Site icon Vistara News

Giorgia Meloni: ಕೈ ಮುಗಿದು, ನಮಸ್ಕಾರ ಮಾಡಿ ಅತಿಥಿಗಳನ್ನು ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; ವೈರಲ್‌ ವಿಡಿಯೊ ಇಲ್ಲಿದೆ

Giorgia Meloni

Giorgia Meloni

ರೋಮ್‌: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಭಾರತದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವವನ್ನು ಹೊಗಳಿದ್ದರು. ಇದೀಗ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಕೈ ಮುಗಿದು ನಮಸ್ಕಾರ ಮಾಡುವ ಮೂಲಕ ಜಿ7 ಶೃಂಗಸಭೆ (G7 Summit)ಗೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಸದ್ಯ ಅವರು ನಮಸ್ಕಾರ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲ್‌ ಆಗಿದೆ (Viral Video).

ಇಟಲಿಯ ಪುಗ್ಲಿಯಾದಲ್ಲಿ 50ನೇ ಆವೃತ್ತಿಯ ಜಿ 7 ಶೃಂಗಸಭೆ ಆರಂಭವಾಗಿದೆ. ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ವಿವಿಧ ದೇಶದ ನಾಯಕರು ಇಟಲಿಗೆ ಆಗಮಿಸಿದ್ದು, ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ವೇಳೆ ಜಾರ್ಜಿಯಾ ಮೆಲೋನಿ ಅವರು ಕೈ ಮುಗಿದು ನಮಸ್ತೆ ಎಂದು ಹೇಳಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಇಟಲಿಯ ಪ್ರಧಾನಿ ಮೆಲೋನಿ ಕೈ ಮುಗಿದು ಸ್ವಾಗತಿಸುತ್ತಿರುವ ವಿಡಿಯೊ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಂಸ್ಕೃತಿಗೆ ಜಾಗತಿಕ ಮನ್ನಣೆ ಸಿಗುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ನಮಸ್ತೆ ಇಂಡಿಯಾ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ʼʼಮೋದಿ ಅವರೊಂದಿಗಿನ ಗೆಳೆತನದ ಪ್ರಭಾವ ಇದುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ಮೋದಿಯ ಮ್ಯಾಜಿಕ್‌ʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಮೋದಿ ಅವರಿಂದಲೇ ಇದು ಸಾಧ್ಯವಾಗಿದ್ದು ಎಂದು ಇನ್ನೂ ಹಲವರು ಹೇಳಿದ್ದಾರೆ. ʼʼಒಂದು ವೇಳೆ ಆತ್ಮೀಯರು ಸಿಕ್ಕಾಗ ಶೇಕ್‌ ಹ್ಯಾಂಡ್‌ ಮಾಡುತ್ತೇವೆ. ಇಲ್ಲವೆ ಕೈ ಮುಗಿದು ನಮಸ್ತೆ ಎನ್ನುತ್ತೇವೆ. ಆದರೆ ಮೆಲೋನಿ ಎರಡನ್ನೂ ಮಾಡಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. ವಿಶೇಷ ಎಂದರೆ ಪ್ರದಾನಿ ಮೋದಿ ಅವರೂ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಇಟಲಿ ತಲುಪಿದ್ದಾರೆ.

ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್‌, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರು ಮಾತ್ರವಲ್ಲದೆ ಉಕ್ರೇನ್, ಬ್ರೆಜಿಲ್, ಅರ್ಜೆಂಟೀನಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಕೀನ್ಯಾ, ಅಲ್ಜೀರಿಯಾ, ಟುನೀಶಿಯಾ ಮತ್ತು ಮೌರಿಟಾನಿಯಾದ ಮುಖಂಡರು ಈ ಪ್ರತಿಷ್ಠಿತ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: Narendra Modi: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಯ ಅಪುಲಿಯಾಗೆ ತಲುಪಿದ ಪ್ರಧಾನಿ ಮೋದಿ

ವಿಷಯಗಳು ಯಾವುವು?

ಶೃಂಗಸಭೆಯ ವಿದೇಶದ ಅಧಿವೇಶನದಲ್ಲಿ ಭಾರತವು ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ದೇಶಗಳ ಸಹಕಾರದ ಮೇಲೆ ಗಮನ ಹರಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಜಾಗತಿಕವಾಗಿ ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜತೆಗೆ ಶೃಂಗಸಭೆಯಲ್ಲಿ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಗಾಝಾದಲ್ಲಿನ ಸಂಘರ್ಷದ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

Exit mobile version