ರೋಮ್: ಇಟಲಿಯ ಪುಗ್ಲಿಯಾದಲ್ಲಿ 50ನೇ ಆವೃತ್ತಿಯ ಜಿ 7 ಶೃಂಗಸಭೆ (G7 Summit) ಆರಂಭವಾಗಿದೆ. ಈ ಮಧ್ಯೆ ಇಟಲಿ ಪಾರ್ಲಿಮೆಂಟ್ (Italian Parliament)ನಲ್ಲಿ ಸಂಸದರು ಪರಸ್ಪರ ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ (Viral Video).
ಕಾರಣವೇನು?
ಪ್ರಾದೇಶಿಕ ಸ್ವಾಯತ್ತ ಅಧಿಕಾರದ ವಿಷಯವಾಗಿ ಸಂಸದರು ಹೊಡೆದಾಡಿದ್ದಾರೆ ಎನ್ನಲಾಗಿದೆ. ಪ್ರಾದೇಶಿಕ ಸ್ವಾಯತ್ತ ಅಧಿಕಾರಗಳನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ವಿವಾದಾತ್ಮಕ ಕಾನೂನಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಗದ್ದಲ ಆರಂಭವಾಯಿತು. ಬಳಿಕ ಪ್ರತಿಪಕ್ಷದ ಸಂಸದರೊಬ್ಬರು ಇಟಲಿಯ ಧ್ವಜವನ್ನು ಹಿಡಿದುಕೊಂಡು ಬಂದಾಗ ಗಲಾಟೆ ತಾರಕಕ್ಕೇರಿತು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರು ಪರಸ್ಪರ ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಯಿತು.
🇮🇹 Fight erupts in the Italian parliament
— Rahini (@rahini1207) June 13, 2024
RT pic.twitter.com/pfSyELBUbY
ತಕ್ಷಣ ಸೆಕ್ಯುರಿಟಿ ಗಾರ್ಡ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘರ್ಷಣೆಯಲ್ಲಿ ಗಾಯಗೊಂಡ ಸಂಸದ ಡೊನ್ನೊ ಅವರನ್ನು ಗಾಲಿಕುರ್ಚಿಯಲ್ಲಿ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಂಸತ್‌ನಲ್ಲಿ ನಡೆದ ಈ ಗಲಾಟೆ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಜತೆಗೆ ಸಂಸದರ ನಡೆಯನ್ನು ಹಲವರು ಟೀಕಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ಪ್ರದರ್ಶಿಸಿದ ನಡವಳಿಕೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಸಂಸತ್ ಬಾಕ್ಸಿಂಗ್ ವೇದಿಯಂತೆ ಭಾಸವಾಯಿತು ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಜಿ 7 ಶೃಂಗಸಭೆ ಜೂನ್ 13ರಂದು ಆರಂಭವಾಗಿದ್ದು ಜೂನ್ 11ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಇಟಲಿ ತಲುಪಿದ ಪ್ರಧಾನಿ ನರೇಂದ್ರ ಮೋದಿ
ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್ 13ರಿಂದ 15ರವರೆಗೆ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಇಟಲಿ ತಲುಪಿದ್ದಾರೆ. ಸತತ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೋದಿ ಅವರ ಮೊದಲ ಅಂತಾರಾಷ್ಟ್ರೀಯ ಪ್ರವಾಸ ಇದು ಎನ್ನುವುದು ವಿಶೇಷ.
ಶುಕ್ರವಾರ ಇಟಲಿಯ ಅಪುಲಿಯಾ ಪ್ರದೇಶದ ಬೃಂಡಿಸಿ ವಿಮಾನ ನಿಲ್ದಾಣಕ್ಕೆ ತಲುಪಿದ ಮೋದಿ “ವಿಶ್ವ ನಾಯಕರೊಂದಿಗೆ ಉಪಯುಕ್ತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ಒಟ್ಟಾಗಿ ನಾವು ಜಾಗತಿಕ ಸವಾಲುಗಳನ್ನು ಎದುರಿಸುವ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Khalistan Terror: ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿಗಳು
ಶೃಂಗಸಭೆಯ ಸಮಯದಲ್ಲಿ ಮೋದಿ ಅವರಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಶೃಂಗಸಭೆಯ ಹೊರತಾಗಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಇಟಲಿ ಭಾರತಕ್ಕೆ ಆಹ್ವಾನ ನೀಡಿತ್ತು. ಇದು ಜಿ 7 ಶೃಂಗಸಭೆಯಲ್ಲಿ ಮೋದಿ ಅವರ ಸತತ ಐದನೇ ಭಾಗವಹಿಸುವಿಕೆಯಾಗಿದ್ದು, ಅವರು ಇಂದು ಸಂಜೆ ಭಾರತಕ್ಕೆ ಮರಳಲಿದ್ದಾರೆ.