ನ್ಯೂಯಾರ್ಕ್: ಪ್ರಭಾವಿ ಸೋಶಿಯಲ್ ಇನ್‌ಫ್ಲುಯೆನ್ಸರ್‌ಗಳು ಹಾಗೂ ಸಲಿಂಗ ಪ್ರೇಮಿಗಳಾದ (Lesbian Couple) ಅಂಜಲಿ ಚಕ್ರಾ (Anjali Chakra) ಮತ್ತು ಸೂಫಿ ಮಲಿಕ್ (Sufi Malik) 5 ವರ್ಷಗಳ ತಮ್ಮ ಸಾಂಗತ್ಯವನ್ನು (Marriage) ಕೊನೆಗೊಳಿಸಿದ್ದಾರೆ. ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ಪೋಸ್ಟ್ ಮಾಡಿ ತಮ್ಮ ಬ್ರೇಕಪ್ (breakup) ಅನ್ನು ಪ್ರಕಟಿಸಿದ್ದಾರೆ. ಇವರಿಬ್ಬರೂ ಭಾರತ ಹಾಗೂ ಪಾಕ್ ಮೂಲದವರಾಗಿದ್ದು, ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದರು.
ಭಾನುವಾರ ಇಬ್ಬರೂ Instagram ಪ್ರೊಫೈಲ್‌ಗಳಲ್ಲಿ ಇದನ್ನು ಹೇಳಿಕೊಂಡಿದ್ದಾರೆ. ಅಂಜಲಿ ಚಕ್ರಾ ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, “ತಾನು ಮಾಡಿರುವ ದಾಂಪತ್ಯದ್ರೋಹವೇ ವಿಚ್ಛೇದನಕ್ಕೆ ಕಾರಣ, ಇದಕ್ಕೆ ತಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ.
“ಅಂಜಲಿಯೊಂದಿಗಿನ ನನ್ನ ಸಂಬಂಧದಲ್ಲಿ ಪ್ರಮುಖ ತಿರುವು ಉಂಟಾಗಿದೆ. ನಾನು ಅವಳಿಗೆ ಮದುವೆಗೆ ಕೆಲವು ವಾರಗಳ ಮೊದಲು ಮೋಸ, ದ್ರೋಹ ಮಾಡಿದ್ದೇನೆ. ನನಗೆ ತಿಳಿದುದಕ್ಕಿಂತಲೂ ಹೆಚ್ಚು ತೀವ್ರವಾಗಿ ಆಕೆಯನ್ನು ನೋಯಿಸಿದ್ದೇನೆ. ನನ್ನ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ, ಮುಂದೆಯೂ ಒಪ್ಪಿಕೊಳ್ಳುತ್ತೇನೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು, ಅಂಜಲಿ ಮತ್ತು ಅಲ್ಲಾನಿಂದ ಕ್ಷಮೆಯನ್ನು ಪಟ್ಟುಬಿಡದೆ ಯಾಚಿಸುತ್ತೇನೆ. ನಾನು ತುಂಬಾ ಪ್ರೀತಿಸುವ ಮತ್ತು ಕಾಳಜಿ ವಹಿಸುವ ಜನರನ್ನು ನಾನು ನೋಯಿಸಿದ್ದೇನೆ. ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ನಾನು ಗೌರವಿಸುವ ನಮ್ಮ ಸಮುದಾಯದ ಎಲ್ಲರಿಗೂ, ಇಷ್ಟು ವರ್ಷ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ತುಂಬಾ ಋಣಿಯಾಗಿದ್ದೇನೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಲು ಕೇಳಿಕೊಳ್ಳುತ್ತೇವೆ” ಎಂದು ಮಲಿಕ್ ಬರೆದಿದ್ದಾರೆ.
ಮಲಿಕ್ ಪೋಸ್ಟ್‌ನ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಕಡೆ ಟೀಕೆಗಳ ಮಹಾಪೂರವೇ ಹರಿದುಬಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚಕ್ರಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡುವಂತೆ ಜನ ಒತ್ತಾಯಿಸಿದ್ದಾರೆ. ಮಲಿಕ್ ಕಡೆಗೆ ನಕಾರಾತ್ಮಕ ಟೀಕೆ ಮಾಡದಂತೆ ಚಕ್ರಾ ಹೇಳಿದ್ದಾರೆ.
