Site icon Vistara News

Jai Shree Ram : ಜೈಶ್ರೀರಾಮ್‌ ಎಂದ ಮುಸ್ಲಿಂ ಜೋಡಿಗೆ ಬೆದರಿಕೆ; ಸೀಳಿ ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ ವಿಡಿಯೊ ವೈರಲ್‌

threatening video

ಬೆಂಗಳೂರು: ಬುರ್ಖಾ ಹಾಕಿದ ಯುವತಿ ಮತ್ತು ಟೋಪಿ ಧರಿಸಿದ ಯುವಕ ಜೈ ಶ್ರೀರಾಮ್‌ (Jai Shree Ram) ಎಂದ ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣದ (Threatening on Social Media) ಮೂಲಕ ಬೆದರಿಕೆ ಹಾಕಲಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಇದರ ಬಗ್ಗೆ ಸೈಬರ್‌ ಪೊಲೀಸರು (Bangalore Police) ತನಿಖೆ ನಡೆಸುತ್ತಿದ್ದು, ಧಮಕಿ ಹಾಕಿದ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ವಿಡಿಯೊ ಒಂದರಲ್ಲಿ ಒಬ್ಬ ಯುವಕ ಮತ್ತು ಯುವತಿ ಹಿಂದೆ ಮುಂದೆ ನಿಂತುಕೊಂಡಿದ್ದು, ಇಬ್ಬರೂ ಒಬ್ಬರ ಬಳಿಕ ಇನ್ನೊಬ್ಬರು ಜೈಶ್ರೀರಾಂ ಎನ್ನುತ್ತಾರೆ. ದಿಲ್‌ ಕಿ ದಿಮಾಗ್‌ ಮೇ ಏಕ್‌ ಹೀ ನಾಮ್‌ ಜೈ ಶ್ರೀರಾಂ ಎಂದು ಅವರು ಹೇಳುತ್ತಾರೆ. ಈ ದೃಶ್ಯದ ಬಳಿಕ ಇನ್ನೊಬ್ಬ ಯುವಕ ಈ ಜೋಡಿಗೆ ಬೆದರಿಕೆ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಯುವಕ ಮತ್ತು ಯುವತಿ ರೀಲ್ಸ್‌ನಲ್ಲಿ ಈ ರೀತಿ ಜೈ ಶ್ರೀರಾಮ್‌ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರುವ ವ್ಯಕ್ತಿ ಆ ವಿಡಿಯೊ ತುಣುಕನ್ನು ಹಾಕಿ ತನ್ನ ಪ್ರತಿಕ್ರಿಯೆ ನೀಡಿದ್ದಾನೆ.

ಸೀಳಿ ಬಿಡ್ತೀನಿ ಹುಷಾರ್‌ ಎಂದ ಯುವಕ

ಯುವಕ ಉರ್ದು ಭಾಷೆಯಲ್ಲಿ ಅತ್ಯಂತ ಅಸಭ್ಯ ಭಾಷೆ ಮತ್ತು ಭಯ ಹುಟ್ಟಿಸುವ ಭಾವ ಭಂಗಿಗಳಲ್ಲಿ ಈ ವಿಡಿಯೊ ಮಾಡಿದ್ದಾನೆ. ‘ಬುರ್ಖಾ ತೆಗೆದು ಏನಾದ್ರು ಮಾತನಾಡಿ. ಮುಸ್ಲಿಂರನ್ನು ಮಧ್ಯಕ್ಕೆ ತಂದು ಜೈ ಶ್ರೀರಾಂ ಅಂತ ಹೇಳ್ಬೇಡಿ. ನಿಜವಾದ ಮುಸ್ಲಿಂರ ಮುಂದೆ ಬಂದು ಮಾತನಾಡಿದರೆ ಸೀಳ್ತೀವಿʼʼ ಎಂದು ಬೆದರಿಕೆ ಹಾಕಲಾಗಿದೆ.

