ನವದೆಹಲಿ: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ (Jaya Bachchan) ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್ ಬಚ್ಚನ್ʼ ಎಂದು ಕರೆದುಕೊಂಡಿದ್ದಾರೆ. ಊಹಿಸಿರದ ಈ ಬೆಳವಣಿಗೆಯಿಂದ ಒಂದುಕ್ಷಣ ಅಚ್ಚರಿಗೊಳಗಾದ ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಬಳಿಕ ಜೋರಾಗಿ ನಗಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video).
ಈ ವೇಳೆ ಹಾಜರಿದ್ದ ಪ್ರತಿಪಕ್ಷಗಳ ಸದಸ್ಯರಾದ ಕಾಂಗ್ರೆಸ್‌ನ ಜೈರಾಂ ರಮೇಶ್ ಮತ್ತು ಆಮ್ ಆದ್ಮಿ ಪಾರ್ಟಿಯ ರಾಘವ್ ಛಡ್ಡಾ ಅವರ ಮುಖದಲ್ಲಿಯೂ ನಗು ಅರಳಿದೆ.
ರಾಜ್ಯಸಭೆಯಲ್ಲಿ ಏನಾಯ್ತು?
ಜಯಾ ಬಚ್ಚನ್ ಮತ್ತು ಜಗದೀಪ್ ಧನ್ಕರ್ ನಡುವೆ ತಮಾಷೆಯ ಮಾತುಕತೆ ನಡೆಯಿತು. “ನಾನು ಜಯಾ ಅಮಿತಾಭ್ ಬಚ್ಚನ್ ಮಾತನಾಡುತ್ತಿದ್ದೇನೆ. ಇಂದು ನಿಮಗೆ ಊಟದ ವಿರಾಮ ಸಿಕ್ಕಿದೆಯೇ? ಇಲ್ಲ? ಅದಕ್ಕಾಗಿಯೇ ನೀವು ಜೈರಾಮ್ ಜಿ ಅವರ ಹೆಸರನ್ನು ಪದೇ ಪದೆ ಹೇಳುತ್ತಿದ್ದೀರಿ. ಅವರ ಹೆಸರನ್ನು ಉಲ್ಲೇಖಿಸದೆ ನಿಮಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಜಯಾ ಬಚ್ಚನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನ್ಕರ್, “ನಾನು ಇಂದು ಊಟಕ್ಕೆ ವಿರಾಮ ತೆಗೆದುಕೊಳ್ಳಲಿಲ್ಲ. ಆದರೆ ನಾನು ಜೈರಾಮ್ ಅವರೊಂದಿಗೆ ಊಟ ಮಾಡಿದೆʼʼ ಎಂದರು. ಜತೆಗೆ ತಾವು ಜಯಾ ಬಚ್ಚನ್ ಮತ್ತು ಅಮಿತಾಭ್ ಬಚ್ಚನ್ ಅವರ ಅಭಿಮಾನಿ ಎಂದೂ ತಿಳಿಸಿದರು. ಇದಕ್ಕೆ ಕೈಮುಗಿದು ಜಯಾ ಬಚ್ಚನ್ ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ಬಿಸಿ ಬಿಸಿ ಚರ್ಚೆಯಿಂದ ಕಾವೇರುತ್ತಿದ್ದ ರಾಜ್ಯಸಭೆ ಕೆಲ ಹೊತ್ತು ನಗೆಗಡಲಲ್ಲಿ ತೇಲಿ ಹಗುರವಾಯಿತು.
ಈ ಹಿಂದೆ ಜಯಾ ಬಚ್ಚನ್ ಹೇಳಿದ್ದೇನು?
ಜುಲೈ 29ರಂದು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಜಯಾ ಅಮಿತಾಭ್ ಬಚ್ಚನ್ ಜೀ, ದಯವಿಟ್ಟು ಮಾತನಾಡಿʼʼ ಎಂದು ಸದನದಲ್ಲಿ ಜಯಾ ಬಚ್ಚನ್ ಅವರನ್ನು ಕರೆದಿದ್ದರು. ಇದರಿಂದ ಕೆರಳಿದ ಜಯಾ ಬಚ್ಚನ್ ಅವರು, ʼʼಸರ್ ನನ್ನನ್ನು ಕೇವಲ ಜಯಾ ಬಚ್ಚನ್ ಎಂದು ಕರೆದರೆ ಸಾಕಿತ್ತುʼʼ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: Parliament Session: ಪತಿ ಅಮಿತಾಬ್ ಹೆಸರು ಜಯಾ ಬಚ್ಚನ್‌ಗೆ ಅಲರ್ಜಿ! ಸಂಸತ್‌ನಲ್ಲಿ ಆ ಹೆಸರು ಹೇಳಬೇಡಿ ಎಂದ ನಟಿ!
ಆಗ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಸಂಸತ್ತಿನ ದಾಖಲೆಗಳಲ್ಲಿ ಅಧಿಕೃತವಾಗಿ ಜಯಾ ಅಮಿತಾಭ್ ಬಚ್ಚನ್ ಎಂದು ನಿಮ್ಮ ಹೆಸರನ್ನು ನೋಂದಾಯಿಸಲಾಗಿದೆʼʼ ಎಂದು ತಿಳಿಸಿದ್ದರು. ʼʼಇದು ಹೊಸ ಸಂಗತಿಯಾಗಿದೆ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಮಹಿಳೆಯರು ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳನ್ನು ಹೊಂದಿಲ್ಲ ಏಕೆ?ʼʼ ಎಂದು ಜಯಾ ಬಚ್ಚನ್ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಮತ್ತೊಮ್ಮೆ ಜಯಾ ಬಚ್ಚನ್ ತಮ್ಮ ಹೆಸರಿನ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.