ಚಾಮರಾಜನಗರ: ದೇವರು ಅಂದರೆ ನಮ್ಮ ಮನಸ್ಸಿನ ನೋವುಗಳನ್ನು ಪರಿಹರಿಸಿ ಬದುಕುವ ದಾರಿ ತೋರಿಸುವ ಮಹಾಮಹಿಮ (God is supreme, ultimate saviour) ಎನ್ನುವುದು ಎಲ್ಲರ ನಂಬಿಕೆ. ದೇವರ ಮುಂದೆ ಕುಳಿತು ನಾವು ನಮ್ಮ ಕಷ್ಟಗಳನ್ನೆಲ್ಲ ಹೇಳುತ್ತೇವೆ, ಕೈಹಿಡಿದು ನಡೆಸೆನ್ನನು ಅಂತ ಬೇಡುತ್ತೇವೆ. ಈ ಒಂದು ಕಷ್ಟದಿಂದ ಪಾರು ಮಾಡು ಎಂದು ಕಣ್ಣೀರು ಹಾಕುತ್ತೇವೆ, ಹರಕೆ ಹೊರುತ್ತೇವೆ. ದೇವರು ಎಂದರೆ ಜಗತ್ತಿನ ಅತಿದೊಡ್ಡ ನೋವು ನಿವಾರಕ… Greatest Pain reliever. ಅಂತ ದೇವರ ಮುಂದೆ ಭಕ್ತರು ಹೇಳಿಕೊಳ್ಳುವ ಬಗೆ ಬಗೆಯ ಬೇಡಿಕೆ, ನೋವುಗಳ ಒಂದು ಸಣ್ಣ ಚಿತ್ರಣ ಚಾಮರಾಜ ನಗರದ ಚಾಮರಾಜೇಶ್ವರ (Chamarajeshwara Temple) ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆಯಿತು. ಇಲ್ಲಿ ಯಾರೋ ಗೆಳತಿಗೊಂದು ಪತ್ರ (Letter to friend) ಬರೆಯುತ್ತಾರೆ, ತಪ್ಪು ಮಾಡುತ್ತಿದ್ದೇನೆ ಎಂದು ಹಳಹಳಿಸುತ್ತಾರೆ. ಇನ್ನೊಬ್ಬರು ಪ್ರಧಾನಿಯನ್ನು ಭೇಟಿ ಮಾಡಿಸು ಅಂತಾರೆ.
ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆಯ (Hundi Counting) ವೇಳೆ ಒಬ್ಬ ಯುವಕ ತನ್ನ ಓಡಿ ಹೋದ ಗೆಳತಿಗಾಗಿ ಬರೆದಿರುವ ಎರಡು ಪುಟಗಳ ಸುದೀರ್ಘ ಪತ್ರ ಎಲ್ಲರ ಗಮನ ಸೆಳೆದಿದೆ.
ನೀನು ನನ್ನನ್ನು ಮಿಸ್ ಮಾಡ್ಕೊತಿದಿಯಾ ಪುಟ್ಟ?
ಹಾಯ್ ಪುಟ್ಟಾ, ಹೇಗಿದ್ದೀಯಾ. ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ ಅನ್ಕೊಂಡಿದೀವಿ, ನೀನು ಹೀಗೆಲ್ಲ ಮಾಡಬಾರದಿತ್ತು… ಎಂದು ಆರಂಭವಾಗುವ ಪತ್ರದಲ್ಲಿ ಅವರಿಬ್ಬರ ಸಂಬಂಧ, ಆಕೆ ಎಂದರೆ ಅವನಿಗೆಷ್ಟು ಇಷ್ಟ, ಆಕೆ ಇಲ್ಲದ ಬದುಕು ಈಗ ಎಷ್ಟು ನೋವಿನಲ್ಲಿದೆ. ಖುಷಿಯನ್ನು, ದುಃಖವನ್ನು ಹಂಚಿಕೊಳ್ಳಲು ಯಾರೂ ಇಲ್ಲ ಎನ್ನುವ ಅನಾಥ ಭಾವ ಎಲ್ಲವೂ ವ್ಯಕ್ತವಾಗಿದೆ.
ಇಲ್ಲಿ ಪತ್ರ ಬರೆದವನು ಮತ್ತು ಆ ಹುಡುಗಿ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಒಂದೇ ಕಾಲೇಜು. ಒಂದೇ ಕ್ಲಾಸ್ ಕೂಡಾ ಇರಬಹುದು ಅನಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಜತೆಯಾಗಿ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಅವರ ನಡುವಿನ ಸ್ನೇಹ ಇನ್ನೂ ಪ್ರೀತಿಯಾಗಿ ಬದಲಾಗಿಲ್ಲ ಅನಿಸುತ್ತದೆ. ಅಥವಾ ಬದಲಾದ ಪ್ರೀತಿಯನ್ನು ಅವರಿಬ್ಬರು ಹೇಳಿಕೊಂಡಿಲ್ಲ.