ಯುವಕ ಮೊದಲು ತಾನು ಹಾಕಿಕೊಂಡಿದ್ದ ಟೋಪಿಯನ್ನು ತೆಗೆದು ಭಯ ಹುಟ್ಟಿಸುವ ರೀತಿಯಲ್ಲಿ ಬೆದರಿಕೆ ಹಾಕುತ್ತಾನೆ. ನಾಲಿಗೆಯನ್ನು ಕಚ್ಚಿಕೊಂಡು, ಬೆರಳುಗಳನ್ನು ಹಿಡಿದು ಹೆದರಿಸುತ್ತಾನೆ, ಕುತ್ತಿಗೆ ಕತ್ತರಿಸುತ್ತೇನೆ ಎಂದು ಹೇಳುವ ರೀತಿಯಲ್ಲಿ ತೋರಿಸುತ್ತಾ ಸಾಗುತ್ತಾನೆ. ವಿಡಿಯೊವನ್ನು ನೋಡಿದಾಗ ಆತ ಯಾವುದೋ ಉಗ್ರ ಸಂಘಟನೆಯಲ್ಲಿ, ಕೊಲೆಗಡುಕ ಕೃತ್ಯದಲ್ಲಿ ತೊಡಗಿದವನಂತೆ ಕಾಣುತ್ತಾನೆ.

ಈ ದೃಶ್ಯ ಎಲ್ಲಿಯದು? ಅವರು ಮುಸ್ಲಿಮರಾ?

ಈ ದೃಶ್ಯ ಎಲ್ಲಿಯದು ಮತ್ತು ಜೈ ಶ್ರೀರಾಂ ಎಂದು ಹೇಳಿದರು ನಿಜಕ್ಕೂ ಮುಸ್ಲಿಮರಾ ಅಥವಾ ಅವರು ಹಿಂದುಗಳಾಗಿದ್ದು ಈ ರೀತಿ ದಿರಸು ಧರಿಸಿ ವಿಡಿಯೊ ಮಾಡಿದ್ದಾರಾ ಎನ್ನುವುದು ಗೊತ್ತಿಲ್ಲ. ಜೈಶ್ರೀರಾಮ್‌ ಎಂದು ಘೋಷಣೆ ಕೂಗುವ ಹುಡುಗ ಕ್ರಿಶ್ಚಿಯನ್ನರು ಧರಿಸುವ ಶಿಲುಬೆಯನ್ನೂ ಹಾಕಿಕೊಂಡಿದ್ದಾನೆ. ಈ ದೃಶ್ಯದಲ್ಲಿ ಒಂದು ಕಡೆ ಬೆಂಗಳೂರಿನ ಆಟೋ ರಿಕ್ಷಾದ ಒಂದು ಕಲರ್‌ ಕಾಣುತ್ತದೆ. ಅದರ ಆಧಾರದಲ್ಲಿ ಇದು ಬೆಂಗಳೂರಿನದ್ದಾಗಿರಬಹುದು ಎಂಬ ಸಂಶಯ ಕಾಡಿದೆ.

ಅದರ ಜತೆಗೆ ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿ ಈ ವಿಡಿಯೊವನ್ನು ಟ್ವೀಟ್‌ ಮಾಡಿದ್ದಾರೆ. ಹೀಗಾಗಿ ಈಗ ಬೆಂಗಳೂರು ಪೊಲೀಸರು ಇದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಈಗ ಸೋಷಿಯಲ್‌ ಮೀಡಿಯಾ ಫ್ಯಾಕ್ಟ್‌ ಚೆಕ್‌ಗೆ ಸಾಕಷ್ಟು ತಾಂತ್ರಿಕ ಪರಿಣತಿಯನ್ನು ಹೊಂದಿದ್ದು, ಅದರ ಮೂಲಕ ಈ ವಿಡಿಯೊದ ಹಿನ್ನೆಲೆಯನ್ನು ಒಂದೆರಡು ದಿನದಲ್ಲಿ ತಿಳಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಕಾಲರ್‌ ಪಟ್ಟಿ ಹಿಡಿದು ಶಿಖರ್​ ಧವನ್​ಗೆ​ ವಾರ್ನಿಂಗ್​ ನೀಡಿದ ತಂದೆ

Exit mobile version