“ಸೂಫಿ ಮತ್ತು ನಾನು ಕಳೆದ 5 ಪ್ಲಸ್ ವರ್ಷಗಳನ್ನು ಪ್ರೀತಿಯಿಂದ ಒಟ್ಟಿಗೆ ಕಳೆದಿದ್ದೇವೆ. ಈ ಸುಂದರವಾದ ಪಾಲುದಾರಿಕೆಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದು ನಮಗೆ ತುಂಬಾ ಗೌರವದಾಯಕ ವಿಷಯ. ನಿಮ್ಮ ಪ್ರೀತಿ ಮತ್ತು ಬೆಂಬಲದ ಹರಿವು ನಮ್ಮ ಜೀವನದ ಪ್ರಯಾಣದಲ್ಲಿ ವಿಶೇಷ ಪಾತ್ರ ವಹಿಸಿದೆ; ಮತ್ತು ನಾವು ಆ ಪ್ರೀತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಈ ಬೆಳವಣಿಗೆಯಿಂದ ಆಘಾತವಾಗಬಹುದು, ಆದರೆ ನಮ್ಮ ಪ್ರಯಾಣ ಈಗ ಬದಲಾಗುತ್ತಿದೆ. ನಾವು ನಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಸೂಫಿ ಮಾಡಿದ ದಾಂಪತ್ಯದ್ರೋಹದಿಂದಾಗಿ ನಮ್ಮ ಮದುವೆ ಮತ್ತು ನಮ್ಮ ಸಂಬಂಧ ಕೊನೆಗೊಂಡಿದೆ. ನಾವು ಈ ಅಧ್ಯಾಯವನ್ನು ಕೊನೆಗೊಳಿಸುತ್ತಿದ್ದೇವೆ. ನೀವೂ ಸೂಫಿಯ ಬಗ್ಗೆ ಯಾವುದೇ ನಕಾರಾತ್ಮಕತೆಯನ್ನು ತೋರಿಸಬಾರದು ಎಂದು ನಾನು ಬಯಸುತ್ತೇನೆ. ಈ ಕಠಿಣ ನಿರ್ಧಾರವನ್ನು ನೀವು ಗೌರವಿಸಬೇಕು. ನಾವು ಇದುವರೆಗೆ ಹಂಚಿಕೊಂಡ ಪ್ರೀತಿ ಯಾವುದೇ ಮಾಂತ್ರಿಕತೆಗೆ ಕಡಿಮೆಯಿಲ್ಲ” ಎಂದು ಚಕ್ರಾ ಬರೆದಿದ್ದಾರೆ.
ಅಂಜಲಿ ಚಕ್ರಾ ತಂದೆತಾಯಿಗಳು ಭಾರತ ಮೂಲದವರು. ಈಕೆ ಕೆನಡಾದ ಒಂಟಾರಿಯೊದ ಒಟ್ಟಾವಾದಲ್ಲಿ ಜನಿಸಿ ಸ್ಯಾನ್‌ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಲ್ಲಿ ಬೆಳೆದವಳು. ಮದುವೆ ಮತ್ತು ಕಾರ್ಯಕ್ರಮಗಳ ಯೋಜನೆ ವ್ಯವಹಾರವನ್ನು ನಿರ್ವಹಿಸುತ್ತಾಳೆ. ಸೂಫಿ ಮಲಿಕ್ ಪಾಕಿಸ್ತಾನ ಮೂಲದವಳಾಗಿದ್ದು, ನ್ಯೂಯಾರ್ಕ್‌ನ ಬ್ರಾಂಕ್ಸ್‌ನಲ್ಲಿ ಹುಟ್ಟಿ ಬೆಳೆದವಳು. ಬ್ರೂಕ್ಲಿನ್‌ನಲ್ಲಿ ಐದು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದ ಇವರು 2024ರಲ್ಲಿ ವಿಧ್ಯುಕ್ತವಾಗಿ ಮದುವೆಯಾಗಲು ಯೋಜಿಸಿದ್ದರು. ಜೋಡಿಯಾಗಿ ಇವರ ಪ್ರಕಟಣೆ ಹಾಗೂ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವಿವಾದ ಹುಟ್ಟುಹಾಕಿತ್ತು.
ಇದನ್ನೂ ಓದಿ: LGBT community: ಯಾವ ಸಲಿಂಗಕಾಮಿಗೆ ಋತುಚಕ್ರವಿದೆ ಹೇಳಿ? ಸಚಿವೆ ಸ್ಮೃತಿ ಇರಾನಿ ಪ್ರಶ್ನೆ