಗ್ರಿಗಳಲ್ಲಿ ಟ್ವಿಟರ್ ಬರ್ಡ್ ರೀತಿಯ ಮರದ ಕಾಫಿ ಟೇಬಲ್, ಟ್ವಿಟರ್ ಬರ್ಡ್‌ನ ಲೈಟ್ ಸೈನ್, ಬ್ಲೂ ರೂಂ ನಿಯಾನ್ ಸೈನ್, ಹ್ಯಾಷ್‌ಟ್ಯಾಗ್ ಲೈಟ್ ಹಾಗೆಯೇ ಕಂಪನಿಯಲ್ಲಿ ಅಲಂಕೃತವಾಗಿ ಇರಿಸಲಾಗಿದ್ದ ಹಲವಾರು ಗಿಟಾರ್‌ಗಳು ಸೇರಿವೆ. ಇನ್ನುಳಿದಂತೆ ಕಂಪನಿಯ ಅಡುಗೆ ಮನೆಯಲ್ಲಿದ್ದ ಹಲವಾರು ಸಾಮಾಗ್ರಿಗಳು, ಕಂಪನಿಯ ಪೀಠೋಪಕರಣಗಳು ಮತ್ತು ಐಮ್ಯಾಕ್‌ಗಳನ್ನೂ ಹರಾಜಿಗೆ ಇಡಲಾಗುತ್ತಿದೆ.
ಇದನ್ನೂ ಓದಿ: Viral News : ವೃಂದಾವನದ ಲಡ್ಡು ಕೃಷ್ಣ ಈಕೆಯ ಮಗನಂತೆ! ಕೃಷ್ಣನ ಮೂರ್ತಿಗ ಟಿ ಶರ್ಟ್, ಜೀನ್ಸ್ ತೊಡಿಸುವವರಿವರು!
ಈ ಹರಾಜು ಎಲ್ಲಿರುತ್ತದೆ? ಯಾವಾಗ ನಡೆಯುತ್ತದೆ ಎಂದು ನೀವು ಯೋಚನೆ ಮಾಡುತ್ತಿರಬಹುದು. ಹರಾಜು ಪ್ರಕ್ರಿಯೆಗೆಂದೇ ಎಕ್ಸ್ ಕಂಪನಿ ಹೆರಿಟೇಜ್ ಗ್ಲೋಬಲ್ ಪಾರ್ಟರ್ನ್ಸ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ Twitter Rebranding: Online Auction Featuring Memorabilia ಹೆಸರಿನಲ್ಲಿ ಹರಾಜು ನಡೆಯಲಿದೆ. ಸುಮಾರು 600 ಕ್ಕೂ ಹೆಚ್ಚು ಸಾಮಾಗ್ರಿಗಳು ಇಲ್ಲಿ ಹರಾಜಾಗಲಿವೆ. ಸೆಪ್ಟೆಂಬರ್ 12ರಿಂದ 14ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಹಲವು ಸಾಮಾಗ್ರಿಗಳ ಆರಂಭಿಕ ಬೆಲೆಯನ್ನು 25 ಡಾಲರ್‌ಗೆ ನಿಗದಿ ಪಡಿಸಲಾಗಿದೆ ಎಂದು ವರದಿಯಿದೆ.
ಅಂದ ಹಾಗೆ ಈ ರೀತಿ ಹರಾಜಾಗುತ್ತಿರುವ ಸಾಮಾಗ್ರಿಗಳಲ್ಲಿ ಇನ್ನೊಂದು ವಿಶೇಷ ಸಾಮಾಗ್ರಿಯೂ ಇದೆ. ಎಲ್ಲೆನ್ ಡಿಜೆನೆರೆಸ್ ಅವರು 2014ರ ಆಸ್ಕರ್ ಕಾರ್ಯಕ್ರಮದಲ್ಲಿ ಬಾರ್ಡ್ಲೆ ಕೂಪರ್, ಮೆರಿಲ್ ಸ್ಟ್ರೀಪ್, ಲುಪಿತ ನ್ಯೋಂಗ್ ಸೇರಿ ಅನೇಕರೊಂದಿಗೆ ತೆಗೆದುಕೊಂಡಿದ್ದ ಸೆಲ್ಫೀ ಟ್ವಿಟರ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿತ್ತು. ಅಪ್‌ಲೋಡ್ ಆದ ಮೂರೇ ನಿಮಿಷಗಳಲ್ಲಿ ಆ ಟ್ವೀಟ್ ಬರೋಬ್ಬರಿ 80 ಸಾವಿರಕ್ಕೂ ಅಧಿಕ ರಿಟ್ವೀಟ್ ಆಗಿತ್ತು. ಹಾಗೆಯೇ ಅರ್ಧ ಗಂಟೆಯೊಳಗೆ ಹತ್ತು ಲಕ್ಷಕ್ಕೂ ಅಧಿಕ ರಿಟ್ವೀಟ್ ಆಗಿತ್ತು. ಆ ಸೆಲ್ಫಿಯನ್ನು ಪೈಂಟಿಂಗ್ ಮಾಡಿಸಿ, ಟ್ವಿಟರ್ ಕಚೇರಿಯಲ್ಲಿ ಇಡಲಾಗಿತ್ತು. ಆ ಪೈಂಟಿಂಗ್ ಅನ್ನೂ ಕೂಡ ಮಸ್ಕ್ ಅವರು ಹರಾಜಿಗೆ ಇಡುತ್ತಿದ್ದಾರೆ.
ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
ಈ ಹಿಂದೆ ಟ್ವಿಟರ್ ಕಂಪನಿಯು ಆರ್ಥಿಕ ಹೊರೆಯಲ್ಲಿದ್ದು, ಕಂಪನಿಯಿಂದ ಸಿಬ್ಬಂದಿಯನ್ನು ತೆಗೆದುಹಾಕುತ್ತಿದ್ದ ಸಮಯದಲ್ಲೂ ಮಸ್ಕ್ ಅವರು ಸಂಸ್ಥೆಯ ಅನೇಕ ಸಾಮಾಗ್ರಿಗಳನ್ನು ಹರಾಜು ಹಾಕಿದ್ದರು. ಅದರಲ್ಲಿ ಒಂದು ಸಾಮಾಗ್ರಿ ಬರೋಬ್ಬರಿ 82 ಲಕ್ಷ ರೂ. ಗೆ ಹರಾಜಾಗಿತ್ತು. ಅದಾದ ನಂತರ ಇದೀಗ ಮತ್ತೊಮ್ಮೆ ಮಸ್ಕ್ ಅವರು ಹಳೆಯ ಟ್ವಿಟರ್‌ನ ಸಾಮಾಗ್ರಿಗಳನ್ನು ಹರಾಜಿಗೆ ಇಡುತ್ತಿದ್ದು, ಈ ಬಾರಿ ಯಾವ ದಾಖಲೆ ಸೃಷ್ಟಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.