ಎರಡು ತಿಂಗಳ ಹಿಂದೆ ಆ ಹುಡುಗಿಗೆ ಮದುವೆಯಾಗಿದೆ. ಮದುವೆಯಾಗಿದೆ ಅಂದರೆ ಆಕೆ ತಾನು ಮೆಚ್ಚಿದ ಇನ್ನೊಬ್ಬ ಹುಡುಗನ ಜತೆಗೆ ಮನೆಯವರಿಗೂ ಹೇಳದೆ ಓಡಿ ಹೋಗಿದ್ದಾಳೆ. ಈಗ ಅವಳು ಇವನ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಈ ವೇದನೆಯಿಂದ ಆತ ದೇವರಿಗೆ ಪತ್ರ ಬರೆದಿದ್ದಾನೆ. ನಿನ್ನನೊಮ್ಮೆ ನೋಡಬೇಕು, ನಿನ್ನಲೊಮ್ಮೆ ಮಾತನಾಡಬೇಕು, ನನ್ನ ಮನಸಿನ ಭಾವನೆ ಹೇಳಿಕೊಳ್ಳಬೇಕು ಎನ್ನುವುದು ಅವನ ಆಸೆ. ನಿನ್ನನ್ನು ಮಿಸ್ ಮಾಡ್ಕೊತೀನಿ ಅಂತ ಪದೇಪದೆ ಹೇಳುತ್ತಾನೆ. ನೀನು ನನ್ನ ಮಿಸ್ ಮಾಡ್ಕೊತಿದಿಯಾ ಅಂತ ಕೇಳ್ತಾನೆ.
ನಿಜವೆಂದರೆ, ಆಕೆ ಓಡಿ ಹೋದ ಮೇಲೆ ಆತನಿಗೆ ಆ ಹುಡುಗಿಯ ಮೇಲಿದ್ದ ಪ್ರೀತಿಯ ಭಾವನೆ ಜಾಗೃತವಾಗಿದೆ ಅನಿಸುತ್ತದೆ. ʻಎಲ್ಲರೂ ಬಿಟ್ಟು ಹೋದ ಮೇಲೂ ನಾವಿಬ್ಬರು ಜತೆಯಾಗಿರಬೇಕುʼ ಅಂತ ಅವರು ಹಿಂದೆಲ್ಲ ಮಾತನಾಡಿಕೊಂಡಿದ್ದರು. ಆದರೆ, ಪ್ರೀತಿ ಮಾಡಬೇಕು, ಮದುವೆಯಾಗಬೇಕು ಅಂತ ಹೇಳಿಕೊಂಡಂತಿಲ್ಲ. ಹೀಗಾಗಿ ಪತ್ರದ ಆರಂಭದಲ್ಲಿ ಗೆಳತಿಗೊಂದು ಪತ್ರ, ಬೆಸ್ಟ್ ಫ್ರೆಂಡ್‌ಗೊಂದು ಪತ್ರ ಅನ್ನುವ ರೀತಿಯಲ್ಲೇ ಇದೆ.
ಅವನಿಗೆ ಈಗಲೂ ಒಂದು ಸಂಶಯ, ಒಂದು ಸಣ್ಣ ಆಸೆ!
ಈ ಪತ್ರ ಬರೆದ ಯುವಕನಿಗೆ ಒಂದು ಸಣ್ಣ ಸಂಶಯ. ʻʻನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು. ದೊಡ್ಡ ತಪ್ಪು ಮಾಡಿಬಿಟ್ಟೆʼʼ ಎಂದು ಪತ್ರದಲ್ಲಿ ಬರೆದಿದ್ದಾನೆ. ಅಂದರೆ ಆಕೆ ಪ್ರೀತಿ ಮಾಡುತ್ತಿದ್ದ ವಿಷಯ ಇವನಿಗೆ ಗೊತ್ತಿರಲೇ ಇಲ್ಲ. ಈಗಲೂ ಆಕೆ ನಿಜವಾಗಿ ಪ್ರೀತಿಸಿಯೇ ಓಡಿ ಹೋದಳಾ ಅಥವಾ ಅವನೇನಾದರೂ ಬ್ಲ್ಯಾಕ್‌ಮೇಲ್ ಮಾಡಿ ಆಕೆಯನ್ನು ಹೆದರಿಸಿ ಓಡಿಸಿಕೊಂಡು ಹೋಗಿ ಮದುವೆಯಾದನಾ ಎನ್ನುವ ಬಗ್ಗೆ ಅವನಿಗೆ ಸಣ್ಣ ಸಂಶಯ. ಹೀಗಾಗಿ ಆತ ಆಕೆಯಲ್ಲೊಮ್ಮೆ ಮಾತನಾಡಬೇಕು. ಆಕೆ ಕಷ್ಟದಲ್ಲಿದ್ದಾಳಾ ಎಂದು ತಿಳಿಯಬೇಕು ಎನ್ನುವ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾನೆ.
