ಬ್ಯಾಂಕಾಕ್: ಥೈಲ್ಯಾಂಡ್ (Thailand)ನ ರಾಜಧಾನಿ ಬ್ಯಾಂಕಾಕ್ (Bangkok) ಸದಾ ಪ್ರವಾಸಿಗರು ಆಕರ್ಷಿಸುವ ನಗರ. ಆಗ್ನೇಯ ಏಷ್ಯಾದ ಈ ನಗರ ಸಾಹಸಪ್ರಿಯರ ಗಮನ ಸೆಳೆಯುತ್ತದೆ. ಇಲ್ಲಿನ ಚೈತನ್ಯಶೀಲನೆ, ವೈವಿಧ್ಯ ಪಾಕ ಪದ್ಧತಿ ಮತ್ತು ಬೆರಗುಗೊಳಿಸುವ ದೃಶ್ಯಗಳು ಆಹ್ಲಾದಕರವಾಗಿರುತ್ತದೆ. ಇದೇ ಕಾರಣಕ್ಕೆ ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇನ್ನೊಂದು ವಿಶೇಷ ಎಂದರೆ ಬ್ಯಾಂಕಾಕ್ ಪೂರ್ಣ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿದೆ. ಅತೀ ಹೆಚ್ಚು ಅಕ್ಷರಗಳನ್ನು ಹೊಂದಿರುವ ನಗರದ ಹೆಸರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬರೋಬ್ಬರಿ 168 ಅಕ್ಷರ!
ವಿಶೇಷ ಎಂದರೆ ಬ್ಯಾಂಕಾಕ್‌ನ ಪೂರ್ಣ ಹೆಸರು ಬರೋಬ್ಬರಿ 168 ಅಕ್ಷರವನ್ನು ಒಳಗೊಂಡಿದೆ. ಹಾಗಾದರೆ ಬ್ಯಾಂಕಾಕ್‌ನ ಪೂರ್ಣ ಹೆಸರು ಏನು ಎನ್ನುವ ಕುತೂಹಲ ನಿಮ್ಮಲ್ಲಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. Krung Thep Mahanakhon Amon Rattanakosin Mahinthara Ayuthaya Mahadilok Phop Noppharat Ratchathani Burirom Udomratchaniwet Mahasathan Amon Piman Awatan Sathit Sakkathattiya Witsanukam Prasit (ಕ್ರುಂಗ್ ಥೆಪ್ ಮಹಾನಖೋನ್ ಅಮೋನ್ ರಟ್ಟನಕೋಸಿನ್ ಮಹಿಂತರಾ ಆಯುತಾಯ ಮಹಾದಿಲೋಕ್ ಫಾಪ್ ನೊಪ್ಪರತ್ ರಚಥಾನಿ ಬುರಿರೋಮ್ ಉಡೋಮ್ರಚನಿವೆಟ್ ಮಹಾಸಂಸ್ಥಾನ್ ಅಮೋನ್ ಪಿಮನ್ ಅವತನ್ ಸತೀಶ್ ಸಕ್ಕತಟ್ಟಿಯಾ ವಿಟ್ಸಾನುಕಂ ಪ್ರಸಿತ್)-ಇದು ಯಾವುದೋ ಕವನವಲ್ಲ. ಬ್ಯಾಂಕಾಕ್‌ನ ಪೂರ್ಣ ನಾಮ ಇದು. ಅಂದರೆ ಇದರ ಅರ್ಥ ದೇವದೂತರ ನಗರ, ಅಮರರ ಮಹಾನ್ ನಗರ, ಒಂಬತ್ತು ರತ್ನಗಳ ಭವ್ಯವಾದ ನಗರ, ರಾಜನ ಆಸನ, ರಾಜಮನೆತನದ ಅರಮನೆಗಳ ನಗರ, ದೇವತೆಗಳ ಅವತಾರ, ಇಂದ್ರನ ಆಜ್ಞೆಯ ಮೇರೆಗೆ ವಿಶ್ವಕರ್ಮನು ನಿರ್ಮಿಸಿದ ದೇವರ ಮನೆ. ಹೆಚ್ಚಿನ ಹೆಚ್ಚಿನ ಥಾಯ್ ಜನರು ಇದರ ಸಂಕ್ಷಿಪ್ತ ರೂಪ Krung Thep Maha Nakhon (ಕ್ರುಂಗ್ ಥೆಪ್ ಮಹಾ ನಖೋನ್) ಅನ್ನು ಬಳಸುತ್ತಾರೆ.
ವಿಡಿಯೊ ವೈರಲ್
ಇತ್ತೀಚೆಗೆ ಟೂರ್ ಗೈಡ್ ಒಬ್ಬರು ಚಲಿಸುವ ಬಸ್‌ನಲ್ಲಿ ಬ್ಯಾಂಕಾಕ್‌ನ ಪೂರ್ಣ ಹೆಸರು ಹೇಳುವ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ʼʼಸ್ಥಳವೊಂದರ ಅತೀ ದೀರ್ಘ ಹೆಸರು ಎನ್ನುವ ಕಾರಣಕ್ಕೆ ಬ್ಯಾಂಕಾಕ್‌ನ ಪೂರ್ತಿ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆʼʼ ಎಂದು ವಿಡಿಯೊಕ್ಕೆ ಕ್ಯಾಪ್ಶನ್ ನೀಡಲಾಗಿದೆ. ಈ ಪೂರ್ಣ ಹೆಸರು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ನಗರದ ಶ್ರೀಮಂತ ಗತಕಾಲದ ವೈಭವವನ್ನು ಸೂಚಿಸುತ್ತದೆ ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: Visa Free: ಶ್ರೀಲಂಕಾ ಮಾತ್ರವಲ್ಲ; ಇನ್ನು ವೀಸಾ ಇಲ್ಲದೆ ಥೈಲ್ಯಾಂಡ್‌ಗೂ ತೆರಳಬಹುದು
ಥೈಲ್ಯಾಂಡ್ ಪ್ರಮುಖ ಪ್ರವಾಸಿ ದೇಶವಾಗಿ ಗುರುತಿಸಿಕೊಂಡಿದೆ. ಥೈಲ್ಯಾಂಡ್ ಸರ್ಕಾರ ಭಾರತ ಮತ್ತು ತೈವಾನ್‌ನ ಪ್ರವಾಸಿಗರು ನವೆಂಬರ್ 1ರಿಂದ ಮೇ 10ರ ನಡುವೆ ವೀಸಾ ಇಲ್ಲದೆ (Visa Free) ದೇಶಕ್ಕೆ ಪ್ರವೇಶ ನೀಡಬಹುದು ಎಂದು ಘೋಷಿಸಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಶದತ್ತ ಆಕರ್ಷಿಸಿ ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