ಉಳಿದಂತೆ ಪತ್ರದ ತುಂಬ ಭಾವನೆಗಳ ಮಹಾಪೂರವಿದೆ. ಅವಳನ್ನು ಕಂಡಾಗ ಇವನಲ್ಲಿ ಬೆಳಗುತ್ತಿದ್ದ ಸಾವಿರ ಕ್ಯಾಂಡಲ್‌ಗಳ ಮನಸ್ಸಿನ ಬಲ್ಬು,, ಅವಳ ಸಮ್ಮುಖದಲ್ಲಿ ಸಿಗುತ್ತಿದ್ದ ಸಮಾಧಾನ, ಮನಸ್ಸಿನ ಭಾವನೆ, ಸಂಕಟಗಳನ್ನು ಹೇಳಿಕೊಂಡು ನಿರಾಳವಾಗುತಿದ್ದ ಆ ದಿನಗಳು, ಈಗ ಅನುಭವಿಸುತ್ತಿರುವ ಒಂಟಿತನ, ಯಾರೂ ಇಲ್ಲ ಎಂಬ ಅನಾಥ ಭಾವಗಳೆಲ್ಲ ಪತ್ರದಲ್ಲಿ ಉಕ್ಕಿ ಹರಿಯುತ್ತಿವೆ. ಹದಿಹರೆಯದ ತಲ್ಲಣಗಳ ಅದ್ಭುತ ಕ್ಷಣಗಳು ಈ ಪತ್ರದಲ್ಲಿ ಜಾಗೃತವಾಗಿವೆ. ಒಂದು ಹೇಳಲಾಗದ ಪ್ರೀತಿ, ಹೇಳದೇ ಹೋದ ಪ್ರೀತಿಯ ಚಡಪಡಿಕೆಗಳು ಹೇಗಿರುತ್ತವೆ ಎನ್ನುವುದನ್ನು ಈ ಪತ್ರ ಹೇಳುತ್ತದೆ. ಅಂದ ಹಾಗೆ ಈ ಪತ್ರದಲ್ಲಿ ಎಲ್ಲೂ ಇವನ್ಯಾರು, ಅವಳ್ಯಾರು ಎನ್ನುವ ಐಡೆಂಟಿಟಿ ಬಯಲಾಗುವುದಿಲ್ಲ. ಮಧ್ಯದಲ್ಲಿ ಕೆಲವು ಗೆಳತಿಯರ ಹೆಸರು ಬರುತ್ತದೆ ಅಷ್ಟೆ.
ಮನಸಿನ ಗೊಂದಲ ಪರಿಹರಿಸು, ಮೋದಿಯನ್ನು ಭೇಟಿ ಮಾಡಿಸು
ದೇವರ ಹುಂಡಿಯಲ್ಲಿ ಕಂಡ ಚಿತ್ರ ಪತ್ರಗಳು ಇನ್ನೂ ಇವೆ. ʻʻದೇವರೆ ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದರೆ ತುಂಬಾ ತಪ್ಪು ಮಾಡುತ್ತಿದ್ದೇನೆ. ಇನ್ನು ಮುಂದೆ ಆ ರೀತಿ ಗೊಂದಲ ಆಗದಂತೆ ನೋಡಿಕೋʼʼ ಎಂದು ಮನಸಿನ ಸಂಕಟದ ಭಾರವನ್ನು ದೇವರ ಮೇಲೆ ಹೊರಿಸಿ ನಿರಾಳವಾದ ಪತ್ರವೊಂದು ಗಮನ ಸೆಳೆದಿದೆ.
ಏಪ್ರಿಲ್ 9ರಂದು ಬಂಡಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಆಸೆಪಟ್ಟಿದ್ದ ವ್ಯಕ್ತಿಯೊಬ್ಬರು ದೇವರಲ್ಲಿ ಮೊರೆ ಇಟ್ಟ ಪತ್ರ ಈಗ ಬಯಲಿಗೆ ಬಂದಿದೆ. ದೇವರಿಗೆ ಆಗಲೇ ತಲುಪಿರಬಹುದು!
ಇನ್ನೊಂದು ಪತ್ರದಲ್ಲಿ ಕೆಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಇವರು ನಮಗೆ ತೊಂದರೆ ಕೊಡದಂತೆ ಮಾಡು ಎಂದೂ ಕೆಲವರ ಹೆಸರು ಉಲ್ಲೇಖಿಸಿ, ಇವರು ನಮ್ಮ ಪರವಾಗಿ ನಿಲ್ಲುವಂತೆ ಮಾಡು ಎಂದೂ ಮನವಿ ಮಾಡಲಾಗಿದೆ. ಅಂದರೆ ಒಟ್ಟಾರೆಯಾಗಿ ಅವರದೊಂದು ಜಾಗ ಅವರಿಗೇ ಸಿಗುವಂತೆ ಮಾಡಬೇಕು ಎನ್ನುವುದು ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ.
ಇದನ್ನೂ ಓದಿ: Viral News: ಖಾತೆಯಲ್ಲಿ ಇದ್ದಿದ್ದೇ 17 ರೂ. ಆದ್ರೆ ಹುಂಡಿಗೆ 100 ಕೋಟಿ ರೂ. ಚೆಕ್ ಹಾಕಿದ್ದ ಭಕ್ತ!